ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಜೀವನಕ್ಕೆ ಮಾರು ಹೋಗದಿರಿ

Last Updated 3 ಅಕ್ಟೋಬರ್ 2011, 6:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.

ಭಾನುವಾರ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಕೃಷಿ ಮೇಳಕ್ಕೆ ಚಾಲನೆ ನೀಡಿದರು.

ಮೇಳದಲ್ಲಿ ವಿವಿಧ ಮಹಿಳಾ ಸಂಘ-ಸಂಸ್ಥೆಗಳಿಂದ 2000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕೃಷಿ ಮೇಳದಲ್ಲಿ ರಾಕರ್ ಸ್ಪ್ರೆಯರ್, ಬೇವಿನ ಹಿಂಡಿ, ಮಿಶ್ರಣ ಹಿಂಡಿ, ಎಲೆಗೊಬ್ಬರ, ಕೋಳಿಗೊಬ್ಬರ, ಲಾನ್ ಮೂವರ್, ಹಿಪ್ಪುನೇರಳೆ ತಳಿಗಳು, ಪಶುಪಾಲನಾ ಮತ್ತು ಹೈನುಗಾರಿಕೆ, ಬಾಳೆ, ಸಪೋಟ ಮುಂತಾದವನ್ನು ಪ್ರದರ್ಶಿಸಲಾಗಿದೆ.

ಕೃಷಿ, ತೋಟಗಾರಿಕೆ, ಸಹಕಾರ, ನೀರಾವರಿ, ಪಶು ಸಂಗೋಪನೆ, ಅರಣ್ಯ, ರೇಷ್ಮೆ, ಜಲಾನಯನ ಇಲಾಖೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ, ರೈತ ಸಂಘಗಳು, ಜಲ ಸಂವರ್ಧನ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಕೃಷಿ ಸಮಾಜದ ಸಹಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮಠದ ಹಿಂಭಾಗದ 10 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಮೂರ‌್ನಾಲ್ಕು ಬಗೆಯ ಕೃಷಿ ಬೆಳೆಯನ್ನು ಬೆಳೆಯಲಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು, ಇದರಲ್ಲಿನ ಟೊಮೆಟೊ, ಮೆಣಸಿನ ಕಾಯಿ, ಕೊತ್ತುಂಬರಿಯನ್ನು ನಿತ್ಯ ದಾಸೋಹಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.

ರೈತರು ಇಂದು ಹೊಲಗಳಿಗೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ಐಷಾರಾಮಿ ಜೀವನಕ್ಕೆ ಮಾರುಹೋಗಿ ಒಣ ರಾಜಕೀಯ ಚರ್ಚೆಗಳನ್ನು ನಡೆಸುತ್ತಾ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ನುಡಿದರು.  

ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಪಾಟೀಲ್ ಮಾತನಾಡಿ, ನಾಯಕರಾದವರೂ ರೈತರಿಗೆ ಅಗತ್ಯವಿರುವ ಯೋಜನೆಗಳ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಬಗ್ಗೆ ಸದಾ ಚಿಂತನೆ ಕೈಗೊಳ್ಳಬೇಕಿದೆ ಎಂದು ನುಡಿದರು.

ಕೃಷ್ಣಾನದಿ ತೀರದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೈತರ ನೆರವಿಂದಲೇ 25 ಅಡಿ ಎತ್ತರದ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬ್ಯಾರೇಜ್ ಹಿನ್ನೀರು ಸುಮಾರು 45 ಕಿ.ಮೀ ಇದ್ದು, 27 ಹಳ್ಳಿಗಳ 3 ಲಕ್ಷ ಜನರಿಗೆ ಹಾಗೂ  ಜಾನುವಾರುಗಳಿಗೆ ಕುಡಿಯುವ ನೀರು, 35ಸಾವಿರ ಎಕರೆ ನೀರಾವರಿಗೆ ಅನುಕೂಲವಾಗಿದ್ದು, ಪ್ರಸ್ತುತ ಸುಮಾರು 70ಸಾವಿರ ಎಕರೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಇದೇ ಮಾದರಿಯಲ್ಲಿಯೇ 7, 300 ಜನ ರೈತರು ಒಗ್ಗೂಡಿ ಸುಮಾರು ್ಙ 22 ಕೋಟಿ ವಂತಿಗೆ ಕಲೆ ಹಾಕಿ ಹಾಗೂ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ್ಙ. 2 ಕೋಟಿ ಸಹಕಾರದಿಂದ 2001ರಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಯಿತು. ಕಾರ್ಖಾನೆಯಿಂದ ಸುಮಾರು 30 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ತಿಪಟೂರು ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು.
ಬೆಲ್ಜಿಯಂನ ಎಲೋಡಿ ನ್ಯೂಬೆನ್, ರೈತಸಂಘದ ನುಲೇನೂರು ಶಂಕರಪ್ಪ ಹಾಜರಿದ್ದರು. ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮುರುಘರಾಜೇಂದ್ರ ಒಡೆಯರ್ ಸ್ವಾಗತಿಸಿದರು. ಶೈಲಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಸವತತ್ವ ಧ್ವಜಾರೋಹಣ 
ಧ್ವಜ ಎಂಬುದು ಒಂದು ಸಂಕೇತ ಮತ್ತು ಭಾಷೆ. ಅದು ಜನಾಂಗಕ್ಕೆ ಆವಶ್ಯ. ಸತ್ಯವನ್ನು ಸೂಚಿಸುವ ಶಕ್ತಿಯ ಅರಿವಿನ ಅಂಶ ಎಂದು ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.

ಮುರುಘಾ ಮಠದಲ್ಲಿ ಭಾನುವಾರ ಬೆಳಿಗ್ಗೆ ಬಸವತತ್ವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಮರದ ನೆರಳನ್ನು ಪೂಜಿಸುವ ನಾವು ಮರವನ್ನು ಮರೆಯುತ್ತಿದ್ದೇವೆ. ಆ ಮರವೇ ಧ್ವಜದ ಸಂಕೇತ ಎಂದರು. 

ಸಹಜ ಶಿವಯೋಗ: ಶರಣ ಸಂಸ್ಕೃತಿ ಎನ್ನುವುದು ಶ್ರಮದ ಸಂಸ್ಕೃತಿ ಕಾಯಕದ ಮೂಲಕ  ಬೆವರನ್ನು ಸುರಿಸುವುದು ಆರೋಗ್ಯಪೂರ್ಣವಾದುದು ಎಂದು  ಶಿವಮೂರ್ತಿ ಮುರುಘಾಶರಣರು ಹೇಳಿದರು.
ಸಹಜಶಿವಯೋಗದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣರು ಪಾತ್ರೆ ತಿಕ್ಕುವಾಗ, ಕಸ ಗುಡಿಸುವಾಗ, ಉಳುಮೆ ಮಾಡುವಾಗ ಬರುವ ಬೆವರು ಆರೋಗ್ಯಪೂರ್ಣವಾದುದು ಎಂದರು.

ನೇತೃತ್ವ ವಹಿಸಿದ್ದ ಗುರುಬಸವಸ್ವಾಮೀಜಿ ಮಾತನಾಡಿ, ಮಾನವ ಬಹಳ ಸಮಸ್ಯೆಗಳ ಸುಳಿಯಲ್ಲಿದ್ದಾನೆ.   ಇದರಿಂದ ಹೇಗೆ ಹೊರಬರಬೇಕೆಂದು ತಿಳಿಸಿಕೊಡಲು ಸಹಜ ಶಿವಯೋಗದಂತಹ ಆರೋಗ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ರವೀಂದ್ರ ಪಟ್ಟಣಶೆಟ್ಟಿ ಹಾಗೂ ಡಾ.ಎಸ್.ಬಿ. ಹಂದ್ರಾಳ ಅವರನ್ನು ಗೌರವಿಸಲಾಯಿತು. ಬಸವ ಭೃಂಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಮೇಶ್ ಪಾಟೀಲ್, ಜಿ. ಬೆನಕಪ್ಪ, ಬಿ.ಟಿ. ಕುಮುದಾನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT