ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಹುಲ್ಲಿನಿಂದ ಬದುಕು ಹಸಿರು

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಮಹಾನಗರದ ಮಹಿಮೆಯೇ ಅಂತಹದ್ದು. ತನ್ನ ತೆಕ್ಕೆಗೆ ಬಿದ್ದ ಎಲ್ಲರನ್ನೂ ಪೊರೆಯುವ ನಗರಿ ಇದು. ವ್ಯಾಪಾರ, ಕಚೇರಿ ಕೆಲಸ, ಕಾರ್ಖಾನೆ, ಕಟ್ಟಡ ನಿರ್ಮಾಣ, ಚಿಂದಿ ಆಯುವುದು, ಭಿಕ್ಷಾಟನೆ ಹೀಗೆ ನಾನಾ ಉದ್ದೇಶದಿಂದ ನಗರದಲ್ಲಿ ಆಶ್ರಯ ಪಡೆದಿರುವ ಮಂದಿ ಅಸಂಖ್ಯ. ನೆರೆ ರಾಜ್ಯದಿಂದ ಅನೇಕರು ಭಿಕ್ಷಾಟನೆಗೆಂದೇ ಬೆಂಗಳೂರಿಗೆ ಬರುವುದೂ ಇದೆ.

ಕೆಲವರಿಗೆ ಬದುಕು ಕಷ್ಟವಾದರೂ ಒಂದು ತುತ್ತಿನ ಅನ್ನಕ್ಕಾಗಿ ತಮ್ಮದೇ ದಾರಿಗಳನ್ನು ಕಂಡುಕೊಳ್ಳುವವರಿದ್ದಾರೆ. ಅವರ ಪಾಲಿಗೆ ಅಂದಿನ ಅನ್ನ ಪಡೆಯುವುದಷ್ಟೇ ಕನಸು. ಅಂಗಡಿ ಮುಂಗಟ್ಟು, ಬಸ್‌ನಿಲ್ದಾಣ, ಪಾರ್ಕುಗಳೇ ಇವರ ಪಾಲಿನ ಮನೆಗಳು. ನಗರದ ಪಾರ್ಕುಗಳು ಮತ್ತು ಬಸ್ ನಿಲ್ದಾಣಗಳಲ್ಲೇ ರಾತ್ರಿ ಕಳೆಯುವ ನೂರಾರು ಜನ ಇದ್ದಾರೆ. ಚಳಿ, ಮಳೆ ಎನ್ನದೆ ಕೈ-ಕಾಲುಗಳನ್ನು ಎದೆಯವರೆಗೂ ಮುರುಟಿ ರಾತ್ರಿ ಕಳೆಯುವ ಮಂದಿ ಬೆಳಗಾದರೆ ಯಾವುದಾದರೊಂದು ಕೆಲಸ ಮಾಡುತ್ತಿರುತ್ತಾರೆ.

ಗ್ರಾಮೀಣ ಪ್ರದೇಶದಿಂದ ಉನ್ನತ ಶಿಕ್ಷಣ ಪಡೆದ ಯುವಕರು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಕ್ಕಾಗಿ ಬಂದರೆ, ಹೆಚ್ಚು ಓದದ ಹುಡುಗರೂ ನಾನಾ ಕೆಲಸಗಳನ್ನು ಹುಡುಕಿಕೊಂಡು ನಗರಕ್ಕೇ ಬರುತ್ತಿದ್ದಾರೆ. ಒಂದಲ್ಲ ಒಂದು ಉದ್ಯೋಗ ಮಾಡಿಕೊಂಡು ಬದುಕುತ್ತಿದ್ದಾರೆ. ಒಂದು ಕಾಲದಲ್ಲಿ ಮುಂಬೈ `ಉದ್ಯೋಗಗಳ ಸ್ವರ್ಗ' ಎಂದು ಕರೆಸಿಕೊಂಡಿತ್ತು. ಇವತ್ತು ಬೆಂಗಳೂರು ದುಡಿಯುವವರಿಗೆ ಸ್ವರ್ಗ ಎನಿಸಿದೆ. ದೇಶದ ಮೂಲೆಮೂಲೆಯ ಜನರು ಉದ್ಯೋಗಕ್ಕಾಗಿ ಬಂದು ಇಲ್ಲೇ ಬೀಡುಬಿಡುತ್ತಿದ್ದಾರೆ.

ಆದರೆ ಇಲ್ಲೇ ಹುಟ್ಟಿ ಬೆಳೆದವರು ಇನ್ನೆಲ್ಲಿಗೋ ಕೆಲಸ ಹುಡುಕಿ ಹೋಗುವುದು ಕಡಿಮೆ. ಬೆಂಗಳೂರು ನಗರ ಮಹಾನಗರವಾಗಿ ರೂಪಾಂತರಗೊಂಡ ಬಗೆ ಕಣ್ಣಾರೆ ಕಂಡರೂ ಅದರ ಬಗ್ಗೆ ಯಾವುದೇ ಅಚ್ಚರಿ ಅವರಲ್ಲಿಲ್ಲ. ನಗರದ ಅಗತ್ಯಗಳು ನೂರಾರು. ಅವನ್ನು ಪೂರೈಸುವ ದಾರಿಗಳೂ ಹಲವು. ಒಂದು ಹೊತ್ತಿನ ಅನ್ನಕ್ಕಾಗಿ ಚಿಕ್ಕಪುಟ್ಟ ಕೆಲಸ ಮಾಡುವ ಜನರು ನಗರದ ಅನೇಕ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಆದರೆ ಇವರು ಸುಲಭವಾಗಿ ಯಾರ ಕಣ್ಣಿಗೂ ಬೀಳುವುದಿಲ್ಲ. 

ಹಸುಗಳಿಗೆ ಆಹಾರವಾಗುವ, ತಿಪ್ಪೆಗೆ ಸೇರುವ ಅಥವಾ ಸುಟ್ಟುಹಾಕುವ ಒಣ ಹುಲ್ಲೂ ಅನೇಕರ ಬದುಕಿಗೆ ಆಧಾರವಾಗುತ್ತದೆ. ಕೆ.ಆರ್. ಮಾರುಕಟ್ಟೆಗೆ ಲಾರಿಗಳಲ್ಲಿ ಬರುವ ಹಣ್ಣು, ಗಾಜು, ಟಾಯ್ಲೆಟ್ ಕಮೋಡ್‌ಗಳ ಪ್ಯಾಕಿಂಗ್‌ಗೆ ಬಳಸಿ ಎಸೆದ ಒಣಹುಲ್ಲನ್ನು ತಂದು ಹಗ್ಗ ತಯಾರಿಸಿ ಬದುಕುತ್ತಿರುವ ಕೆಲ ಕುಟುಂಬಗಳು ಇವೆ. ಅಂತಹ ಕುಟುಂಬಗಳನ್ನು ನೋಡಬೇಕಾದರೆ ಕೆ.ಆರ್. ಮಾರುಕಟ್ಟೆಗೆ ಸೇರುವ ಎನ್.ಆರ್. ರಸ್ತೆಯಲ್ಲಿರುವ `ಸಿಲ್ವರ್ ಜುಬಿಲಿ ಪಾರ್ಕ್' ಬಳಿ ಹೋಗಬೇಕು. ಅಲ್ಲಿ ನಾಲ್ಕು ಕುಟುಂಬಗಳು ಒಣ ಹುಲ್ಲನ್ನು ರಾಶಿ ಹಾಕಿಕೊಂಡು ಹಗ್ಗ ನೇಯುವುದರಲ್ಲಿ ನಿರತವಾಗಿವೆ. ಅದೇ ಪಾರ್ಕಿನೊಳಗೆ ಈ ಕುಟುಂಬಗಳು ಮಳೆಗಾಲ, ಚಳಿಗಾಲವೆನ್ನದೆ ವಾಸ ಮಾಡುತ್ತಿವೆ.

ಇವರಲ್ಲಿ ಫಾತಿಮಾ, ವಸಂತಿ ಬದುಕು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಮದುವೆಯಾಗಿ ಮಕ್ಕಳಿದ್ದರೂ ಮನೆಗಳಲ್ಲಿ ವಾಸಮಾಡುವ ಮನಸು ಇವರಿಗಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಗಂಡನನ್ನು ಕಳೆದುಕೊಂಡವರು. ಒಮ್ಮೆಯೂ ತಮ್ಮ ವಾಸ್ತವ್ಯ ಬದಲಾಯಿಸಿಲ್ಲ. ಐವತ್ತರ ಆಸುಪಾಸಿನಲ್ಲಿರುವ ಈ ಮಹಿಳೆಯರು ತಾವು ಸಹೋದರಿಯರು ಎಂದು ಹೇಳಿಕೊಳ್ಳುತ್ತಾರೆ. ನಿಮ್ಮ ಹೆಸರುಗಳೇಕೆ ಭಿನ್ನ ಧರ್ಮಗಳ ಸೂಚಿಸುತ್ತವೆ ಎಂದರೆ, `ಹೆತ್ತವರು ಹಾಗೆ ಇಟ್ಟಿದ್ದಾರೆ' ಎನ್ನುತ್ತಾರಷ್ಟೆ.

ಸುಮಾರು 30 ವರ್ಷಗಳಿಂದ ಸಿಲ್ವರ್ ಜುಬಿಲಿ ಪಾರ್ಕ್ ಇವರ ಮನೆ. ಉದ್ಯಾನದೊಳಗಿರುವ ಪುಟ್ಟ ಮಂಟಪದಲ್ಲಿ ರಾತ್ರಿ ಕಳೆಯುತ್ತಾರೆ. ಅಲ್ಲೇ ಅಡುಗೆ ಮಾಡುತ್ತಾರೆ. ಹಗಲೆಲ್ಲ ಹಗ್ಗ ನೇಯುತ್ತಾ ಕಾಲ ಕಳೆಯುವ ಇವರು ಸದಾ ವ್ಯಾಪಾರದ ನಿರೀಕ್ಷೆಯಲ್ಲಿರುತ್ತಾರೆ. ದಿನಕ್ಕೆ ನೂರು ರೂಪಾಯಿ ಸಂಪಾದನೆಯಾದರೆ ಅದೇ ಇವರಿಗೆ ಖುಷಿ. ಬೆಳಿಗ್ಗೆ ಎದ್ದು ಪಕ್ಕದಲ್ಲೇ ಇರುವ ಮಾರುಕಟ್ಟೆಗೆ ಹೋಗಿ ಹುಲ್ಲು ಆರಿಸಿ ತರುತ್ತಾರೆ. ಇಡೀ ದಿನ ಹಗ್ಗ ಹೆಣೆಯುವ ಸಹೋದರಿಯರು ದಿನಕ್ಕೆ ಸರಾಸರಿ 100ರಿಂದ 150 ರೂಪಾಯಿಯಷ್ಟು ಗಳಿಸುತ್ತಾರೆ.

12 ಅಡಿಯಷ್ಟು ಎತ್ತರದ ಹಗ್ಗದ ಬಂಡಲ್‌ಗಳನ್ನು ತಯಾರಿಸಿ, ಪ್ರತಿ ಬಂಡಲ್‌ಗೆ 30 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಈಗ ಆಷಾಢ ಮಾಸ. ಹಾಗಾಗಿ ವ್ಯಾಪಾರ ಕ್ಷೀಣಿಸಿದೆ ಅಂತಾರೆ ಫಾತಿಮಾ. ಆಲ್ಮೆರಾ, ಗಾಜಿನ ಪದಾರ್ಥಗಳು ಮುಂತಾದ ನಾಜೂಕು ವಸ್ತುಗಳ ಸಾಗಾಣಿಕೆಗೆ ಈ ಹಗ್ಗವನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಕಟ್ಟಡಗಳನ್ನು ಕಟ್ಟುವಾಗ ನಿರ್ಮಿಸುವ ಅಟ್ಟಣಿಗೆಗಳ ಕಂಬಗಳನ್ನು ಕಟ್ಟಲೂ ಈ ಹಗ್ಗ ಬೇಕು.

ಕಡಿಮೆ ಬೆಲೆಗೆ ಸುಲಭದಲ್ಲಿ ಸಿಗುವ ಹುಲ್ಲಿನ ಹಗ್ಗಕ್ಕೆ ಬೇಡಿಕೆ ಇದೆ ಎನ್ನುವುದಕ್ಕಿಂತ ಬೇಡಿಕೆಯನ್ನು ಇವರು ಸೃಷ್ಟಿಸಿಕೊಂಡಿದ್ದಾರೆ ಎಂದೇ ಹೇಳಬೇಕು. ಇವರು ಇರುವ ಜಾಗ ಕೂಡ ವ್ಯಾಪಾರಿ ಕೇಂದ್ರವೇ ಆಗಿದೆ. ಆಲ್ಮೆರಾ, ಗಾಜು ಮುಂತಾದ ನಾಜೂಕು ವಸ್ತುಗಳು ಸಿಗುವ ಮಾರುಕಟ್ಟೆ ಬೀದಿ ಹತ್ತಿರದಲ್ಲೇ ಇದೆ. ಸರಕು ಸಾಗಿಸುವ ಲಾರಿಗಳು ನಿಲ್ಲುವ ಜಾಗವೂ ಪಾರ್ಕ್ ಬಳಿಯೇ ಇದೆ.

ಸ್ವಾವಲಂಬಿ ಬದುಕು

ಮೂವತ್ತು ವರ್ಷಗಳಿಂದ ಇದೇ ಕಸುಬು ನಂಬಿಕೊಂಡಿದ್ದೇವೆ. ಗಂಡ ಮತ್ತು ಪುಟ್ಟ ಮಕ್ಕಳ ಜೊತೆ ಇಲ್ಲೇ ಸಂಸಾರ ನಡೆಸ್ದ್ದಿದೇವೆ. ಈಗ ನಮ್ಮ ಗಂಡಂದಿರು ಇಲ್ಲ. ಇಬ್ಬರಿಗೂ ಒಬ್ಬೊಬ್ಬರು ಗಂಡು ಮಕ್ಕಳಿದ್ದಾರೆ. ಅವರೆಲ್ಲ ಮದುವೆಯಾಗಿ ಮನೆ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಮತದಾರರ ಚೀಟಿ ಇದೆ. ಪಡಿತರ ಚೀಟಿಯೂ ಇದೆ. ಆದರೆ ಪಡಿತರವನ್ನು ಮಕ್ಕಳು ಪಡೆದುಕೊಳ್ಳುತ್ತಾರೆ.

ಅಪರೂಪಕ್ಕೊಮ್ಮೆ ಮಕ್ಕಳ ಮನೆಗೆ ಹೋಗಿಬರುತ್ತೇವೆ. ಅಲ್ಲಿಂದ ಪ್ರತಿದಿನ ಇಲ್ಲಿಗೆ ಬಂದು ಹೋಗುವುದು ಕಷ್ಟ. ಅಲ್ಲದೆ ಸಿದ್ಧಪಡಿಸಿದ ಹಗ್ಗವನ್ನು ಇಲ್ಲೇ ಬಿಟ್ಟು ಹೋದರೆ ಕಳ್ಳತನವಾಗಿರುತ್ತದೆ. ಗೂಡ್ಸ್ ಟೆಂಪೋಗಳು ಇಲ್ಲೇ ನಿಲ್ಲುತ್ತವೆ. ಅವುಗಳಲ್ಲಿ ತುಂಬಿಕೊಂಡು ಹೋಗಿಬಿಡುತ್ತಾರೆ. ಹಾಗಾಗಿ ರಾತ್ರಿ ಹೊತ್ತು ಪಾರ್ಕಿನೊಳಗೆ ಜೋಡಿಸಿಡುತ್ತೇವೆ. ನಮಗೂ ಬೇರೆ ಕೆಲಸ ಬಾರದು.

ಇದರಲ್ಲಿ ಸಂಪಾದನೆಯಾಗುವ ಹಣ ನಮ್ಮ ನಿತ್ಯದ ಹಸಿವನ್ನು ನೀಗಿಸುತ್ತದೆ. ಇಲ್ಲಿ ವಾಸ ಮಾಡುವುದನ್ನು ಯಾರೂ ನಿರ್ಬಂಧಿಸಿಲ್ಲ. ಪಾರ್ಕ್‌ನಲ್ಲಿ ಶುಚಿತ್ವ ಕಾಪಾಡಿದ್ದೇವೆ. ಬೆಳಗಿನ ವಿಹಾರಕ್ಕೆ ಜನ ಬರುವಂತಹ ಪಾರ್ಕ್ ಇದಲ್ಲ. ಹಾಗಾಗಿ ಯಾರಿಗೂ ತೊಂದರೆ ಇಲ್ಲ. ವೃದ್ಧಾಪ್ಯದಲ್ಲಿ ಮಕ್ಕಳ ಬಳಿ ಹೋಗಬೇಕೆಂದಿದ್ದೇವೆ.
-ಫಾತಿಮಾ ಮತ್ತು ವಸಂತಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT