ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನ ಕೊರತೆ ಸೋಲಿಗೆ ಕಾರಣ-ರಾಹುಲ್

Last Updated 20 ಏಪ್ರಿಲ್ 2011, 20:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ಅನುಭವ ಇರುವ ಹಿರಿಯರಿದ್ದಾರೆ. ಉತ್ಸಾಹಿ ತರುಣರಿದ್ದಾರೆ. ಇಷ್ಟಾದರೂ ಒಂದು ಸಮಸ್ಯೆ ಇದೆ. ನಾಯಕರಲ್ಲಿ ಪರಸ್ಪರ ಒಗ್ಗಟ್ಟು ಇಲ್ಲದಿರುವುದು. ಇದರಿಂದಲೇ ಪಕ್ಷಕ್ಕೆ ಅಲ್ಲಲ್ಲಿ ಸೋಲಾಗುತ್ತಿರುವುದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬುಧವಾರ ಇಲ್ಲಿ ಹೇಳಿದರು.ಒಂದು ದಿನದ ಭೇಟಿಗಾಗಿ ನಗರಕ್ಕೆ ಬಂದಿದ್ದ ಅವರು ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಂತರ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಸಂಸದರು, ಶಾಸಕರು ಸೇರಿದಂತೆ ಇತರ ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿದರು.

‘ನಮ್ಮಲ್ಲಿನ ಕಿರಿಯರು ಮತ್ತು ಹಿರಿಯರು ಒಗ್ಗೂಡಿದರೆ ಕಾಂಗ್ರೆಸ್ ಅನ್ನು ಸೋಲಿಸಲು ಯಾರಿಂದಲೂ ಸಾಧ್ಯ ಇಲ್ಲ. ಹೀಗಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಹಿರಿಯರು ಕೂಡ ಯುವ ಕಾಂಗ್ರೆಸ್ಸಿಗೆ ಒತ್ತು ನೀಡಬೇಕು. ಯುವ ಕಾಂಗ್ರೆಸ್ ಇರುವುದೇ ನಿಮಗಾಗಿ (ಹಿರಿಯರಿಗಾಗಿ). ಹೀಗಾಗಿ ಅವರೊಟ್ಟಿಗೆ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಿ’ ಎಂದು ಕಿವಿ ಮಾತು ಹೇಳಿದರು.
‘ಪಕ್ಷದ ಹಿರಿಯ ನಾಯಕರ ವಿರುದ್ಧ ಟೀಕೆ ಮಾಡುವ ಹಾಗೂ ಗೂಂಡಾಗಿರಿ ಪ್ರದರ್ಶಿಸುವ ಯುವ ಕಾಂಗ್ರೆಸ್ಸಿಗರ ವಿರುದ್ಧ ಒಂದು ಸೆಕೆಂಡ್ ಕೂಡ ತಡ ಮಾಡದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಶಿಸ್ತು ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು’ ಎಂದರು.

‘ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ದೇಶದಲ್ಲಿ  ಎರಡು ರಾಷ್ಟ್ರೀಯ ಪಕ್ಷಗಳಿವೆ ಎಂದು ಹೇಳಿದರು. ಆದರೆ, ನನ್ನ ಪ್ರಕಾರ ರಾಷ್ಟ್ರೀಯ ಪಕ್ಷ ಇರುವುದೇ ಒಂದು. ಅದೂ ಕಾಂಗ್ರೆಸ್ ಪಕ್ಷ. ಕಾರಣ, ಇತರ ಎಲ್ಲ ರಾಷ್ಟ್ರೀಯ ಪಕ್ಷಗಳೂ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತತ್ವ, ಸಿದ್ಧಾಂತವನ್ನು ಅನುಸರಿಸುತ್ತಿವೆ. ಆದರೆ, ಕಾಂಗ್ರೆಸ್ ಮಾತ್ರ ಇಡೀ ದೇಶದಲ್ಲಿ ಒಂದೇ ತತ್ವ ಸಿದ್ಧಾಂತ ಹೊಂದಿದೆ. ಹೀಗಾಗಿ ಕಾಂಗ್ರೆಸ್ ಮಾತ್ರ ರಾಷ್ಟ್ರೀಯ ಪಕ್ಷ’ ಎಂದು ಸ್ಪಷ್ಟನೆ ನೀಡಿದರು.

‘ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಯಾರೇ ಅಕ್ರಮದಲ್ಲಿ ಭಾಗವಹಿಸಿದ್ದರೂ ಒಂದು ಕ್ಷಣ ತಡ ಮಾಡದೆ ಕ್ರಮ  ತೆಗೆದುಕೊಂಡಿದೆ. ಈ ರೀತಿಯ ಪ್ರಯತ್ನ ಇತರ ಪಕ್ಷಗಳಲ್ಲಿ ಆಗಿಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿ ಮಾಡುವುದರ ಮೂಲಕ ಕಾಂಗ್ರೆಸ್ ಜನಪರ ಎನ್ನುವುದನ್ನು ಸಾಬೀತುಪಡಿಸಿದೆ’ ಎಂದು ಹೇಳಿದರು.

ಪಕ್ಷ ಸಂಘಟಕರಿಗೆ ಮಾತ್ರ ಟಿಕೆಟ್

ವಿಜಾಪುರ ವರದಿ: ’ಯುವ ಕಾಂಗ್ರೆಸ್ಸಿನಲ್ಲಿ ಮೇಲಿನಿಂದ ಹೇರುವ ಸಂಸ್ಕೃತಿಗೆ ಈಗ ತಿಲಾಂಜಲಿ ನೀಡಲಾಗಿದೆ. ಸಂಘಟನೆಯಿಂದ ಬಂದವರಿಗೆ ಮಾತ್ರ ಚುನಾವಣೆಗಳಲ್ಲಿ ಟಿಕೆಟ್ ಕೊಡಲಾಗುವುದು. ಎಷ್ಟೇ ಪ್ರಭಾವಿ, ಸಮರ್ಥ ನಾಯಕನಿದ್ದರೂ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳದಿದ್ದರೆ ಅವರಿಗೆ ಟಿಕೆಟ್ ನೀಡುವುದಿಲ್ಲ’ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು.
ವಿಜಾಪುರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಒಂಬತ್ತು ಲೋಕಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕೇರಳ ರಾಜ್ಯದಲ್ಲಿ ಸಾಕಷ್ಟು ಜನ ಯುವಕರು ವಿಧಾನಸಭೆಗೆ ಸ್ಪರ್ಧಿಸಲು ಅರ್ಹತೆ ಹೊಂದಿದ್ದರು. ಟಿಕೆಟ್ ಕೊಟ್ಟಿದ್ದರೆ ಅವರು ಗೆಲುವನ್ನೂ ಸಾಧಿಸುತ್ತಿದ್ದರು. ಆದರೆ, ಪಕ್ಷ ಸಂಘಟನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಇನ್ನು ಮುಂದೆ ದೇಶವ್ಯಾಪಿ ಇದೇ ನೀತಿ ಜಾರಿಯಲ್ಲಿರುತ್ತದೆ’ ಎಂದರು.
’ನಾವು ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ಇನ್ನಾರನ್ನೋ ತಂದು ಕಣಕ್ಕಿಳಿಸುತ್ತಾರೆ ಎಂಬ ಭಯ ನಿಮ್ಮಲ್ಲಿ ಬೇಡ. ಇನ್ನು ಮುಂದೆ ನಾನು ಅದಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT