ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಮೇಲೆ ಬಿಸಿಸಿಐ ಸವಾರಿ!

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ):  ಕ್ರಿಕೆಟ್ ಕಡೆಗೆ ಹಣದ ಹೊಳೆ ಹರಿಯುವುದೇ ಭಾರತದಿಂದ. ಅಂದಾಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೇಲೆ ಒತ್ತಡ ಹೇರುವಂಥ ಶಕ್ತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಂದಿದೆ. ಇದು ಹೊಸ ವಿಷಯವೇನು ಅಲ್ಲ!

ಇಂಥ ಮಾತುಗಳು ಬಹಳ ಹಿಂದಿನಿಂದಲೂ ಕೇಳಿಬಂದಿವೆ. ಆದರೆ ಈಗ ಇದೇ ಅಂಶವನ್ನು ಭಾರತದವರಲ್ಲದ ಕ್ರಿಕೆಟಿಗರು ಸಮೀಕ್ಷೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ. `ಐಸಿಸಿ ಮೇಲೆ ಬಿಸಿಸಿಐ ಸವಾರಿ ಮಾಡುತ್ತಿದೆ~ ಎನ್ನುವುದೇ  ಸಮೀಕ್ಷೆಯ ದತ್ತಾಂಶವಂತೆ.

ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆಗಳ ಮಹಾಒಕ್ಕೂಟ (ಎಫ್‌ಐಸಿಎ) ಹಲವಾರು ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಕ್ರಿಕೆಟ್ ಆಟಗಾರರ ಕೈಗೆ ಕೊಟ್ಟಿತ್ತು. ಅದಕ್ಕೆ ಸಿಕ್ಕ ಉತ್ತರಗಳ ಫಲಿತಾಂಶವನ್ನು ಲೆಕ್ಕಾಚಾರ ಮಾಡಿ ಈಗ ಎಫ್‌ಐಸಿಎ ಮಾಧ್ಯಮಗಳ ಮುಂದಿಟ್ಟಿದೆ.

ಅದರ ಪ್ರಕಾರ ಐಸಿಸಿ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಭಾರತದ ಕ್ರಿಕೆಟ್ ಮಂಡಳಿಯು ತನ್ನ ಪ್ರಭಾವ ಬೀರುತ್ತದೆ. ಇದಕ್ಕೆ ಕಾರಣ ಏನೆನ್ನುವುದು ಕೂಡ ಕ್ರಿಕೆಟಿಗರಿಗೆ ಗೊತ್ತು.

ಐಸಿಸಿಯನ್ನು ಆರ್ಥಿಕವಾಗಿ ಬಲಗೊಳಿಸಿರುವುದೇ ಬಿಸಿಸಿಐ. ಆದ್ದರಿಂದಲೇ ಅದು ಹೇಳಿದಂತೆಯೇ ಐಸಿಸಿ ಕುಣಿಯುತ್ತದೆ ಎಂದು ಹೆಚ್ಚಿನ ಆಟಗಾರರು ಒಪ್ಪಿಕೊಂಡಿದ್ದಾರೆ.

ಇನ್ನೊಂದು ವಿಚಿತ್ರವೆಂದರೆ ಇದೇ ಸಮೀಕ್ಷೆಯಲ್ಲಿ ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ನಲ್ಲಿ ಆಡುವುದು ಮುಖ್ಯವೇ? ಎನ್ನುವ ಸವಾಲು ಕೂಡ ಕೇಳಲಾಗಿತ್ತು. ಅದರಲ್ಲಿ ನಲ್ವತ್ತರಷ್ಟು ಮಂದಿ ಅಧಿಕ ಆದಾಯ ತರುವ ಐಪಿಎಲ್ ಕಡೆಗೆ ಒಲವು ತೋರಿದ್ದಾರೆ. ಗಮನ ಸೆಳೆಯುವ ಅಂಶವೆಂದರೆ ಒಂದೆಡೆ ಬಿಸಿಸಿಐ ವಿರುದ್ಧವಾಗಿ ಉತ್ತರ ನೀಡಿದವರು, ಅದೇ ಕ್ರಿಕೆಟ್ ಮಂಡಳಿ ನಡೆಸುವ ಐಪಿಎಲ್ ಕಡೆಗಿನ ತಮ್ಮ ಆಕರ್ಷಣೆ ಅಧಿಕವೆಂದಿದ್ದಾರೆ.

ಎಫ್‌ಐಸಿಎ ಸದಸ್ಯರಲ್ಲಿ ಭಾರತದ ಕ್ರಿಕೆಟಿಗರು ಇಲ್ಲ. ಆದ್ದರಿಂದ ಇದು ಸದಾ ಬಿಸಿಸಿಐ ವಿರುದ್ಧ ತನ್ನ ಧ್ವನಿ ಎತ್ತುತ್ತಲೇ ಬಂದಿದೆ. ಆದ್ದರಿಂದ ಅದು ನಡೆಸಿದ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಎಷ್ಟರ ಮಟ್ಟಿಗೆ ಭಾರತೀಯರು ಇದನ್ನು ಒಪ್ಪಿಕೊಳ್ಳುತ್ತಾರೊ ಗೊತ್ತಿಲ್ಲ. ಆದರೂ ಪ್ರಶ್ನೆಗಳನ್ನು ಕೊಟ್ಟು ಉತ್ತರ ಪಡೆದಿರುವ ಎಫ್‌ಐಸಿಎ ಹೀಗೆ ಕ್ರಿಕೆಟಿಗರು ಹೇಳುತ್ತಾರೆಂದು ತಿಳಿಸಿದೆ. ಗುರುವಾರ ಎಫ್‌ಐಸಿಎ ಪ್ರಧಾನ ವ್ಯವಸ್ಥಾಪಕ ಟಿಮ್ ಮೇ ಅವರು ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದರು.

ಬಿಸಿಸಿಐ ಪ್ರಭಾವದ ಬಗ್ಗೆ ಕೇಳಿದ ಪ್ರಶ್ನೆಗೆ ಶೇ.69ರಷ್ಟು ಮಂದಿ `ಹೌದು~ ಎಂದಿದ್ದರೆ, ಶೇ.31ರಷ್ಟು `ಗೊತ್ತಿಲ್ಲ~ ಎನ್ನುವ ಉತ್ತರಗಳು ಕಾಣಿಸಿಕೊಂಡಿವೆ. ಗಮನ ಸೆಳೆಯುವ ಅಂಶವೆಂದರೆ ಯಾರೊಬ್ಬರೂ ಸ್ಪಷ್ಟವಾಗಿ `ಇಲ್ಲ~ ಎನ್ನುವ ಬಾಕ್ಸ್ ಮೇಲೆ ಗುರುತು ಮಾಡಿಲ್ಲ.

ಐಸಿಸಿ ಕಾರ್ಯಕಾರಿ ಮಂಡಳಿಯ ಸ್ವರೂಪವನ್ನು ಪರಿಷ್ಕರಣೆ ಮಾಡಬೇಕು ಎಂದು ಒಪ್ಪಿದವರು ಕಡಿಮೆ. ಇದಕ್ಕೆ ಸಮ್ಮತಿಸಿದವರು ಶೇ.46 ರಷ್ಟು ಮಾತ್ರ. ಆದರೆ ಬಹುಕಾಲದಿಂದ ಎಫ್‌ಐಸಿಎ `ಐಸಿಸಿ ಆಡಳಿತ ಮಂಡಳಿ ಸ್ವರೂಪ ಬದಲಾಗಬೇಕು~ ಎಂದು ಒತ್ತಾಯಿಸುತ್ತಾ ಬಂದಿದೆ. ಈಗ ಅದೇ ಮುಜುಗರ ಪಡುವಂತಾಗಿದೆ. ಇದನ್ನು ಸ್ವತಃ ಟಿಮ್ ಮೇ ಅವರೇ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವುದಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಬೇಗ ನಿವೃತ್ತಿಹೊಂದಿ ಭಾರತದಲ್ಲಿ ನಡೆಯುವ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮುಕ್ತವಾಗಿ ಆಡಬಹುದು ಎನ್ನುವ ಅಭಿಪ್ರಾಯಕ್ಕೆ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಕ್ರಿಕೆಟಿಗರಲ್ಲಿ ಹೆಚ್ಚಿನವರು ಒಪ್ಪಿಗೆ ನೀಡಿದ್ದಾರೆ. ಐಪಿಎಲ್‌ನಿಂದ ಸಿಗುವ ಆದಾಯವು ದೇಶಕ್ಕಾಗಿ ವರ್ಷಪೂರ್ತಿ ಆಡುವಾಗ ಸಿಗುವುದಕ್ಕಿಂತ ಹೆಚ್ಚಾಗಿರುತ್ತದೆ ಎಂದು ಕೂಡ ಶೆ.40 ರಷ್ಟು ಮಂದಿ ಹೇಳಿದ್ದಾರೆ.

ಯುವ ಕ್ರಿಕೆಟಿಗರು ಐಪಿಎಲ್ ಕಡೆಗೆ ಆಕರ್ಷಿತರಾಗಲು ಕಾರಣ ಅಲ್ಲಿ ಸಿಗುವ ಸಂಭಾವನೆ ಎನ್ನುವ ವಾದಕ್ಕೆ ಶೇ 90ರಷ್ಟು ಕ್ರಿಕೆಟಿಗರು `ಹೌದು~ ಎಂದು ಉತ್ತರಿಸಿದ್ದು ವಿಶೇಷ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಪಾಕಿಸ್ತಾನದ ಕ್ರಿಕೆಟಿಗರಿಗೆ ಐದು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವವರಲ್ಲಿ ಹೆಚ್ಚಿನವರು `ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT