ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂವರೆ ವರ್ಷದಿಂದ ನಡೆಯದ ಚುನಾವಣೆ!

Last Updated 18 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಹರಪನಹಳ್ಳಿ: ಅಧಿಕಾರಿಗಳ ಉದಾಸೀನತೆಗೆ ತುತ್ತಾದ ಪರಿಣಾಮ, ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿಗೆ ಒಂದೂವರೆ ವರ್ಷದಿಂದ ಚುನಾವಣೆ ನಡೆಯದೆ, ತಾಲ್ಲೂಕು ಆಡಳಿತ ಪ್ರಜಾಪ್ರತಿನಿಧಿಗಳ ಅಧಿಕಾರಕ್ಕೆ ಅರ್ಧಚಂದ್ರ ಮುದ್ರೆ ಒತ್ತಿದೆ.

ಗ್ರಾಮ ಪಂಚಾಯ್ತಿಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ 2011ರ ಜುಲೈಗೆ ಮುಗಿದಿದೆ. ಪಂಚಾಯತ್‌ರಾಜ್ ಅಧಿನಿಯಮದ ಅನ್ವಯ 6 ತಿಂಗಳ ಒಳಗಾಗಿ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲಾ ಚುನಾವಣಾಧಿಕಾರಿಯೂ ಆದ, ಜಿಲ್ಲಾಧಿಕಾರಿ 2011ರ ಆಗಸ್ಟ್ 10ರಂದು ಸದಸ್ಯರ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಿಸಿದರು.

ಅಧಿಸೂಚನೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ದೊರಕಿಲ್ಲ ಎಂದು ಅಸಮಾಧಾನಗೊಂಡ ಕೆಲವರು, ಹೈಕೋರ್ಟ್‌ನಲ್ಲಿ ದಾವೆ ಹೂಡಿದ ಪರಿಣಾಮ, ನ್ಯಾಯಾಲಯ 2011ರ ಆ. 16ರಂದು ಚುನಾವಣೆ ಪ್ರಕ್ರಿಯೆ ನಡೆಸದಂತೆ ನಿರ್ದೇಶಿಸಿ ತಡೆಯಾಜ್ಞೆ ನೀಡಿತು. ನಿಗದಿತ ಸಮಯದಲ್ಲಿ ಸಮರ್ಪಕ ಪ್ರಮಾಣಪತ್ರ ಸಲ್ಲಿಸಿ, ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಪಂಚಾಯ್ತಿಗೆ ಚುನಾವಣೆ ನಡೆಸಬೇಕಾದ ಜಿಲ್ಲಾಡಳಿತ ವಿಫಲವಾಗಿದೆ. ಈ ಪರಿಣಾಮ, ಹಾರಕನಾಳು ಗ್ರಾಮ ಪಂಚಾಯ್ತಿ ಆಡಳಿತ ಪ್ರಜಾಪ್ರತಿನಿಧಿಗಳ ಕೈಗೆ ಸಿಗದೆ, `ಆಡಳಿತಾಧಿಕಾರಿ~ ಮೇಜುವಾನಿಕೆ ಮುಂದುವರಿದಿದೆ.

ಹೈಕೋರ್ಟ್ 2012ರ ಜೂನ್‌ನಲ್ಲಿಯೇ ತಡೆಯಾಜ್ಞೆ ತೆರವುಗೊಳಿಸಿ ತಕ್ಷಣವೇ ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡು ನಾಲ್ಕೈದು ತಿಂಗಳು ಗತಿಸಿದರೂ, ಚುನಾವಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದಿರುವುದು ಗ್ರಾಮಸ್ಥರಲ್ಲಿ ತೀವ್ರ ಬೇಸರ ಮೂಡಿಸಿದೆ.

ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾರಕನಾಳು ಕೇಂದ್ರಸ್ಥಾನ (4) ಸೇರಿದಂತೆ ಹುಲಿಕಟ್ಟೆ (6), ಈಶಾಪುರ (1), ಕನ್ನಾಯಕನಹಳ್ಳಿ (2), ಚನ್ನಹಳ್ಳಿ (2), ಹಾರಕನಾಳು ದೊಡ್ಡತಾಂಡಾ (2) ಹಾಗೂ ಹಾರಕನಾಳು ಸಣ್ಣತಾಂಡಾ (1) ಸೇರಿದಂತೆ 7 ಗ್ರಾಮಗಳನ್ನು ಒಳಗೊಂಡಿದೆ. 18 ಸದಸ್ಯ ಬಲವುಳ್ಳ ಗ್ರಾಮ ಪಂಚಾಯ್ತಿ. (ಆವರಣದಲ್ಲಿರುವ ಸಂಖ್ಯೆ ಸದಸ್ಯರ ಸ್ಥಾನ ಸೂಚಿಸುತ್ತದೆ). ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲ. ಹೀಗಾಗಿ, ಮೂಲಸೌಕರ್ಯ ಸಮಸ್ಯೆ ತಾಂಡವಾಡುತ್ತಿದೆ. ಆಡಳಿತಾಧಿಕಾರಿ ಉಸ್ತುವಾರಿಯಲ್ಲಿ ಇಡೀ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್. ಚಂದ್ರಪ್ಪ, ಮುಖಂಡರಾದ ಬಣಕಾರ ಗಂಗಾಧರಪ್ಪ, ಟಿ. ಹಾಲೇಶ್ ಆರೋಪಿಸುತ್ತಾರೆ.

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಆಡಳಿತಾಧಿಕಾರಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ, ಗ್ರಾಮಗಳಲ್ಲಿನ ಅಭಿವೃದ್ಧಿಗೆ `ಗರ~ ಬಡಿದಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಕೈಗೆ ಅಧಿಕಾರ ದೊರಕಬೇಕು ಎಂಬುದು ಹುಲಿಕಟ್ಟೆ ಗ್ರಾಮಸ್ಥರಾದ ಬಾರಿಕರ ಕೃಷ್ಣಪ್ಪ, ಲಕ್ಕೇಶ್ ಹಾಗೂ ಬಡಿಗೇರ ಮಹಾದೇವಪ್ಪ ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT