ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದುಹೋಗಿರುವ ಮುಸ್ಲಿಂ ಮತಗಳು

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆಲಿಗಡ: ಬೀಗ ತಯಾರಿಕೆಗೆ ಈ ನಗರ ಸ್ವಾತಂತ್ರ್ಯಪೂರ್ವದ ದಿನಗಳಿಂದಲೇ ಹೆಸರುವಾಸಿಯಾದರೂ ಮುಸ್ಲಿಂ ಮತಪೆಟ್ಟಿಗೆಯ  ಕೀಲಿಕೈ ಇಲ್ಲಿದೆ ಎಂಬ ನಂಬಿಕೆಗೆ ಅದು ಕಾರಣ ಅಲ್ಲ. ರಾಜ್ಯದ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಮುಸ್ಲಿಮರಿರುವ ಕಾರಣದಿಂದಲೇ ಈ ನಂಬಿಕೆ ಹುಟ್ಟಿಕೊಂಡಿದ್ದೂ ಅಲ್ಲ.

ಇಲ್ಲಿನ ಮುಸ್ಲಿಂ ನಾಯಕರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಹೊರಡಿಸುವ ಸೂಚನೆಗಳನ್ನು ರಾಜ್ಯದ ಬಹುಸಂಖ್ಯಾತ ಮುಸ್ಲಿಮರು ಪಾಲಿಸುತ್ತಿದ್ದುದು ಈ ನಂಬಿಕೆಗೆ ಕಾರಣ.
 
ಈ ಮುಸ್ಲಿಂ ನಾಯಕರ ಮಾತಿಗೆ ಬೆಲೆ ತಂದುಕೊಟ್ಟಿರುವುದು  ಇಲ್ಲಿನ 137ವರ್ಷಗಳಷ್ಟು ಹಳೆಯದಾದ ಆಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಇಲ್ಲಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಇಸ್ಲಾಂ ಅಧ್ಯಯನದ ಅತ್ಯಂತ ಪ್ರಭಾವಶಾಲಿ ಕೇಂದ್ರವಾದ ದೇವ್‌ಬಂದ್ ದಾರುಲ್ ಉಲೇಮಾ.

ದೇವ್‌ಬಂದ್‌ನಿಂದ ಹೊರಡುವ ಫತ್ವಾಗಳನ್ನು ಮುಸ್ಲಿಮರು ಕಣ್ಣುಮುಚ್ಚಿಕೊಂಡು ಪಾಲಿಸುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ದುರುಪಯೋಗದಿಂದಾಗಿ ಫತ್ವಾಗಳ ಮಹತ್ವ ಕಡಿಮೆಯಾಗಿರುವುದನ್ನು ಮುಸ್ಲಿಂ ನಾಯಕರೂ ಒಪ್ಪುತ್ತಾರೆ.

ಈ ಹಿನ್ನೆಲೆಯಲ್ಲಿ ಮುಫ್ತಿಗಳು ವೈಯಕ್ತಿಕ ನೆಲೆಯಲ್ಲಿ ಫತ್ವಾ ಹೊರಡಿಸುವುದನ್ನು ಕಡಿಮೆಮಾಡಬೇಕು ಎಂದು ದಾರುಲ್ ಉಲೇಮಾದಿಂದ ಸೂಚನೆ ನೀಡಲಾಗಿದೆಯಂತೆ. `ಈ ಬಾರಿಯ ಚುನಾವಣೆಯಲ್ಲಿ  ಮತದಾನ ಮಾಡಲು ಮುಸ್ಲಿಮರಿಗೆ ಯಾರೂ ಸೂಚನೆಯನ್ನು ನೀಡಿಲ್ಲ.

ಇದೇ ಮೊದಲ ಬಾರಿಗೆ ಮುಸ್ಲಿಂ ಮತಗಳು ಹಲವಾರು ದಿಕ್ಕುಗಳಲ್ಲಿ ಹಂಚಿಹೋಗಿರುವುದರಿಂದ  ಫತ್ವಾ ಇಲ್ಲವೇ ಸೂಚನೆ ಪ್ರಭಾವ ಬೀರಲಾರದು~ ಎನ್ನುತ್ತಾರೆ ಆಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಮೀಮ್ ಖಾನ್.

ಕೊನೆಯ ಎರಡು ಸುತ್ತಿನ ಮತದಾನ ನಡೆಯಲಿರುವ 23 ಜಿಲ್ಲೆಗಳ 168 ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಒಂದಾಗಿ ಮತ ಚಲಾಯಿಸಿದರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಲು ಸಾಧ್ಯ ಇದೆ.  ಸಹರಾಣಪುರ, ಮುಜಾಫರ್‌ನಗರ, ಮೊರದಾಬಾದ್, ರಾಮಪುರ,ಬರೇಲಿ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಂ ಮತಗಳು ಶೇಕಡಾ 30ರಿಂದ 40ರಷ್ಟಿವೆ.

ಆದರೆ ಮುಸ್ಲಿಮರಲ್ಲಿಯೂ ಹಿಂದೆ ಇದ್ದಂತಹ ರಾಜಕೀಯ ಒಗ್ಗಟ್ಟು ಉಳಿದಿಲ್ಲ. ಸ್ವಂತ ವರ್ಚಸ್ಸಿನ ಬಲದಿಂದ ಮುಸ್ಲಿಮರು  ನಿರ್ದಿಷ್ಠವಾದ ಪಕ್ಷಕ್ಕೆ ಮತಚಲಾಯಿಸುವಂತೆ ಮಾಡಬಲ್ಲ ಸಾಮರ್ಥ್ಯದ ನಾಯಕರೂ ಯಾವ ಪಕ್ಷದಲ್ಲಿಯೂ ಇಲ್ಲ.
 
ಅಸುರಕ್ಷತೆ ಎದುರಾದಾಗಲೇ ಸಾಮಾನ್ಯವಾಗಿ ಒಂದು ಜಾತಿ ಇಲ್ಲವೇ ಧರ್ಮದ ಮತದಾರರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮತ ಚಲಾಯಿಸುತ್ತಾರೆ. ಇದಕ್ಕೆ ಮುಸ್ಲಿಂ ಮತದಾರರೂ ಕೂಡಾ ಹೊರತಾಗಿಲ್ಲ.

ಬಾಬ್ರಿಮಸೀದಿ ಧ್ವಂಸದ ನಂತರ ಸೇಡು ತೀರಿಸಿಕೊಳ್ಳುವಂತೆ ಇವರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ಮತ ಹಾಕಿದ್ದರು. ಅಂತಹ ತುರ್ತು ಈಗ  ಅವರೆದುರೂ ಇಲ್ಲ. ಬಿಜೆಪಿ ಕಡೆಯಿಂದಲೂ ಅವರನ್ನು ಕೆರಳಿಸುವಂತಹ ಯಾವುದೇ ಆರೋಪ ಇಲ್ಲವೇ ಹೇಳಿಕೆಗಳು ಈವರೆಗೆ ಬಂದಿಲ್ಲ.
 
ಇದರಿಂದಾಗಿ ಬಾಬ್ರಿಮಸೀದಿ ಧ್ವಂಸದ ನಂತರ ಮುಸ್ಲಿಂ ಮತದಾರರು ಈ ರಾಜ್ಯದಲ್ಲಿ ಇದೇ ಮೊದಲ ಬಾರಿ ಸ್ವತಂತ್ರವಾಗಿ ಮತಚಲಾಯಿಸುತ್ತಿರುವಂತೆ ಕಾಣುತ್ತಿದೆ. ಇದರಿಂದಾಗಿ ಮುಸ್ಲಿಂ ಮತಗಳು ಹಂಚಿಹೋಗುವ ಸಾಧ್ಯತೆಗಳಿವೆ.

`ಈ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಹಂಚಿಹೋಗಲು ಸಾಮಾನ್ಯ ಮುಸ್ಲಿಮರಿಗೆ ತಮ್ಮನಾಯಕರ ಬಗ್ಗೆ ಆಗಿರವ ಭ್ರಮನಿರಸನ ಮತ್ತು ಚುನಾವಣಾ ಕಣದಲ್ಲಿರುವ ಮುಸ್ಲಿಂ ಕೇಂದ್ರಿತ ಪಕ್ಷಗಳು ಕೂಡಾ ಕಾರಣ ~ ಎನ್ನುತ್ತಾರೆ ಇಲ್ಲಿನ ಹಿರಿಯ ಪತ್ರಕರ್ತ ನದೀಮ್.
 
2004ರಲ್ಲಿ ಅಟಲ ಬಿಹಾರಿ ವಾಜಪೇಯಿಗೆ ಮತಹಾಕಲು ಕರೆ ನೀಡಿದ್ದ ದೆಹಲಿಯ ಜುಮ್ಮಾಮಸೀದಿಯ ವಿವಾದಾತ್ಮಕ ಇಮಾಮ್ ಬುಖಾರಿ ಈ ಬಾರಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಅವರ ಅಳಿಯ ಆ ಪಕ್ಷದ ಅಭ್ಯರ್ಥಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಬೋರ್ಡ್‌ನ ಸದಸ್ಯ ಕಮಲ್ ಫರೂಕಿ ಅವರೂ ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.

ದೇವ್‌ಬಂದ್‌ನ ಮುಸ್ಲಿಂ ಧರ್ಮಗುರುಗಳ ಜತೆ ರಾಹುಲ್‌ಗಾಂಧಿ ಸಂಪರ್ಕದಲ್ಲಿದ್ದಾರೆ. ಎಐಯುಡಿಎಫ್‌ನ ಅಜ್ಮಲ್ ಸೋದರರು ಗುಪ್ತವಾಗಿ ಅಜಿತ್‌ಸಿಂಗ್ ಅವರಿಗೆ ಬೆಂಬಲ ನೀಡುತ್ತಿದ್ದಾರಂತೆ. ಈ ರೀತಿ ಮುಸ್ಲಿಂ ಧರ್ಮಗುರುಗಳು ಮತ್ತು ನಾಯಕರು ರಾಜಕೀಯ ಪಕ್ಷಗಳಲ್ಲಿ ಹಂಚಿಹೋಗಿರುವುದರಿಂದ ಅವರ ರಾಜಕೀಯ ಒಲವು ಸಾಮಾನ್ಯ ಮುಸ್ಲಿಂ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.

ಇದರ ಜತೆ ಒಮ್ಮಿಂದೊಮ್ಮೆಲೆ ಹುಟ್ಟಿಕೊಂಡ ಮುಸ್ಲಿಂ ಕೇಂದ್ರಿತ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಕ್ಷಗಳನ್ನು ತುದಿಗಾಲಲ್ಲಿ ನಿಲ್ಲಿಸಿವೆ.

ಗೋರಖ್‌ಪುರದ ವೈದ್ಯ ಮೊಹಮ್ಮದ್ ಆಯುಬ್ ಸ್ಥಾಪಿಸಿರುವ `ಪೀಸ್ ಪಕ್ಷ~,  ಬಿಎಸ್‌ಪಿ ತೊರೆದುಬಂದ ಇಲ್ಯಾಸ್ ಅಜ್ಮಿ ಅವರ `ರಾಷ್ಟ್ರೀಯ ಇಂಕ್ವಿಲಾಬ್ ಪಕ್ಷ~(ಆರ್‌ಐಪಿ) ಉಲೇಮಾ ಕೌನ್ಸಿಲ್ ಬೆಂಬಲದ ಎಸ್‌ಕ್ಯುಆರ್ ಇಲ್ಯಾಸಿ ಅವರ ಅಧ್ಯಕ್ಷತೆಯ `ವೆಲ್‌ಫೇರ್ ಪಕ್ಷ~ಮತ್ತು ಕೋಟ್ಯಧಿಪತಿ ಅಜ್ಮಲ್ ಸೋದರರ `ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ~ (ಎಐಯುಡಿಎಫ್), ಮಿಲ್ಲತ್ ಪಕ್ಷ, ಪರ್ಚಮ್ ಪಕ್ಷ...ಹೀಗೆ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟೇ ಹಲವಾರು ಪ್ರಾದೇಶಿಕ ಪಕ್ಷಗಳು ಚುನಾವಣಾ ಕಣಕ್ಕಿಳಿದಿವೆ.
 
ಇವುಗಳಲ್ಲಿ ಎಐಯುಡಿಎಫ್ ಹೊರತುಪಡಿಸಿ ಬೇರೆ ಯಾವ ಪಕ್ಷಕ್ಕೂ ಈ ವರೆಗೆ ಚುನಾವಣೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎಯುಡಿಎಫ್ ಹತ್ತು ಸ್ಥಾನಗಳನ್ನು ಗೆದ್ದಿತ್ತು. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂಲೀಗ್‌ಗೆ ನೀಡಿದ ಬೆಂಬಲದಿಂದಾಗಿ ಆ ಪಕ್ಷ ತನ್ನ ಬಲವನ್ನು ಎಂಟರಿಂದ ಇಪ್ಪತ್ತಕ್ಕೆ ಹೆಚ್ಚಿಸಿತ್ತು.
 
ಎಐಯುಡಿಎಫ್ ಸೇರಿದಂತೆ ಇವುಗಳಲ್ಲಿ ಯಾವ ಪಕ್ಷವೂ ಇಲ್ಲಿ ನೂರಾರು ಸ್ಥಾನಗಳನ್ನು ಗೆಲ್ಲಲಾಗದಿದ್ದರೂ ಇವುಗಳು ಪಡೆಯುವ 2-3 ಸಾವಿರ ಮತಗಳು ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಲೆಕ್ಕಚಾರವನ್ನು ತಲೆಕೆಳಗೆ ಮಾಡುವ ಸಾಧ್ಯತೆಗಳಿವೆ. ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರಗಳನ್ನು ನೋಡಿದರೆ ಈ ಪಕ್ಷಗಳಿಗೂ ಈ ಉದ್ದೇಶ ಇದ್ದಂತಿದೆ. 

 ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಮೊದಲನೆ ಮತ್ತು ಎರಡನೆ ಸ್ಥಾನಗಳಲ್ಲಿತ್ತೋ ಅಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿ `ಪೀಸ್ ಪಕ್ಷ~ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ.
 
ಮುಸ್ಲಿಂಮತದಾರರು ಬಹುಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಆರ್‌ಐಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉಳಿದ ಮುಸ್ಲಿಂ ಪಕ್ಷಗಳೂ ಕೂಡಾ ಇದಕ್ಕೆ ಹೊರತಾಗಿಲ್ಲ. ಇದರಿಂದ ಯಾರಿಗೆ ಲಾಭ,ಯಾರಿಗೆ ನಷ್ಟ ಎಂದು ತಿಳಿದುಕೊಳ್ಳಲು ಬಹಳ ಬುದ್ದಿವಂತಿಕೆ ಬೇಕಾಗಿಲ್ಲ.  ಉದ್ದೇಶ ಗೆಲ್ಲುವುದಲ್ಲ ಸೋಲಿಸುವುದು ಎನ್ನುವುದು ಸ್ಪಷ್ಟ.

ಈ ಪಕ್ಷಗಳ ನಾಯಕರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿಯೂ ಮುಖ್ಯವಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ನಡೆಸುತ್ತಿದ್ದಾರೆ. ಸದಾ ಮುಸ್ಲಿಮರ ವಿರುದ್ದ ಕೆಂಡಕಾರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ತಮ್ಮ ಕ್ಷೇತ್ರದವರೇ ಆಗಿರುವ ಪೀಸ್ ಪಕ್ಷದ ನಾಯಕ ಡಾ ಆಯೂಬ್ ವಿರುದ್ದ ಮಾತನಾಡುತ್ತಿಲ್ಲ.
 
ಆರ್‌ಐಪಿ ನಾಯಕ ಇಲ್ಯಾಸ್ ಅಜ್ಮಿ ಚುನಾವಣೆಗೆ ಮೊದಲು ಬಿಜೆಪಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜೆ.ಕೆ.ಜೈನ್ ಜತೆ ಕಾಣಿಸಿಕೊಂಡಿದ್ದರು. ಇದರಿಂದಾಗಿಯೇ ಈ ಪಕ್ಷಗಳ ಹಿಂದೆ ಸಂಘ ಪರಿವಾರದ ನಾಯಕರಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ.
 
ಈ  ಬೆಳವಣಿಗೆಗಳಿಂದಾಗಿ ಮುಸ್ಲಿಂ ಮತಪೆಟ್ಟಿಗೆಯ ಕೀಲಿ ಕೈ ಈಗ ಯಾವ ರಾಜಕೀಯ ಪಕ್ಷದ ಕೈಯಲ್ಲಿಯೂ ಇಲ್ಲದಂತಾಗಿದೆ. ಅವರು ಯಾರ ವೋಟ್ ಬ್ಯಾಂಕ್ ಕೂಡಾ ಅಲ್ಲ. ಒಗ್ಗಟ್ಟಿನಲ್ಲಿ ಬಲ ಇದೆ ಎನ್ನುತ್ತಾರೆ, ಒಮ್ಮಮ್ಮೆ ಬಿಕ್ಕಟ್ಟು ಕೂಡಾ ಬಲ ತಂದುಕೊಡುತ್ತದೆಯೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT