ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ್ ಗೆ ಭಾರತ ರತ್ನ ನೀಡಲು ಬಿಎಸ್ಪಿ ಆಗ್ರಹ

Last Updated 5 ಜುಲೈ 2012, 5:15 IST
ಅಕ್ಷರ ಗಾತ್ರ

ರಾಮನಗರ: ಸಾಮಾಜಿಕ ನ್ಯಾಯದ ಹರಿಕಾರ, ಮೈಸೂರು ಹಾಗೂ ರಾಜ್ಯ ಮಾದರಿಯಾಗಿ ಅಭಿವೃದ್ಧಿ ಹೊಂದಲು ಕಾರಣಕರ್ತರಾದ `ರಾಜರ್ಷಿ~ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮರಣೋತ್ತರ `ಭಾರತ ರತ್ನ~ ಪ್ರಶಸ್ತಿ ನೀಡಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಜಿಲ್ಲಾ ಅಧ್ಯಕ್ಷ
ಮಲ್ಲಿಕಾರ್ಜುನ ಸರ್ಕಾರವನ್ನು ಆಗ್ರಹಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 128ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಆದರೆ ಅವರು ಮಾಡಿದ ಸಾಧನೆ, ಅವರು ನೀಡಿದ ಕೊಡುಗೆಗೆ ತಕ್ಕ ಪ್ರತಿಫಲ ಮಾತ್ರ ದೊರೆಯುತ್ತಿಲ್ಲ. ಅವರು ಮಾಡಿದ ಕೆಲಸಗಳನ್ನು ಮತ್ಯಾರೋ `ಹೈಜಾಕ್~ ಮಾಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮೈಸೂರು ಸಂಸ್ಥಾನದಲ್ಲಿ ಮಹಾರಾಜರಾಗಿದ್ದಾಗ ಇವರು ಕೈಗೊಂಡ ಹಲವಾರು ಯೋಜನೆಗಳು, ಕಾರ್ಯಕ್ರಮಗಳು, ಕೊಡುಗೆ ಹಾಗೂ ಅವರ ಸಾಧನೆಗಳನ್ನು ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಗಳು ಎಂದು ಬಿಂಬಿಸಲಾಗುತ್ತಿದೆ. ಒಡೆಯರು ಗೊಲ್ಲರ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಇತಿಹಾಸದಲ್ಲಿ ಇವರನ್ನು ಕಡೆಗಣಿಸಲಾಗಿದೆ. ಅಲ್ಲದೆ ಸರ್ಕಾರಗಳು ಮತ್ತು ರಾಜಕಾರಣಿಗಳು ಸಹ ಇವರ ಸಾಧನೆ, ಕೊಡುಗೆಗಳನ್ನು ಗಮನಿಸಿ ನೀಡಬೇಕಾದ ಗೌರವಗಳನ್ನು ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ದೇಶದ 600ಕ್ಕೂ ಹೆಚ್ಚು ಸಂಸ್ಥಾನಗಳ ಪೈಕಿ ಮಾದರಿ ಸಂಸ್ಥಾನವಾಗಿ ಮೈಸೂರು ಹೊರಹೊಮ್ಮಿತ್ತು. ಇದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕೆಲಸ ಕಾರ್ಯಗಳೇ ಅಧಿಕ. ಇವರ ಅಡಿಯಲ್ಲಿ ದಿವಾನರಾಗಿ ಕಾರ್ಯ ನಿರ್ವಹಿಸಿದ್ದ ವಿಶ್ವೇಶ್ವರಯ್ಯ ಅವರಿಗೆ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
 
ಆದರೆ ಕೆಳ ಜಾತಿಯವರು ಎಂಬ ಕಾರಣಕ್ಕೆ ನಾಲ್ವಡಿ  ಕೃಷ್ಣರಾಜ ಒಡೆಯರ್ ಅವರನ್ನು ಕಡೆಗಣಿಸಿತು ಎಂದು ಅವರು ದೂರಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲ ವಿವಿಗಳಲ್ಲಿ ಒಡೆಯರ್ ಅವರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ  ಪ್ರತ್ಯೇಕವಾದ ಅಧ್ಯಯನ ಪೀಠವೊಂದನ್ನು ರಚಿಸಿ, ಅಲ್ಲಿ ಸಂಶೋಧನೆ ನಡೆಸುವ ಸಂಶೋಧನಾರ್ಥಿಗಳಿಗೆ ಫೆಲೋಷಿಪ್ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
 
ಮೀಸಲಾತಿ ಕಲ್ಪಿಸುವುದರ ಮೂಲಕ ಸಾಮಾಜಿಕ ನ್ಯಾಯದ ಹರಿಕಾರರಾದ ಅವರ ಬಗ್ಗೆ ರಾಜ್ಯದ ಶಾಲಾ ಮತ್ತು ಕಾಲೇಜಿನ ಪಠ್ಯದಲ್ಲಿ ಸೇರಿಸಬೇಕು ಎಂದು ಅವರು ಆಗ್ರಹಿಸಿದರು. ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಗುರು, ಕಾರ್ಯದರ್ಶಿ ಮಧು, ಮುಖಂಡ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT