ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸ್ವಂತ ಕನಸು! (ಚಿತ್ರ: ಸಿದ್ಲಿಂಗು)

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

`ಸಿದ್ಲಿಂಗು~ ಚಿತ್ರವನ್ನು ನೋಡಲಿಕ್ಕೆ ಎರಡು ಕಾರಣಗಳಿವೆ. ಈ ಚಿತ್ರ ನಿರ್ದೇಶಕರ ಸ್ವಂತ ಕನಸು ಎನ್ನುವುದು ಮೊದಲ ಕಾರಣ. ಎರಡನೆಯದು, ನಟ ಯೋಗೀಶ್‌ರ ಅತ್ಯುತ್ತಮ ನಟನೆ.

ನಿರ್ದೇಶಕ ವಿಜಯಪ್ರಸಾದ್ ಕಿರುತೆರೆಯ `ಸಿಲ್ಲಿ ಲಲ್ಲಿ~ ಧಾರಾವಾಹಿ ಮೂಲಕ ಜನಪ್ರಿಯರಾದವರು. `ಸಿದ್ಲಿಂಗು~ ಅವರ ಚೊಚ್ಚಿಲ ಸಿನಿಮಾ. ಧಾರಾವಾಹಿಯಲ್ಲಿನ ಅತಿ ಮಾತು `ಸಿದ್ಲಿಂಗು~ವಿನಲ್ಲೂ ಇದೆ, ಆದರೆ ಆಂಗಿಕ ಚೇಷ್ಟೆಗಳಿಲ್ಲ. ದೃಶ್ಯ ಸಾಂದ್ರತೆ ಪ್ರಖರವಾಗಿರುವುದರಿಂದ ಇಲ್ಲಿನ ಮಾತು ಚಿತ್ರದಿಂದ ಪ್ರತ್ಯೇಕ ಅನ್ನಿಸುವುದಿಲ್ಲ.

`ಹುಡುಗರು~ ಚಿತ್ರದ ಮೂಲಕ ತಮ್ಮಳಗಿನ ಕಲಾವಿದನನ್ನು ಪರಿಚಯಿಸಿದ್ದ ಯೋಗಿ, `ಸಿದ್ಲಿಂಗು~ವಾಗಿ ಮತ್ತಷ್ಟು ಮಾಗಿದ್ದಾರೆ. ಹಳ್ಳಿಯ ಹುಡುಗನೊಬ್ಬನ ಕನಸು ಕನವರಿಕೆ, ಕಾಲೇಜು ತರುಣನ ತವಕತಲ್ಲಣ, ಪ್ರೇಮದ ಚಡಪಡಿಕೆ- ಎಲ್ಲ ಭಾವಗಳೂ ಅವರಿಗೆ ಸಲೀಸಾಗಿವೆ. ಅವರ ಅಭಿನಯ ಎಷ್ಟು ಪ್ರಖರವಾಗಿದೆಯೆಂದರೆ, ಅರ್ಥ ಗೊತ್ತಿಲ್ಲದ ಮಕ್ಕಳು ಕೊಳಕು ಮಾತು ಆಡುವಂತೆ ಅತ್ಯಂತ ಸಹಜವಾಗಿ ಯೋಗಿ ಪೋಲಿ ಮಾತು ಹೇಳಿಬಿಡುತ್ತಾರೆ.

ಶಾಲೆ ದಿನಗಳಲ್ಲಿ ಗೆಳತಿ, ಕಾಲೇಜು ದಿನಗಳಲ್ಲಿ ಅಪ್ಪಅಮ್ಮನನ್ನು ಕಳೆದುಕೊಂಡ ಹುಡುಗನೊಬ್ಬ ಅನ್ನ ಹುಡುಕಿಕೊಂಡು ನಗರಕ್ಕೆ ಬರುತ್ತಾನೆ. ಕಾರಿನ ಕನಸೊಂದು ಸಿದ್ಲಿಂಗುವನ್ನು ಉದ್ದಕ್ಕೂ ಹಿಂಬಾಲಿಸುತ್ತದೆ. ಹಳೆಯ ಕಾರೊಂದನ್ನು ಅವನು ಖರೀದಿಸುತ್ತಾನೆ. ಆ ಕಾರಿನ ಜೊತೆಗೆ ಗೆಳೆಯ ಗೆಳತಿಯರೂ ದೊರೆಯುತ್ತಾರೆ. ಅವರಿಬ್ಬರ ಸಾವು ಸಿದ್ಲಿಂಗು ಕಣ್ಣೆದುರು ಸಂಭವಿಸುವು ದರೊಂದಿಗೆ ಸಿನಿಮಾ ಮುಗಿಯುತ್ತದೆ. ಚಿತ್ರದುದ್ದಕ್ಕೂ ಕಾರನ್ನು ಒಂದು ರೂಪಕವಾಗಿ ದುಡಿಸಿಕೊಂಡಿರುವುದರಲ್ಲಿ ನಿರ್ದೇಶಕ ವಿಜಯಪ್ರಸಾದ್‌ರ ಗೆಲುವಿದೆ.

ಚಿತ್ರದ ಮೊದಲ ಭಾಗ ಹೆಚ್ಚು ಕಚ್ಚಾ ಆಗಿರುವುದು ಸಿನಿಮಾಕ್ಕೊಂದು ಸೊಗಡು ತಂದುಕೊಟ್ಟಿದೆ. ಸಿದ್ಲಿಂಗು ಎನ್ನುವ ಸಾಮಾನ್ಯ ತರುಣನ ಆತ್ಮಕಥನವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಬಳಸಿರುವ ನಿರೂಪಣೆಯ ಮಾದರಿ ಅಚ್ಚರಿ ಹುಟ್ಟಿಸುವಂತಿದೆ. ಚಿತ್ರದ ಕೆಲವು ದೃಶ್ಯಗಳಂತೂ ಕಮರ್ಷಿಯಲ್ ಚಿತ್ರಗಳಿಗೆ ಅಪರೂಪವಾದ ನವಿರುತನ ಹೊಂದಿವೆ.

ಹಳ್ಳಿಯಿಂದ ನಗರಕ್ಕೆ ಬಂದ ತರುಣ, ತನ್ನ ಪೂರ್ವಸೂರಿಗಳಂತೆ ಮಚ್ಚು ಹಿಡಿಯದೆ ದುಡಿದು ಅನ್ನ ಹುಟ್ಟಿಸಿಕೊಳ್ಳುವ ಕಥನ ಇಲ್ಲಿಯದು. ತಾನು ತುಂಬಾ ಪ್ರೀತಿಸುವ ಕಾರನ್ನು ಮಾರುವ ಮಾಲೀಕನ ಪಾತ್ರದ ಪರಿಕಲ್ಪನೆಯೂ ಸೊಗಸಾಗಿದೆ. ಆದರೆ, ಸಿನಿಮಾದ ಕೊನೆಯಲ್ಲಿ ವಿಜಯಪ್ರಸಾದ್ ಪ್ರೇಕ್ಷಕರ ಮಧುರಸ್ವಪ್ನವನ್ನು ಚೂರು ಚೂರು ಮಾಡಿಬಿಡುತ್ತಾರೆ. ಕಥೆಯಲ್ಲಿ ಕಳ್ಳಕಾಕರು ಪೊಲೀಸರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗುತ್ತಾರೆ.

ನಾಯಕಿ ಸಾಯುತ್ತಾಳೆ. ಸಿದ್ಲಿಂಗು ಮತ್ತೊಮ್ಮೆ ಅನಾಥನಾಗುತ್ತಾನೆ. ಆವರೆಗೂ ನಿರ್ದೇಶಕರ ಬಗ್ಗೆ ಪ್ರೇಕ್ಷಕರಿಗೆ ಮುದ್ದು ಉಕ್ಕಿದರೆ, ಕೊನೆಯ ಭಾಗದಲ್ಲಿ ಸಿಟ್ಟು ಬರುತ್ತದೆ.

ಸಿದ್ಲಿಂಗು ಗೆಳತಿಯಾಗಿ ನಾಯಕಿ ರಮ್ಯಾ ಹಾಗೂ ಸಿದ್ಲಿಂಗುವಿನ ವ್ಯಕ್ತಿತ್ವಕ್ಕೆ ಅಗ್ನಿ ಪರೀಕ್ಷೆಯಂತೆ ಎದುರಾಗುವ ಉಪನ್ಯಾಸಕಿ ಯಾಗಿ ಸುಮನ್ ರಂಗನಾಥ್ ಮೋಹಕವಾಗಿ ಕಾಣಿಸುತ್ತಾರೆ. ನಾಯಕ ನಾಯಕಿಯ ಹಿತ ಬಯಸುವ ಹಿರೀಕಳಾಗಿ ಗಿರಿಜಾ ಲೋಕೇಶ್, ಅಸಾದುಲ್ಲಾ ಬೇಗ್ ಪಾತ್ರದಲ್ಲಿ ಶ್ರೀಧರ್ ಅವರದ್ದು ಗಮನಾರ್ಹ ಅಭಿನಯ.

ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ರಮುಖ ಅಂಶ. ಗೀತೆಗಳಲ್ಲಿ ಮಾತ್ರವಲ್ಲದೆ ಚಿತ್ರದುದ್ದಕ್ಕೂ ತಮ್ಮ ಇರುವನ್ನು ಅನೂಪ್ ದಾಖಲಿಸಿದ್ದಾರೆ. ಸುಜ್ಞಾನ್‌ರ ಛಾಯಾಗ್ರಹಣ ಕೂಡ ಮೆಚ್ಚುವಂತಿದೆ.

`ಸಿದ್ಲಿಂಗು~ ಜೀವನವನ್ನು ಪ್ರೀತಿಸುವ ಹುಡುಗ. ಆದರೆ, ಆತನ ಬದುಕಿನ ತುಂಬಾ ದುರಂತಗಳೇ. ನಿರ್ದೇಶಕರು ಕೊಂಚ ಕರುಣಾಮಯಿ ಆಗಿರಬೇಕಿತ್ತು ಅನ್ನಿಸುತ್ತದೆ. ಆ ಅನಿಸಿಕೆ ಕೂಡ `ಸಿದ್ಲಿಂಗು~ ಬಗೆಗಿನ ಮೆಚ್ಚುಗೆಯ ಮಾತೇ ಆಗುವುದು ಸಿನಿಮಾದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT