ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ನಾಗರಿಕತೆ ಹಾಗೂ ಘನತೆಯನ್ನು ಉಳಿಸಲು ನಾವೆಲ್ಲ ಒಂದೇ ಧ್ವನಿಯಾಗಿ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ವಿಭಿನ್ನ ಧ್ವನಿಗಳಿದ್ದರೂ ಪರಸ್ಪರ ಸಹಕಾರ ಹಾಗೂ ವಿಶ್ವಾಸದಿಂದ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಶನಿವಾರ ನಡೆದ ಬಸವ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ನಾವು ಸಂಸ್ಕಾರಹೀನರು, ಕ್ರೂರಿಗಳು, ರಾಕ್ಷಸರು ಆಗುತ್ತಿದ್ದೇವೆ. ಸಮಾಜದಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ ಮಾಯವಾಗಿದೆ. ರಾಜಕೀಯ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಅನುಮಾನ, ಅಪನಂಬಿಕೆ ಕಾಡುತ್ತಿದೆ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

`ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಇದಕ್ಕೆಲ್ಲ ಕಡಿವಾಣ ಹಾಕಬಹುದು. ನಾವು ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಅವರು ಹೇಳಿದರು.

ಹೃದ್ರೋಗತಜ್ಞೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, `ಶರಣಸಂಸ್ಕೃತಿ ಉತ್ಕೃಷ್ಟವಾದುದು. ಮುಂದಿನ ವರ್ಷದ ಬಸವ ಜಯಂತಿಯಂದು 108 ವಚನಗಳನ್ನು 4.15 ಗಂಟೆಗಳ ಕಾಲ 1.80 ಲಕ್ಷ ಜನರು ಒಟ್ಟಾಗಿ ಹಾಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಗುರಿ ಇದೆ~ ಎಂದರು.

ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು `ವಚನಾಮೃತವರ್ಷಿಣಿ~ ಸಿ.ಡಿ. ಬಿಡುಗಡೆ ಮಾಡಿದರು.
ನಗರದ ಕಲಾಕ್ಷಿತಿ ಕಲಾ ಸಂಸ್ಥೆಯ ನಿರ್ದೇಶಕ ಪ್ರೊ. ಎಂ.ಆರ್.ಕೃಷ್ಣಮೂರ್ತಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಶಂಕರ್, ಶಾರದಾ ಸ್ತ್ರೀ ಸಮಾಜದ ಅಧ್ಯಕ್ಷೆ ಶಾರದಾ ಉಮೇಶರುದ್ರ, ಸಂತೃಪ್ತಿ ಕಲಾವೇದಿಕೆಯ ಅಧ್ಯಕ್ಷೆ ತ್ರಿವೇಣಿ ಶಿವಕುಮಾರ್, ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಜಾ ಉದಯಶಂಕರ್ ಉಪಸ್ಥಿತರಿದ್ದರು. ಬಳಿಕ ಕಲಾಕ್ಷಿತಿ ಕಲಾಸಂಸ್ಥೆಯ ಸದಸ್ಯರು `ಅಕ್ಕಮಹಾದೇವಿ~ ನೃತ್ಯರೂಪಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT