ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸ್ ಬರ್ಗ್

Last Updated 3 ಜನವರಿ 2011, 8:50 IST
ಅಕ್ಷರ ಗಾತ್ರ

1. ‘ಐಸ್‌ಬರ್ಗ್’ ಎಂದರೇನು?
‘ಐಸ್‌ಬರ್ಗ್’ ಎಂಬ ಹೆಸರಿಗೆ ಡಚ್ ಭಾಷೆಯ ‘ಇಜ್‌ಬರ್ಗ್’ ಎಂಬ ಪದವೇ ಮೂಲ. ಅದರ ಅರ್ಥ ‘ಹಿಮದ ಪರ್ವತ’. ಐಸ್‌ಬರ್ಗ್‌ನ ಅರ್ಥವೂ ಅದೇ. ವಾಸ್ತವವಾಗಿ ಕಡಲಂಚಿನ ‘ಹಿಮನದಿ’ಗಳಿಂದ ಕಳಚಿಕೊಂಡು ಅಥವಾ ಮುರಿದುಬಿದ್ದು ಸಾಗರದಲ್ಲಿ ತೇಲತೊಡಗುವ, ತೇಲುತ್ತ ಕರಗುತ್ತ ಸಿಕ್ಕುತ್ತಾ ಸಾಗಲಾರಂಭಿಸುವ ಬೃಹತ್ ಹಿಮಬಂಡೆಗಳೇ ಐಸ್‌ಬರ್ಗ್‌ಗಳು (ಚಿತ್ರ 2, 6, 7, 8, 9). ಅನಂತ ವಾರಿಧಿಯಲ್ಲಿ ‘ನೀರ್ಗಲ್ಲ ದ್ವೀಪ’ಗಳಂತೆ ಗೋಚರಿಸುವ ದೈತ್ಯ ಐಸ್‌ಬರ್ಗ್‌ಗಳದು ಒಂದು ರುದ್ರ, ರಮ್ಯ, ಸೋಜಿಗಮಯ ದೃಶ್ಯ.

2. ಐಸ್‌ಬರ್ಗ್ ರೂಪುಗೊಳ್ಳುವುದು ಎಲ್ಲಿ? ಹೇಗೆ?
ಧರೆಯ ಶಾಶ್ವತ ಹಿಮಲೋಕಗಳಾದ ಆರ್ಕ್‌ಟಿಕ್ ಪ್ರದೇಶ (ಚಿತ್ರ-4) ಮತ್ತು ‘ಅಂಟಾರ್ಕ್ಟಿಕಾ ಭೂಖಂಡ’ದ (ಚಿತ್ರ-5) ಕಡಲಂಚುಗಳೇ ಐಸ್‌ಬರ್ಗ್‌ಗಳ ಅವತರಣದ ನೆಲೆ. ಆರ್ಕ್‌ಟಿಕ್‌ನ ಗ್ರೀನ್‌ಲ್ಯಾಂಡ್ ಮತ್ತು ಅಲಾಸ್ಕಾಗಳ (ಚಿತ್ರ-4 ರಲ್ಲಿ ಬಾಣದ ಗುರುತು ಸೂಚಿಸುತ್ತಿರುವ ಸ್ಥಳಗಳು) ಮತ್ತು ಅಂಟಾರ್ಕ್ಟಿಕಾದ ಕಡಲ ತೀರಗಳಲ್ಲಿ ಬಹಳ ಸಂಖ್ಯೆಯ ಭಾರಿ ಹಿಮನದಿಗಳು (ಚಿತ್ರ 1, 3, 10) ಸಾಗರಗಳನ್ನು ಸಂಧಿಸುತ್ತಿವೆ. ಅದೇ ತಾಣಗಳಲ್ಲಿ ಕಡಲಿನ ಶಕ್ತ ಅಲೆಗಳು ಆ ಹಿಮನದಿಗಳ ನೀರ್ಗಲ್ಲಿನಂಚುಗಳಿಗೆ ನಿರಂತರ ಅಪ್ಪಳಿಸುತ್ತಿವೆ. ಜೊತೆಗೆ ಕಡಲಿನ ಬೆಚ್ಚಗಿನ ಜಲರಾಶಿ ಅವಕ್ಕೆ ಬಿಸಿ ತಗುಲಿಸಿ ಕರಗಿಸುತ್ತಿದೆ. ಈ ವಿವಿಧ ಬಲಾಢ್ಯ ಶಿಥಿಲಕಾರಕಗಳ ಅವ್ಯಾಹತ ದಾಳಿಯಿಂದ ಹಿಮನದಿಗಳ ಅಂಚುಗಳು ಸೀಳಿ ದುರ್ಬಲಗೊಂಡು ಕಡೆಗೆ ಮುರಿದುಹೋಗಿ ಸಿಡಿಲಿನಂಥ ಸಪ್ಪಳದೊಡನೆ ಕಡಲಿಗೆ ಬೀಳುತ್ತವೆ; ಕಡಲಲ್ಲಿ ತೇಲತೊಡಗುತ್ತವೆ. ಅವೇ ಐಸ್‌ಬರ್ಗ್‌ಗಳು.

3. ಐಸ್‌ಬರ್ಗ್‌ಗಳ ಗಾತ್ರ ಎಷ್ಟು?
* ಐಸ್‌ಬರ್ಗ್‌ಗಳದು ಬಹು ಭಿನ್ನ ಭಿನ್ನ ರೂಪ, ಭಿನ್ನ ಭಿನ್ನ ಗಾತ್ರ (ಚಿತ್ರಗಳಲ್ಲಿ ಗಮನಿಸಿ). ಬಂಡೆಗಳ ಗಾತ್ರದಿಂದ (ಬರ್ಗೀ ಬಿಟ್ಸ್-ಚಿತ್ರ 8), ಕಾರು-ಬಸ್ಸು  ಗಾತ್ರದಿಂದ (ಗೌಲರ್ಸ್‌-ಚಿತ್ರ 6) ಹಡಗುಗಳ, ಗುಡ್ಡ-ಬೆಟ್ಟಗಳ (ಚಿತ್ರ 7, 9) ಕಡೆಗೆ ಪರ್ವತ ಗಾತ್ರದವರೆಗೆ ಐಸ್‌ಬರ್ಗ್‌ಗಳದು ಭಾರಿ ಗಾತ್ರಾಂತರ. ತೆರೆದ ಕಡಲನ್ನು ತಲುಪುವ ಯಾವುದೇ ಐಸ್‌ಬರ್ಗ್ ಕೂಡ ನೀರಿನಿಂದ ಹೊರಕ್ಕೆ ಕನಿಷ್ಠ 100-150 ಮೀ. ಎತ್ತರ ಇದ್ದು ದ್ರವ್ಯರಾಶಿ ಹತ್ತು ಲಕ್ಷ ಟನ್‌ಗಿಂತ ಅಧಿಕವಾಗಿರುತ್ತದೆ. ಬೃಹತ್ ಐಸ್‌ಬರ್ಗ್‌ಗಳಂತೂ ಹಲವಾರು ನೂರು ಮೀಟರ್ ಎತ್ತರ ಕಾಣುವಂತಿದ್ದು ನೂರಾರು ಚದರ ಮೀಟರ್ ವಿಸ್ತಾರವಿದ್ದು ಬಿಲಿಯಾಂತರ ಟನ್ ದ್ರವ್ಯರಾಶಿಯನ್ನೂ, ಕಲ್ಪನಾತೀತ ಗಾತ್ರವನ್ನೂ ಪಡೆದಿರುತ್ತವೆ. ವಿಶೇಷ ಏನೆಂದರೆ ಆರ್ಕ್‌ಟಿಕ್ ಪ್ರದೇಶದಿಂದ ದಕ್ಷಿಣ ಮಹಾಸಾಗರಕ್ಕೆ ಇಳಿಯುವ ಐಸ್‌ಬರ್ಗ್‌ಗಳು ಬೃಹದ್ಗಾತ್ರಕ್ಕೆ ಹೆಚ್ಚು ಪ್ರಸಿದ್ಧ. ಅಲ್ಲಿನ ಒಂದು ಐಸ್‌ಬರ್ಗ್ ಒಂದು ನೂರಾ ನಲವತ್ತು ಕಿಲೋಮೀಟರ್ ಉದ್ದ ಇದ್ದ ದಾಖಲೆ ಇದೆ!

4. ಐಸ್‌ಬರ್ಗ್‌ಗಳು ಕಡಲಲ್ಲಿ ತೇಲುವುದು, ತೇಲುತ್ತ ಸಾಗುವುದು ಹೇಗೆ?
* ನೀರ್ಗಲ್ಲು ನೀರಿನದೇ ಘನರೂಪ ಹೌದಾದರೂ ಅದರದು ನೀರಿಗಿಂತ ಕಡಿಮೆ ಸಾಂದ್ರತೆ (ನೀರಿನ ಸಾಪೇಕ್ಷ ಸಾಂದ್ರತೆ 1; ಮಂಜುಗೆಡ್ಡೆಯದು 0.9) ಆದ್ದರಿಂದಲೇ ಮಂಜುಗಡ್ಡೆ ತೇಲುತ್ತದೆ. ಇದೇ ಕಾರಣದಿಂದಲೇ ಐಸ್‌ಬರ್ಗ್‌ಗಳು ಕಡಲಲ್ಲಿ ತೇಲುತ್ತವೆ.

ಸ್ಪಷ್ಟವಾಗಿಯೇ ನೀರಿನ ಶತಾಂಶ ತೊಂಬತ್ತರಷ್ಟು ಸಾಂದ್ರತೆಯಿರುವ ಐಸ್‌ಬರ್ಗ್‌ಗಳ ಶೇಕಡ 99ರಷ್ಟು ಭಾಗ ನೀರಿನಲ್ಲಿ ಮುಳುಗಿ ಉಳಿದ ಶೇಕಡ 10ರಷ್ಟೇ ಭಾಗ ಹೊರಗೆ ಗೋಚರಿಸುತ್ತದೆ.

ಕಡಲಿಗಿಳಿಯುವ ಐಸ್‌ಬರ್ಗ್‌ಗಳನ್ನು ಸಾಗರಗಳಲ್ಲಿ ನಿರಂತರ ಚಲನಶೀಲವಾಗಿರುವ ಪ್ರಬಲ ಸಾಗರ ಪ್ರವಾಹಗಳು ತಮ್ಮೊಡನೆ ಎಳೆದು ಸಾಗಿಸುತ್ತವೆ. ಸಹಜವಾಗಿಯೇ ಹಾಗೆ ಮುಂದೆ ಮುಂದೆ ಸಾಗುತ್ತಲೇ ಐಸ್‌ಬರ್ಗ್‌ಗಳು ಕರಗತೊಡಗುತ್ತವೆ. ಅವುಗಳ ಗಾತ್ರವನ್ನು ಅವಲಂಬಿಸಿ ಅವು ಪೂರ್ಣ ಕರಗಲು ಕೆಲವಾರು ದಿನಗಳಿಂದ ತಿಂಗಳುಗಳವರೆಗೆ ಒಂದೆರಡು ವರ್ಷಗಳವರೆಗೂ ಕಾಲ ಬೇಕಾಗುತ್ತದೆ. ಹೀಗೆ ನಿರಂತರ ಕರಗುತ್ತ, ‘ಜಲಪಾತ’ಗಳನ್ನೂ ಪ್ರದರ್ಶಿಸುತ್ತಾ (ಚಿತ್ರ-5) ಕುಗ್ಗುವುದರಿಂದ ಐಸ್‌ಬರ್ಗ್‌ಗಳ ಆಕಾರ-ಗಾತ್ರ ಬದಲಾಗುತ್ತ ಹೋಗುತ್ತದೆ.

ಬೃಹದಾಕಾರದ ಐಸ್‌ಬರ್ಗ್‌ಗಳನ್ನೇರಿ ಆ ‘ತೇಲುವ ದ್ವೀಪಗಳ’ ಸವಾರಿ ಮಾಡುವ ಸಾಗರ ಪ್ರಾಣಿಗಳ ದೃಶ್ಯವೂ ಸಾಮಾನ್ಯ (ಚಿತ್ರ-7). ಸೀಲ್, ವಾಲ್ರಸ್, ಪೆಂಗ್ವಿನ್, ಹಿಮಕರಡಿ ಇತ್ಯಾದಿ ಆಯಾ ಪ್ರದೇಶದ ಪ್ರಾಣಿಗಳು ಐಸ್‌ಬರ್ಗ್‌ಗಳ ಮೇಲೇ ತಾತ್ಕಾಲಿಕವಾಗಿ ತಂಗುತ್ತವೆ ಕೂಡ. ಹಿಮನದಿಗಳು ಬಗೆದ ಬಂಡೆಗಳನ್ನೂ ಧರಿಸಿದ, ವಿಶಿಷ್ಟ ಸೂಕ್ಷ್ಮಜೀವಿಗಳು ಆವರಿಸಿದ ಪಟ್ಟೆ-ತೇಪೆಗಳನ್ನು ಪಡೆದ (ಚಿತ್ರ-9) ನಿರ್ವರ್ಣದ, ನೀಲಿ ಹಸಿರು ವರ್ಣಗಳ ಐಸ್‌ಬರ್ಗ್‌ಗಳದಂತೂ ಕಡಲಲ್ಲಿ ಸೋಜಿಗದ ದರ್ಶನ.

ಕಡಲಲ್ಲಿ ತೇಲುತ್ತ ಕರಗುತ್ತ ಕುಗ್ಗುತ್ತ ಅಲೆದಾಡುವ ಐಸ್‌ಬರ್ಗ್‌ಗಳು ಅದೇ ಹಾದಿಯಲ್ಲಿ ಪಯಣ ಬರುವ ಹಡಗುಗಳಿಗೆ ಬಹಳ ಅಪಾಯಕರ. ಒಟ್ಟೂ ಗಾತ್ರದ ಶೇಕಡ ತೊಂಬತ್ತು ಭಾಗ ನೀರಿನೊಳಗಿದ್ದು ಅಗೋಚರವಾಗಿ ಚಿತ್ರ-ವಿಚಿತ್ರವಾಗಿ ಹರಡಿದ ಐಸ್‌ಬರ್ಗ್‌ಗಳು ಹಡಗುಗಳಿಗೆ ಬಡಿದು ಸಂಭವಿಸಿರುವ ಅವಘಡಗಳು ಇತಿಹಾಸದಲ್ಲಿ ಹೇರಳ. 1912ರ ‘ಟೈಟಾನಿಕ್’ ಹಡಗಿನ ದುರಂತ ಒಂದು ಉದಾಹರಣೆ.

ಆದ್ದರಿಂದಲೇ ಆ ದುರಂತದ ನಂತರ ಹಡಗುಗಳ ಹಾದಿಯ ಐಸ್‌ಬರ್ಗ್‌ಗಳ ಬಗೆಗೆ ವಿವರವಾದ ನಿಖರ ಮನ್ಸೂಚನಾ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರಸ್ತುತ ಈ ವ್ಯವಸ್ಥೆಯನ್ನು ಕೃತಕ ಉಪಗ್ರಹಗಳು ನಿರ್ವಹಿಸುತ್ತಿವೆ. ದಕ್ಷಿಣ ಪೆಸಿಫಿಕ್, ದಕ್ಷಿಣ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಐಸ್‌ಬರ್ಗ್‌ಗಳು ಒಂದೂ ಇಲ್ಲ. ಬೃಹದಾಕಾರದ ಐಸ್‌ಬರ್ಗ್‌ಗಳನ್ನು ಎಳೆದು ತಂದು ಕಡಲಂಚಿನ ನಗರಗಳಿಗೆ ಕುಡಿವ ನೀರನ್ನು ಒದಗಿಸುವುದು ಭವಿಷ್ಯದ ಒಂದು ಯೋಜನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT