ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದೇಶ ಒಂದು ತೆರಿಗೆ

ಸರಕು ಮತ್ತು ಸೇವಾ ತೆರಿಗೆಗೆ ಕೊನೆಗೂ ರಾಜ್ಯಸಭೆ ಅಸ್ತು
Last Updated 3 ಆಗಸ್ಟ್ 2016, 20:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವುದಕ್ಕಾಗಿ ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಮಸೂದೆಗೆ ರಾಜ್ಯಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.

ಇದು ಸ್ವಾತಂತ್ರ್ಯಾನಂತರದ ಅತ್ಯಂತ ಮಹತ್ವದ ಮತ್ತು ಅತ್ಯಂತ ದೂರಗಾಮಿ ಆರ್ಥಿಕ ಸುಧಾರಣಾ ಕ್ರಮ ಎಂದು ಬಣ್ಣಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿರುವ ಈ ಕ್ರಮ ತಾವು ಸುಧಾರಣಾವಾದಿ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಿಂಬಕ್ಕೆ ಪೂರಕವಾಗಿದೆ.

ಬುಧವಾರ ಮಧ್ಯಾಹ್ನ 2 ಗಂಟೆಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮಸೂದೆ ಮಂಡಿಸಿದ ನಂತರ  ರಾತ್ರಿ 9ರ ತನಕ ಸುದೀರ್ಘ ಚರ್ಚೆ ನಡೆಯಿತು. ಆರಂಭದಿಂದಲೇ ಜಿಎಸ್‌ಟಿಯನ್ನು ವಿರೋಧಿಸುತ್ತಿರುವ ಎಐಎಡಿಎಂಕೆ ಸಭಾತ್ಯಾಗ ನಡೆಸುವ ಮೂಲಕ ಮತದಾನದಿಂದ ದೂರ ಉಳಿಯಿತು. ಇತರ ಎಲ್ಲ ಪಕ್ಷಗಳು ಮಸೂದೆಯನ್ನು ಬೆಂಬಲಿಸಿವೆ. ಹಾಗಾಗಿ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅವಿರೋಧ ಅಂಗೀಕಾರ ನೀಡಿತು.
ಸದನದಲ್ಲಿ ಹಾಜರಿದ್ದ ಎಲ್ಲ 203 ಸದಸ್ಯರು ಮಸೂದೆಯ ಪರ ಮತ ಹಾಕಿದರು.

ಜಿಎಸ್‌ಟಿಯ ಗರಿಷ್ಠ ದರ ಎಷ್ಟಿರಬೇಕು, ಜಿಎಸ್‌ಟಿ ವಿವಾದ ಪರಿಹಾರ ವ್ಯವಸ್ಥೆ ಹೇಗಿರಬೇಕು ಮತ್ತು ಶೇ ಒಂದು ಹೆಚ್ಚುವರಿ ತೆರಿಗೆ ಹೇರಿಕೆಗೆ ಅವಕಾಶ ಇರಬಾರದು ಎಂಬ ವಿಚಾರಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸದನದಲ್ಲಿ ಮತ್ತು ಹೊರಗೆ ಭಾರಿ ಚರ್ಚೆ ನಡೆದಿದೆ.

ಜಿಎಸ್‌ಟಿಯ ಗರಿಷ್ಠ ದರವನ್ನು ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಸೇರಿಸಬೇಕು ಎಂಬ ಕಾಂಗ್ರೆಸ್‌ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಆದರೆ ಈ ಅಂಶವನ್ನು ಜಿಎಸ್‌ಟಿಯ ಪೂರಕ ಮಸೂದೆಗಳಾದ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ಸಮಗ್ರ ಜಿಎಸ್‌ಟಿಗಳಲ್ಲಿ (ಐಜಿಎಸ್‌ಟಿ) ಸೇರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಈ ಎರಡೂ ಮಸೂದೆಗಳನ್ನು ಹಣಕಾಸು ಮಸೂದೆಗಳಾಗಿ ಮಂಡಿಸದೆ ಆರ್ಥಿಕ ಮಸೂದೆಗಳಾಗಿಯೇ ಮಂಡಿಸಬೇಕು ಎಂದು ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಜಿಎಸ್‌ಟಿ ಎಂಬುದು ತೆರಿಗೆದಾರರು ಮತ್ತು ಜನರಿಗೆ ಸಂಬಂಧಪಟ್ಟ ವಿಚಾರ. ಹಾಗಾಗಿ ಅದು ಸಂಸತ್ತಿನ ಎರಡೂ ಸದನಗಳಲ್ಲಿ ಚರ್ಚೆಯಾಗಿ ಅಂಗೀಕಾರವಾಗುವುದು ಅಗತ್ಯ ಎಂದು  ಕಾಂಗ್ರೆಸ್‌ ಮುಖಂಡ, ರಾಜ್ಯಸಭೆ ಸದಸ್ಯ  ಪಿ. ಚಿದಂಬರಂ ಆಗ್ರಹಿದ್ದಾರೆ.

ಆದರೆ ಜಿಎಸ್‌ಟಿಯ ಪೂರಕ ಮಸೂದೆಗಳನ್ನು ಆರ್ಥಿಕ ಮಸೂದೆಗಳಾಗಿಯೇ ಮಂಡಿಸಲಾಗುವುದು ಎಂಬ ಸ್ಪಷ್ಟ ಭರವಸೆಯನ್ನು ಜೇಟ್ಲಿ ಅವರು ನೀಡಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಹಾಗಾಗಿ ಈ ಒಂದು ಅಂಶ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಪರಿಹಾರವಾಗದ ವಿಚಾರವಾಗಿಯೇ ಉಳಿದಿದೆ. ಹಣಕಾಸು ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಅಗತ್ಯ ಇಲ್ಲ. ಆದರೆ ಆರ್ಥಿಕ ಮಸೂದೆ ರಾಜ್ಯಸಭೆಯ ಅಂಗೀಕಾರವನ್ನೂ ಪಡೆಯಬೇಕು.

ಸೇವಾ ವಲಯಕ್ಕೆ ಹೊರೆ: ಪ್ರಸ್ತುತ ಸೇವಾ ತೆರಿಗೆ ದರ ಶೇ 14.5 ರಷ್ಟಿದೆ. ಜಿಎಸ್‌ಟಿ ದರ ಶೇ 18 ರಷ್ಟು ನಿಗದಿಪಡಿಸಿದರೆ ಸೇವಾ ವಲಯಕ್ಕೆ ಹೊರೆ ಬೀಳಲಿದೆ. ಪ್ರವಾಸ, ವಿಮಾನ ಪ್ರಯಾಣ, ಆಂಬುಲೆನ್ಸ್‌ ಸೇವೆ, ಸಾಂಸ್ಕೃತಿಕ ಚಟುವಟಿಕೆ, ಕೆಲವೊಂದು ತೀರ್ಥಯಾತ್ರೆಗಳು, ಕ್ರೀಡಾ ಸ್ಪರ್ಧೆಗಳು ದುಬಾರಿಯಾಗಲಿವೆ. ಭಾರತದ ಆರ್ಥಿಕತೆಯಲ್ಲಿ ಸೇವಾ ವಲಯದ ಪಾಲು ಶೇ 57 ರಷ್ಟಿದೆ. ಆದ್ದರಿಂದ ತೆರಿಗೆ ದರ ಹೆಚ್ಚಿದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.
*
ವ್ಯಾಪ್ತಿಯಿಂದ ಹೊರಗೆ ಸ್ಥಳೀಯ ತೆರಿಗೆ
ಸ್ಥಳೀಯಾಡಳಿತ ಸಂಸ್ಥೆಗಳು ವಿಧಿಸುವ ತೆರಿಗೆಗಳು ಜೆಎಸ್‌ಟಿಯಲ್ಲಿ ಅಂತರ್ಗತವಾಗುವುದಿಲ್ಲ. ಈ ತೆರಿಗೆಗಳು ಪ್ರತ್ಯೇಕವಾಗಿಯೇ ಉಳಿಯಲಿವೆ.

ಮದ್ಯ ಪ್ರತ್ಯೇಕ: ಮದ್ಯದ ಮೇಲೆ ರಾಜ್ಯ ಸರ್ಕಾರಗಳು ಅಬಕಾರಿ ತೆರಿಗೆ ವಿಧಿಸುತ್ತವೆ. ಮದ್ಯ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಮದ್ಯಕ್ಕೆ ತೆರಿಗೆ ವಿಧಿಸುವ ಅವಕಾಶ ರಾಜ್ಯ ಸರ್ಕಾರಗಳ ಬಳಿಯೇ ಇರಲಿದೆ.

ಮತ್ತೆ ಒಪ್ಪಿಗೆ ಅಗತ್ಯ: ಲೋಕಸಭೆಯು ಸಂವಿಧಾನ ತಿದ್ದುಪಡಿ ಮಸೂದೆಗೆ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯನ್ನು ಪರಿಷ್ಕರಿಸಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಿರುವುದರಿಂದ ಅದು ಮತ್ತೊಮ್ಮೆ ಲೋಕಸಭೆಯ ಒಪ್ಪಿಗೆ ಪಡೆಯುವುದು ಅಗತ್ಯ.
ಎಲ್ಲ ಪಕ್ಷಗಳು ಜಿಎಸ್‌ಟಿ ಬೆಂಬಲಕ್ಕೆ ನಿಂತಿರುವುದರಿಂದ ಮತ್ತು ಲೋಕಸಭೆಯಲ್ಲಿ ಎನ್‌ಡಿಎಗೆ ಭಾರಿ ಬಹುಮತ ಇರುವುದರಿಂದ ಸುಲಭವಾಗಿ ಅಂಗೀಕಾರವಾಗಲಿದೆ.

ಏಪ್ರಿಲ್‌ನಿಂದ ಜಾರಿ?: 2017ರ ಏಪ್ರಿಲ್‌ನಿಂದ ಜಿಎಸ್‌ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೂ ಮೊದಲು 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು (ಶೇ 50ರಷ್ಟು)  ಮಸೂದೆಗೆ ಅನುಮೋದನೆ ನೀಡಬೇಕಿದೆ.

ಜತೆಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯಗಳು ಸಜ್ಜಾಗಬೇಕಿವೆ. ವರಮಾನ ಹಂಚಿಕೆ ಮುಂತಾದ ವಿಚಾರಗಳ ಪೂರಕ ಮಸೂದೆಗಳು ಸಂಸತ್ತಿನ ಅಂಗೀಕಾರ ಪಡೆಯಬೇಕಿವೆ. ಹಾಗಾಗಿ ಏಪ್ರಿಲ್‌ ಒಂದರಿಂದಲೇ ಜಾರಿಗೆ ತರುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ.
2017ರ ಅಕ್ಟೋಬರ್ ನಂತರವೇ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರಬಹುದು ಎನ್ನಲಾಗಿದೆ.
*
ತಯಾರಕರಿಗೆ ಲಾಭ, ಸೇವಾ ವಲಯಕ್ಕೆ ಹೊರೆ ಸಂಭವ
ಜಿಎಸ್‌ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್‌ ಸೇರಿದಂತೆ ಎಲ್ಲ  ಪರೋಕ್ಷ ತೆರಿಗೆಗಳು ರದ್ದಾಗಲಿವೆ.

ಸರ್ಕಾರವು ಜಿಎಸ್‌ಟಿ ದರವನ್ನು ಶೇ 18ಕ್ಕೆ ನಿಗದಿಪಡಿಸಿದರೆ, ತಯಾರಕರು ಮತ್ತು ಗ್ರಾಹಕರು ಈ ಹೊಸ ತೆರಿಗೆ ವ್ಯವಸ್ಥೆಯಡಿ ಲಾಭ ಪಡೆಯಲಿದ್ದಾರೆ. ಅಬಕಾರಿ ಸುಂಕ, ವ್ಯಾಟ್‌ ಮತ್ತು ಕೇಂದ್ರ ಮಾರಾಟ ತೆರಿಗೆ ನೀಡಬೇಕಿರುವುದರಿಂದ ಗ್ರಾಹಕರು  ಈಗ ವಸ್ತುವೊಂದರ ಉತ್ಪಾದನಾ ವೆಚ್ಚಕ್ಕಿಂತ ಅಂದಾಜು ಶೇ 25 ರಷ್ಟು ಅಧಿಕ ಬೆಲೆ ನೀಡುತ್ತಿದ್ದಾರೆ. ಜಿಎಸ್‌ಟಿ ಅನುಷ್ಠಾನಗೊಂಡರೆ ಗ್ರಾಹಕನ ಹೊರೆ ಕಡಿಮೆಯಾಗಲಿದೆ.

ಅಬಕಾರಿ, ವ್ಯಾಟ್‌ ಮತ್ತು ಸೇವಾ ತೆರಿಗೆ ಪಾವತಿಸುತ್ತಿರುವ ತಯಾರಕರು ಇನ್ನು ಮುಂದೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ಬರಲಿದ್ದಾರೆ.
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್‌ಗಳನ್ನೂ ಪಾವತಿಸುತ್ತಾರೆ. ಆದರೆ ಇನ್ನು ಮುಂದೆ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.

ಕಚ್ಚಾ ಅಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ತೆರಿಗೆ ದರ ಪ್ರಸ್ತುತ ಶೇ 6 ರಿಂದ ಶೇ 8ರಷ್ಟಿದೆ. ಜಿಎಸ್‌ಟಿ ದರವನ್ನು ಶೇ 18ಕ್ಕೆ ನಿಗದಿಪಡಿಸಿದರೆ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಲಿದೆ. ಪ್ರಸ್ತುತ ಕಡಿಮೆ ತೆರಿಗೆ ಹೊಂದಿರುವ ವಸ್ತುಗಳ ಬೆಲೆ ಏರಿಕೆಯಾಗುವ ಸಂಭವ ಇದೆ. ಉದಾಹರಣೆಗೆ ಸಣ್ಣ ಕಾರುಗಳಿಗೆ ಈಗ ಶೇ 8 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಜೆಎಸ್‌ಟಿ ಜಾರಿಯಾದರೆ ಸಣ್ಣ ಕಾರುಗಳು ದುಬಾರಿಯಾಗಲಿವೆ.
ಎಸ್‌ಯುವಿ, ಐಷಾರಾಮಿ ಕಾರುಗಳು ಮತ್ತು ಭಾರಿ ವಾಹನಗಳಿಗೆ ಈಗ ಶೇ 27 ರಿಂದ 30 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಶೇ 18 ರಿಂದ ಶೇ 20 ರಷ್ಟು ದರದಲ್ಲಿ ಜಿಎಸ್‌ಟಿ ಜಾರಿಯಾದರೆ ಈ ವಾಹನಗಳ ಬೆಲೆ ಇಳಿಕೆಯಾಗಲಿವೆ.

ಆದರೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ಸೂತ್ರವನ್ನು ಅಳವಡಿಸಿದರೆ, ಜಿಎಸ್‌ಟಿ ಬಳಿಕ ಐಷಾರಾಮಿ ಕಾರುಗಳು ದುಬಾರಿಯಾಗಲಿವೆ. ಏಕೆಂದರೆ ಅರವಿಂದ ಸುಬ್ರಮಣಿಯನ್‌ ಅವರು ಐಷಾರಾಮಿ ಕಾರುಗಳಿಗೆ ಶೇ 40 ರಷ್ಟು ತೆರಿಗೆಗೆ ಶಿಫಾರಸು ಮಾಡಿದ್ದಾರೆ.
*
ದುಬಾರಿ
* ಪ್ರಸ್ತುತ ಶೇ 6 ರಿಂದ ಶೇ 8 ರಷ್ಟು ತೆರಿಗೆ ಇರುವ ಕಚ್ಚಾ ಆಹಾರ ಪದಾರ್ಥ

* ಸಣ್ಣ ಕಾರುಗಳು
* ಪ್ರವಾಸ
* ವಿಮಾನ ಪ್ರಯಾಣ
* ಆಂಬುಲೆನ್ಸ್‌ ಸೇವೆ
* ಸಾಂಸ್ಕೃತಿಕ ಚಟುವಟಿಕೆ
* ಕೆಲವು ತೀರ್ಥಯಾತ್ರೆ
* ಹೋಟೆಲ್‌ನಲ್ಲಿ ಸೇವಿಸುವ ಆಹಾರ

ಅಗ್ಗ
* ಕೈಗಾರಿಕಾ ಉತ್ಪನ್ನಗಳು
* ಎಸ್‌ಯುವಿ, ಐಷಾರಾಮಿ ಕಾರುಗಳು
* ದ್ವಿಚಕ್ರ ವಾಹನ
* ಎಲೆಕ್ಟ್ರಾನಿಕ್‌ ವಸ್ತುಗಳು

ಜಿಎಸ್‌ಟಿಗೆ ಅನುಮೋದನೆ ಒಕ್ಕೂಟ ವ್ಯವಸ್ಥೆಯೊಳಗಿನ ಸಹಕಾರಿ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆ. ಈ ಐತಿಹಾಸಿಕ ಕ್ಷಣದಲ್ಲಿ ಎಲ್ಲರಿಗೂ ಧನ್ಯವಾದಗಳು.
- ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT