ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸಾವು; 91 ಕಾರ್ಮಿಕರ ಬಂಧನ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಮಾನೇಸರ /ಗುಡಗಾಂವ್ (ಪಿಟಿಐ): ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಯ ಮಾನೇಸರ ತಯಾರಿಕೆ ಘಟಕದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 91 ಜನ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಗುಡಗಾಂವ್ ಪೋಲಿಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ಸಂಜೆ ನಡೆದ ಗಲಭೆಯಲ್ಲಿ ಕಾರ್ಮಿಕರೊಬ್ಬರು ಹತ್ಯೆಯಾಗಿದ್ದಾರೆ. ಆದರೆ, ಅವರ ಶವವನ್ನು ಸುಟ್ಟಿರುವುದರಿಂದ ಗುರುತು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಸಲು ಸಹಾಯಕ ಪೊಲೀಸ್ ಆಯಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಗುರುವಾರ ಸಂಜೆಯ ವೇಳೆಗೆ ಮೃತಪಟ್ಟ ವ್ಯಕ್ತಿ  ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಅವನೀಶ್ ಕುಮಾರ್ ದೇವ್ ಎಂದು ಗುರುತಿಸಲಾಗಿದೆ.

ಗಲಭೆಯಲ್ಲಿ 50 ಜನರಿಗೆ ಗಾಯಗಳಾಗಿವೆ. ಇವರಲ್ಲಿ ಇಬ್ಬರು ವಿದೇಶಿಯರೂ ಸೇರಿದ್ದು, ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಘಟನೆ ನಡೆದ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 1,200 ಪೊಲೀಸರನ್ನು ನೇಮಿಸಲಾಗಿದೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಕಾರ್ಮಿಕನೊಬ್ಬ ತನ್ನ ಮೇಲ್ವಿಚಾರನ ಜತೆ ಜಗಳ ತೆಗೆದು ಕೈ ಮಾಡಿದಾಗ ಗಲಭೆ ಪ್ರಾರಂಭವಾಯಿತು. ಗಲಭೆ ಹಿನ್ನೆಲೆಯಲ್ಲಿ ತಯಾರಿಕಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ  ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಹೊಸದೇನಲ್ಲ
ಕಾರ್ಮಿಕರ ಮುಷ್ಕರ ಈ ಕಂಪೆನಿಗೆ ಹೊಸತೇನಲ್ಲ. ಕಳೆದ ವರ್ಷ ಮಾನೇಸರ ಘಟಕದಲ್ಲಿ  ಮೂರು ಬಾರಿ ಮುಷ್ಕರ ನಡೆದಿತ್ತು. ಇದರಿಂದ ಕಂಪೆನಿಗೆ 2,300 ಕೋಟಿಗಳಷ್ಟು ನಷ್ಟವಾಗಿದೆ.

ಗುಡಗಾಂವ್‌ನಲ್ಲಿರುವ ಕಂಪೆನಿಯ ತಯಾರಿಕಾ ಘಟಕದಲ್ಲಿ 2010ರಲ್ಲಿ ಕಾರ್ಮಿಕರು 3 ತಿಂಗಳುಗಳ ಕಾಲ ಮುಷ್ಕರ ನಡೆಸಿದ್ದರು. ಈ ಪ್ರತಿಭಟನೆ ಗಲಭೆಗೆ ತಿರುಗಿತ್ತು.  ಮಾನೇಸರ ಘಟಕ ವಾರ್ಷಿಕ 5.5 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಇಂತಹ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಾಗ `ರಾಜಿ ಸಂಧಾನ~ ನಡೆಸುವ ಕುರಿತು ಕಾರ್ಮಿಕ ಇಲಾಖೆ ಚಿಂತಿಸಬೇಕು ಎಂದು ಸಚಿವರೊಬ್ಬರು ಹೇಳಿದ್ದಾರೆ.
`ಪರಿಣಾಮ ಬೀರಲ್ಲ~

ಮಾರುತಿ ಸಜುಕಿ ಮಾನೇಸರ ಘಟಕದಲ್ಲಿ ನಡೆಯುತ್ತಿರುವ ಗಲಭೆಯು  ದೇಶದ ಉದ್ಯಮ ರಂಗದ ಪ್ರಗತಿಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹೇಳಿದೆ.

ಇದೊಂದು ಅನಿರೀಕ್ಷಿತ ಮತ್ತು ಅಹಿತಕರ ಘಟನೆ. ಇಂತಹ ಘಟನೆಗಳು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಉಳಿದೆಡೆಯೂ ನಡೆಯುತ್ತವೆ. ಆದರೆ, ಇದು ಉದ್ಯಮ ವಾತಾವರಣದ ಮೇಲೆ ಯಾವುದೇ ಧೀರ್ಘಾವಧಿ ಪರಿಣಾಮ ಬೀರುವುದಿಲ್ಲ ಎಂದು `ಸಿಐಐ~ನ ಉತ್ತರ ವಲಯದ ಅಧ್ಯಕ್ಷ ಜಯಂತ್ ದೇವರ್‌ಅಭಿಪ್ರಾಯಪಟ್ಟಿದ್ದಾರೆ.

ವಾಣಿಜ್ಯ ಮತ್ತುಕೈಗಾರಿಕಾ ಸಚಿವ ಆನಂದ ಶರ್ಮಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉದ್ಯಮದ ವಿಶ್ವಾಸಾರ್ಹತೆ ಮೇಲೆ ಪರಿಣಾಮ ಬೀರುವುದಿಲ್ಲ. ರಾಜ್ಯ ಸರ್ಕಾರ ಬುಧವಾರವೇ ಎಚ್ಚೆತ್ತುಕೊಂಡಿದ್ದರೆ  ಈ ಅನಾಹುತ ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT