ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕೈ ಚಾಲಕ ದಿವಾಕರ್ ಚಾಂಪಿಯನ್

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಡಿಗೆರೆಯ ದಿವಾಕರ್ ದೈಹಿಕ ನ್ಯೂನತೆ ಮೆಟ್ಟಿನಿಂತು ಆಟೊಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮತ್ತು ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಒಕ್ಕೂಟದ ಆಶ್ರಯದಲ್ಲಿ ಇಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಡರ್ಟ್ ಟ್ರ್ಯಾಕ್ ರ‌್ಯಾಲಿಯಲ್ಲಿ ಅಮೋಘ ಚಾಲನಾ ಕೌಶಲ ಪ್ರದರ್ಶಿಸಿ ಪ್ರಶಸ್ತಿ ಗೆದ್ದುಕೊಂಡರು.

ಹಿರೇಮಗಳೂರಿನ ಬೈಪಾಸ್ ತಿರುವಿನ ಮೈದಾನದಲ್ಲಿ ನಿರ್ಮಿಸಿದ್ದ 2 ಕಿ.ಮೀ. ಡರ್ಟ್ ಟ್ರ್ಯಾಕ್‌ನಲ್ಲಿ ನಡೆದ ರ‌್ಯಾಲಿಯ 1400 ಸಿಸಿ ವಿಭಾಗ (2 ನಿ, 24.44 ಸೆ) ಮತ್ತು ಇಂಡಿಯನ್ ಓಪನ್ ವಿಭಾಗ (2 ನಿ, 22.50 ಸೆ)ದಲ್ಲಿ ಅಗ್ರ ಸ್ಥಾನ ಪಡೆದು, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪ್ರಬಲ ಪೈಪೋಟಿ ನೀಡಿದ ಬೆಂಗಳೂರಿನ ಎ.ಆರ್.ಶಬ್ಬೀರ್ (2 ನಿ, 24.31ಸೆ) ಮತ್ತು ಮೂಡಿಗೆರೆಯ ಷಫಿಕ್ ಉರ್ ರೆಹಮಾನ್ (2 ನಿ, 24.41ಸೆ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

1300 ಸಿಸಿ ವಿಭಾಗದಲ್ಲಿ ಎಸ್ಟೀಮ್ ಕಾರು ಮಧ್ಯದಲ್ಲೇ ಕೈಕೊಟ್ಟಿದ್ದ ದಿವಾಕರ್‌ಗೆ ಸ್ಪರ್ಧೆ ಪೂರ್ಣಗೊಳಿಸಲಾಗಲಿಲ್ಲ. 800 ಸಿಸಿ ವಿಭಾಗದಲ್ಲೂ ಹಿನ್ನಡೆ ಉಂಟಾಗಿತ್ತು. ಆದರೂ ಧೃತಿಗೆಡದೆ ಪ್ರಮುಖ ಘಟ್ಟದ ಸ್ಪರ್ಧೆಯಲ್ಲಿ ಅಮೋಘ ಚಾಲನಾ ಕೌಶಲ್ಯ ಪ್ರದರ್ಶಿಸಿ, ಪ್ರತಿಸ್ಪರ್ಧಿ ಚಾಲಕರಾದ ಆಮೆನ್ ಮತ್ತು ಶಬ್ಬೀರ್ ಅವರನ್ನು ಹಿಂದಿಕ್ಕಿದರು.

ಇವರು ಕಾಫಿ ಪಲ್ಪರ್ ಯಂತ್ರವನ್ನು ದುರಸ್ತಿಗೊಳಿಸುವಾಗ ಆಕಸ್ಮಿಕವಾಗಿ ಅದರೊಳಗೆ ಬಲಗೈ ಸಿಲುಕಿಕೊಂಡು ಕೈ ತುಂಡಾಗಿತ್ತು. ಆಗ ಇವರಿಗೆ 14 ವರ್ಷ ವಯಸ್ಸಾಗಿತ್ತು. ಈ ನ್ಯೂನತೆ ಅವರ ಗೆಲುವಿನ ಓಟಕ್ಕೆ ಎಂದೂ ತೊಡಕಾಗಿಲ್ಲ. ಈಗಾಗಲೇ ರಾಜ್ಯಮಟ್ಟದ ಹಲವು ರ‌್ಯಾಲಿಗಳನ್ನು ಅವರು ಗೆದ್ದಿದ್ದಾರೆ. ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸುವ ಅವರ ಕೌಶಲ್ಯವನ್ನು ಪ್ರೇಕ್ಷಕರು ಎವೆಯಿಕ್ಕದೆ ಕುತೂಹಲದಿಂದ ನೋಡುತ್ತಿದ್ದರು.

ವೀಣಾ ಮೈಸೂರು ಮತ್ತು ಚಿಕ್ಕಮಗಳೂರಿನ ಅಸ್ಮಾ ಈ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಇಬ್ಬರೇ ಮಹಿಳಾ ಸ್ಪರ್ಧಿಗಳು. ಮಹಿಳಾ ವಿಭಾಗದಲ್ಲಿ ಎಸ್ಟೀಮ್ ಕಾರು ಚಲಾಯಿಸಿದ ವೀಣಾಗೆ ಪೈಪೋಟಿ ನೀಡುವಂತಹ ಮತ್ತೊಬ್ಬ ಸ್ಪರ್ಧಿ ಇರಲಿಲ್ಲ. ಪುರುಷ ಚಾಲಕ ಸ್ಪರ್ಧಿಗಳಿಗೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಪ್ರದರ್ಶನ ತೋರಿದರು.

ಟ್ರ್ಯಾಕ್‌ನಲ್ಲಿ ಆರಂಭದಲ್ಲೇ ಎದುರಾಗುವ ದಿಢೀರ್ ತಿರುವಿನಲ್ಲಿ ಸ್ಟೇರಿಂಗ್ ಮೇಲಿನ ತಮ್ಮ ನಿಯಂತ್ರಣ ಸಾಮರ್ಥ್ಯ ಪ್ರದರ್ಶಿಸಿದರು. ಟ್ರ್ಯಾಕ್‌ನ ಕೊನೆಯ ಲ್ಯಾಪ್‌ನಲ್ಲಿ ದಿಢೀರ್ ವೇಗ ತಗ್ಗಿಸಿ, ಕಣ್ಮುಚ್ಚಿ ಕಣ್ ಬಿಡುವುದರೊಳಗೆ ತೆಗೆದುಕೊಂಡ `ಜೀರೋ ಕಟ್' ಪ್ರೇಕ್ಷಕರ ಮೈನವಿರೇಳುವಂತೆ ಮಾಡಿತು. ವೀಣಾ ಚಮತ್ಕಾರಕ್ಕೆ ತಲೆದೂಗಿದ ಪ್ರೇಕ್ಷಕರು, ಕರತಾಡನದ ಶಹಬ್ಬಾಸ್‌ಗಿರಿ ನೀಡಿದರು.

ಇದೇ ಮೊದಲ ಬಾರಿಗೆ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಚಿಕ್ಕಮಗಳೂರಿನ ಹರ್ಷದ್ ಹೋಂಡಾ ಬ್ರಯೋ ಕಾರು ಚಲಾಯಿಸಿ, ನುರಿತ ಚಾಲಕನಂತೆ ರೋಮಾಂಚನಕಾರಿ ಕ್ಷಣಗಳನ್ನು ಪ್ರೇಕ್ಷಕರಿಗೆ ಉಣಬಡಿಸಿದರು.

`ಕಾಫಿ ಕಣಿವೆ'ಯಲ್ಲಿ ಮೊನ್ನೆಯಷ್ಟೇ ನಡೆದ ಕಾಫಿ ಡೇ ರಾಷ್ಟ್ರಮಟ್ಟದ ಕಾರು ರ‌್ಯಾಲಿಯ ರೋಚಕ ಕ್ಷಣಗಳು ಜನರ ನೆನಪಿನ ಪುಟದಿಂದ ಮಾಸುವ ಮೊದಲೇ ಮತ್ತೊಂದು ರೋಮಾಂಚನಕಾರಿ ರ‌್ಯಾಲಿಯನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ವಾರಾಂತ್ಯದಲ್ಲಿ ಸರ್ಕಾರಿ ರಜೆ ಇದ್ದುದರಿಂದ ರ‌್ಯಾಲಿ ನೋಡಲು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಈ ರ‌್ಯಾಲಿಯಲ್ಲಿ ಆಯ್ದ 70 ಕಾರುಗಳಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಭಾನುವಾರ ನಡೆಯಲಿರುವ ಬೈಕ್ ರ‌್ಯಾಲಿಯಲ್ಲಿ ತನ್ವೀರ್, ಶ್ರೀಹರಿ, ಬಾಬನ್‌ಖಾನ್ ಸೇರಿದಂತೆ ರಾಜ್ಯಮಟ್ಟದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸ್ಪರ್ಧಿಗಳು 8 ವಿಭಾಗಗಳಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಚಾಕಚಕ್ಯತೆ, ಸಾಹಸಮಯ ವೇಗ ಪ್ರದರ್ಶಿಸಲಿದ್ದಾರೆ.

ಫಲಿತಾಂಶ: ಇಂಡಿಯನ್ ಓಪನ್: ದಿವಾಕರ್ ಮೂಡಿಗೆರೆ ( 2 ನಿ, 22.50 ಸೆ), ಎ.ಎರ್.ಶಬ್ಬೀರ್ (2 ನಿ, 24.31ಸೆ), ಷಫಿಕ್ ಉರ್ ರೆಹಮಾನ್ (2 ನಿ, 24.41ನಿ).

800 ಸಿಸಿ: ಅಶೋಕ್ ಮೂಡಿಗೆರೆ (2 ನಿ, 27.31), ಸೈಯದ್ ಮುಕ್ರಂ (2 ನಿ, 34.81), ಎ.ಆರ್.ಶಬ್ಬೀರ್ (2ನಿ, 36.29 ಸೆ).

800 ಸಿಸಿ ನೋವಿಸ್: ಫಾರೂಕ್ ಹುಸೇನ್ (2 ನಿ, 38.10ಸೆ), ಸುರೇಂದ್ರ ಬಾಬು (2 ನಿ, 43.41 ಸೆ).
801ರಿಂದ 1001 ಸಿಸಿ: ಎ.ಆರ್.ಶಬ್ಬೀರ್ (2 ನಿ, 27.07 ಸೆ), ಮಹಮದ್ ಫಾರೂಕ್ (2 ನಿ, 28.62 ಸೆ).
801ರಿಂದ 1001 ಸಿಸಿ ನೋವಿಸ್: ಹರ್ಷದ್ (2, 28.69).

1300 ಸಿಸಿ: ವೀರೇಶ್‌ಗೌಡ ಕಳಸ (2:28.44 ನಿಮಿಷ), ಆಮೆನ್ (2:28.68), ಸೈಯದ್ ಮುಕ್ರಂ  (2 ನಿ, 28.90 ಸೆ).

1300 ಸಿಸಿ ನೋವಿಸ್: ಫಾರೂಕ್ ಹುಸೇನ್ (2 ನಿ, 32.34 ಸೆ), ಓಬುಳ ರೆಡ್ಡಿ (2 ನಿ, 34.59 ಸೆ).
1400 ಸಿಸಿ: ದಿವಾಕರ್ (2 ನಿ, 24.44 ಸೆ), ಆಮೆನ್ (2 ನಿ, 27.19 ಸೆ), ಷಫೀಕ್‌ಉರ್ ರೆಹಮಾನ್ (2 ನಿ, 28 ಸೆ).

1400 ಸಿಸಿ ನೋವಿಸ್: ತೌಕಿರ್ (2 ನಿ, 30 ಸೆ.), ಸುರೇಂದ್ರ ಬಾಬು (2 ನಿ, 30.25 ಸೆ). 1600 ಸಿಸಿ: ಆಮೆನ್ (2 ನಿ, 24.28 ಸೆ), ಎ.ಆರ್.ಶಬ್ಬೀರ್ ( 2, 24.56), ಷಫೀಕ್ ಉರ್ ರೆಹಮಾನ್ (2 ನಿ, 27.22ಸೆ).

1600 ನೋವಿಸ್: ಅಜಯ್ ಮಕದಂ (2 ನಿ, 30 ಸೆ), ರಿಜ್ವಾನ್ (2 ನಿ, 32.25 ಸೆ). ಲೇಡಿಸ್ ಕ್ಲಾಸ್: ವೀಣಾ ಮೈಸೂರು (2 ನಿ, 34.34 ಸೆ), ಅಸ್ಮಾ (2 ನಿ, 57.50 ಸೆ). ಜೀಪು: ಷಫೀಕ್ ಉರ್ ರೆಹಮಾನ್ ( 2ನಿ, 43.81 ಸೆ), ಆಮೆನ್ (2 ನಿ, 51.97 ಸೆ), ಆಲಂ (2 ನಿ, 57.68 ಸೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT