ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದನೇ ನಂಬರ್ ಕಾಯಂ ಇರಲ್ಲ! ( ಪ್ರವಚನ ಮಾಲೆ-5)

Last Updated 22 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಮೈಸೂರು: “ಒಂದನೆ ನಂಬರ್ ಕಾಯಂ ಇರಲ್ಲ. ಕಳೆದ ಬಾರಿ ಒಂದನೇ ನಂಬರ್ ಕೊಟ್ಟಾರ ಅಂತ ಈ ಬಾರಿನೂ ಹೋದರ ಮತ್ತೆ ನಂಬರ್ ಒನ್ ಕೊಡೋದಿಲ್ಲ”.

ಭಾನುವಾರ ಬೆಳಿಗ್ಗೆ ಶ್ರೀಚಾಮ ರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಜನರನ್ನು ಮೋಡಿ ಮಾಡಿದ್ದು ಹೀಗೆ. ಅವರ ಮಾತೇ ಹಾಗೆ. ಮಂದ್ರದಲ್ಲಿ ಆರಂಭವಾಗಿ ಮಧ್ಯಕ್ಕೆ ಬಂದು ಅಲೆ ಅಲೆಯಂತೆ ಬರುತ್ತಲೇ ಇರುತ್ತದೆ.

“ಮಾಂಡುಕ್ಯ ಉಪನಿಷತ್ ಪ್ರಕಾರ ಮೂರು ಜಗತ್ತುಗಳು ಇರುತ್ತವೆ. ಒಂದು ಎಚ್ಚರದ ಜಗತ್ತು. ಇನ್ನೊಂದು ಕನಸಿನ ಜಗತ್ತು. ಮತ್ತೊಂದು ನಿದ್ದೆಯ ಜಗತ್ತು. ಈ ಮೂರಕ್ಕೂ ಕಾಲದ ಮಿತಿ ಇದೆ. ಇದನ್ನು ದಾಟಿದ ನಾಲ್ಕನೇ ಜಗತ್ತು ಇದೆ. ಇದೇ ಓಂಕಾರ ಸತ್ಯ”.

“ಅನುಭವ ಜೀವನಕ್ಕೆ ಹೊಸ ರೂಪ ಕೊಡುತ್ತದೆ. ಸತ್ಯ ದರ್ಶನ ಬಹಳ ಮುಖ್ಯ. ಭಾರತ ಜ್ಞಾನಿಗಳ ಜಗತ್ತು. ಉಪನಿಷತ್ ಅಪರೂಪದ ಕಾಣಿಕೆ. ಮಾಂಡುಕ್ಯ ಉಪನಿಷತ್ ಆತ್ಮ ಮತ್ತು ಬ್ರಹ್ಮದ ಬಗ್ಗೆ ಹೇಳುತ್ತದೆ.

ಯಾವುದನ್ನು ಇಲ್ಲ ಎಂದು ಹೇಳಲು ಯಾವುದು ಬೇಕಾಗುತ್ತದೋ ಅದು ಆತ್ಮ. ಒಳಗಿದ್ದರೆ ಆತ್ಮ, ಹೊರಗಿದ್ದರೆ ಪರಮಾತ್ಮ. ಶರೀರ ಹೋದ ಬಳಿಕ ಅನಂತಾತ್ಮ. ಬ್ರಹ್ಮ ಎಂದರೆ ಮಿತಿ ಇಲ್ಲದ್ದು.”

“ಮನಸ್ಸು ಇಲ್ಲದಿದ್ದರೆ ಮನುಷ್ಯ ಇಲ್ಲ. ಬದುಕಿಗೆ ಸವಿಯನ್ನು, ಕಹಿಯನ್ನು ತರುವುದು ಮನಸ್ಸು. ಕನಸಿನಲ್ಲಿ ಕಾಣೋದು ಸತ್ಯ ಅಲ್ಲ. ಅದರಂತೆ ಹೊರ ಜಗತ್ತು ಇರುವುದಿಲ್ಲ. ನಿದ್ದೆಗೆ ಜಾರಿದರೆ ನಾವು ನಾವೇ ಅಲ್ಲ. ಅಧ್ಯಕ್ಷ ಮಲಗಿದ್ದಾನೆ ಎಂದರೆ ಆಗ ಅವನು ಅಧ್ಯಕ್ಷ ಅಲ್ಲ. ಜನಕ ಮಹಾರಾಜ ಮಲಗಿದ್ದ. ತನ್ನ ರಾಜ್ಯದ ಮೇಲೆ ಶತ್ರುಗಳು ದಾಳಿ ಮಾಡಿದ ಕನಸು ಕಂಡ. ರಾಜ್ಯ, ಅಧಿಕಾರ, ಹಣ ಕನಕ ಎಲ್ಲವನ್ನೂ ಕಳೆದುಕೊಂಡ. ಭಿಕ್ಷೆ ಬೇಡಲು ಹೊರಟ. ಯಾರೂ ಈತನಿಗೆ ಭಿಕ್ಷೆ ಹಾಕದಂತೆ ಡಂಗುರ ಸಾರಲಾಗಿತ್ತು. ಭಿಕ್ಷೆ ಬೇಡಲು ಆತನಿಗೆ ಪಾತ್ರೆಯೂ ಇರಲಿಲ್ಲ. ಕೈಯಲ್ಲಿಯೇ ಭಿಕ್ಷೆ ಬೇಡುತ್ತಿದ್ದ. ಈ ಹಂತದಲ್ಲಿ ಆತನಿಗೆ ಎಚ್ಚರವಾಯಿತು. ಎದ್ದು ಕುಳಿತರೆ ಆತ ಭಿಕ್ಷುಕನಲ್ಲ. ಮಹಾ ರಾಜ. ನಾನು ಭಿಕ್ಷುಕನೋ ಮಹಾ ರಾಜನೋ ಎಂಬ ಜಿಜ್ಞಾಸೆ ಆತನಲ್ಲಿ ಆರಂಭವಾಯಿತು. ಪಕ್ಕದಲ್ಲಿ ಮಲಗಿದ್ದ ಮಹಾರಾಣಿಗೆ ಎಚ್ಚರವಾದಾಗ ಆಕೆಯಲ್ಲಿಯೂ ನಾನು ಭಿಕ್ಷುಕನೋ ಮಹಾರಾಜನೋ ಎಂದು ಕೇಳಿದ. ಆಕೆಗೆ ಗಾಬರಿಯಾಗಿ ವೈದ್ಯರನ್ನು ಕರೆಸಿದಳು. ರಾಜನ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ದಿದ್ದರಿಂದ ಆಕೆ ರಾಜನನ್ನು ಹುಚ್ಚನನ್ನಾಗಿ ಮಾಡಿದ್ದಳು. ಇದು ದೊಡ್ಡ ಸಮಸ್ಯೆಯಾಯಿತು. ರಾಜನ ಹುಚ್ಚು ಬಿಡಿಸಿದವರಿಗೆ ಅರ್ಧ ರಾಜ್ಯ ನೀಡು ವುದಾಗಿ ಡಂಗುರ ಸಾರಲಾಯಿತು. ಯಾರಿಂದಲೂ ರಾಜನ ಹುಚ್ಚನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಒಬ್ಬ ಸಂತ ಬಂದ. ರಾಜ ಆತನಲ್ಲಿಯೂ ಇದೇ ಪ್ರಶ್ನೆ ಕೇಳಿದ. ಆಗ ಸಂತ `ನೀನು ಕನಸು ಕಾಣುವಾಗ ರಾಜ ಅಲ್ಲ. ಎದ್ದಾಗ ನೀನು ತಿರುಕ ಅಲ್ಲ. ಆದರೆ ಎರಡೂ ಕಡೆ ನೀನು ಇರುತ್ತೀಯ ಅಷ್ಟೆ~ ಎಂದು ಉತ್ತರಿಸಿದ.”

ಜಾಗೃತ ಜಗತ್ತು, ಕನಸಿನ ಜಗತ್ತು ಮತ್ತು ನಿದ್ದೆಯ ಜಗತ್ತು ಎಲ್ಲದಕ್ಕೂ ಮಿತಿಗಳಿವೆ. ಇದನ್ನು ಮೀರಿದ್ದು ಮತ್ತು ಈ ಮೂರೂ ಇಲ್ಲದ್ದು ಚಿರಂತನ ಸತ್ಯ. ಭೇದಭಾವಗಳ ಮಧ್ಯ ಮನುಕುಲ ಸಿಕ್ಕಿ ಹಾಕಿಕೊಂಡಿದೆ. ಇಲ್ಲಿ ಇರೋತನಕ ಇದು ನಮ್ಮದ ಅಂತ ನೋಡಿಕೊಳ್ಳಬೇಕು. ಎಲ್ಲವೂ ಒಂದು ದಿನ ಕೊನೆಯಾಗುತ್ತದೆ ಎಂದೇ ಆರಂಭ ಮಾಡಬೇಕು” ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಮಾಲೆ ಕೂಡ ಇನ್ನು ಮೂರು ದಿನದಲ್ಲಿ ಕೊನೆಯಾಗುತ್ತದೆ. ತಪ್ಪಿಸಿಕೊಳ್ಳದೆ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT