ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಏಕದಿನ, ಟೆಸ್ಟ್‌ ತಂಡದಲ್ಲಿ ದೋನಿ

ವಿರಾಟ್‌ ಕೊಹ್ಲಿಗೆ ‘ಅದೃಷ್ಟ’ವಿಲ್ಲ; ಜಡೇಜ, ಧವನ್‌ಗೆ ಗೌರವ
Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಪ್ರಕಟಿಸಿದ ‘ವರ್ಷದ ಟೆಸ್ಟ್‌’ ಹಾಗೂ ‘ವರ್ಷದ ಏಕದಿನ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ತಂಡದ ನಾಯಕನಾಗುವ ಅವಕಾಶವೂ ದೋನಿಗೆ ದೊರೆತಿದೆ. ಯುವ ಆಟಗಾರ ವಿರಾಟ್‌ ಕೊಹ್ಲಿ ಎರಡೂ ತಂಡಗಳಲ್ಲಿ ಸ್ಥಾನ ಪಡೆ ಯುವಲ್ಲಿ ವಿಫಲರಾಗಿದ್ದಾರೆ.

‘ವರ್ಷದ ಏಕದಿನ’ ತಂಡದಲ್ಲಿ ದೋನಿ ಅಲ್ಲದೆ, ಶಿಖರ್‌ ಧವನ್‌ ಮತ್ತು ರವೀಂದ್ರ ಜಡೇಜ ಕಾಣಿಸಿಕೊಂಡಿದ್ದಾರೆ. ಚೇತೇಶ್ವರ ಪೂಜಾರಗೆ ಟೆಸ್ಟ್‌ ತಂಡದಲ್ಲಿ   ಸ್ಥಾನ ದೊರೆತಿದೆ. ಆರ್‌. ಅಶ್ವಿನ್‌ ಟೆಸ್ಟ್ ತಂಡದಲ್ಲಿ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಆದರೆ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿಲ್ಲ.

‘ತಂಡದಲ್ಲಿ ಸ್ಥಾನ ಪಡೆಯಲು ಅದೃಷ್ಟವಿಲ್ಲದ ಹಲವು ಆಟಗಾರರಲ್ಲಿ ಕೊಹ್ಲಿ ಕೂಡಾ ಒಬ್ಬರು. ಆದರೆ ಮುಂದಿನ ವರ್ಷ ಅವರು ಖಂಡಿತ ವಾಗಿಯೂ ಅವಕಾಶ ಗಿಟ್ಟಿಸಿ ಕೊಳ್ಳುವರು’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್‌ ರಿಚರ್ಡ್ಸನ್‌ ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಕೊಹ್ಲಿಗೆ ಏಕದಿನ ತಂಡದಲ್ಲಿ ಸ್ಥಾನ ಲಭಿಸದೇ ಇರುವುದು ನಿಜವಾಗಿಯೂ ಅಚ್ಚರಿ ಉಂಟುಮಾಡಿದೆ’ ಎಂದು ಅವರು ಹೇಳಿದ್ದಾರೆ.

ದೋನಿ ಸತತ ಆರನೇ ವರ್ಷ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರಂಭಿಕ ಆಟಗಾರನಾಗಿ ಧವನ್‌ಗೆ ಸ್ಥಾನ ದೊರೆತರೆ, ಜಡೇಜ ಆಲ್‌ ರೌಂಡರ್‌ ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್‌ನ ಅಲಸ್ಟೇರ್‌ ಕುಕ್‌ ಅವರಿಗೆ ಐಸಿಸಿ ವರ್ಷದ ಟೆಸ್ಟ್‌ ತಂಡದ ನಾಯಕನಾಗುವ ಗೌರವ ದೊರೆತಿದೆ. ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥರಾಗಿರುವ ಅನಿಲ್‌ ಕುಂಬ್ಳೆ ನೇತೃತ್ವದ ಆಯ್ಕೆ ಸಮಿತಿ ಈ ತಂಡಗಳನ್ನು ಆಯ್ಕೆ ಮಾಡಿವೆ.

ಕುಂಬ್ಳೆ ಅಲ್ಲದೆ, ಮಾಜಿ ಆಟಗಾರರಾದ ವಕಾರ್‌ ಯೂನಿಸ್‌, ಅಲೆಕ್‌ ಸ್ಟುವರ್ಟ್‌, ಗ್ರೇಮ್‌ ಪೊಲಾಕ್‌ ಮತ್ತು ನ್ಯೂಜಿಲೆಂಡ್‌ ಮಹಿಳಾ ತಂಡದ ಮಾಜಿ ಆಟಗಾರ್ತಿ ಕ್ಯಾಥರಿನ್‌ ಕ್ಯಾಂಪ್‌ ಬೆಲ್‌ ಅವರು ಸಮಿತಿಯಲ್ಲಿದ್ದರು. ‘2012ರ ಆಗಸ್ಟ್‌ 7 ರಿಂದ 2013ರ ಆಗಸ್ಟ್‌ 25ರ ವರೆಗಿನ ಅವಧಿಯಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡ ಲಾಗಿದೆ. ಈ ಅವಧಿಯಲ್ಲಿ ಹಲವರು ಗಮನಾರ್ಹ ಆಟ ತೋರಿದ್ದಾರೆ. ಆದ್ದರಿಂದ ವರ್ಷದ ತಂಡವನ್ನು ಆಯ್ಕೆ ಮಾಡುವುದು ತುಂಬಾ ಕಠಿಣ ಕೆಲಸ’ ಎಂದು ಕುಂಬ್ಳೆ ಹೇಳಿದ್ದಾರೆ.

ಸಂಭಾವ್ಯರ ಪಟ್ಟಿಯಲ್ಲಿ ದೋನಿ, ಅಶ್ವಿನ್‌, ಪೂಜಾರ: ಭಾರತ ತಂಡದ ಆಟಗಾರರಾದ ಮಹೇಂದ್ರ ಸಿಂಗ್‌ ದೋನಿ, ಚೇತೇಶ್ವರ ಪೂಜಾರ, ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರು ಐಸಿಸಿ ನೀಡುವ ವಾರ್ಷಿಕ ಪ್ರಶಸ್ತಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ. ರಾಂಚಿಯ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಐಸಿಸಿ ‘ವರ್ಷದ ಕ್ರಿಕೆಟ್‌ ಆಟಗಾರ’ ಪ್ರಶಸ್ತಿಯ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪೂಜಾರ ‘ವರ್ಷದ ಟೆಸ್ಟ್‌ ಕ್ರಿಕೆಟಿಗ’ ಪ್ರಶಸ್ತಿಗೆ ಹಾಗೂ ದೋನಿ, ಧವನ್‌ ಮತ್ತು ಜಡೇಜ ‘ವರ್ಷದ  ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದಾರೆ.

ಐಸಿಸಿ ಟೆಸ್ಟ್‌, ಏಕದಿನ ತಂಡ
ಐಸಿಸಿ ವರ್ಷದ ಟೆಸ್ಟ್‌ ತಂಡ

ಅಲಸ್ಟೇರ್‌ ಕುಕ್‌ (ನಾಯಕ), ಗ್ರೇಮ್‌ ಸ್ವಾನ್‌, ಜೇಮ್ಸ್‌ ಆ್ಯಂಡರ್‌ಸನ್‌ (ಇಂಗ್ಲೆಂಡ್‌), ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಚೇತೇಶ್ವರ ಪೂಜಾರ (ಭಾರತ), ಹಾಶಿಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ಡೇಲ್‌ ಸ್ಟೇನ್‌, ವೆರ್ನಾನ್‌ ಫಿಲಾಂಡರ್‌ (ದಕ್ಷಿಣ ಆಫ್ರಿಕಾ), ಮೈಕಲ್‌ ಕ್ಲಾರ್ಕ್‌, ಮೈಕ್‌ ಹಸ್ಸಿ (ಆಸ್ಟ್ರೇಲಿಯಾ); 12ನೇ ಆಟಗಾರ: ರವಿಚಂದ್ರನ್‌ ಅಶ್ವಿನ್‌ (ಭಾರತ)

ಐಸಿಸಿ ವರ್ಷದ ಏಕದಿನ ತಂಡ
ಮಹೇಂದ್ರ ಸಿಂಗ್‌ ದೋನಿ (ನಾಯಕ ಹಾಗೂ ವಿಕೆಟ್‌ಕೀಪರ್‌), ಶಿಖರ್‌ ಧವನ್‌, ರವೀಂದ್ರ ಜಡೇಜ (ಭಾರತ), ತಿಲಕರತ್ನೆ ದಿಲ್ಶಾನ್‌, ಕುಮಾರ ಸಂಗಕ್ಕಾರ, ಲಸಿತ್‌ ಮಾಲಿಂಗ (ಶ್ರೀಲಂಕಾ), ಹಾಶಿಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌ (ದಕ್ಷಿಣ ಆಫ್ರಿಕಾ), ಸಯೀದ್‌ ಅಜ್ಮಲ್‌ (ಪಾಕಿಸ್ತಾನ), ಮಿಷೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ), ಜೇಮ್ಸ್‌ ಆ್ಯಂಡರ್‌ಸನ್‌ (ಇಂಗ್ಲೆಂಡ್‌); 12ನೇ ಆಟಗಾರ: ಮಿಷೆಲ್‌ ಮೆಕ್ಲೆನಗಾನ್‌ (ನ್ಯೂಜಿಲೆಂಡ್‌) 

ಐಸಿಸಿ ವಾರ್ಷಿಕ ಪ್ರಶಸ್ತಿಗೆ ಸಂಭಾವ್ಯ ಪಟ್ಟಿ
ಐಸಿಸಿ ‘ವರ್ಷದ ಕ್ರಿಕೆಟಿಗ’ (ಸರ್‌ ಗ್ಯಾರಿ ಸೋಬರ್ಸ್‌ ಪ್ರಶಸ್ತಿ): ಮಹೇಂದ್ರ ಸಿಂಗ್‌ ದೋನಿ, ಹಾಶಿಮ್‌ ಆಮ್ಲಾ, ಜೇಮ್ಸ್‌ ಆ್ಯಂಡರ್‌ಸನ್‌, ಮೈಕಲ್‌ ಕ್ಲಾರ್ಕ್‌, ಅಲಸ್ಟೇರ್‌ ಕುಕ್‌, ಕುಮಾರ ಸಂಗಕ್ಕಾರ
                                                                              ***
ಐಸಿಸಿ ‘ವರ್ಷದ ಟೆಸ್ಟ್‌ ಕ್ರಿಕೆಟಿಗ’: ಹಾಶಿಮ್‌ ಆಮ್ಲಾ, ಜೇಮ್ಸ್‌ ಆ್ಯಂಡರ್‌ಸನ್‌, ಆರ್‌. ಅಶ್ವಿನ್‌, ಮೈಕಲ್‌ ಕ್ಲಾರ್ಕ್‌, ಚೇತೇಶ್ವರ ಪೂಜಾರ, ಡೇಲ್‌ ಸ್ಟೇನ್‌.
                                                                              ***
ಐಸಿಸಿ ‘ವರ್ಷದ ಏಕದಿನ ಕ್ರಿಕೆಟಿಗ’: ಮಹೇಂದ್ರ ಸಿಂಗ್‌ ದೋನಿ, ಶಿಖರ್‌ ಧವನ್‌, ಸಯೀದ್‌ ಅಜ್ಮಲ್‌, ಮಿಸ್ಬಾ ಉಲ್‌ ಹಕ್‌, ರವೀಂದ್ರ ಜಡೇಜ, ಕುಮಾರ ಸಂಗಕ್ಕಾರ.
                                                                                   ***
ಐಸಿಸಿ ‘ವರ್ಷದ ಉದಯೋನ್ಮುಖ ಆಟಗಾರ’: ಚೇತೇಶ್ವರ ಪೂಜಾರ, ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌), ಜೋ ರೂಟ್‌ (ಇಂಗ್ಲೆಂಡ್‌), ಮಿಷೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ).

ಮಹಿ ‘ಜನರ    ನೆಚ್ಚಿನ ಆಟಗಾರ’
ಮುಂಬೈ (ಪಿಟಿಐ): ಮಹೇಂದ್ರ ಸಿಂಗ್‌ ದೋನಿ ಅವರು ಈ  ವರ್ಷದ ‘ಎಲ್‌ಜಿ ಜನರ ನೆಚ್ಚಿನ ಆಟಗಾರ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಗೌರವ ಪಡೆದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆ ಭಾರತ ತಂಡದ ನಾಯಕನಿಗೆ ಒಲಿದಿದೆ. ಸಚಿನ್‌ ತೆಂಡೂಲ್ಕರ್‌ 2010 ರಲ್ಲಿ ಈ ಗೌರವ ಪಡೆದಿದ್ದರು.

ಐಸಿಸಿ ಈ ಪ್ರಶಸ್ತಿಯನ್ನು 2010 ರಲ್ಲಿ ಆರಂಭಿಸಿತ್ತು. ಮೊದಲ ವರ್ಷದ ಗೌರವ ಸಚಿನ್‌ಗೆ ಒಲಿದಿತ್ತು. 2011 ಮತ್ತು 2012 ರಲ್ಲಿ ಈ ಪ್ರಶಸ್ತಿಯನ್ನು ಶ್ರೀಲಂಕಾದ ಕುಮಾರ ಸಂಗಕ್ಕಾರ ಪಡೆದು ಕೊಂಡಿದ್ದರು. ಈ ಬಾರಿ ಪ್ರಶಸ್ತಿಗೆ ದೋನಿ ಅಲ್ಲದೆ ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌, ಇಂಗ್ಲೆಂಡ್‌ ತಂಡದ ನಾಯಕ ಅಲಸ್ಟೇರ್‌ ಕುಕ್‌ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರು ಸ್ಪರ್ಧೆಯಲ್ಲಿದ್ದರು.

ವಿಶ್ವದ ವಿವಿಧ ಭಾಗಗಳಲ್ಲಿರುವ ಕ್ರಿಕೆಟ್‌ ಅಭಿಮಾನಿಗಳು ಆನ್‌ಲೈನ್‌ ಮತದಾನದ ಮೂಲಕ ಈ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡುವರು. ಈ ಬಾರಿ ನವೆಂಬರ್‌ 2 ರಿಂದ 23ರ ವರೆಗೆ ಅಭಿಮಾನಿಗಳಿಗೆ ಮತ ಹಾಕಲು ಅವಕಾಶವಿತ್ತು. ಈ ಬಾರಿ 1 ಲಕ್ಷ 88 ಸಾವಿರ ಜನರು ಮತ ಹಾಕಿದ್ದರು. ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಅವರು ದೋನಿ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT