ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸ್ವಗತ...

Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾನೊಬ್ಬ ಮಾಮೂಲಿ ಟಾಕ್ಸಿ ಡ್ರೈವರ್. ಪ್ರತಿ ನಿತ್ಯ ನಗರದೊಳಗೆ ಎರಡರಿಂದ ಮೂರು ಟ್ರಿಪ್ ಹಾಕುವ ಚಾಲಕ. ದಿನನಿತ್ಯದ ಟ್ರಾಫಿಕ್, ಗಜಿಬಿಜಿಯಲ್ಲೇ ಓಡಾಡುವ ಮಂದಿ, ರಾಜ್ಯಕ್ಕೆ ಭೇಟಿ ನೀಡುವ ಗಣ್ಯಾತಿಗಣ್ಯರು, ಸೆಲೆಬ್ರಿಟಿಗಳು ನನ್ನ ಕಣ್ಣಿಗೆ ಕಾಣುವುದು ಹೀಗೆ.

ಬೆಳಿಗ್ಗೆ ಐದಕ್ಕೇ ರಿಂಗಣಿಸುವ ಮೊಬೈಲ್ ಸದ್ದಿನೊಂದಿಗೆ ದಿನ ಆರಂಭಗೊಳ್ಳುತ್ತದೆ. ಆರೂವರೆಗೆ ಬಂದಿಳಿಯುವ ಮುಂಬೈ ವಿಮಾನದಿಂದ ಎಂ.ಜಿ ರಸ್ತೆಯ ಒಬೆರಾಯ್ ಹೋಟೆಲ್‌ಗೆ ಪಿಕ್‌ಅಪ್, ಕೂಡಲೇ ಹೊರಡು, ಎಂದು ಎಚ್ಚರಿಸುತ್ತದೆ ಅತ್ತಲಿನ ದನಿ. ಇನ್ನೇನು, ಮುಖಕ್ಕೆ ಹಾಗೇ ಒಂದೆರಡು ಮಗ್ ನೀರು ಸುರಿದುಕೊಂಡು ಹೊರಡಬೇಕು. ಸರಿಯಾದ ಸಮಯಕ್ಕೆ ಅಲ್ಲಿರದಿದ್ದರೆ ಕ್ಲೈಂಟ್‌ನೊಂದಿಗೆ ಬಾಸ್ ಬೈಗುಳವೂ ಕೇಳಿಸಿಕೊಳ್ಳಬೇಕಲ್ಲಾ. ಅದಾವುದೋ ಕಾರಣಕ್ಕೆ ವಿಮಾನ ನಾಲ್ಕು ಗಂಟೆ ತಡವಾಗಿ ಬಂದಿಳಿದಿದರೆ ನನ್ನ ಕತೆ ಯಾರಿಗೂ ಬೇಡ. ಬೆಳಗ್ಗಿನ ತಿಂಡಿಗಂತೂ ಕಲ್ಲು ಬಿದ್ದಿದ್ದೇ.

ದಿನ ಪೂರ್ತಿ ಓಡಾಟಕ್ಕೆಂದು ಕಾರು ಬುಕ್ ಮಾಡುವ ಮಂದಿ ಪ್ರತಿಷ್ಠಿತ ಹೋಟೆಲ್ ಒಳಗೆ ಹೋದರೆ ಮರಳಿ ಬರುವ ಸಮಯವನ್ನೇ ತಿಳಿಸುವುದಿಲ್ಲ. ಒಮ್ಮೆ ಒಳಗೆ ಹೋದರೆ ಹಿಂದಿರುಗುವವರೆಗೆ ಮೊಬೈಲ್ ಕರೆಗಳನ್ನೂ ಸ್ವೀಕರಿಸುವುದಿಲ್ಲ. ನಾನು ಮಧ್ಯಾಹ್ನದ ಊಟವನ್ನೂ ಬಿಟ್ಟು ಕಾಯಬೇಕು. ಕಾರಿನೊಳಗೆ ಏಸಿ ಆನ್ ಮಾಡಿ ಮಲಗುವುದು, ಇಲ್ಲವೇ ದಿನ ಪೂರ್ತಿ ಉಸಿರು ತಡೆಹಿಡಿದು ಒಂದೇ ಸಮನೆ ಮಾತನಾಡುತ್ತಿರುವ ರೇಡಿಯೊ ಜಾಕಿಗಳ ಮಾತು ಕೇಳುವುದು.

ಕಾರು ಓಡಿಸುವುದು ನನ್ನ ಪ್ಯಾಶನ್. ಏಳನೇ ತರಗತಿಯಲ್ಲಿದ್ದಾಗಲೇ ಅಪ್ಪನ ಅಂಬಾಸಿಡರ್ ಕಾರ್ ಓಡಿಸುತ್ತಿದ್ದೆ. ನಾನು ಓದಿದ್ದು ಡಿಪ್ಲೊಮಾ, ಕಳೆದ ಜೂನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಅಲ್ಲಿ ಸಿಗುವ ಹದಿನೈದು ಸಾವಿರ ಸಂಬಳಕ್ಕಿಂತ ಕಾರು ಓಡಿಸಿ ಸಿಗುವ ಹತ್ತು ಸಾವಿರವೇ ಪ್ರಿಯ ಎನಿಸಿತು. ಹೀಗಾಗಿ ಅದನ್ನೇ ವೃತ್ತಿಯಾಗಿಸಿಕೊಂಡಿದ್ದೇನೆ, ಜತೆಯಲ್ಲಿ ಓದಿದ ಗೆಳೆಯರೆಲ್ಲಾ ಖಾಸಗಿ ಕಂಪೆನಿಯಲ್ಲಿ ಉತ್ತಮ ಕೆಲಸದಲ್ಲಿದ್ದಾರೆ. 

ಕೆಲವು ಲಲನೆಯರಿಗೆ ನನ್ನ ಕಾರು ಮೇಕಪ್ ರೂಮು. ಹತ್ತಿದಾಕ್ಷಣ ಅವರ ಬ್ಯಾಗ್ ಬಿಚ್ಚಿಕೊಳ್ಳುತ್ತದೆ. ಪರ್ಸ್ ಒಳಗಿನ ಅಂಗೈ ಅಗಲದ ಕನ್ನಡಿಯೂ ಸಾಲದೆ ಕಾರಿನ ಮಧ್ಯದ ಕನ್ನಡಿಯನ್ನು ಅವರತ್ತ ತಿರುಗಿಸಿಕೊಳ್ಳುತ್ತಾರೆ. ಇವರ ಮೇಕಪ್ ಎಷ್ಟಿರುತ್ತದೆ ಎಂದರೆ ಕೆಲವೊಮ್ಮೆ, ಆಗ ನನ್ನ ಕಾರು ಹತ್ತಿದವರು ಇವರೇನಾ ಎಂಬ ಸಂಶಯ ಮೂಡುತ್ತದೆ. ಇನ್ನು ಕೆಲವರು ಎಕ್ಸ್‌ಕ್ಯೂಸ್ ಕೇಳಿ ಸಿಗರೇಟಿಗೆ ಬೆಂಕಿ ಹಚ್ಚುತ್ತಾರೆ. ದೂಳು ಒಳಬರಬಾರದೆಂದು ಕಿಟಕಿ ಮುಚ್ಚಿ ಏಸಿ ಆನ್ ಮಾಡುವ ನಾನು ಈ ಹೊಗೆ ಹೊರಬಿಡಲು ಅನಿವಾರ್ಯವಾಗಿ ಕಿಟಕಿ ತೆರೆಯಬೇಕಾಗುತ್ತದೆ. ಅಯ್ಯೋ ಇವರನ್ನೆಲ್ಲಾ ಸಂಭಾಳಿಸಿ ಅವರವರ ಸ್ಥಳಕ್ಕೆ ಬಿಟ್ಟುಬರುವುದರಲ್ಲಿ ನಾನು ಹೈರಾಣಾಗಿರುತ್ತೇನೆ.

ದಿನಪೂರ್ತಿ ಕಾರನ್ನು ಬಾಡಿಗೆಗೆ ಪಡೆಯುವ ಕೆಲ ಮಂದಿ ಅಂತಃಕರಣ ಉಳ್ಳವರು, ನಮ್ಮನ್ನೂ ಮನುಷ್ಯರಂತೆ ನೋಡಿ, ಊಟಕ್ಕೂ ದುಡ್ಡು ಕೊಡುತ್ತಾರೆ. ಹೊರರಾಜ್ಯದ ಹಲವರು  ಕಾರು ಪ್ರಯಾಣದುದ್ದಕ್ಕೂ ಬೆಂಗಳೂರಿನ ಟ್ರಾಫಿಕ್, ಕಸ ಹಾಗೂ ರಸ್ತೆಗೆ ಬಯ್ಯುತ್ತಲೇ ಇರುತ್ತಾರೆ. ಅವರ ಎಲ್ಲಾ ಕಾಮೆಂಟ್‌ಗಳಿಗೆ ಮೌನವೇ ಉತ್ತರವೆಂಬಂತೆ ತಲೆಯಾಡಿಸುತ್ತಾ ಕೂತಿರುತ್ತೇನೆ. ಕಾರು ಹತ್ತಿದಾಕ್ಷಣ ತೂಕಡಿಸುವ ಮಂದಿಯನ್ನು ಕಂಡರೆ ನನಗೆ ಅಸೂಯೆ. ಸಣ್ಣ ಬ್ರೇಕ್ ಹಾಕಿ ಅವರ ಹಣೆಗೆ ಮುಂದಿನ ಸ್ಟ್ಯಾಂಡ್ ತಾಕುವಂತೆ ಮಾಡಿ ಎಚ್ಚರಿಸುತ್ತೇನೆ. ಫೋಟೊ ತೆಗೆಯುವುದು ನನಗಿಷ್ಟದ ಇನ್ನೊಂದು ಹವ್ಯಾಸ. ಯುಬಿ ಸಿಟಿಯ ಕೊನೆಯ ಮಹಡಿಯಲ್ಲಿ ನಿಂತು ಸಂಜೆಯ ಸೂರ್ಯನನ್ನೂ, ಮುಂಜಾನೆ ಅದೇ ಸ್ಥಳದಲ್ಲಿ ಮುಳುಗುತ್ತಿದ್ದ ಚಂದ್ರನನ್ನೂ ಒಂದೇ ಆ್ಯಂಗಲ್‌ನಿಂದ ಸೆರೆಹಿಡಿದಿದ್ದೇನೆ.

ಸಂಬಳದ ಬಗ್ಗೆ ಮಾತ್ರ ಕೇಳಬೇಡಿ. ಬೆಳಿಗ್ಗೆ 6ಕ್ಕೆ ಮೊದಲು ಹಾಗೂ ರಾತ್ರಿ 10ರ ನಂತರ ದುಡಿದರೆ ಎರಡು ಪಟ್ಟು ಸಂಬಳ. ಗ್ರಾಹಕರ ಸಂಖ್ಯೆ ಹಾಗೂ ಸಮಯದ ಆಧಾರದ ಮೇಲೆ ಸಂಬಳವೂ ವ್ಯತ್ಯಾಸವಾಗುತ್ತಿರುತ್ತದೆ. ನಗರದೊಳಗೆ ಬಾಡಿಗೆ ಸಿಕ್ಕರೆ ಹೆಚ್ಚಿನ ಸಮಯ ಟ್ರಾಫಿಕ್‌ನಲ್ಲೇ ಕಳೆದು ಹೋಗುತ್ತದೆ, ತುಮಕೂರು ಇಲ್ಲವೇ ಮೈಸೂರಿಗೆ ಬಾಡಿಗೆ ಸಿಕ್ಕರೆ ಭಾರೀ ಖುಷಿ. ದೂರ ಪ್ರಯಾಣ ಕೊಡುವ ಮಜವೇ ಬೇರೆ...
ದಿನನಿತ್ಯ ಪ್ರಯಾಣ, ದಿನನಿತ್ಯ ಹೊಸ ಅನುಭವಗಳು. ಮೊಗೆದಷ್ಟೂ ಮುಗಿಯದ ಧಾರಾವಾಹಿಗಳಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT