ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿ ನಿಂತ ಶತಮಾನದ ಮರ

ಅಂತರ್ಜಲ ಕೊರತೆಯಿಂದ ಒಣಗುತ್ತಿರುವ ಮರಗಳು
Last Updated 13 ಆಗಸ್ಟ್ 2015, 9:02 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಹಿರಿಯರು ರಸ್ತೆ ಬದಿಯಲ್ಲಿ ಬೆಳೆಸಿದ್ದ ಶತಮಾನದಷ್ಟು ಹಳೆಯದಾದ ಮರಗಳು ಅಂತರ್ಜಲ ಕೊರತೆಯಿಂದ ಒಣಗಿಹೋಗುತ್ತಿವೆ. ಇದರಿಂದ ತಾಲ್ಲೂಕಿನಲ್ಲಿ ಹಳೆ ಮರಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

  ನಮ್ಮ ಪೂರ್ವಿಕರು ರಸ್ತೆ ಬದಿಯಲ್ಲಿ ಮರ ಬೆಳೆಸುವುದು ಪುಣ್ಯದ ಕಾರ್ಯವೆಂದು ತಿಳಿದಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಮಾವು, ಬೇವು, ಗೋಣಿ. ಆಲ, ಅರಳಿ, ಹುಣಸೆ, ಹಲಸು , ನೇರಳೆ ಮುಂತಾದ ಮುಂತಾದ ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಆದರೆ ಕಾಲಾಂತರದಲ್ಲಿ ಭಾರಿ ಗಾತ್ರದ ಹಳೆಯ ಮರಗಳು ಮರಗಳ್ಳರ ಪಾಲಾದವು.

ರಸ್ತೆ ಪಕ್ಕದಲ್ಲಿ ಹಸಿರುಟ್ಟು ನಳನಳಿಸುತ್ತಿದ್ದ ಮರಗಳು ತೊಲೆಗಳಾಗಿ, ಹಲಗೆಗಳಾಗಿ, ಮರದ ಸಾಮಾನಾಗಿ ಮನೆಗಳಲ್ಲಿ ನೆಲೆಸಿದವು. ಇಷ್ಟರ ನಡುವೆಯೂ ಉಳಿದ ಮರಗಳು ದಾರಿಹೋಕರಿಗೆ ನೆರಳಾಗಿ, ಪ್ರಾಣಿ  ಪಕ್ಷಿ ಗಳಿಗೆ ಆಸರೆಯಾಗಿ ನಿಂತಿದ್ದವು. ಹಿರಿ ಯರ ಸೇವಾ ಕಾರ್ಯಕ್ಕೆ     ಕುರುಹಾಗಿದ್ದವು.

ಅಂತರ್ಜಲದ ಪ್ರಮಾಣ ತೀರಾ ಕುಸಿಯುವ ವರೆಗೆ ಹಾಗೂ ಹೀಗೂ ಜೀವ ಹಿಡಿದುಕೊಂಡಿದ್ದ ರಸ್ತೆ ಬದಿ ಹಾಗೂ ಗುಂಡು ತೋಪಿನ ಮರಗಳು ಈಗ ಒಂದೊಂದಾಗಿ ಒಣಗಿ ತಮ್ಮ  ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಹಿಂದೊಮ್ಮೆ ಬರಗಾಲ ಬಂದಿದ್ದಾಗ ಈ ಗೋಣಿ ಮರ ಹಳ್ಳಿಯ ದನಗಳಿಗೆ ಮೇವು ನೀಡಿತ್ತು. ಗ್ರಾಮಸ್ಥರು ಮರ ಹತ್ತಿ ಸೊಪ್ಪು ಕೊಯ್ದು ಜಾನುವಾರುಗಳಿಗೆ ಹಾಕುತ್ತಿದ್ದರು. ಬರ ಬಂದರೆ ರಸ್ತೆ ಬದಿಯ ಆಲ, ಗೋಣಿ, ಬೇವು ಮುಂತಾದ ಮರಗಳು ದನಕರುಗಳಿಗೆ ಆಸರೆಯಾಗುತ್ತಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮರಗಳು ಒಣಗಿ ನೆಲಕ್ಕೆ ಬೀಳುತ್ತಿವೆ ಎಂದು ಚಲ್ದಿಗಾನಹಳ್ಳಿ ಗ್ರಾಮದ ಹಿರಿಯ ಕೃಷಿಕ ವೆಂಕಟರಾಮೇಗೌಡ ‘ಪ್ರಜಾವಾಣಿ‌ಗೆ ತಿಳಿಸಿದರು.

ಯಲವಹಳ್ಳಿ ತಿರುವಿನಲ್ಲಿರುವ ಮುತ್ತುಗದ ಮರ ಕೆಂಡದಂಥ ಹೂಗಳನ್ನು ಮುಡಿಗೇರಿಸಿಕೊಳ್ಳುವುದನ್ನು ಪ್ರತಿ ವರ್ಷ ಕಂಡು ಸಂತೋಷಪಡುತ್ತಿದೆ. ಇನ್ನು ಮುಂದೆ ಆ ಭಾಗ್ಯ ಸಿಗುವುದಿಲ್ಲ.  ಮರ ಒಣಗಿ ನಿಂತಿದೆ. ಯಾವಾಗ ನೆಲಕ್ಕೆ ಬೀಳುತ್ತದೆಯೋ ಗೊತ್ತಿಲ್ಲ ಎಂದು ಯಲವಹಳ್ಳಿ ಗ್ರಾಮದ ಮುನಿವೆಂಕಟಪ್ಪ ಹೇಳಿದರು. ಅಲ್ಲಲ್ಲಿ ರಸ್ತೆಗಳಲ್ಲಿ ಭಾರಿ ಗಾತ್ರದ ವಿವಿಧ ಜಾತಿಯ ಮರಗಳು ಒಣಗಿ ನಿಂತಿವೆ.

ಒಣಗಿದ ಕೊಂಬೆಗಳಿಗೆ ಕಾಂಡ ಕೊರಕ ಹುಳು ಬಾಧೆ ತಟ್ಟಿದೆ. ರಸ್ತೆಯ ಮೇಲೆ ಹರಡಿರುವ ಈ ಒಣಮರಗಳು ಪ್ರಯಾಣಿಕರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.

ಮರಗಳಿಂದ ಒಣ ಕೊಂಬೆಗಳು ಮುರಿದು  ಬಿದ್ದು ವಾಹನ ಸವಾರರು ಗಾಯಗೊಂಡಿರುವ ಉದಾಹರಣೆಗಳೂ ಇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂಥ ಒಣ ಮರಗಳನ್ನು ಗುರುತಿಸಿ ಕತ್ತರಿಸಿಹಾಕುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಒಳ್ಳೆಯದು ಎಂಬುದು ಮಣಿಗಾನಹಳ್ಳಿ ಗ್ರಾಮದ ಎನ್‌.ಶ್ರೀರಾಮರೆಡ್ಡಿ ಅವರ ಅಭಿಪ್ರಾಯ. 

ರಸ್ತೆ ಬದಿಯ ಮರಗಳು ಮಾತ್ರವಲ್ಲದೆ, ಕೃಷಿಕರು ಬೆಳೆಸಿರುವ ಹಲಸು, ಬೇವು ಮುಂತಾದ ಮರಗಳೂ ಸಹ ಒಣಗುತ್ತಿವೆ. ಇದರಿಂದ ಮುಖ್ಯವಾಗಿ ಬರಗಾಲದಲ್ಲಿ  ಜಾನುವಾರು ಮೇವಿಗೆ ಆಸರೆಯಾಗಿದ್ದ ಮರಗಳ ಸಂಖ್ಯೆ ಕುಸಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT