ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಣ್ಣಿಗೆ ಬೆಣ್ಣೆ... ವಕೀಲರ ಅಳಲು

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಾವೇನು ತಪ್ಪು ಮಾಡಿದ್ದೇವೆ. ನಮ್ಮದೂ ಜೀವ ಅಲ್ಲವೇ- ಅದಕ್ಕೆ ಬೆಲೆಯೇ ಇಲ್ಲವೆ, ನಮ್ಮನ್ನು ಹೀಗೆ ಕಡೆಗಣಿಸುತ್ತಾ ಇರುವುದು ಸರಿಯೇ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ. ಇದು ನ್ಯಾಯವೇ...?~ -ಹೀಗೆ ಪ್ರಶ್ನೆಗಳನ್ನು ಕೇಳುತ್ತಿರುವವರು ನಗರದ ಅಧೀನ ಕೋರ್ಟ್‌ಗಳ ವಕೀಲರು.

ಇದಕ್ಕೆ ಕಾರಣ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಬಿಗಿ ಬಂದೋಬಸ್ತ್ ಪ್ರಕ್ರಿಯೆ. ಕಳೆದ ವಾರ ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಇಲ್ಲಿಯ ಹೈಕೋರ್ಟ್‌ನಲ್ಲಿಯೂ ಭಾರಿ ಭದ್ರತೆ ಕಲ್ಪಿಸಲಾಗುತ್ತಿದೆ. ಇದು ಸಿವಿಲ್ ಕೋರ್ಟ್ ಸೇರಿದಂತೆ ಮ್ಯಾಜಿಸ್ಟ್ರೇಟ್, ಮೇಯೋಹಾಲ್, ಕೌಟುಂಬಿಕ ಕೋರ್ಟ್‌ಗಳ ವಕೀಲರ ಅಸಮಾಧಾನಕ್ಕೆ ಕಾರಣವಾಗಿದೆ.

300 ಪೊಲೀಸರ ನಿಯೋಜನೆ, 80 ಮಂದಿ ಕಮಾಂಡೋಗಳಿಗೆ ತರಬೇತಿ, ಸಿಸಿ ಕ್ಯಾಮೆರಾ ಅಳವಡಿಕೆ, ಆಧುನಿಕ ಬ್ಯಾಗ್ ಸ್ಕ್ಯಾನರ್‌ಗಳು, ಹಲವು ಮೆಟಲ್ ಡಿಟೆಕ್ಟರ್‌ಗಳು, ಪೊಲೀಸರ ಕೈಗೆ ಗನ್- ಇವು ಹೈಕೋರ್ಟ್‌ಗೆ ನೀಡುತ್ತಿರುವ ಭದ್ರತೆ. ಭದ್ರತೆಗೆ ಸಂಬಂಧಿಸಿದ ಕಾಮಗಾರಿ  ಭರದಿಂದ ನಡೆದಿದ್ದು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಇದರ ಜೊತೆ ನ್ಯಾಯಮೂರ್ತಿಗಳ ಕಾರು ಬಿಟ್ಟು ನ್ಯಾಯಾಲಯದ ಆವರಣದೊಳಗೆ ಬೇರೆ ಯಾವುದೇ ವಾಹನ ಸುಳಿಯದಂತಹ ಭದ್ರತೆ ಒದಗಿಸಲಾಗಿದೆ. ಉಳಿದ ವಾಹನಗಳಿಗೆ ಕೋರ್ಟ್ ಪಕ್ಕದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ರೀತಿಯ ಭದ್ರತೆ ಹೈಕೋರ್ಟ್‌ಗೆ ಮಾತ್ರ ಯಾಕೆ ಎನ್ನುವುದು ಈ ವಕೀಲರ ಅಳಲು. ಹೈಕೋರ್ಟ್‌ಗೆ ಭದ್ರತೆ, ಅಧೀನ ಕೋರ್ಟ್‌ಗೆ ಮಾತ್ರ ರಕ್ಷಣೆ ಕೊರತೆ ಏಕೆ ಎನ್ನುವುದು ಅವರ ಪ್ರಶ್ನೆ.

ಮೂರು ಪಟ್ಟು ಜನ: ಹೈಕೋರ್ಟ್‌ಗೆ ದಿನನಿತ್ಯ ವಕೀಲರೂ ಸೇರಿದಂತೆ ಸುಮಾರು ಎರಡು ಸಾವಿರ ಜನ ಎಡತಾಕಿದರೆ, ಸಿವಿಲ್ ಕೋರ್ಟ್‌ನಲ್ಲಿ ಇದರ ಸಂಖ್ಯೆ 6 ಸಾವಿರ ಮೀರುವುದು. ಕಾರಣ ಇಲ್ಲಿ ಸಿವಿಲ್ ಕೋರ್ಟ್ ಮಾತ್ರವಲ್ಲದೇ, ಸೆಷನ್ಸ್ ಕೋರ್ಟ್, ವಿಶೇಷ ನ್ಯಾಯಾಲಯಗಳು ಸೇರಿದಂತೆ ಸುಮಾರು 50 ಕೋರ್ಟ್‌ಗಳು ಕಾರ್ಯ ನಿರ್ವಹಿಸುತ್ತವೆ. ಇದರಿಂದ ಈ ಕೋರ್ಟ್ ಸದಾ ಜನಜಂಗುಳಿಯಿಂದ ಕೂಡಿರುತ್ತದೆ.

ಇನ್ನು ಮೇಯೋಹಾಲ್ ಬಳಿ ಇರುವ  ಸೆಷನ್ಸ್ ಕೋರ್ಟ್ ಹಾಗೂ ನೃಪತುಂಗ ರಸ್ತೆ ಬಳಿ ಇರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳಲ್ಲೂ ಓಡಾಟ ನಡೆಸುವವರ ಸಂಖ್ಯೆ ವಿಪರೀತ. ಅಷ್ಟೇ ಅಲ್ಲದೇ ಈ ಕೋರ್ಟ್‌ಗಳಲ್ಲಿ  ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುವ ಕಾರಣ ಆರೋಪಿಗಳ ಓಡಾಟ ಕೂಡ ಹೆಚ್ಚು. ಆದರೆ ಭದ್ರತೆ ಮಾತ್ರ ಶೂನ್ಯ ಎನ್ನುವುದು ವಕೀಲರ ನೋವು.

ವಕೀಲರ ಪ್ರತಿಕ್ರಿಯೆ:
ಅಧೀನ ಕೋರ್ಟ್‌ಗಳಲ್ಲಿ ಭದ್ರತೆಯ ಅಗತ್ಯ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು, `ಸಿವಿಲ್ ಕೋರ್ಟ್ ಮಟ್ಟಿಗೆ ಹೇಳುವುದಾದರೆ ಇಲ್ಲಿ ಮೂರು ಮಹಡಿಗಳ ಕಾರು ಪಾರ್ಕಿಂಗ್ ವ್ಯವಸ್ಥೆ ಇದೆ. ಅದು ಭರ್ತಿಯಾಗಿ ಪಾರ್ಕಿಂಗ್‌ಗೆ ಜಾಗ ಸಿಗದಷ್ಟು ಮಂದಿ ನಿತ್ಯ ಇಲ್ಲಿಗೆ ಬರುತ್ತಾರೆ.

ಆದರೆ ಸ್ವಲ್ಪವೂ ಭದ್ರತೆ ಇಲ್ಲ. ಯಾರು ಏನೇ ತಂದರೂ ಅದನ್ನು ಗಮನಿಸುವವರೇ ಇಲ್ಲ. ಉಳಿದ ಅಧೀನ ಕೋರ್ಟ್‌ಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ~ ಎಂದರು.

`ಹೈಕೋರ್ಟ್‌ಗೆ ನೀಡುವಷ್ಟೇ ಭದ್ರತೆಯನ್ನು ಅಧೀನ ಕೋರ್ಟ್‌ಗಳಿಗೂ ನೀಡಬೇಕು. ನಿಜ ಹೇಳಬೇಕೆಂದರೆ ಹೈಕೋರ್ಟ್‌ಗಿಂತಲೂ, ಸಿವಿಲ್ ಕೋರ್ಟ್‌ಗೆ ಹೆಚ್ಚಿನ ಭದ್ರತೆ ಅಗತ್ಯ~ ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವೈ.ಎನ್.ಸದಾಶಿವ ರೆಡ್ಡಿ ಹಾಗೂ ವಕೀಲ ರಾಜಾರಾಮ್ ಅವರು ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT