ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪನೆಗೆ ಒತ್ತು

Last Updated 19 ಜೂನ್ 2011, 19:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪಾಲಿಕೆ ಆಡಳಿತ ಪ್ರತಿ ವಾರ್ಡ್‌ನಲ್ಲೂ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ತೆರೆಯಲು ಮುಂದಾಗಿದೆ. ಈ ಕೇಂದ್ರಗಳ ನಿರ್ಮಾಣಕ್ಕೆ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸುವಂತೆ ಆಯುಕ್ತರು ಶುಕ್ರವಾರದವರೆಗೆ ಗಡುವು ನೀಡಿದ್ದಾರೆ.

ನಗರದಲ್ಲಿ ನಿತ್ಯ ಸುಮಾರು 4,000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ ಮೂಲದಲ್ಲೇ ಒಣ, ಹಸಿ, ಪ್ಲಾಸ್ಟಿಕ್ ತ್ಯಾಜ್ಯಗಳ ವಿಂಗಡಣೆಯಾಗುತ್ತಿಲ್ಲ. ಇದರಿಂದ ಎಲ್ಲ ಬಗೆಯ ತ್ಯಾಜ್ಯವನ್ನು ಒಟ್ಟಿಗೆ ಸಂಗ್ರಹಿಸಲಾಗುತ್ತಿದೆ. ಈ ತ್ಯಾಜ್ಯವನ್ನು ಹತ್ತಾರು ಕಿ.ಮೀ. ದೂರದ ಪ್ರದೇಶಗಳಿಗೆ ಸಾಗಿಸಿ ಭೂ ಭರ್ತಿ ಮಾಡಲಾಗುತ್ತಿದೆ.

ಈ ಕಾರ್ಯಕ್ಕೆ ಪಾಲಿಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಅಲ್ಲದೇ ಇದು ಅವ್ಯವಹಾರಕ್ಕೂ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಆಡಳಿತ ಮೂಲದಲ್ಲೇ ತ್ಯಾಜ್ಯ ವಿಂಗಡಣೆಗೆ ಒತ್ತು ನೀಡಲು ಮುಂದಾಗಿದೆ.

ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಎಲ್ಲ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಶುಕ್ರವಾರದೊಳಗೆ ಗುರುತಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಒಂದೊಮ್ಮೆ ಪಾಲಿಕೆಯ ಸ್ವತ್ತು ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿಯನ್ನಾದರೂ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಅಲ್ಲದೇ ಗುರುತಿಸಲಾದ ಪ್ರದೇಶದಲ್ಲಿ ಎರಡು ತಿಂಗಳೊಳಗೆ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ನಿರ್ಮಿಸುವಂತೆಯೂ ಸೂಚನೆ ನೀಡಿದ್ದಾರೆ.

ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳು ಆಯ್ಕೆ ಮಾಡಿದ ಸ್ಥಳದ ವಿವರವನ್ನು ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಸಿದ್ಧಪಡಿಸಲಾಗಿರುವ ಹೊಸ ಟೆಂಡರ್‌ನಲ್ಲಿ  ನಮೂದಿಸಲು ನಿರ್ಧರಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿ ಜಾರಿಗೆ ಬರಲಿದೆ ಎಂಬ ವಿಶ್ವಾಸ ಪಾಲಿಕೆಯದು.

`ನಗರದಲ್ಲಿ ದಿನವೊಂದಕ್ಕೆ 4,000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಶೇ 35ರಷ್ಟು ಅಂದರೆ ಸುಮಾರು 1,200 ಮೆಟ್ರಿಕ್ ಟನ್‌ನಷ್ಟು ಒಣ ತ್ಯಾಜ್ಯ ಸೇರಿದೆ. ಆದರೆ ಇದರ ವಿಂಗಡಣೆ ಸಮರ್ಪಕವಾಗಿಲ್ಲದ ಕಾರಣ ಇತರೆ ತ್ಯಾಜ್ಯದೊಂದಿಗೆ ಭೂಭರ್ತಿಯಾಗುತ್ತಿದೆ~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ನಿತ್ಯ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಒಣ ತ್ಯಾಜ್ಯ ಭೂಮಿ ಸೇರುತ್ತಿದೆ. ಆದ್ದರಿಂದ ಮೂಲದಲ್ಲೇ ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಎಲ್ಲ ವಾರ್ಡ್‌ಗಳಲ್ಲೂ ಒಣ ತ್ಯಾಜ್ಯ ಸಂಗ್ರಹ ಕೇಂದ್ರ ತೆರೆಯಲಾಗುವುದು~ ಎಂದರು.

`ಇದರಿಂದ ಒಣ ತ್ಯಾಜ್ಯ ಸಾಗಣೆ ವೆಚ್ಚ ಉಳಿತಾಯವಾಗಲಿದೆ. ಎಲ್ಲ ವಾರ್ಡ್‌ಗಳಲ್ಲೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಪಾಲಿಕೆಗೆ ವಾರ್ಷಿಕವಾಗಿ ಸುಮಾರು 80 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಹಾಗಾಗಿ ಸಾರ್ವಜನಿಕರು ಸಹ ಇದರಲ್ಲಿ ಆಸಕ್ತಿ ತೋರಬೇಕು~ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT