ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ರೂಪಾಯಿ ಕಮಾಲ್

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಲ್ಲಿ ಜಾತಿ- ಧರ್ಮದ ಹಂಗಿಲ್ಲ. ಮೇಲು ಕೀಳು, ಬಡವ- ಬಲ್ಲಿದನೆಂಬ ಬೇಧ ಭಾವವಿಲ್ಲ. ಸಮಾನತೆಯೇ ಇಲ್ಲಿಯ ಮಂತ್ರ. ಪ್ರತಿದಿನ ಒಂದು ರೂಪಾಯಿ ಉಳಿತಾಯ ಮಾಡುವುದೇ ಗ್ರಾಮದ ಯಶಸ್ಸಿನ ರಹಸ್ಯ!

ಹೌದು. ಇದೊಂದು ಕುತೂಹಲಕಾರಿ ಗ್ರಾಮ. ದಿನಂಪ್ರತಿ ತಾವು ದುಡಿದಿದ್ದರಲ್ಲಿ ಒಂದು ರೂಪಾಯಿ ಎತ್ತಿಟ್ಟು ಸಂಪೂರ್ಣ ಗ್ರಾಮದ ಚಿತ್ರಣವನ್ನೇ ಬದಲಿಸಿರುವ ಅಪರೂಪದ ಹಳ್ಳಿ ಇದು.

‘ಹನಿಹನಿ ಕೂಡಿದರೆ ಹಳ್ಳ’ ಎಂಬ ಗಾದೆಯನ್ನು ಅಕ್ಷರಶಃ ಸಾಬೀತು ಮಾಡಿ ತೋರಿಸಿರುವ ಈ ಗ್ರಾಮ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮುಕ್ತಿ ಹರಿಹರಪುರ. ಸುಂದರ ಬೆಟ್ಟಗುಡ್ದ, ಹಚ್ಚ ಹಸಿರಿನ ನಿರ್ಮಲ ವಾತಾವರಣದಿಂದ ಕಂಗೊಳಿಸುವ ಈ ಗ್ರಾಮ ಶುಭ್ರ ಸುಂದರವಷ್ಟೇ ಅಲ್ಲದೆ ಸಹಕಾರ, ಸಂಘಟನೆ, ಸಹಬಾಳ್ವೆಯ
ವಿಚಾರ­ದ­ಲ್ಲಿಯೂ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಕೃಷಿಯನ್ನೇ ಅವಲಂಬಿಸಿರುವ ಇಲ್ಲಿನ ಹೆಚ್ಚಿನ ಜನ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಿಗಾಗಿ, ಅನುದಾನಗಳಿಗಾಗಿ ಇದುವರೆಗೆ ಕಾದದ್ದೇ ಇಲ್ಲ! ಈ ಗ್ರಾಮ ಒಳಗೊಂಡಂತೆ ಸುತ್ತಮುತ್ತಲಿನ ೨೫ ಹಳ್ಳಿಗಳು ಒಟ್ಟುಗೂಡಿ ತಮ್ಮ ಶಕ್ತ್ಯಾನುಸಾರ ಸ್ವಯಂ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ತಾವು ಉಳಿಸಿರುವ ಒಂದು ರೂಪಾಯಿ­ಗಳಿಂದಲೇ ಅಭಿವೃದ್ಧಿ ಕೈಗೊಂಡಿದ್ದಾರೆ. ವಿವಿಧೋದ್ದೇಶ ಸಹಕಾರಿ ಸಂಘ ಹುಟ್ಟು ಹಾಕಿ, ಈ ಮೂಲಕ ಯಶಸ್ಸಿನ ಉತ್ತುಂಗ ಏರಿದ್ದಾರೆ.

ಗ್ರಾಮಸ್ಥರ ಒಂದು ರೂಪಾಯಿ ಉಳಿತಾಯದ ಹಣದಲ್ಲಿ ಇಲ್ಲಿ ರಂಗಮಂದಿರ ನಿರ್ಮಾಣವಾಗಿದೆ. ಗ್ರಾಮಸ್ಥರೇ ಮುಂದೆ ನಿಂತು ಗಾರೆ ಕೆಲಸ, ಪೇಂಟಿಂಗ್, ಮರದ ಕೆಲಸ, ಕಬ್ಬಿಣದ ಕೆಲಸ ಮಾಡಿ ಈ ರಂಗ ಮಂದಿರಕ್ಕೆ ರೂಪು ನೀಡಿದ್ದಾರೆ.

ಆಧುನಿಕ ಭರಾಟೆಯಲ್ಲಿ ಅವಸಾನದ ಹಾದಿ ಹಿಡಿದಿರುವ ಅಂಟಿಕೆ ಪಿಂಟಿಕೆ, ಕಂಸಾಳೆ, ಭೂತಕೋಲ, ಯಕ್ಷಗಾನ, ತಾಳಮದ್ದಲೆ, ಕೊರವ ನೃತ್ಯಗಳಿಗೆ ಇದು ವೇದಿಕೆಯಾಗಿದೆ. ಉಳಿತಾಯದ ಹಣದಿಂದ ಗ್ರಂಥಾಲಯ ಕೂಡ ಸ್ಥಾಪನೆಗೊಂಡಿದೆ. ಮಕ್ಕಳು ಹಾಗೂ ಗ್ರಾಮಸ್ಥರ ಓದುವ ಹವ್ಯಾಸ ಬೆಳೆಸುವುದು ಇದರ ಉದ್ದೇಶ. ಇಲ್ಲಿ ಹಲವು ಪ್ರಸಿದ್ಧ ಲೇಖಕರ ಕೃತಿಗಳಲ್ಲದೆ ಐ.ಎ.ಎಸ್, ಕೆ.ಎ.ಎಸ್ ಹಾಗೂ ಬಿ.ಎಡ್ ಪರೀಕ್ಷೆಗಳಿಗೆ ಅನುಕೂಲವಾಗಬಲ್ಲಂತಹ ಪುಸ್ತಕಗಳು ಲಭ್ಯವಿವೆ. ಬಡ ವಿದ್ಯಾರ್ಥಿಗಳಿಗೆ, ಅನಾಥಾಶ್ರಮಗಳಿಗೆ ಇದೇ ಉಳಿತಾಯದ ಹಣದಲ್ಲಿ ಧನಸಹಾಯ ನೀಡಲಾಗುತ್ತಿದೆ.

ಸಂಘದ ಸದಸ್ಯರು ಅನಾರೋಗ್ಯ, ಅಪಘಾತಗಳಿಗೀಡಾದರೂ ಇದೇ ಹಣದಲ್ಲಿ ಸಹಾಯ ನೀಡಲಾಗುವುದು. ಗ್ರಾಮದ ಬಸ್ ನಿಲ್ದಾಣ, ಚರಂಡಿ, ರಸ್ತೆ ದುರಸ್ತಿಗಾಗಿಯೂ ಇದೇ ಹಣವನ್ನು ವಿನಿಯೋಗಿಸಿ ಗ್ರಾಮದ ಅಭಿವೃದ್ಧಿ ಮಾಡಿದ್ದಾರೆ ಗ್ರಾಮಸ್ಥರು.

ಹೊಸ ವರ್ಷದ ವಿಶೇಷ
ಹೊಸ ವರ್ಷವನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳುತ್ತಾರೆ ಇಲ್ಲಿಯ ಜನರು. ಅಂದು ವಿವಿಧ ಗ್ರಾಮೀಣ ಕ್ರೀಡಾಕೂಟ, ಹಲವು ರೀತಿಯ ಸ್ಪರ್ಧೆ, ನಾಟಕ, ನೃತ್ಯ ರೂಪಕಗಳ ಪ್ರದರ್ಶನವಿರುತ್ತದೆ. ಹಳ್ಳಿಯ ವೈಯುಕ್ತಿಕ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಡೀ ಊರಿಗೆ ಆ ದಿನ ಹಬ್ಬದ ವಾತಾವರಣ.

ಪ್ರತಿಯೊಬ್ಬರೂ ಮನೆಯ ಕಾರ್ಯಕ್ರಮದಂತೆ ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಇದರಿಂದ ಮೊದಲೆಲ್ಲಾ ಹೊಸ ವರ್ಷದಂದು ನಡೆಯುತ್ತಿದ್ದ ಯುವಕರ ಗುಂಡು ಪಾರ್ಟಿಗಳಿಗೆ ಕಡಿವಾಣ ಬಿದ್ದಿದೆ. ಆ ದಿನ ಊಟ ತಿಂಡಿ ಎಲ್ಲವೂ ಸಂಘದ ವತಿಯಿಂದಲೇ ನಡೆಯುತ್ತದೆ. ಇದರ ಉಸ್ತುವಾರಿಯನ್ನು ಗ್ರಾಮದ ಕಲಾವಿದರಾದ ಹಿರಣ್ಣಯ್ಯನವರು ವಹಿಸಿಕೊಂಡು ತಾವೇ ಅಡುಗೆ ಮಾಡಿ ಉಣ ಬಡಿಸುತ್ತಾರೆ. ಆ ದಿನ ರಾತ್ರಿ ಪ್ರತಿಯೊಬ್ಬರೂ ಬಾಳೆ ಕಂಬದಲ್ಲಿ ದೀಪ ಹಚ್ಚಿ ದೀಪೋತ್ಸವವನ್ನು ಆಚರಿಸುವುದರ ಮೂಲಕ ಹೊಸ ಬೆಳಕನ್ನು ಬರ ಮಾಡಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಊರಿನವರಷ್ಟೆ ಅಲ್ಲದೆ ಹೊರ ಊರಿನವರೂ ಭಾಗವಹಿಸುತ್ತಾರೆ.

ಸಂಘ ಪ್ರಾರಂಭಗೊಂಡಾಗಿ­ನಿಂದಲೂ ಇಡೀ ಗ್ರಾಮದ ವಾಸಿಗಳು ಒಂದೇ ಕುಟುಂಬದವರಂತೆ ಇದ್ದಾರೆ. ಯಾವುದೇ ಸಮಸ್ಯೆಯನ್ನು ಕೂತು ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿಂದ ಮತದಾನದ ಮೌಲ್ಯಗಳ ಬಗ್ಗೆ ಜಾಗೃತಿ, ಸ್ತ್ರೀಶಕ್ತಿ ಸಂಘದವರಿಗೆ ಸ್ವಾವಲಂಬಿ ತರಬೇತಿ ಕಾರ್ಯಾಗಾರ, ಕೃಷಿ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಚಿಕ್ಕಪುಟ್ಟ ವ್ಯಾಜ್ಯಗಳು ಸಂಘಟನೆಯಲ್ಲಿಯೇ ಶಾಂತಿಯುತವಾಗಿ ಪರಿಹಾರವಾಗುತ್ತಿದೆ. ಸಂಘಟನೆ ತಿಳಿವಳಿಕೆ ಕಾರ್ಯಕ್ರಮದ ನಂತರ ಮದ್ಯಪಾನ ಮಾಡುವವರ ಸಂಖ್ಯೆ ಕೂಡ ಗ್ರಾಮದಲ್ಲಿ ಕ್ಷೀಣಿಸಿದೆ.

ಇಲ್ಲಿನ ಗ್ರಂಥಾಲಯ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಬೀಗ ಹಾಕುವ ಅಭ್ಯಾಸವಿಲ್ಲ. ಪುಸ್ತಕ ಕಳುವಾಗುವ ಭೀತಿಯಿಲ್ಲವೇ ಎಂದು ಕೇಳಿದರೆ ಪುಸ್ತಕವನ್ನು ಕದ್ದಾದರೂ ಓದಲಿ ಎಂಬುದೇ ನಮ್ಮ ಅಭಿಲಾಷೆ ಎನ್ನುತ್ತಾರೆ ಡಾ. ಗಣಪತಿ.

ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆಯಿರಬೇಕೆಂದು.... ಏನಂತೀರಾ?

ಹಿಂದಿನ ಶಕ್ತಿ

ಉಳಿತಾಯದ ಹಣದಲ್ಲಿ ಸ್ಥಾಪಿಸಲಾಗಿರುವ ರಂಗಮಂದಿರದಲ್ಲಿ ಪ್ರತಿಭಾ ಪ್ರದರ್ಶನ

ಇಂಥದ್ದೊಂದು ವಿನೂತನ ಕಲ್ಪನೆಯ ರೂವಾರಿ ಉಪನ್ಯಾಸಕ ಡಾ. ಗಣಪತಿ ಉತ್ತುಂಗ. ಕೃಷಿ ಕ್ಷೇತ್ರದಲ್ಲಿನ ಕಷ್ಟ ನಷ್ಟ, ಅದರಿಂದ ನಗರಗಳತ್ತ ಯುವಕರ ವಲಸೆ, ಇದರಿಂದ ಗ್ರಾಮಗಳು ಸಾಮೂಹಿಕ ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿರುವುದನ್ನೆಲ್ಲ ನೋಡಿದ ಇವರು, ಕಂಡುಕೊಂಡ ಪರಿಹಾರವೇ ಸಂಘಟನೆ. ಇದಕ್ಕಾಗಿ ಆರಂಭಗೊಂಡಿರುವುದೇ ವಿವಿಧೋದ್ದೇಶ ಸಹಕಾರಿ ಸಂಘ. ಅಭಿವೃದ್ಧಿಗಾಗಿ ಯಾರಲ್ಲೂ ಕೈ ಚಾಚದೇ ಪ್ರತಿ ಸದಸ್ಯನೂ ದಿನಕ್ಕೊಂದು ರೂಪಾಯಿ­ಯಂತೆ ತಿಂಗಳಿಗೆ ೩೦ ರೂಪಾಯಿ ಸಂಘದಲ್ಲಿ ಉಳಿತಾಯ ಮಾಡುತ್ತಾರೆ.

ಹಣದ ಅವಶ್ಯವಿರುವವರಿಗೆ ಶೇ ೧ರ ಬಡ್ಡಿಗೆ ಹಣ ನೀಡಲಾಗುತ್ತದೆ. ಬಂದ ಬಡ್ಡಿಯಿಂದ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತದೆ. ಈ ಸಂಘದಲ್ಲಿ ನಿಯಮ ಮೀರಿ ಯಾವ ಚಟುವಟಿಕೆಯನ್ನೂ ಮಾಡಲು ಸಾಧ್ಯವಾಗುವುದಿಲ್ಲವೆಂಬ ಕಾರಣದಿಂದಾಗಿ ಇಂದಿಗೂ ಇದನ್ನು ನೋಂದಾಯಿಸಿಲ್ಲ. ಸಹಕಾರ ಸಂಘಗಳೆಂದರೆ ಹಣ ಗಳಿಕೆಯೊಂದೇ ಮುಖ್ಯ ಉದ್ದೇಶವಾಗಿರುವ ಈ ದಿನಗಳಲ್ಲಿ ಈ ಸಂಘಟನೆಯ ನಿಲುವು ಭಿನ್ನ. ೧೩ ವರ್ಷಗಳ ನಂತರವೂ ಯಾವುದೇ ತಕರಾರು, ಗೊಂದಲವಿಲ್ಲದೇ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT