ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯುವುದು ಕಟ್ಟಡ; ಕಟ್ಟುವುದು ಬದುಕು

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಗರದಲ್ಲಿ ಭೂಮಿಗೀಗ ಭಾರೀ ಬೆಲೆ. ಹಳೆಯ ಕಟ್ಟಡಕ್ಕಿಲ್ಲಿ ಕಿಮ್ಮತ್ತು ಕಡಿಮೆ. ಅದಿರುವ ಜಾಗವಷ್ಟೇ ಮುಖ್ಯ. ಬಂಬೂ ಬಜಾರ್‌ನಲ್ಲಿ ಸಾಗಿದರೆ ಅಡಿಗಡಿಗೆ ಕಟ್ಟಡಗಳನ್ನು ಒಡೆಯುವವರ ಅಂಗಡಿಗಳು ಕಣ್ಣಿಗೆ ಬೀಳುತ್ತವೆ.

ಹಳೆಯ ಕಟ್ಟಡ ಒಡೆಯುತ್ತಲೇ ಬದುಕು ಕಟ್ಟಿಕೊಳ್ಳುವ ಇವರಿಗೂ ಕೆಲವೊಮ್ಮೆ ನೆನಪುಗಳನ್ನು ಅಡಗಿಸಿಟ್ಟುಕೊಂಡ ಮಹಲುಗಳನ್ನು ಕೆಡಹುವಾಗ ಸಂಕಟವಾಗುತ್ತದಂತೆ.


ರಿಚ್ಮಂಡ್‌ಟೌನ್, ಫ್ರೇಜರ್‌ಟೌನ್ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ಬೆಂಗಳೂರು ದಂಡು ಪ್ರದೇಶದಲ್ಲಿದ್ದ ಬಹುತೇಕ ಬ್ರಿಟಿಷರ ಕಾಲದ ಹಳೆ ವಿನ್ಯಾಸದ ಕಟ್ಟಡಗಳು 1987ರಿಂದ 1995ರ ಅವಧಿಯಲ್ಲಿ ನೆಲಸಮವಾದವು. ಆ ಜಾಗದಲ್ಲಿ ಬೃಹತ್ ಕಾಂಪ್ಲೆಕ್ಸ್‌ಗಳು, ಶಾಪಿಂಗ್ ಮಾಲ್ ಹಾಗೂ ಐಷಾರಾಮಿ ಬಹುಮಹಡಿ ಕಟ್ಟಡಗಳು ತಲೆಎತ್ತಿದವು.

ಹೀಗೆ ಹಳೆ ಕಟ್ಟಡಗಳು ನೆಲಕ್ಕುರುಳಿದ ಬಗೆಯನ್ನು ಅಪೆಕ್ಸ್ ಡೆಮಾಲಿಷಿಂಗ್ ಕಂಪೆನಿ ಮಾಲೀಕ ಮನ್ಜೂರ್ ಶಾಕೂರ್ ನೆನಪಿಸಿಕೊಂಡರು. ಆಧುನಿಕತೆಗೆ ಒಡ್ಡಿಕೊಳ್ಳುವ ಭರದಲ್ಲಿ ಮಹಾನಗರದ ಜನತೆ ಹಳೆ ಕಟ್ಟಡಗಳನ್ನು ನೆಲಸಮ ಮಾಡಿ ಆ ಸ್ಥಳದಲ್ಲಿ ವಿವಿಧ ವಿನ್ಯಾಸದ ಕಟ್ಟಡಗಳನ್ನು ಕಟ್ಟಿಸಿಕೊಂಡರು ಎನ್ನುವ ಮನ್ಜೂರ್ ಕಳೆದ 25 ವರ್ಷಗಳಿಂದ ಕಟ್ಟಡಗಳನ್ನು ಒಡೆದುಹಾಕುವ ಕಾಯಕ ಮಾಡುತ್ತಿದ್ದಾರೆ.

`ಮಲ್ಲೇಶ್ವರ, ರಾಜಾಜಿನಗರ, ಸುಬ್ರಹ್ಮಣ್ಯನಗರ ಪ್ರದೇಶಗಳಲ್ಲಿ ಭಾರತೀಯ ಶೈಲಿಯ ಕಟ್ಟಡಗಳಿದ್ದವು. 1987ರಿಂದ ಈಚೆಗೆ ಬಹುತೇಕ ಆ ಕಟ್ಟಡಗಳನ್ನು ಕೆಡವಿ ಹಾಕಿದರು. ಸಮನಾಂತರವಾಗಿ ಇದ್ದ ಕಟ್ಟಡಗಳು ಈಗ ಗಗನಕ್ಕೆ ಮುತ್ತಿಡುವಂತೆ ನಿರ್ಮಾಣವಾಗುತ್ತಿವೆ~ ಎನ್ನುತ್ತಾರೆ ಮನ್ಜೂರ್.

ನಗರದಲ್ಲಿ ಕಟ್ಟಡಗಳನ್ನು ಒಡೆದುಹಾಕುವ ಅನೇಕ ಗುತ್ತಿಗೆದಾರ ಕಂಪೆನಿಗಳಿವೆ. ನೂತನ ಮನೆಯೊಂದು ತಲೆಎತ್ತಲು ವರ್ಷಗಟ್ಟಲೇ ಸಮಯಾವಕಾಶ ಬೇಕು. ಆದರೆ ಅದೇ ಮನೆಯನ್ನು ಧರೆಗುರುಳಿಸಲು ಬೆರಳೆಣಿಕೆ ದಿನಗಳು ಸಾಕು. `ಒಂದು ಕಟ್ಟಡವನ್ನು ಒಡೆಯಲು ನಾವು ಮಾಲೀಕರಿಂದ ಯಾವುದೇ ಹಣ ಪಡೆಯುವುದಿಲ್ಲ, ಬದಲಾಗಿ ಆ ಕಟ್ಟಡದಲ್ಲಿನ ಕಬ್ಬಿಣ, ಕಿಟಕಿ ಸೇರಿದಂತೆ ಮರದ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇವೆ.

ನಮ್ಮ ಲೆಕ್ಕದಷ್ಟು ಉತ್ಪನ್ನಗಳು ಇಲ್ಲವಾದರೆ ಉಳಿದ ಶೇಕಡಾವಾರು ಹಣವನ್ನು ಕಟ್ಟಡಗಳ ಮಾಲೀಕರಿಂದ ಪಡೆಯುತ್ತೇವೆ~ ಎಂಬುದು ಅವರು ಕೊಡುವ ಮಾಹಿತಿ.
`ಇದುವರೆಗೂ ನಾವು ಅನೇಕ ಕಟ್ಟಡಗಳನ್ನು ಕೆಡವಿದ್ದೇವೆ. ಆದರೆ, ಎಂ.ಜಿ.ರಸ್ತೆಯ ಐಸ್‌ಕ್ರೀಂ ಪಾರ್ಲರ್ ಕಟ್ಟಡ (ಈಗ ಜಿ.ಕೆ.ವೇಲ್ ಶಾಪಿಂಗ್ ಮಾಲ್ ಆಗಿದೆ) ಕೆಡವಿದಾಗ ನನಗೇ ನೋವಾಯಿತು. ಆ ಕಟ್ಟಡದ ವಿನ್ಯಾಸ ಅದ್ಭುತವಾಗಿತ್ತು.

ಬಾಲ್ಡ್‌ವಿನ್ ಶಾಲೆಯಲ್ಲಿ ಓದುತ್ತಿದ್ದಾಗ ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಐಸ್‌ಕ್ರೀಂ ಮೆಲ್ಲುತ್ತಿದ್ದೆವು. ಆ ನೆನಪು ಮಾತ್ರ ಕಟ್ಟಡ ಒಡೆದು ಹಾಕುವಾಗ ಮನಕಲಕಿತು~ ಎಂದು ಭಾವುಕರಾಗುತ್ತಾರೆ ಮನ್ಜೂರ್.

ಆನೇಪಾಳ್ಯದಲ್ಲಿ 1985ರಲ್ಲಿ ಅಪೆಕ್ಸ್ ಡೆಮಾಲಿಷಿಂಗ್ ಕಂಪೆನಿ ಆರಂಭಿಸಿರುವ ಮನ್ಜೂರ್ ಇದುವರೆಗೂ 600ಕ್ಕೂ ಅಧಿಕ ಕಟ್ಟಡಗಳನ್ನು ಒಡೆದುಹಾಕಿದ್ದಾರೆ. `ದಂಡು ಪ್ರದೇಶಗಳಲ್ಲಿದ್ದ ಶೇ 90ರಷ್ಟು ಕಟ್ಟಡಗಳು ಆಧುನಿಕತೆಯ ಪ್ರಭಾವಕ್ಕೆ ನೆಲಕಚ್ಚಿವೆ. ಶೇ 10ರಷ್ಟನ್ನು ಮಾತ್ರ ಮಾಲೀಕರು ಹಾಗೇಯೆ ಉಳಿಸಿಕೊಂಡಿದ್ದಾರೆ.

ಜೊತೆಗೆ ಕೆಲವು ಸರ್ಕಾರಿ ಕಚೇರಿಗಳು ಅದೇ ವಿನ್ಯಾಸವನ್ನು ಉಳಿಸಿಕೊಂಡು ಬಂದಿವೆ~ ಎನ್ನುತ್ತಾರೆ.ಬಂಬೂ ಬಜಾರ್ ಬಳಿ 12 ವರ್ಷಗಳಿಂದ ಸಫಾ ಹೆಸರಿನ ಬಿಲ್ಡಿಂಗ್ ಟ್ರೇಡರ್ಸ್ ಕಂಪೆನಿ ನಡೆಸುತ್ತಿರುವ ಅಯೂಬ್ ಅವರೂ ತಮ್ಮ ಕಟ್ಟಡ ಒಡೆಯುವ ಕಾಯಕದ ಬಗ್ಗೆ ಹೆಳಿಕೊಳ್ಳುತ್ತಾರೆ.

ಇದುವರೆಗೂ 200ಕ್ಕೂ ಹೆಚ್ಚು ಕಟ್ಟಡಗಳನ್ನು ಒಡೆಯಲಾಗಿದೆ. `ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಳೆ ಮನೆಗಳನ್ನು ಕೆಡವಿ ತಮಗಿಷ್ಟವಾದ ಕಟ್ಟಡಗಳನ್ನು ಲಾಭದ ಉದ್ದೇಶಗಳಿಂದ ಕಟ್ಟಿಸಿಕೊಳ್ಳುತ್ತಾರೆ~ ಎನ್ನುತ್ತಾರೆ ಅಯೂಬ್.

`ಒಂದು ಮಹಡಿಯ ಕಟ್ಟಡವಾದರೆ ಇಪ್ಪತ್ತು ದಿನಗಳಲ್ಲಿ ಒಡೆದು ಹಾಕುತ್ತೇವೆ. ಆ ಮನೆಯಲ್ಲಿನ ಬೆಲೆಬಾಳುವ ಕಬ್ಬಿಣ ಹಾಗೂ ಮರದ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇವೆ. ಅಂಥ ಕೆಲವು ಸಂದರ್ಭಗಳಲ್ಲಿ ನಾವೇ ಮಾಲೀಕರಿಗೆ ಕಟ್ಟಡವನ್ನು ಒಡೆದ ನಂತರ ಹಣ ಪಾವತಿಸಬೇಕಾಗುತ್ತದೆ~ ಎನ್ನುವ ಅಯೂಬ್, ಲೆಕ್ಕಾಚಾರದಲ್ಲಿ ಆಗೀಗ ಎಡವಿ ನಷ್ಟ ಆಗಿರುವ ಉದಾಹರಣೆಗಳನ್ನೂ ನೀಡುತ್ತಾರೆ. 

 `ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ ನಮ್ಮ ಕೆಲಸ. ಜೆಸಿಬಿ, ಹಿಟಾಚಿಯಂಥ ಬೃಹತ್ ಯಂತ್ರಗಳು ಬಂದಮೇಲೆ ಮನೆ ಒಡೆಯಲು ಈಗ ಬೆರಳೆಣಿಕೆಯಷ್ಟು ದಿನಗಳು ಸಾಕು. ಮನೆ ಒಡೆದಾಗ ಉಳಿಯುವ ಮಣ್ಣನ್ನು ಹೆಣ್ಣೂರು ಬಂಡೆ, ಬನಶಂಕರಿ ಸೇರಿದಂತೆ ನಗರದ ಹೊರ ವಲಯಗಳಲ್ಲಿ ಕಾನೂನು ಬದ್ಧವಾಗಿ ನಿಯೋಜಿಸಿದ ಸ್ಥಳಕ್ಕೆ ಸುರಿಯಲಾಗುತ್ತದೆ~ ಎನ್ನುತ್ತಾರೆ ಅವರು.

`ಮೊದಲೆಲ್ಲಾ ವಿಶಾಲವಾದ ಪ್ರಾಂಗಣ ಹೊಂದಿದ ಮನೆಗಳು ಇರುತ್ತಿದ್ದವು. ಆದರೆ ಇತ್ತೀಚಿನ ಮನೆಗಳಲ್ಲಿ ಸಣ್ಣ ಸಣ್ಣ ಕೊಠಡಿಗಳನ್ನು ಮಾಡಿರುತ್ತಾರೆ. ಅದರ ಉದ್ದೇಶ ಬಾಡಿಗೆಗೆ ನೀಡುವುದು. ಇತ್ತೀಚೆಗೆ ಈ ಉದ್ಯಮದಲ್ಲೂ ಸ್ಪರ್ಧೆ ಇದೆ.

ಗಲ್ಲಿ ಗಲ್ಲಿಗಳಲ್ಲಿ ಬಿಲ್ಡಿಂಗ್ ಡೆಮಾಲಿಷಿಂಗ್ ಗುತ್ತಿಗೆದಾರರಿದ್ದಾರೆ. ಇದರ ನಡುವೆಯೇ ಸವಾಲು ಎದುರಿಸಬೇಕು. ಹೆಚ್ಚಾಗಿ ತಮಿಳುನಾಡು ಹಾಗೂ ಗುಲ್ಬರ್ಗ ಭಾಗದ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ದಿನಕ್ಕೆ 150ರಿಂದ 200 ರೂಪಾಯಿ ಕೂಲಿ ನೀಡುತ್ತೇವೆ. ಈ ಎಲ್ಲಾ ಖರ್ಚು ಕಳೆದು ಉಳಿಯುವ ಹಣವೇ ನಮ್ಮದು ಎಂಬುದು ಅಯೂಬ್ ಅನುಭವದ ಮಾತು.

ಮನೆಗಳಷ್ಟೇ ಅಲ್ಲದೇ ನಗರದ ಹೊರ ವಲಯದಲ್ಲಿದ್ದ ಸಣ್ಣ ಕೈಗಾರಿಕೆಗಳು ಧರೆಗುರುಳಿ, ಆ ಜಾಗದಲ್ಲಿ ಅಪಾರ್ಟ್‌ಮೆಂಟ್‌ಗಳಾಗಿವೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈ ಬದಲಾವಣೆಗಳಾಗಿವೆ.

ಆದಾಯದ ನಿರೀಕ್ಷೆ ಹೊತ್ತು ಮನೆ ಉರುಳಿಸಲು ಬರುವ ಇಂಥ ಅನೇಕ ಗುತ್ತಿಗೆದಾರರು ಸ್ವಂತ ಮನೆಯನ್ನೇ ಕೆಡವಿದಾಗ ಆಗುವ ಭಾವನಾತ್ಮಕ ನೋವು ಇವರಿಗೂ ಆಗುತ್ತದಂತೆ.

ಆದರೆ ಕಟ್ಟಡ ಒಡೆದರಷ್ಟೇ ಹೊಟ್ಟೆ ಪಾಡು ಎಂಬುದು ಇವರ ಪರಿಸ್ಥಿತಿ. ಅಂದಹಾಗೆ `ವಿ ಡೆಮಾಲಿಷ್, ಯು ಕ್ರಿಯೇಟ್~ ಎಂಬ ಅಪೆಕ್ಸ್ ಕಂಪೆನಿಯ ಧ್ಯೇಯ ವಾಕ್ಯವಿರುವ ನಾಮಫಲಕ ಮಾತ್ರ ಕಟ್ಟಡ ಒಡೆಯುವ ಜಾಗದಲ್ಲಿ ರಾರಾಜಿಸುತ್ತಿರುತ್ತದೆ.
ಮಾಹಿತಿಗೆ: ಅಪೆಕ್ಸ್ ಡೆಮಾಲಿಷಿಂಗ್ ಕಂಪೆನಿ: 98440 53007, ಸಫಾ ಟ್ರೇಡರ್ಸ್ 98458 96220.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT