ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ್‌ ಅಧ್ಯಕ್ಷ, ಬ್ರಿಜೇಶ್‌ ಕಾರ್ಯದರ್ಶಿ

ಕೆಎಸ್‌ಸಿಎ ಚುನಾವಣೆಯಲ್ಲಿ ‘ಕ್ಲೀನ್‌ ಸ್ವೀಪ್‌’; ಕುಂಬ್ಳೆ ಬೆಂಬಲಿತ ಸದಾನಂದ ಮಯ್ಯ ಬಣಕ್ಕೆ ಭಾರಿ ಸೋಲು
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಚಾರದ ವೇಳೆ ಆರೋಪ ಪ್ರತ್ಯಾರೋಪಗಳ ಮೂಲಕ ಭಾರಿ ಕುತೂಹಲ ಹಾಗೂ ಪೈಪೋಟಿಗೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯಲ್ಲಿ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌–ಬ್ರಿಜೇಶ್‌ ಪಟೇಲ್‌ ಬಣ ‘ಕ್ಲೀನ್‌ ಸ್ವೀಪ್‌’  ಮಾಡಿದೆ.

ಕೆಎಸ್‌ಸಿಎಗೆ ನೂತನ ಆಡಳಿತದಾರರನ್ನು ಆಯ್ಕೆ ಮಾಡಲು ಭಾನುವಾರ ನಡೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದ ಎಲ್ಲಾ 23 ಸ್ಥಾನಗಳಲ್ಲಿ ಒಡೆಯರ್‌–ಬ್ರಿಜೇಶ್‌ ಬಣ ಭಾರಿ ಅಂತರದಲ್ಲಿ ಜಯಭೇರಿ ಮೊಳಗಿಸಿತು. ಒಡೆಯರ್‌ ಅಧ್ಯಕ್ಷರಾಗಿ, ಬ್ರಿಜೇಶ್‌ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಖಜಾಂಚಿಯಾಗಿ ಪಿ.ದಯಾನಂದ ಪೈ ಹಾಗೂ ಉಪಾಧ್ಯಕ್ಷರಾಗಿ ಪಿ.ಆರ್‌.ಅಶೋಕಾನಂದ, ಸಂಜಯ್‌ ಎಂ.ದೇಸಾಯಿ ಮತ್ತು ಆರ್‌.ಸುಧಾಕರ್‌ ರಾವ್‌ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಒಡೆಯರ್‌ 510 ಮತಗಳಿಂದ ಅನಿಲ್‌ ಕುಂಬ್ಳೆ ಬೆಂಬಲಿತ ಅಭ್ಯರ್ಥಿ ಪಿ.ಸದಾನಂದ ಮಯ್ಯ ಅವರನ್ನು ಸೋಲಿಸಿದರು. ಅಂತರರಾಷ್ಟ್ರೀಯ ಮಾಜಿ ಅಂಪೈರ್‌ ಎ.ವಿ.ಜಯಪ್ರಕಾಶ್‌ ಎದುರು ಬ್ರಿಜೇಶ್‌ 646 ಮತಗಳ ಅಂತರದಿಂದ ಗೆದ್ದರು.

ಮತ ಎಣಿಕೆ ಆರಂಭವಾದ 30 ನಿಮಿಷದಲ್ಲಿಯೇ ಒಡೆಯರ್‌ ಬಣ ಭಾರಿ ಮುನ್ನಡೆ ಕಾಯ್ದುಕೊಂಡಿತು. ಪೂರ್ಣ ಎಣಿಕೆ ಮುಗಿಯುವರೆಗೆ ಆ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಎಣಿಕೆ ಶುರುವಾದ ಕೆಲ ನಿಮಿಷಗಳಲ್ಲಿ ಮಯ್ಯ ಬೇಸರದಿಂದ ಹೊರನಡೆದರು. ಕುಂಬ್ಳೆ ಹಾಗೂ ಜಾವಗಲ್‌ ಶ್ರೀನಾಥ್‌ ಅದಕ್ಕೆ ಮೊದಲೇ ಸ್ಥಳದಿಂದ ನಿರ್ಗಮಿಸಿದ್ದರು.

ಮುನ್ನಡೆ ಲಭಿಸುತ್ತಿದ್ದಂತೆ ಒಡೆಯರ್‌ ಬಣದ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಒಡೆಯರ್‌ ಅವರನ್ನು ಬೆಂಬಲಿಗರು ಎತ್ತಿ ಹಿಡಿದು ಸಂಭ್ರಮಿಸಲು ಪ್ರಯತ್ನಿಸಿದರು. ಬಳಿಕ ಒಡೆಯರ್‌ ಹಾಗೂ ಬ್ರಿಜೇಶ್‌ ಪರಸ್ಪರ ತಬ್ಬಿಕೊಂಡು ಅಭಿನಂದಿಸಿದರು.

‘ಎಲ್ಲಾ ವಿಷಯಗಳಲ್ಲಿ ನಾನು ಹಾಗೂ ಬ್ರಿಜೇಶ್‌ ಒಟ್ಟಾಗಿ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಿರುವುದಿಲ್ಲ. ಕ್ರಿಕೆಟ್‌ ಅಭಿವೃದ್ಧಿ ಹಾಗೂ ಸದಸ್ಯರಿಗೆ ಉತ್ತಮ ಸೌಲಭ್ಯ ಒದಗಿಸುವುದುಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಮತದಾನ ಮಾಡಿದ ಎಲ್ಲರಿಗೂ ಧನ್ಯವಾದ’ ಎಂದು ಫಲಿತಾಂಶ ಪ್ರಕಟವಾದ ಬಳಿಕ ಒಡೆಯರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕ್ಲೀನ್‌ ಸ್ವೀಪ್‌ ಮಾಡಲು ಸಾಧ್ಯವಾಗಿದ್ದು ವಿಶೇಷ ಬೆಳವಣಿಗೆ. ನಮ್ಮ ಹಿಂದಿನ ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಗೆಲುವಿಗೆ ಪ್ರಮುಖ ಕಾರಣ. ಆ ಅಭಿವೃದ್ಧಿ ಕೆಲಸಗಳಿಗೆ ಸದಸ್ಯರು ಮನ್ನಣೆ ನೀಡಿದ್ದಾರೆ’ ಎಂದು ಬ್ರಿಜೇಶ್‌ ಹೇಳಿದರು. ಆಡಳಿತ ವಿರೋಧಿ ಅಲೆಯನ್ನು ಬಂಡವಾಳವಾಗಿಸಿಕೊಂಡು ಕಣಕ್ಕಿಳಿದಿದ್ದ ಒಡೆಯರ್‌ ಬಣ ಆರು ತಿಂಗಳ ಹಿಂದೆಯೇ ಚುನಾವಣಾ ಪ್ರಚಾರದಲ್ಲಿ ತೊಡಗಿತ್ತು. ಪ್ರಮುಖವಾಗಿ ಸದಸ್ಯರಿಗೆ ಉತ್ತಮ ಸೌಲಭ್ಯ ನೀಡುವ ಭರವಸೆ ನೀಡಿತ್ತು.

ಗೆದ್ದ ಅಭ್ಯರ್ಥಿಗಳು (ಎಲ್ಲರೂ ಒಡೆಯರ್ ಬಣದವರು)
ಅಧ್ಯಕ್ಷ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌
ಕಾರ್ಯದರ್ಶಿ: ಬ್ರಿಜೇಶ್‌ ಪಟೇಲ್‌
ಖಜಾಂಚಿ: ಪಿ.ದಯಾನಂದ ಪೈ
ಉಪಾಧ್ಯಕ್ಷರು: ಪಿ.ಆರ್‌.ಅಶೋಕಾನಂದ, ಸಂಜಯ್‌ ಎಂ.ದೇಸಾಯಿ, ಆರ್‌.ಸುಧಾಕರ್‌ ರಾವ್‌
ವ್ಯವಸ್ಥಾಪಕ ಸಮಿತಿ: ದೊಡ್ಡ ಗಣೇಶ್‌, ಲಕ್ಷ್ಮಣ್‌ ಕೆ.ಮಥಾನಿ, ಎಚ್‌.ಎಂ. ಮಲ್ಲಿ ಕಾರ್ಜುನ್‌ ಸ್ವಾಮಿ, ವಿ.ಎಂ. ಮಂಜುನಾಥ್‌, ಎ.ರಘುರಾಮ್‌ ಭಟ್‌, ಎನ್‌.ಎಸ್‌.ಶ್ರೀನಿವಾಸ್‌ ಮೂರ್ತಿ.
ಕ್ಲಬ್‌ಗಳು: ಬೆಂಗಳೂರು: ಸಿಟಿ ಕ್ರಿಕೆಟರ್ಸ್, ಜಯನಗರ ಕೋಲ್ಟ್ಸ್‌, ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್ ಕ್ಲಬ್‌, ದಿ ಬೆಂಗಳೂರು ಕ್ರಿಕೆಟರ್ಸ್‌, ವಿಜಯ ಕ್ರಿಕೆಟ್‌ ಕ್ಲಬ್‌ (ಮಾಲೂರು), ವಲ್ಚರ್ಸ್‌್ಸ್‌ ಕ್ರಿಕೆಟ್‌ ಕ್ಲಬ್‌.
ಮೈಸೂರು: ಆರ್‌ಬಿಎನ್‌ ಕ್ರಿಕೆಟ್‌ ಕ್ಲಬ್‌. ಶಿವಮೊಗ್ಗ: ದುರ್ಗಿಗುಡಿ ಕ್ರಿಕೆಟ್‌ ಸಂಸ್ಥೆ. ತುಮಕೂರು: ತುಮಕೂರು ಒಕೆಷನಲ್ಸ್‌ . ಧಾರವಾಡ: ಬಿಡಿಕೆ ಸ್ಟೋರ್ಟ್ಸ್‌ ಕ್ಲಬ್‌. ಮಂಗಳೂರು: ಮಂಗಳೂರು ಸ್ಪೋರ್ಟ್ಸ್‌ ಕ್ಲಬ್‌. ರಾಯಚೂರು: ಸಿಟಿ ಇಲೆವೆನ್‌ ಕ್ರಿಕೆಟರ್ಸ್‌ ಕ್ಲಬ್‌.
* 24 ಸ್ಥಾನಗಳಲ್ಲಿ 23 ಸ್ಥಾನಗಳಿಗೆ ಮತದಾನ
* ಧಾರವಾಡದ ಬಿಡಿಕೆ ಸ್ಟೋರ್ಟ್ಸ್‌ ಕ್ಲಬ್‌ ಅವಿರೋಧ ಆಯ್ಕೆ (ಈ ಕ್ಲಬ್‌ ಬೆಂಬಲ ತಮ್ಮ ಬಣಕ್ಕೆ ಎಂದು ಒಡೆಯರ್‌ ಬಣ ಪ್ರಕಟಿಸಿದೆ)

ಮತದಾನದ ಅಂಕಿ ಅಂಶ
ಒಟ್ಟು ಸದಸ್ಯರು: 1828
ಮಾತದಾನ ಮಾಡಿದ ಸದಸ್ಯರು: 1344
ಒಟ್ಟು ಮತಗಳು: 30912
* ಒಬ್ಬ ಸದಸ್ಯ 23 ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು

ಮತದಾನ ಮಾಡಿದ ಗಣ್ಯರು
ಡಿ.ಎಚ್‌.ಶಂಕರಮೂರ್ತಿ (ವಿಧಾನ ಪರಿಷತ್‌ ಸಭಾಪತಿ), ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ), ಸಿ.ಎಂ.ಇಬ್ರಾಹಿಂ (ಮಾಜಿ ಕೇಂದ್ರ ಸಚಿವ), ಬಿ.ಎನ್‌.ಎಸ್‌.ರೆಡ್ಡಿ (ಕೆಎಸ್‌ಆರ್‌ಟಿಸಿ ನಿರ್ದೇಶಕ–ಭದ್ರತಾ ಮತ್ತು ಜಾಗೃತಿ), ಶಂಕರ ಬಿದರಿ (ಮಾಜಿ ಪೊಲೀಸ್‌ ಮಹಾನಿರ್ದೇಶಕ), ಸರೋಜಾ ದೇವಿ (ಹಿರಿಯ ನಟಿ), ವಿಜಯ ಮಲ್ಯ (ಉದ್ಯಮಿ), ಕೆ.ಎಸ್‌.ರಾಮಪ್ರಸಾದ್‌ (ಕೆಎಸ್‌ಸಿಎ ಮಾಜಿ ಅಧ್ಯಕ್ಷ).
ಮಾಜಿ ಕ್ರಿಕೆಟಿಗರು: ಜಿ.ಆರ್‌.ವಿಶ್ವನಾಥ್‌, ಇ.ಎ.ಎಸ್‌.ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌, ರಾಹುಲ್‌ ದ್ರಾವಿಡ್‌, ಸೈಯದ್‌ ಕಿರ್ಮಾನಿ, ರೋಜರ್‌ ಬಿನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT