ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂವರೆ ತಾಸಿನಲ್ಲಿ ದರ್ಶನ್ ಬಂಧನಕ್ಕೆ ಪ್ರಶಂಸೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯನ್ನು ಕೊಲ್ಲಲು ಯತ್ನಿಸಿದ ನಟ ದರ್ಶನ್ ಅವರನ್ನು ಘಟನೆ ನಡೆದ ಕೆಲವೇ ತಾಸುಗಳಲ್ಲಿ ಬಂಧಿಸಿದ ಪೊಲೀಸರ ಕ್ರಮಕ್ಕೆ ಒಂದೆಡೆ ಪ್ರಶಂಸೆ ವ್ಯಕ್ತವಾದರೆ, ಆರೋಪಿಯನ್ನು ಕಾನೂನಿನ ಸುಳಿಯಿಂದ ಬಿಡಿಸಲು ಚಿತ್ರರಂಗದ ಗಣ್ಯರು ಮಾಡಿದ ಯತ್ನಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ದರ್ಶನ್ ಅವರ ಪತ್ನಿ ದೂರು ನೀಡಿದ ನಂತರ ಕೇವಲ ಒಂದೂವರೆ ತಾಸಿನಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರ ತಂಡ ಆರೋಪಿಯನ್ನು ಬಂಧಿಸಿತು. ಆರೋಪಿ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನೂ ದಾಖಲಿಸಿತು.

ವ್ಯಕ್ತಿ ಯಾರೇ ಆಗಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರ ಆದೇಶದ ಹಿನ್ನೆಲೆಯಲ್ಲಿ ಸಿಬ್ಬಂದಿ ನಟನನ್ನು ಬಂಧಿಸಿದ್ದರು.

`ಹಣ ಮತ್ತು ಪ್ರಭಾವ ಇರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ ಎಂಬ ಭಾವನೆ ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಕೆಲಸ ಪ್ರಶಂಸನೀಯ. ಪೊಲೀಸರ ಕಾರ್ಯ ವೈಖರಿ ಇಡೀ ಇಲಾಖೆಯ ಬಗ್ಗೆ ಭರವಸೆ ಮೂಡಿಸುವಂತಿದೆ~ ಎಂದು ಖಾಸಗಿ ಕಂಪೆನಿ ಉದ್ಯೋಗಿ ಕುಶ ಅವರು ಹೇಳಿದರು.

`ಹಣ ಇದ್ದರೆ ಅಪರಾಧ ಮಾಡಿ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ವಿಜಯಲಕ್ಷ್ಮಿ ಪ್ರಕರಣದಲ್ಲಿ ಪೊಲೀಸರ ಕೆಲಸ ಶ್ಲಾಘನೀಯ. ಅಪರಾಧ ಎಸಗುವವರಿಗೆ ಇದು ಎಚ್ಚರಿಕೆ~ ಎಂದು ಅರುಣ್ ಕುಮಾರ್ ಹೇಳಿದರು.

ಆಸ್ಪತ್ರೆಗೆ ದೌಡಾಯಿಸಿದ ಚಿತ್ರರಂಗದ ಗಣ್ಯರು ದರ್ಶನ್ ಅವರ ಬಗ್ಗೆ ಮೃದು ಧೋರಣೆ ತೋರಿಸಿ ಮಾತನಾಡಿದ್ದಕ್ಕೆ ಸಾರ್ವಜನಿಕರು ಮತ್ತು ಮಹಿಳಾ ಸಂಘಟನೆಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನ್ ವಿರುದ್ಧದ ದೂರನ್ನು ಹಿಂದಕ್ಕೆ ಪಡೆಯುವಂತೆ ವಿಜಯಲಕ್ಷ್ಮಿ ಅವರ ಮೇಲೆ ಒತ್ತಡ ಹೇರಿದ್ದು ನಾಚಿಗೇಡಿನ ಸಂಗತಿ ಎಂದಿದ್ದಾರೆ.

`ಪತ್ನಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ನಟ ದರ್ಶನ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ~ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ತಿಳಿಸಿದ್ದಾರೆ.

`ದರ್ಶನ್ ಅವರು ಅಮಾನುಷವಾಗಿ ವರ್ತಿಸಿರುವ ವಿಷಯ ಗೊತ್ತಿದ್ದರೂ ಹಿರಿಯ ನಟ ಅಂಬರೀಶ್ ಒಳಗೊಂಡಂತೆ ಚಿತ್ರರಂಗದ ಗಣ್ಯರು ದರ್ಶನ್ ಅವರ ರಕ್ಷಣೆಗೆ ಧಾವಿಸಿದ್ದು ಖಂಡನೀಯ. ದರ್ಶನ್ ಅವರನ್ನು ರಕ್ಷಿಸುವ ಉದ್ದೇಶದಿಂದ ಚಿತ್ರರಂಗದ ಗಣ್ಯರು ವಿಜಯಲಕ್ಷ್ಮಿ ಅವರ ಮೇಲೆ ಒತ್ತಡ ಹೇರಿದ್ದು ಸರಿಯಲ್ಲ~ ಎಂದು ವಿಮಲಾ ಹೇಳಿದ್ದಾರೆ.

`ಚಿತ್ರರಂಗದ ಗಣ್ಯರು ದೌರ್ಜನ್ಯಕ್ಕೆ ಒಳಗಾದ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಲ್ಲಬೇಕಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ದರ್ಶನ್ ಅವರನ್ನು ರಕ್ಷಿಸಲು ಯತ್ನಿಸಿದ್ದು ನಾಚಿಕೆಗೇಡು. ಪರದೆ ಮೇಲೆ ಮಹಿಳಾ ಪರ ಮತ್ತು ಜನ ಪರವಾದ ಪಾತ್ರಗಳಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿರುವ ಅಂಬರೀಶ್, ಜಗ್ಗೇಶ್ ಮತ್ತಿತರ ನಟರು ತಮ್ಮ ವರ್ತನೆಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ~ ಎಂದು ಅವರು ತಿಳಿಸಿದರು.

`ಕಾನೂನಿನ ಪ್ರಕಾರ ತಪ್ಪು ಮಾಡಿರುವ ದರ್ಶನ್ ಅವರನ್ನು ಬೆಂಬಲಿಸುವುದು ತಪ್ಪು. ಮಹಿಳೆಯ ಮೇಲೆ ದೌರ್ಜನ್ಯವಾದಾಗ ಈ ರೀತಿ ವರ್ತನೆ ಸಹಜವಾಗಿದೆ. ಆದರೆ ಈ ರೀತಿ ಆಗಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು~ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸರ ಮೇಲೆ ಗಣ್ಯರ- ಸಚಿವರ ಒತ್ತಡ
ದರ್ಶನ್ ಅವರನ್ನು ಬಿಡುಗಡೆ ಮಾಡಿಸಲು ಚಿತ್ರರಂಗದ ಗಣ್ಯರು ಮತ್ತು ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರು ಪೊಲೀಸರ ಮೇಲೆ ತೀವ್ರ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ. ನಗರ ಪೊಲೀಸ್ ಘಟಕದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಸಚಿವರೊಬ್ಬರು ದರ್ಶನ್ ವಿರುದ್ಧ ದಾಖಲಿಸಿರುವ ಕಠಿಣ ಸೆಕ್ಷನ್‌ಗಳನ್ನು ಬದಲಾವಣೆ ಮಾಡುವಂತೆ ಒತ್ತಡ ಹೇರಿದರು.

ಆತನಿಗೆ ಆದಷ್ಟು ಸಹಾಯ ಮಾಡಿ ಎಂದೂ ಅವರು ಸೂಚಿಸಿದ್ದರು. ಚಿತ್ರರಂಗದ ಘಟಾನುಘಟಿಗಳೂ ದರ್ಶನ್ ಅವರು ಜೈಲಿಗೆ ಹೋಗುವುದನ್ನು ತಪ್ಪಿಸಲು ಪೊಲೀಸರ ಮೇಲೆ ತೀವ್ರ ಒತ್ತಡ ಹೇರಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ನ್ಯಾಯಾಧೀಶರ ಎದುರು ಪತ್ನಿಯ ವಿರುದ್ಧ ಹೇಳಿಕೆ
ಬೆಂಗಳೂರು:
ನಗರದ ಕೋರಮಂಗಲ ಸಮೀಪದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರ ನಿವಾಸಕ್ಕೆ ಪೊಲೀಸರು ದರ್ಶನ್ ಅವರನ್ನು ಸಂಜೆ ಹಾಜರುಪಡಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾದ ವಿಜಯಲಕ್ಷ್ಮಿ ಅವರು, ಪತಿ ದರ್ಶನ್ ಅವರ ವಿರುದ್ಧ ದಾಖಲಿಸಿದ್ದ ದೂರಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದರು.

`ಪತಿ ಮತ್ತು ನನ್ನ ಮಧ್ಯೆ ಕೆಲ ಭಿನ್ನಾಭಿಪ್ರಾಯಗಳಿದ್ದವು. ಇದೇ ಕಾರಣಕ್ಕಾಗಿ ಆಗಾಗ್ಗೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಅಂತೆಯೇ ಗುರುವಾರ ಸಂಜೆಯೂ ಜಗಳವಾಯಿತು. ಇದರಿಂದ ಬೇಸರಗೊಂಡ ನಾನು ಶೌಚಾಲಯಕ್ಕೆ ಹೋಗುತ್ತಿದ್ದ ವೇಳೆ ಜಾರಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಯಿತು~ ಎಂದು ವಿಜಯಲಕ್ಷ್ಮಿ ನ್ಯಾಯಾಧೀಶರ ಎದುರು ಹೇಳಿಕೆ ಕೊಟ್ಟರು.

ಚಿತ್ರರಂಗದ ಗಣ್ಯರು ಸಂಧಾನ ಮಾಡಿರುವ ಕಾರಣ ವಿಜಯಲಕ್ಷ್ಮಿ ಪ್ರಕರಣ ವಾಪಸ್ ಪಡೆಯಲು ಒಪ್ಪಿದ್ದಾರೆ. ಇದೇ ಕಾರಣಕ್ಕೆ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT