ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿರ್ವಹಣೆಗೆ ಸರಳ ಸೂತ್ರಗಳು...

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಾಲುಗಲ್ಲದ ಮಗು. ಅಂಗಳದಲ್ಲಿ ಆಡುತ್ತಿದೆ. ಅದಕ್ಕೆ ಏನು ಮಾಡಲೂ ಅಂಕೆಯಿಲ್ಲ. ಇಷ್ಟಕ್ಕೇ ಮಲಗು, ಇಷ್ಟಕ್ಕೇ ಏಳು, ಕೆಲಸಕ್ಕೆ ಹೋಗು, ಅದು ತಾ, ಇದು ತಾ.... ಊ.. ಹು... ಅದಾವ ಒತ್ತಡವಿಲ್ಲದೆ ತುಂಬು ನಗೆ ತುಂಬಿಕೊಂಡಿದೆ.

ಅತ್ತ ಕಣ್ಣು ಹಾಯಿಸಿದ ದಾರಿ ಹೋಕನಿಗೆ ಮಗುವಿನ ಮೇಲೆ ಅಸೂಯೆ ಹುಟ್ಟಿತು. ತಕ್ಷಣವೇ ಮಗುವಿಗೆ ಕಿವಿ ಮಾತು ಹೇಳಬೇಕೆಂದೆನಿಸಿ ತುಸು ಬಾಗಿ ಗುಯ್‌ಗುಟ್ಟಿದ. `ನೀನು ಇಷ್ಟೇ ಇರು ಮಗು, ಇನ್ನು ಬೆಳೆಯಬೇಡ, ಬೆಳೆದಷ್ಟು ನಿನ್ನ ನೆಮ್ಮದಿ ಹಾಳಾಗುತ್ತದೆ~.

ಮಗುವಿಗೆ ಅದೇನು ಅರ್ಥವಾಯಿತೋ ತಿಳಿಯದು. ನಸುನಕ್ಕಿತು.
ಆ ವ್ಯಕ್ತಿ ದೊಡ್ಡ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆ ಹೊಂದಿರುವಾತ. ಕೈತುಂಬಾ ಸಂಭಾವನೆ ಇದ್ದರೂ ಮನಸ್ಸು ತುಂಬ ನೆಮ್ಮದಿ ಕಾಣದ ಸ್ಥಿತಿ. `ದೊಡ್ಡವರಾದರೆ ಒತ್ತಡದಲ್ಲೇ ಬದುಕಬೇಕಾಗು ತ್ತದೆ~ ಎನ್ನುವ ಅಂಬೋಣ ಆ ವ್ಯಕ್ತಿಯದು.  

ಸಾಮಾನ್ಯವಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಒತ್ತಡದ ಮನಸ್ಥಿತಿಯಲ್ಲೇ ಕೆಲಸ ಮಾಡುವವರು ನಮ್ಮಲ್ಲಿ ಸಿಂಹಪಾಲು. `ಚೆನ್ನಾಗಿ ಓದು, ಕೆಲಸಕ್ಕೆ ಸೇರು, ಹಣ ಸಂಪಾದಿಸು~ ಇದಿಷ್ಟೇ ಇಂದಿನ ಮೂಲಮಂತ್ರ. ಇದಕ್ಕೆ ಜೋತು ಬಿದ್ದು ಒತ್ತಡವೆಂಬ ಮಹಾಪಾಶಕ್ಕೆ ಬಲಿಯಾಗುತ್ತಿರುವವರು ಅನೇಕರು.  

ಈ ಅಂಶಕ್ಕೆ ಪುಷ್ಟಿ ನೀಡುತ್ತಿದೆ `ರೆಗಸ್~ ನೂತನ ಸಂಶೋಧನೆ. ಈ ಸಮೀಕ್ಷೆ ಪ್ರಕಾರ ಭಾರತೀಯರು ಕೆಲಸದ ಸ್ಥಳದಲ್ಲಿ ಹೆಚ್ಚು `ಒತ್ತಡ~ಕ್ಕೆ ಸಿಲುಕುತ್ತಾರಂತೆ. ಈ ಅಧ್ಯಯನ ಒತ್ತಡಕ್ಕೆ ಕಾರಣವಾಗುವ ಎರಡು ಪ್ರಮುಖ ಅಂಶಗಳನ್ನು ಗುರುತಿಸಿದೆ. ಶೇ 51ರಷ್ಟು ಜನ `ಕೆಲಸ~ದ ಕಾರಣಕ್ಕೆ, ಶೇ 50ರಷ್ಟು ಜನ `ಹಣಕಾಸಿನ~ ಕಾರಣಕ್ಕೆ ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದನ್ನು ಸಂಶೋಧನೆ ಕಂಡುಹಿಡಿದಿದೆ.

ರೆಗಸ್ ತನ್ನ ಅಧ್ಯಯನಕ್ಕೆ ವಿಶ್ವದಾದ್ಯಂತ 16 ಸಾವಿರ ವೃತ್ತಿಪರರನ್ನು ಒಳಪಡಿಸಿಕೊಂಡಿತ್ತು. ಅದರಲ್ಲಿ ಭಾರತೀಯರೇ  ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒತ್ತಡದ ಕಾರಣದಿಂದಾಗಿಯೇ ಅರ್ಧದಷ್ಟು ಜನ ತಮ್ಮ ಕೆಲಸವನ್ನು ತೊರೆಯುತ್ತಿದ್ದಾರೆ ಎಂಬ ಅಂಶವನ್ನು ಹೊರಹಾಕಿದೆ. 

ಹೆಚ್ಚು ಒತ್ತಡಕ್ಕೆ ಒಳಗಾಗುವುದು ವೈಯಕ್ತಿಕ ಹಣಕಾಸು ಹಾಗೂ ಕೆಲಸದ ಸ್ಥಳದಲ್ಲಿನ ಅಭದ್ರತೆಯ ಕಾರಣಕ್ಕೆ. ಯಾವುದೇ ರೀತಿಯ ಕ್ರಿಯಾಶೀಲತೆ ಇಲ್ಲದೇ ಯಂತ್ರದಂತೆ ಕೆಲಸ ಮಾಡುವ ವ್ಯಕ್ತಿ ತನ್ನ ಸಹಜ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಇಂತಹ ವ್ಯಕ್ತಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾನೆ. ಶೇ 58ರಷ್ಟು ಜನರ ಆರೋಗ್ಯದ ಮೇಲೆ ಒತ್ತಡದ ಕೆಲಸ ನೇರವಾಗಿ ಪ್ರಭಾವ ಬೀರುತ್ತದೆ.

ಸಮೀಕ್ಷೆಯಿಂದ ತಿಳಿದುಬಂದದ್ದು

* ಒತ್ತಡಕ್ಕೆ  ಕಾರಣ `ಕೆಲಸ~ (ಶೇ 51), `ಹಣಕಾಸು~ (ಶೇ 50) `ಗ್ರಾಹಕರು~ (ಶೇ 41). 

* ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣವಿದ್ದು, ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ಸಾಗುವ ಕೆಲಸದಿಂದ ಒತ್ತಡ ಕಡಿಮೆಯಾಗುತ್ತದೆ. 

* ಸರಾಗವಾದ ಕೆಲಸ ಕುಟುಂಬ ಸ್ನೇಹಿಯೂ ಆಗಿರುತ್ತದೆ ಎಂದು ಶೇ 56ರಷ್ಟು ಜನ ಅಭಿಪ್ರಾಯ ಪಡುತ್ತಾರೆ. 

* ದೊಡ್ಡ ಪ್ರಮಾಣದ ವ್ಯಾಪಾರಿಗಳಿಗಿಂತ     (ಶೇ 34ರಷ್ಟು), ಸಣ್ಣ ವ್ಯಾಪಾರಿಗಳು ಗ್ರಾಹಕರಿಂದ (ಶೇ 45ರಷ್ಟು) ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ವ್ಯವಹಾರ ಕ್ಷೇತ್ರಕ್ಕಿಂತ ಕಡಿಮೆ ಒತ್ತಡಕ್ಕೆ ಒಳಗಾಗುವವರು ಮ್ಯಾನೇಜ್‌ಮೆಂಟ್ ಕ್ಷೇತ್ರದವರು. 

*  ಸರಾಗವಾದ ಕೆಲಸವಿದ್ದರೆ ಉತ್ಪನ್ನದ ಗುಣಮಟ್ಟವೂ ಹೆಚ್ಚುತ್ತದೆ. ಸಿಬ್ಬಂದಿಯ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ ಕೆಲಸಗಾರರಿಂದ ದಕ್ಷತೆಯ ಸೇವೆ ನೀರೀಕ್ಷಿಸಲು ಸಾಧ್ಯ.

ರೆಗಸ್‌ನ ದಕ್ಷಿಣ ಏಷ್ಯಾದ ಉಪಾಧ್ಯಕ್ಷ ಮಧುಸೂಧನ್ ಥಾಕೂರ್ `ಒತ್ತಡದಿಂದ ಕೆಲಸ ಮಾಡುವ ವ್ಯಕ್ತಿ ಅಸಂತುಷ್ಟಿ ಹಾಗೂ ಅನಾರೋಗ್ಯದಿಂದಿರುತ್ತಾನೆ. ಆದ್ದರಿಂದ ಒಂದು ಕಂಪೆನಿಯ ಮಾಲೀಕ ತನ್ನ ಕೆಲಸಗಾರರನ್ನು ಸಹೃದಯದಿಂದ ಕಾಣಬೇಕು. ಒತ್ತಡ ಕೇವಲ ಕೆಲಸಗಾರರ ಮೇಲೆ ಮಾತ್ರ ಪ್ರಭಾವ ಬೀರುವುದಿಲ್ಲ, ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ದಕ್ಷತೆಯ ಕೆಲಸ ತೆಗೆಯಲು ಸಾಧ್ಯವಿಲ್ಲ ಎನ್ನುತ್ತಾರೆ.

ಮಹಿಳೆಯರಲ್ಲಿ ಹೆಚ್ಚು ಒತ್ತಡ: ಸಮೀಕ್ಷೆ ಪ್ರಕಾರ ಭಾರತೀಯ ಮಹಿಳೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾಳೆ. ಆಕೆ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ಹೊತ್ತಿರುತ್ತಾಳೆ. ಮಕ್ಕಳು, ಮನೆ, ಸಂಸಾರದ  ಜೊತೆಗೆ ಕಚೇರಿಯ ಕೆಲಸ.

ಇವೆಲ್ಲವುಗಳನ್ನೂ ಒಟ್ಟಿಗೆ ತೂಗಿಸಿಕೊಂಡು ಹೋಗುವ ಧಾವಂತದಲ್ಲಿ ಆಕೆ ಸಹಜವಾಗೇ ಒತ್ತಡಕ್ಕೆ ಸಿಲುಕುತ್ತಾಳೆ. ಆಗ ಕಾರ್ಯದಕ್ಷತೆ ತಾನೇತಾನೇಗಿಯೇ ಕ್ಷೀಣವಾಗುತ್ತದೆ.

ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರೇ ಒತ್ತಡಕ್ಕೆ ಹೆಚ್ಚು ತುತ್ತಾಗುತ್ತಾರೆ. ದಿನದಿನಕ್ಕೂ ಒತ್ತಡ ಹೆಚ್ಚಾದರೆ ಅಂತ್ಯಂತ ಕಡಿಮೆ ಅವಧಿಯಲ್ಲೇ ವ್ಯಕ್ತಿಯ ಕಾರ್ಯದಕ್ಷತೆ ನಾಶವಾಗುತ್ತೆ. ಇದರಿಂದ ಮೌಲ್ಯಯುತ ಕೆಲಸಗಾರರನ್ನು ಕಳೆದುಕೊಳ್ಳುವ ಸಾಧ್ಯತೆಗಳೆ ಹೆಚ್ಚು.

ಇದರ ನಿವಾರಣೆಗೆ ಹಲವು ಕಂಪೆನಿಗಳು ಒಂದಿಷ್ಟು ಯೋಜನೆಗಳನ್ನೂ ರೂಪಿಸಿವೆ.ವಿವಿಧ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ವರ್ಷಕ್ಕೆ ಒಂದು ಬಾರಿ ಕುಟುಂಬದೊಂದಿಗೆ ಪ್ರವಾಸಕ್ಕೆ ಕಳುಹಿಸುವುದು, ಕಚೇರಿಯಲ್ಲೇ ಮನರಂಜನೆ ಕಾರ್ಯಕ್ರಮ ಆಯೋಜಿಸಿ ಸಿಬ್ಬಂದಿಯ  ಕುಟುಂಬವೂ ತೊಡಗುವಂತೆ ಮಾಡುವುದು ಇತ್ಯಾದಿ ಒತ್ತಡ ನಿವಾರಣೆಗೆ ಇರುವ ಕಾರ್ಪೊರೇಟ್ ತಂತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT