ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿನ ತೂಗುಕತ್ತಿ... ಕಾಣದ ಉತ್ಸಾಹ

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಡಿನ ಮಧ್ಯೆ ಸುತ್ತಿ–ಬಳಸಿ ಸಾಗುವ ತಿರುವುಮುರುವಿನ ಘಟ್ಟದ ರಸ್ತೆ. ಕಣ್ಣು ಹಾಯುವವರೆಗೂ ಕಾಣುವ ಕಾಫಿ, ಅಡಿಕೆ, ರಬ್ಬರ್ ತೋಟಗಳು.
ಇನಾಂ ಭೂಮಿ ಸ್ವಾಧೀನ, ಒತ್ತುವರಿ ತೆರವು, ಅಡಿಕೆ ನಿಷೇಧ, ಗೋರಖ್‌ಸಿಂಗ್ ವರದಿ, ಕಸ್ತೂರಿರಂಗನ್ ವರದಿ... ಚಿಕ್ಕ­ಮಗಳೂರು-– ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಳಸ, ಬಾಳೆ­ಹೊನ್ನೂರು, ಎನ್.ಆರ್. ಪುರ, ಶೃಂಗೇರಿ­­ಗಳಲ್ಲಿ ಚುನಾವಣೆ ಎನ್ನುವುದೇ ತಡ ಸುತ್ತಿ, ಸುತ್ತಿ ಇದೇ ವಿಚಾರಗಳು ಪ್ರಸ್ತಾಪವಾಗುತ್ತಿದ್ದವು.

ಇದು ಜಿಲ್ಲೆಯ ಜನರ ಅಸ್ತಿತ್ವದ ಪ್ರಶ್ನೆ ಎಂದರು ಎನ್.ಆರ್. ಪುರದಲ್ಲಿ ಭೇಟಿ­ಯಾದ ಪ್ರಗತಿಪರ ಕೃಷಿಕ ಸುನೀಲ್.
‘ಅಪ್ಪ, ಅಜ್ಜನ ಕಾಲದಿಂದಲೂ ಸಾಗು­ವಳಿ ಮಾಡುತ್ತ ಬಂದಿರುವ ಜಮೀನು ಈಗ ನಮ್ಮದಲ್ಲವಂತೆ. ಯಾವುದೋ ಹಳೆಯ ದಾಖಲೆಗಳನ್ನು ತೆಗೆದು ಅದು ಅರಣ್ಯ ಭೂಮಿ ಎನ್ನುತ್ತಿದ್ದಾರೆ. ಹತ್ತು ಎಕರೆ ಒಳಗಿನ ಒತ್ತುವರಿ ತೆರವು ಮಾಡಿಸುವುದಿಲ್ಲ ಅಂತ ಹೇಳುತ್ತಲೇ ಒಂದೆರಡು ಎಕರೆ ಜಮೀನು ಇರುವವರಿಗೂ ನೋಟಿಸ್ ನೀಡಿದ್ದಾರೆ. ಭದ್ರಾ ಯೋಜನೆಯಲ್ಲಿ ಸಂತ್ರಸ್ತರಾದ­ವರಿಗೆ ಸರ್ಕಾರವೇ ನೀಡಿದ್ದ ಜಮೀನಿಗೆ ಈಗ ಅರಣ್ಯ ಭೂಮಿ ಎಂಬ ಹಣೆಪಟ್ಟಿ ಹಚ್ಚಲಾಗಿದೆ. ಇದೆಲ್ಲ ತಮ್ಮದೇ ಸ್ವಂತ ಜಮೀನು ಎಂದು ನಂಬಿ ಸಾಗುವಳಿ ಮಾಡು­ತ್ತಿದ್ದ ರೈತರು ಈಗ ಒತ್ತುವರಿ­ದಾರರಾಗಿದ್ದಾರೆ’ ಎಂದರು.

ಕಳಸದ ಹಿರಿಯ ರೈತ ರಾಯಪ್ಪ ಗೌಡರ ಮನೆಗೆ ಹೋದಾಗ ಹತ್ತಿಪ್ಪತ್ತು ಕೋಳಿಗಳು ಕಾಳು ಹೆಕ್ಕುತ್ತಿದ್ದವು. ಸಗಣಿ ಸಾರಿಸಿದ ದೊಡ್ಡ ಅಂಗಳದಲ್ಲಿ ಮೆಣಸು  ಹರಡಿ ಹಾಕಲಾಗಿತ್ತು. ಕೂಗು ಹಾಕಿದ ತಕ್ಷಣ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರ ಮಕ್ಕಳು ಮುಂಡಾಳೆ ಟೊಪ್ಪಿ ತೆಗೆಯುತ್ತ ಒಳಗೆ ಬಂದರು. ಈ ಕುಟುಂಬದ ಎಲ್ಲರೂ ಕೂಲಿಯವರನ್ನು ನೇಮಿಸಿಕೊಳ್ಳದೇ ಸ್ವಂತವಾಗಿ ಕೃಷಿ ಕೆಲಸ ಮಾಡುತ್ತಾರೆ. ಗೌಡರ ನಾಲ್ಕು ಮಕ್ಕಳು, ಅವರ ಸಂಸಾರ, ಅವರ ತಮ್ಮ ಮತ್ತು ಅವರ ಸಂಸಾರ ಎಲ್ಲರೂ ಸೇರಿ ಮನೆಯಲ್ಲಿ ೨೫ ಸದಸ್ಯರಿದ್ದಾರೆ.

ಗುಡ್ಡದ ಇಳಿಜಾರಿನಲ್ಲಿ ಇರುವ ಅವರ ಮನೆ, ತೋಟ ಎಲ್ಲವೂ ಮಲೆ­ನಾಡಿನ ಕೃಷಿ ಕುಟುಂಬಗಳ ‘ನುಡಿಚಿತ್ರ­’ದಂತೆ ಭಾಸವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮನೆಯವರ ನೆಮ್ಮದಿ ಹಾರಿಹೋಗಿದೆ.

೧೯೫೫ಕ್ಕಿಂತ ಮೊದಲು ರಾಯಪ್ಪ ಗೌಡರ ತಂದೆ ಸಾಗುವಳಿ ಮಾಡುತ್ತಿದ್ದ ನಾಲ್ಕು ಎಕರೆ, ೧೯೬೩ರ ನಂತರ ಮಾಡಿದ್ದ ಏಳು ಎಕರೆ, ಒಂದೆರಡು ದಶಕಗಳ ಹಿಂದೆ ಮನೆಯ ಹತ್ತಿರದ ಗುಡ್ಡ ಕಡಿದು ಮಾಡಿಕೊಂಡಿದ್ದ ಎಂಟು ಎಕರೆ ಒತ್ತುವರಿ ಭೂಮಿ ಸೇರಿ ಈ ಕುಟುಂಬದ ಬಳಿ ೧೯ ಎಕರೆ ಜಮೀನು ಇದೆ. ಆದರೆ, ಅರಣ್ಯ ಭೂಮಿ ಒತ್ತು­ವರಿ, ಕಂದಾಯ ಭೂಮಿ ಒತ್ತುವರಿ ತೆರವು­ಗೊಳಿಸುವ ನಿಯಮಗಳನ್ನೆಲ್ಲ ಕಟ್ಟುನಿಟ್ಟಾಗಿ ಜಾರಿಗೆ ತಂದಲ್ಲಿ ಈ ಕುಟುಂಬದ ಬಳಿ ಕೇವಲ ನಾಲ್ಕು ಎಕರೆ  ಉಳಿಯುತ್ತದೆ.

ಇದು ಕೇವಲ ರಾಯಪ್ಪ ಗೌಡರ ಕುಟುಂಬದ ಕಥೆಯಲ್ಲ. ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡಿನ ಬಹುತೇಕ ಕುಟುಂಬ­ಗಳು ಇದೇ ಸಮಸ್ಯೆ ಎದುರಿಸು­ತ್ತಿವೆ. ಹೈಕೋರ್ಟ್ ನಿರ್ದೇಶನದಂತೆ ಅರಣ್ಯ ಇಲಾಖೆ ಈಗ ತನಗೆ ಸೇರಿದ ಭೂಮಿ ಒತ್ತುವರಿ ತೆರವುಗೊಳಿಸಲು ಹೊರಟಿದೆ. ಈ ಒತ್ತುವರಿದಾರರಲ್ಲಿ ಒಂದೆರಡು ಎಕರೆ ಒತ್ತುವರಿ ಮಾಡಿದ ಕುಟುಂಬಗಳಿಂದ ಹಿಡಿದು ೨೦೦– -೩೦೦ ಎಕರೆ ಒತ್ತುವರಿ ಮಾಡಿರುವ ಸಿರಿ­ವಂತರು ಸೇರಿದ್ದಾರೆ. ೧೦ ಎಕರೆಗಿಂತ ಕಡಿಮೆ ಒತ್ತುವರಿ ಮಾಡಿದವರನ್ನು ಒಕ್ಕ­ಲೆಬ್ಬಿಸುವುದಿಲ್ಲ ಎಂದಿದ್ದ ಅರಣ್ಯ ಇಲಾಖೆ ಈಗ ಅವರಿಗೂ ನೋಟಿಸ್ ನೀಡಿದೆ.

ರಾಯಪ್ಪಗೌಡರ ಕುಟುಂಬ ಸೇರಿ­ದಂತೆ ಕಳಸ ಭಾಗದ ೧೨೦೦ ಕುಟುಂಬ­ಗಳು ಮತ್ತೊಂದು ಸಮಸ್ಯೆ ಎದುರಿಸು­ತ್ತಿವೆ. ಅದು ‘ಇನಾಂ’ ಭೂಮಿ ಸಮಸ್ಯೆ. ೧೯೨೮ರಲ್ಲಿ ಮೈಸೂರು ಮಹಾರಾಜರು ಕಳಸೇಶ್ವರ ದೇವಸ್ಥಾನಕ್ಕೆ ಉಂಬಳಿ ಬಿಟ್ಟಿದ್ದ ಜಮೀನಿನಲ್ಲಿ ೬೭೭೭ ಎಕರೆ ಜಾಗವನ್ನು ಉಸ್ತುವಾರಿ ನೋಡಿ­ಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಿ­ದ್ದರು. ಸ್ವತಃ ಅರಣ್ಯ ಇಲಾಖೆಗೇ ಈ ವಿಚಾರ ಗೊತ್ತಿರಲಿಲ್ಲ. ವೈಯಕ್ತಿಕ ದ್ವೇಷದ ಕಾರಣ ಯಾವುದೋ ಕುಟುಂಬದ ಮೇಲೆ ಮತ್ತೊಬ್ಬರು ಅರಣ್ಯ ಭೂಮಿ ಒತ್ತುವರಿ ಮಾಡಿ­ಕೊಂಡಿ­ದ್ದಾರೆ ಎಂಬ ಪ್ರಕರಣ ದಾಖಲಿಸಿ­ದಾಗ ಈ ಸಂಗತಿಯೆಲ್ಲ ಹೊರಬಿತ್ತು. ‘ಇನಾಂ’ ಜಮೀನಿನಲ್ಲಿ ೫೦ ವರ್ಷ­ಗ­ಳಿಂದ ಸಾಗುವಳಿ ಮಾಡುತ್ತಿದ್ದ­ವರೂ ಈಗ ಇಲಾಖೆಗೆ ತೋಟ, ಮನೆ ಎಲ್ಲವನ್ನೂ ಬಿಟ್ಟುಕೊಡಬೇಕಿದೆ.
ಕಳಸ ಸಮೀಪದ ಬಲಿಗೆ ಗ್ರಾಮದ ೩೦೦ಕ್ಕೂ ಹೆಚ್ಚು ಜನ ‘ಇನಾಂ’ ಭೂಮಿ ಒತ್ತುವರಿ ತೆರವು ವಿರುದ್ಧ ಸತತ ಧರಣಿ ನಡೆಸುತ್ತಿದ್ದು, ಮತದಾನ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ.

ಇಂತಹ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡವರ ಬಳಿ ಸರ್ಕಾರವೇ ನೀಡಿದ ಹಕ್ಕುಪತ್ರ ಇದೆ. ಆ ಮನೆಗೆ ಕಂದಾಯ ಕಟ್ಟಿದ್ದಾರೆ. ಅದೇ ಮನೆ, ತೋಟದ ಮೇಲೆ ಬ್ಯಾಂಕ್ ಸಾಲ ತೆಗೆ­ದಿದ್ದಾರೆ. ಮಕ್ಕಳ, ಮೊಮ್ಮಕ್ಕಳ ಮದುವೆ ಮಾಡಿದ್ದಾರೆ. ದಶಕಗಳಿಂದ ನಂಬಿದ್ದ ನೆಲವನ್ನು ಬಿಡುವ ಪ್ರಶ್ನೆ ಎದ್ದಿರುವುದ­ರಿಂದ ಸಹಜವಾಗಿ ಕಂಗಾಲಾಗಿದ್ದಾರೆ. ಒಂದೆರಡು ಆತ್ಮಹತ್ಯೆಗಳೂ ಆಗಿ­ಹೋಗಿವೆ.

ಭದ್ರಾ ಹುಲಿ ಯೋಜನೆಯ ವ್ಯಾಪ್ತಿಗೆ ಬರುವ ಬಾಳೆಹೊನ್ನೂರು, ಎನ್.ಆರ್.­ಪುರ, ಶೃಂಗೇರಿ ಸಮೀಪದ ಗ್ರಾಮಗಳ ಜನರಲ್ಲಿಯೂ ಭವಿಷ್ಯದಲ್ಲಿ ಊರು ತೊರೆಯಬೇಕಾದ ಪರಿಸ್ಥಿತಿ ಬಂದೀತು ಎಂಬ ನಡುಕ ಹುಟ್ಟಿದೆ. ಕಸ್ತೂರಿರಂಗನ್ ವರದಿಯಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶ­ಗಳಲ್ಲಿ ವಾಣಿಜ್ಯ ಚಟುವಟಿಕೆ­ಗಳಿಗೆ ಕಡಿವಾಣ ಬೀಳುವ ಸಂಭವ ಇರು­ವುದರಿಂದ ಜಿಲ್ಲೆಯಲ್ಲಿ ಅಣಬೆಯಂತೆ ಹುಟ್ಟಿರುವ ಹೋಮ್‌ಸ್ಟೇ, ರೆಸಾರ್ಟ್‌­ಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಯಾರಲ್ಲೂ ಸ್ಪಷ್ಟ ಕಲ್ಪನೆ ಇಲ್ಲ.

ಇಷ್ಟೆಲ್ಲ ಆತಂಕ, ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇದಕ್ಕೆಲ್ಲ ಇಲ್ಲಿನ ಜನ ತಮ್ಮ ಜನಪ್ರತಿನಿಧಿಗಳನ್ನಾಗಲಿ, ಹಾಲಿ ಲೋಕಸಭಾ ಸದಸ್ಯ ಕಾಂಗ್ರೆಸ್‌ನ ಜಯ­ಪ್ರಕಾಶ ಹೆಗ್ಡೆ ಅವರನ್ನಾಗಲಿ ದೂರುವು­ದಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ತಮ್ಮ ದುಃಸ್ಥಿತಿಗೆ ಕಾರಣ ಎಂದು ಹೇಳುತ್ತಾರೆ.

ಆದರೆ ಒತ್ತುವರಿ ಸಮಸ್ಯೆ, ಅಡಿಕೆ ನಿಷೇಧ, ಅಡಿಕೆಗೆ ಬಂದಿರುವ ಹಳದಿ ಎಲೆ ರೋಗಕ್ಕೆ ಪರಿಹಾರದ ಪ್ಯಾಕೇಜ್, ಕಾಫಿ ಪ್ಯಾಕೆಜ್, ಕಸ್ತೂರಿರಂಗನ್ ವರದಿ... ಇತ್ಯಾದಿ ಎಲ್ಲ ವಿಚಾರಗಳನ್ನೂ ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳು­ತ್ತಿದೆ. ಪ್ರಚಾರ ಸಭೆಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ವಿಫಲ­ವಾದ ಕೇಂದ್ರ, ರಾಜ್ಯ ಸರ್ಕಾರ­ವನ್ನು ಹಳಿ­ಯುತ್ತಿದೆ.  ಜಯಪ್ರಕಾಶ ಹೆಗ್ಡೆ ತಮ್ಮದೇ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಸೋತಿದ್ದಾರೆ ಎಂದು ಬಿಂಬಿಸುತ್ತಿದೆ.

ಈ ಸಲವೂ ಹೆಗ್ಡೆ ಅವರೇ ಕಾಂಗ್ರೆಸ್ ಅಭ್ಯರ್ಥಿ. ಅವರು ಹೆಚ್ಚು ಅಬ್ಬರವಿಲ್ಲದೇ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಯಾವ ಊರಿನ ಯಾರನ್ನೂ ಮಾತನಾ­ಡಿ­ಸಿದರೂ ಹೆಗ್ಡೆ ಅವರ ಕುರಿತು ಹೊಗಳಿಕೆ ಮಾತುಗಳೇ ಕೇಳಿ­ಬರು­ತ್ತವೆ. ಸಜ್ಜನ, ಸಾತ್ವಿಕ ಇತ್ಯಾದಿ ವಿಶೇಷಣ­ಗಳನ್ನು ಹಚ್ಚಲೂ ಮರೆಯುವುದಿಲ್ಲ.

ಅನಾಮಧೇಯರು, ಅಪರಿಚಿತ ನಂಬರ್‌ನಿಂದ ಮಾಡಿದ ಫೋನ್ ಕರೆಗಳನ್ನೂ ಸ್ವೀಕರಿಸುತ್ತಾರೆ. ತಕ್ಷಣ ಉತ್ತರಿಸಲು ಸಾಧ್ಯವಾಗದಿದ್ದಲ್ಲಿ ರಾತ್ರಿ­ಯಾದರೂ ಆ ನಂಬರ್‌ಗೆ ತಾವೇ ಕರೆ ಮಾಡುತ್ತಾರೆ. ಸಮಸ್ಯೆಗಳನ್ನು ಆಲಿಸು­ತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ ಎಂಬ ಖ್ಯಾತಿ ಅವರಿಗಿದೆ. ಆದರೆ, ನಾಯಕರ ಬೆನ್ನು ಹತ್ತಿ ಕೆಲಸ ಮಾಡಿಸುವ ಗಟ್ಟಿತನ, ಛಾತಿ ಇಲ್ಲ ಎಂಬ ಗೊಣಗಾಟವೂ ಅದರ ಹಿಂದೆಯೇ ಕೇಳಿಬರುತ್ತದೆ.

ಸಂಸದರ ಅಭಿವೃದ್ಧಿ ನಿಧಿಯನ್ನು ಎಲ್ಲ ಭಾಗಕ್ಕೂ ಸಮನಾಗಿ ಹಂಚುವ ಭರದಲ್ಲಿ ಎದ್ದುಕಾಣುವ, ಬಹುತೇಕ ಜನರಿಗೆ ಉಪಯೋಗವಾಗುವ ಯಾವ ಕಾಮಗಾರಿಗೂ ಹೆಗ್ಡೆ ಆದ್ಯತೆ ನೀಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ದೂರುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಜನ ದಕ್ಷಿಣ ಕನ್ನಡದ ಜತೆ ಕಳ್ಳುಬಳ್ಳಿ ಸಂಬಂಧ ಹೊಂದಿದ್ದಾರೆ. ದೇವಸ್ಥಾನ, ಹಬ್ಬ-ಹರಿದಿನ, ಮದುವೆ, ನಾಮಕರಣ ಎಲ್ಲದಕ್ಕೂ ಅವರಿಗೆ ಘಟ್ಟದ ಕೆಳಗಿನ ನಂಟು. ಕರಾವಳಿ ಜಿಲ್ಲೆಗೆ ಹೋಗ­ಬೇಕಾ­ದರೆ ಅವರು ೧೩೦ ಕಿ.ಮೀ ಕ್ರಮಿಸಲೇ­ಬೇಕು. ಕಳಸ-– ಸಂಸೆ– -ಬೆಳ್ತಂಗಡಿ ರಸ್ತೆ­ಯನ್ನು ಅಭಿವೃದ್ಧಿಪಡಿಸಿದಲ್ಲಿ ಕೇವಲ ೫೫ ಕಿ.ಮೀ.ನಲ್ಲಿಯೇ ತಲುಪಬಹುದು. ಈ ರಸ್ತೆಯ ನಾಲ್ಕೈದು ಕಿ.ಮೀ.ಗಳಷ್ಟು ಭಾಗ ಕುದುರೆಮುಖ ರಕ್ಷಿತಾರಣ್ಯದ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಬೇಕೇ ಬೇಕು.

ಕೇಂದ್ರದಲ್ಲಿ ಆಸ್ಕರ್ ಫರ್ನಾಂಡಿಸ್ ಹೆದ್ದಾರಿ ಸಚಿವರಾಗಿದ್ದಾರೆ.  ಜಯ­ಪ್ರಕಾಶ್ ಹೆಗ್ಡೆ ಪಟ್ಟುಹಿಡಿದು ಈ ಕೆಲಸ ಮಾಡಿಸಬಹುದಿತ್ತು ಎನ್ನುತ್ತಾರೆ ಕಳಸದ ಬಿಜೆಪಿ ಮುಖಂಡ ಶೇಷಗಿರಿ.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕುರಿತು ಜಿಲ್ಲೆಯ ಜನರದ್ದು ಮಿಶ್ರ ಪ್ರತಿಕ್ರಿಯೆ. ಅವರು ಹೊರಗಿನವರು ಎಂಬ ಭಾವನೆಯಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು ಆಕೆ ಸಚಿವೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂಬ ಹೊಗಳಿಕೆಯ ಮಾತನಾಡುತ್ತಾರೆ. ಇನ್ನೊಂದಿಷ್ಟು ಮಂದಿ ‘ನಮಗೇನೂ ತೋಚದು’ ಅನ್ನುತ್ತಾರೆ.

ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರೆಲ್ಲ ಜಾತಿ ಲೆಕ್ಕಚಾರ, ಅಭ್ಯರ್ಥಿಗಳ ಬಲಾ­ಬಲ, ಪ್ರಚಾರ ಸಭೆಗಳ ಬಗ್ಗೆ ತಲೆಕೆಡಿಸಿ­ಕೊಂಡಿದ್ದರೆ, ಜಿಲ್ಲೆಯ ಜನ ಮಾತ್ರ ತಮ್ಮದೇ ಸಮಸ್ಯೆಗಳಲ್ಲಿ ಮುಳುಗಿ ಚುನಾವಣೆಯ ಕುರಿತು ಉತ್ಸಾಹ ತೋರದೇ ತಣ್ಣಗಿದ್ದಾರೆ.
(ತಿದ್ದುಪಡಿ: ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು ಸಿ.ಎಚ್‌. ವಿಜಯ ಶಂಕರ್‌. ಸೋಮವಾರದ ಸಂಚಿಕೆಯಲ್ಲಿ ಹೆಸರು ತಪ್ಪಾಗಿತ್ತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT