ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಮಾದರಿ ಎಲೆ ತೋಟ

Last Updated 24 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕೊರಟಗೆರೆ ಸಮೀಪದ ಅಗ್ರಹಾರದ ರೈತ ಮಾಚಯ್ಯ ಅವರು ತಮ್ಮ ಮೂರು ಎಕರೆ ತೆಂಗು, ಅಡಿಕೆ, ಬಾಳೆ ತೋಟದಲ್ಲಿ ಮಿಶ್ರ ಬೆಳೆಯಾಗಿ ವೀಳ್ಯದೆಲೆ ಬೆಳೆದಿದ್ದಾರೆ. ಜತೆಗೆ ನುಗ್ಗೆ, ಪಪ್ಪಾಯಿ,ನಿಂಬೆ, ಹಲಸು, ಮಾವಿನ ಮರಗಳನ್ನು ಬೆಳೆದಿದ್ದಾರೆ. 

ವೀಳ್ಯದೆಲೆ ಅತ್ಯಂತ ಸೂಕ್ಷ್ಮ ಬೆಳೆ. ಸದಾ ತೇವಾಂಶ ಇರುವ ಭೂಮಿ ವೀಳ್ಯದೆಲೆಗೆ ಹೆಚ್ಚು ಸೂಕ್ತ.ಕೊರಟಗೆರೆ ಬಯಲು ಸೀಮೆ. ಅಲ್ಲಿ ತಂಪಿನ ವಾತಾವರಣ ಕಾಯ್ದುಕೊಳ್ಳುವುದು ಕಷ್ಟ.

ಮಾಚಯ್ಯ ತಮ್ಮ ತೋಟದ ನಾಲ್ಕೂ ಮೂಲೆಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆಯ ನೀರನ್ನು ಅಲ್ಲೇ ಇಂಗುವಂತೆ ನೋಡಿಕೊಂಡಿದ್ದಾರೆ. ತೋಟದಲ್ಲಿ ಎರಡು ಬೋರ್‌ವೆಲ್ ಹಾಕಿಸಿದ್ದಾರೆ. ಮಳೆ ನೀರು ಕೊಳವೆ ಬಾವಿಗೆ ಮರುಪೂರಣವಾಗುತ್ತದೆ.

 ವೀಳ್ಯದೆಲೆ ಬೆಳೆಯುವ ರೈತರಿಗೆ ನಿಗದಿತ ಆದಾಯ ಸಿಗುತ್ತದೆ. ಪ್ರತಿ ವಾರ ಎಲೆ ಕೊಯ್ಲು ಮಾಡಿ ಮಾರಾಟ ಮಾಡುವುದರಿಂದ ಹಣ ಬರುತ್ತಲೇ ಇರುತ್ತದೆ. ಮಾಚಯ್ಯ ತಮ್ಮ ತೋಟವನ್ನು ಅತ್ಯಂತ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ.

ತೋಟದ  ತೆಂಗು, ಅಡಿಕೆ ಬಾಳೆಯ ಒಣ ಎಲೆಗಳು ಹಾಗೂ ಇತರ ತ್ಯಾಜ್ಯಗಳನ್ನು ಇಡೀ ತೋಟದ ಭೂಮಿಗೆ ಮುಚ್ಚಿಗೆ ಮಾಡುವುದರಿಂದ ತೋಟದ ಭೂಮಿಯ ತೇವಾಂಶ ಕಾಪಾಡಿಕೊಂಡಿದ್ದಾರೆ. ಅವರು ವರ್ಷಕ್ಕೆ ಎರಡು ಸಲ 10 ರಿಂದ 12 ಚಕ್ಕಡಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕುತ್ತಾರೆ. 

 ತುಮಕೂರಿನ ಮಾರುಕಟ್ಟೆಗೆ ಎಲೆಗಳನ್ನು ಒಯ್ದು ಮಾರಾಟ ಮಾಡುತ್ತಾರೆ. ಮಾಚಯ್ಯ ಅವರ ಕುಟುಂಬದ ಸದಸ್ಯರೆಲ್ಲ ತೋಟದಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಕೂಲಿಯಾಳುಗಳ ಸಮಸ್ಯೆ ಇಲ್ಲ.

ತೋಟದಲ್ಲಿ ಬೆಳೆದ  ನಿಂಬೆ, ಪಪ್ಪಾಯಿ, ನುಗ್ಗೆ, ಇತರೆ ತರಕಾರಿ ಹಾಗೂ  ಹೂ ಮಾರಾಟದಿಂದ ಬರುವ ಹಣದಲ್ಲಿ ನೆಮ್ಮದಿಯ ಜೀವನ ನಡೆಸುತ್ತಾರೆ. ಮನೆಯಲ್ಲಿ ಬಳಸಿದ ನೀರನ್ನು ತೋಟದ ಬೇಲಿಗೆ ಹಾಯಿಸುವ ಮೂಲಕ ತೋಟವನ್ನು ಹಸಿರಾಗಿರುವಂತೆ ನೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT