ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಕಣ್ಣು ಕಬ್ಬಿನ ಸಸಿ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾರತ ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 2ನೇ ಸ್ಥಾನ ಪಡೆದಿದೆ. ಆದರೂ ಸಕ್ಕರೆ ಉತ್ಪಾದನೆಗೆ ಬೇಕಾದ ಮೂಲ ವಸ್ತುವಾದ ಕಬ್ಬನ್ನು ಬೆಳೆಯಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸದೇ ಇರುವುದರಿಂದ ಹೆಚ್ಚಿನ ಲಾಭ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುವ ರೈತರು ಎಕರೆಗೆ 4 ಟನ್ ಕಬ್ಬನ್ನು ಬಿತ್ತನೆಗಾಗಿ ಉಪಯೋಗಿಸಿ ಯಾವುದೇ ರೀತಿಯ ಬೀಜೋಪಚಾರ ಮಾಡಲು ಸಾಧ್ಯವಾಗದೆ ನೇರವಾಗಿ ಭೂಮಿಗೆ ಎರಡೂವರೆ ಅಡಿ ಅಂತರ ಸಾಲಿನಲ್ಲಿ ನಾಟಿ ಮಾಡುತ್ತಾರೆ. ಇಲ್ಲಿ ಟ್ರಾಕ್ಟರ್ ಅಥವಾ ಟಿಲ್ಲರ್ ಸಹಾಯದಿಂದ ಅಂತರ ಬೇಸಾಯ ಮಾಡಲು ತೊಂದರೆಯಾಗುತ್ತದೆ.

ಇದಕ್ಕೊಂದು ಪರಿಹಾರವೂ ಇದೆ. ಕೇವಲ 600 ಕಿಲೊದಷ್ಟು ಕಬ್ಬು ಬಳಸಿ ನಾಟಿ ಮಾಡಬಹುದು. ಇಲ್ಲಿ ಬಿತ್ತನೆಯ ಖರ್ಚೂ ಉಳಿಯುತ್ತದೆ, ಅಂತರ ಬೇಸಾಯ ಮಾಡಲೂ ಸಹಾಯವಾಗುತ್ತದೆ. ಅದಕ್ಕಾಗಿ ಬಿತ್ತನೆ ಕಬ್ಬಿನ ಕಣ್ಣುಗಳನ್ನು ಬೇರ್ಪಡಿಸಬೇಕು. ಅದರಿಂದ ಸುಮಾರು ಒಂದು ಕಣ್ಣಿನ 100 ಕಿಲೊದಷ್ಟು ಬೀಜದ ಕಬ್ಬು ಸಿಗುತ್ತದೆ. ಅದನ್ನು ಒಂದು ಎಕರೆ ಪ್ರದೇಶಕ್ಕೆ ನಾಟಿ ಮಾಡಬಹುದು. ಕಣ್ಣು ತೆಗೆದ ನಂತರ ಉಳಿಯುವ ಕಬ್ಬನ್ನು ಸಕ್ಕರೆ ತಯಾರಿಕೆಗೆ ಬಳಸಬಹುದು.

ನಾಟಿಗೆ ಮೊದಲು ಈ ಕಬ್ಬಿನ ತುಂಡುಗಳನ್ನು ಬಕೆಟ್ ಅಥವಾ ಪ್ಲಾಸ್ಟಿಕ್ ಟಬ್‌ಗಳಲ್ಲಿ ಸುರಿದು ಬೀಜೋಪಚಾರ ಮಾಡಬೇಕು. ಇದರಿಂದ ಸಂಭವನೀಯ ರೋಗರುಜಿನಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದು.

ಬೀಜೋಪಚಾರ ಮಾಡಿದ ಒಂಟಿ ಕಣ್ಣಿನ ಬೀಜಗಳನ್ನು ಪ್ಟಾಸ್ಟಿಕ್ ಟ್ರೇ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಒಂದು ತಿಂಗಳು ಬೆಳೆಸಬೇಕು. ಈ ಸಸಿಗಳನ್ನು ನೇರವಾಗಿ ನಾಟಿ ಮಾಡಬಹುದಾಗಿದೆ. ಸಸಿಯಿಂದ ಸಸಿಗೆ 2 ಅಡಿ ಮತ್ತು ಸಾಲಿನಿಂದ ಸಾಲಿಗೆ 4 ಅಡಿ ಅಂತರ ಕೊಡುವುದರಿಂದ ಯಂತ್ರಗಳ ಸಹಾಯದಿಂದ ಅಂತರ ಬೇಸಾಯಕ್ಕೂ ಅವಕಾಶವಿದೆ. ಅಲ್ಲದೆ ಸುಮಾರು 70- 80 ದಿನಗಳಲ್ಲಿ ಕಟಾವಿಗೆ ಬರುವ ಯಾವುದಾದರೂ ತರಕಾರಿಯನ್ನು ಉಪ ಬೆಳೆಯಾಗಿ ಬೆಳೆದು ಆದಾಯ ಗಳಿಸಬಹುದು.

ಒಂಟಿಕಣ್ಣಿನ ಸಸಿ ಪದ್ಧತಿ ಕೇವಲ ರೈತನಿಗಷ್ಟೇ ಅಲ್ಲ ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಲಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಒಂದು ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಪ್ರತಿ ವರ್ಷ 10 ಸಾವಿರ ಎಕರೆ ಕಬ್ಬಿನ ನಾಟಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸುಮಾರು 40 ಸಾವಿರ ಟನ್ ಕಬ್ಬು ಬೇಕಾಗುತ್ತದೆ. ಆದರೆ ಒಂಟಿಕಣ್ಣಿನ ಸಸಿ ಅಭಿವೃದ್ಧಿ ಮಾಡಿದರೆ  ಕೇವಲ 6 ಸಾವಿರ ಟನ್ ಕಬ್ಬು ನಾಟಿಗೆ ಸಾಕಾಗುತ್ತದೆ. ಉಳಿದ 34 ಸಾವಿರ ಟನ್ ಕಬ್ಬನ್ನು ಅರೆದು ಸಕ್ಕರೆ ಉತ್ಪಾದನೆ ಮಾಡಬಹುದಾಗಿದೆ.

ಸಕ್ಕರೆ ಕಾರ್ಖಾನೆಯವರೇ ಈ ರೀತಿಯ ಸುಧಾರಿತ ಬೇಸಾಯವನ್ನು ಅನುಸರಿಸುವುದು ಉತ್ತಮ. ಅವರೇ ಒಂಟಿಕಣ್ಣಿನ ಸಸಿಗಳನ್ನು ತಯಾರು ಮಾಡಿ ರೈತರಿಗೆ ವಿತರಿಸಬಹುದು. ಅಲ್ಲದೆ ಏಕ ಕಾಲಕ್ಕೆ ಕಬ್ಬು ಸರಬರಾಜಾಗುವುದನ್ನು ತಡೆಗಟ್ಟಿ 12 ತಿಂಗಳೂ ನಿಯಮಿತವಾಗಿ ಕಬ್ಬು ಕಟಾವಾಗುವಂತೆ ಮಾಡಬಹುದು. ಕಬ್ಬು ಅರೆಯುವ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆ ನಿಯಂತ್ರಿಸಬಹುದು.

ಒಂಟಿಕಣ್ಣಿನ ಸಸಿಗಳನ್ನು ಉಪಯೋಗಿಸಿ ಸುಮಾರು 3 ವರ್ಷಗಳಿಂದ ಕಬ್ಬು ಬೆಳೆಯುತ್ತಿರುವ ಶಿವಮೊಗ್ಗ ತಾಲ್ಲೂಕು ವಡ್ಡಿನಕೊಪ್ಪ ಗ್ರಾಮದ ರೈತ ಕೆ. ನಾಗರಾಜ್ ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದರ ಮೂಲಕವೇ ನೀರು ಗೊಬ್ಬರಗಳನ್ನು ಬೆಳೆಗೆ ನೀಡುವುದಲ್ಲದೆ, ಯಂತ್ರಗಳ ಸಹಾಯದಿಂದಲೇ ಅಂತರ ಬೇಸಾಯ ಮಾಡುತ್ತಾರೆ, ಅಂತರ ಬೆಳೆಗಳನ್ನು ಬೆಳೆದು ಆದಾಯ ಪಡೆಯುತ್ತಿದ್ದಾರೆ.

ಈ ಮುಂಚೆ 1 ಎಕರೆಗೆ ಉಪಯೋಗಿಸುತ್ತಿದ್ದ ನೀರನ್ನು ಅವರು ಈಗ 3 ಎಕರೆಗಳಿಗೆ ನೀಡುವ ವಿಧಾನವಂತೂ ಅಚ್ಚರಿ ಮೂಡಿಸುತ್ತದೆ. ಮಹಾರಾಷ್ಟ್ರದ ರೈತರು ಬಳಸುವಂತ ಕಬ್ಬು ಕಟಾವು ಯಂತ್ರವನ್ನು ತಮ್ಮ ಜಮೀನಿನಲ್ಲೂ ಉಪಯೋಗಿಸಲು ಯೋಜಿಸುತ್ತಿರುವುದಾಗಿ ಅವರು ಹುರುಪಿನಿಂದಲೇ ಹೇಳುತ್ತಾರೆ.

 ಕಬ್ಬು ಬೆಳೆಗಾರರ ಆರ್ಥಿಕ ಅಭಿವೃದ್ಧಿಯೊಂದಿಗೆ ಆದಾಯವನ್ನೂ ಹೆಚ್ಚಿಸಬಲ್ಲ ಒಂಟಿಕಣ್ಣಿನ ಕಬ್ಬಿನ ಸಸಿಗಳ ಉತ್ಪಾದನೆ ಮತ್ತು ಉಪಯೋಗಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಕ್ಕರೆ ಕಾರ್ಖಾನೆಗಳು ಮುಂದಾದರೆ ಸಾಕಷ್ಟು ಲಾಭವೂ ಇದೆ. ನಾಗರಾಜ್ ಅವರ ಅನುಭವ ತಿಳಿಯಲು 94486 82965 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT