ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಮಂತ್ರ; ಅದು 5-0 ಜಯ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಕ್ರೀಡೆಯಲ್ಲಿ ಸದಾ ಹೀಗೆ! ತಾನೇ ಸಾಮಾಟ್ರ ಎಂದು ಮೆರೆಯಲು ಯಾರಿಗೂ ಸಾಧ್ಯವಿಲ್ಲ. ಹಾಗೇ, ಈ ತಂಡದ ಕಥೆ ಮುಗಿಯಿತು ಎಂದು ಹೇಳಿ ಸುಮ್ಮನಾಗುವಂತಿಲ್ಲ. 15 ದಿನಗಳ ಹಿಂದೆಯಷ್ಟೇ ಜಯದ ಅಮಲಿನಲ್ಲಿ ತೇಲಾಡುತ್ತಿದ್ದ ಆಂಗ್ಲ ಪಡೆಯ್ಲ್ಲಲೀಗ ಹೀನಾಯ ಸೋಲಿನ ತಳಮಳ ಶುರುವಾಗಿರುವುದೇ ಅದಕ್ಕೊಂದು ಸಾಕ್ಷಿ.

`ಈ ರೀತಿ ಆಗುತ್ತೆ ಎಂದು ನಾವು ಖಂಡಿತ ಯೋಚಿಸಿರಲಿಲ್ಲ. ಸೋಲಿನ ರೀತಿ ನಮ್ಮಲ್ಲಿ ನಿರಾಶೆ ಉಂಟು ಮಾಡಿರುವುದು ನಿಜ~ ಎಂದು ಇಂಗ್ಲೆಂಡ್ ತಂಡದ ನಾಯಕ ಕುಕ್ ಒಪ್ಪಿಕೊಂಡ ಧ್ವನಿಯ್ಲ್ಲಲಿಯೇ ನೋವು ಅಡಗಿದೆ. ಕಾರಣ ಈ ತಂಡವೀಗ ಸರಣಿಯನ್ನು 0-5ರಲ್ಲಿ ಸೋಲುವ ಭೀತಿ ಎದುರಿಸುತ್ತಿದೆ.

ಇತ್ತ ಭಾರತ ತಂಡದಲ್ಲಿ ಇದ್ದಕ್ಕಿದ್ದಂತೆ ಉತ್ಸಾಹದ ಚಿಲುಮೆ ಪುಟಿದೇಳುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ `ಯಂಗ್ ಬ್ರಿಗೇಡ್~ ಮಿಂಚು ಹರಿಸುತ್ತಿದೆ. ಸರಣಿಯನ್ನು `ಕ್ಲೀನ್ ಸ್ವೀಪ್~ ಮಾಡುವ ವಿಶ್ವಾಸ ಆತಿಥೇಯರ ಎದೆಯಲ್ಲಿ ಗೂಡು ಕಟ್ಟಿದೆ.

ಹಾಗಾಗಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗೆಲುವಿನ ಹಣತೆ ಹಚ್ಚಲು ಆತಿಥೇಯ ತಂಡ ಸಜ್ಜಾಗುತ್ತಿದೆ. ಕ್ರೀಡಾ ಪ್ರೇಮಿಗಳ ನಗರಿಯಲ್ಲಿ ಮಂಗಳವಾರ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ಪೆಟ್ಟು ನೀಡುವ ಛಲದಲ್ಲಿದೆ. ದೀಪಾವಳಿ ಹಬ್ಬದ ಸಿಹಿಯ ಸವಿಯೊಂದಿಗೆ ಜಯದ ಪಟಾಕಿ ಸಿಡಿಸಲು ಅಭಿಮಾನಿಗಳು ಕಾತರವಾಗಿದ್ದಾರೆ.

ಸರಣಿಯನ್ನು 5-0ರಲ್ಲಿ ಗೆದ್ದರೂ ಸೇಡು ಪೂರ್ಣವಾಗಿ ತೀರಲಾರದು. ಏಕೆಂದರೆ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತಕ್ಕೆ ಎದುರಾದ ಚಿಂತಾಜನಕ ಪರಿಸ್ಥಿತಿ ಈ ಗೆಲುವಿನಿಂದ ಮರೆಯಾಗಲಾರದು. ಆದರೆ ನೊಂದ ಮನಗಳಿಗೆ ಕೊಂಚವಾದರೂ ಸಾಂತ್ವನ ಸಿಗಲಿದೆ. ಹಾಗಾಗಿಯೇ `ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕೆಂಬುದು ನಮ್ಮ ಗುರಿ. ಹಾಗಂತ ಇದು ಸೇಡಿನ ಸರಣಿ ಅಲ್ಲ~ ಎಂದು ನಾಯಕ ದೋನಿ ಮತ್ತೊಮ್ಮೆ ಹೇಳಿದ್ದಾರೆ.

ಆದರೆ ಇತಿಹಾಸ ಮರುಕಳಿಸುವ ಕಾಲ ಸನ್ನಿಹಿತವಾಗಿದೆ. 2008ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ 5-0ರಲ್ಲಿ ಸರಣಿ ಸೋತಿದ್ದ ರೀತಿಯ ಭೀತಿ ಆಂಗ್ಲ ಪಡೆಯನ್ನು ಈಗ ಮತ್ತೊಮ್ಮೆ ಕಾಡುತ್ತಿದೆ.

ಆತಿಥೇಯ ವೇಗಿಗಳಿಗಿಂತ ಸ್ಪಿನ್ನರ್‌ಗಳೇ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ನಾಲ್ಕನೇ ಪಂದ್ಯದಲ್ಲಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಾವು ಮಾಡಿದ ಒಟ್ಟು 20 ಓವರ್‌ಗಳಲ್ಲಿ ಕೇವಲ 79 ರನ್ ನೀಡಿ ಐದು ವಿಕೆಟ್ ಹಂಚಿಕೊಂಡಿದ್ದೇ ಅದಕ್ಕೆ ಸಾಕ್ಷಿ.

ನಿರೀಕ್ಷೆಯನ್ನು ಹುಸಿಗೊಳಿಸಿರುವ ಜೊನಾಥನ್ ಬೈಸ್ಟೋ ಬದಲಿಗೆ ಇಯಾನ್ ಬೆಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತದ ನೆಲದಲ್ಲಿ ಅನುಭವ ಸಿಗಲಿ ಎಂಬ ಕಾರಣಕ್ಕೆ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಬದಲಿಗೆ ಮುಂಬೈ ಪಂದ್ಯದಲ್ಲಿ ಯುವ ಲೆಗ್ ಸ್ಪಿನ್ನರ್ ಬಾರ್ಥ್‌ವಿಕ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ತುಂಬಾ ದುಬಾರಿ ಆಗಿದ್ದರು. ಹಾಗಾಗಿ ಮತ್ತೆ ಸ್ವಾನ್ ಕಣಕ್ಕಿಳಿಯುವುದು ಬಹುತೇಕ ಖಚಿತ.

4-0ರಲ್ಲಿ ಮುನ್ನಡೆ ಹೊಂದಿರುವ ಆತಿಥೇಯ ತಂಡದಲ್ಲೂ ಕೆಲವೊಂದು ಬದಲಾವಣೆ ನಿರೀಕ್ಷಿಸಬಹುದು. ಸ್ಥಳೀಯ ಆಟಗಾರ ಮನೋಜ್ ತಿವಾರಿ ತಂಡದಲ್ಲಿದ್ದಾರೆ. ಆಕಸ್ಮಾತ್ ಅವರಿಗೆ 11ರ ಬಳಗದಲ್ಲಿ ಅವಕಾಶ ನೀಡಬೇಕು ಎಂದು ದೋನಿ ಬಯಸಿದರೆ ಪಾರ್ಥಿವ್ ಪಟೇಲ್ ಸ್ಥಾನ ತೆರವು ಮಾಡಬೇಕಾಗುತ್ತದೆ.

ಕರ್ನಾಟಕದ ವೇಗಿಗಳಾದ ಎಸ್.ಅರವಿಂದ್, ಅಭಿಮನ್ಯು ಮಿಥುನ್ ಹಾಗೂ ಲೆಗ್ ಸ್ಪಿನ್ನರ್ ರಾಹುಲ್ ಶರ್ಮ ಕೂಡ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ತಂಡ ಹೆಚ್ಚಿನ ಪ್ರಯೋಗ ಮಾಡಲು ಮುಂದಾಗುವ ಸಾಧ್ಯತೆ ಕಡಿಮೆ. 

 ಸಚಿನ್ ತೆಂಡೂಲ್ಕರ್ ಅನುಪಸ್ಥಿತಿ ಕಾರಣ ಮುಂಬೈನ ವಾಂಖೇಡೆ ಕ್ರೀಡಾಂಗಣ ಭಾನುವಾರ ಬಹುತೇಕ ಖಾಲಿಯಾಗಿತ್ತು. ಅಂತಹ ಪರಿಸ್ಥಿತಿ ಈಡನ್ ಗಾರ್ಡನ್ಸ್‌ನಲ್ಲಿ ಎದುರಾಗಲಾರದು ಎಂಬ ವಿಶ್ವಾಸ ಸಂಘಟಕರದ್ದು. ಈ ನಗರಿಯ ಹೀರೊ ಸೌರವ್ ಗಂಗೂಲಿ ಈಗ ವೀಕ್ಷಕ ವಿವರಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ವಿಶ್ವಕಪ್‌ಗೆಂದು ಈಡನ್ ಅಂಗಳವನ್ನು ಹೊಸದಾಗಿ ಶೃಂಗರಿಸಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣ ಸಿದ್ಧವಾಗಿರದ ಕಾರಣ ಆ ಚಾಂಪಿಯನ್‌ಷಿಪ್‌ನ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಈ ನಿರ್ಧಾರ ಇಲ್ಲಿನ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ವಿಶೇಷವೆಂದರೆ ಮಂಗಳವಾರ ಅವೇ ತಂಡಗಳು ಇಲ್ಲಿ ಸೆಣಸಾಡುತ್ತಿವೆ.

ತಂಡಗಳು
ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಪ್ರವೀಣ ಕುಮಾರ್, ಆರ್. ವಿನಯ್ ಕುಮಾರ್, ಆರ್.ಅಶ್ವಿನ್, ವರುಣ್ ಆ್ಯರನ್, ಎಸ್.ಅರವಿಂದ್, ಅಭಿಮನ್ಯು ಮಿಥುನ್, ರಾಹುಲ್ ಶರ್ಮ ಹಾಗೂ ಮನೋಜ್ ತಿವಾರಿ. ಕೋಚ್: ಡಂಕನ್ ಫ್ಲೆಚರ್

ಇಂಗ್ಲೆಂಡ್: ಅಲಸ್ಟರ್ ಕುಕ್ (ನಾಯಕ), ಕ್ರೇಗ್ ಕೀಸ್ವೆಟರ್, ಜೊನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ರವಿ ಬೋಪಾರಾ, ಸಮಿತ್ ಪಟೇಲ್, ಜೊನಾಥನ್ ಬೈಸ್ಟೋ, ಗ್ರೇಮ್ ಸ್ವಾನ್, ಟಿಮ್ ಬ್ರೆಸ್ನನ್, ಸ್ಟೀವನ್ ಫಿನ್, ಸ್ಕಾಟ್ ಬಾರ್ಥ್‌ವಿಕ್, ಜೇಡ್ ಡೆನ್‌ಬ್ಯಾಚ್, ಸ್ಟುವರ್ಟ್ ಮೀಕರ್ ಹಾಗೂ ಗ್ರಹಾಮ್ ಆನಿಯನ್ಸ್. ಕೋಚ್: ಆ್ಯಂಡಿ ಫ್ಲವರ್.

ಪಂದ್ಯ ಆರಂಭ: ಮಧ್ಯಾಹ್ನ 2.30. ನೇರಪ್ರಸಾರ: ನಿಯೋ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT