ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ಸಕ್ರಮಕ್ಕೆ ಸಣ್ಣ ಕೃಷಿಕರ ಆಗ್ರಹ

Last Updated 3 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾನೂನಿಗೆ ತಿದ್ದುಪಡಿ ತರುವ ಮೂಲಕ ಬಡ ಕೃಷಿಕರ ಒತ್ತುವರಿ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಸರ್ಕಾರಿ ಭೂಮಿ ಅವಲಂಬಿತ (ಒತ್ತುವರಿ) ಸಣ್ಣ ಕೃಷಿಕರು, ಕೂಲಿಕಾರರು ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಭೂಮಿ ಒತ್ತುವರಿ ಸಮಸ್ಯೆ ಸಂಬಂಧ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೆರವು ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಚನೆ ನೀಡಿರುವುದು ತಾತ್ಕಾಲಿಕ ಪರಿಹಾರವಷ್ಟೆ. ಮನೆ-ನಿವೇಶನ ಇಲ್ಲದೆ ಕೂಲಿ ಕಾರ್ಮಿಕರು, ಬಡವರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಒಕ್ಕಲೆಬ್ಬಿಸಿದರೆ ನೂರಾರು ಕುಟುಂಬ ಬೀದಿ ಪಾಲಾಗುತ್ತವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಸಣ್ಣ ರೈತರು ತಮ್ಮ ಜಮೀನು ಪಕ್ಕದ ಸರ್ಕಾರಿ ಭೂಮಿಯಲ್ಲಿ ಕಣ, ರಸ್ತೆ, ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರಷ್ಟೆ. ಅವನ್ನೂ ಖಾಲಿ ಮಾಡಿಸಿದರೆ ಸರ್ಕಾರಕ್ಕೆ ಯಾವ ಲಾಭವೂ ಇಲ್ಲ. ಒತ್ತುವರಿ ತೆರವಿನಿಂದಾಗುವ ಹಾನಿಗೆ ಸರ್ಕಾರವೇ ಪರಿಹಾರ ಸೂಚಿಸಬೇಕು ಎಂದು ಕಿಸಾನ್‌ಸಭಾ ಸಂಘಟನಾ ಸಮಿತಿ ಮುಖಂಡ ಪಿ.ವಿ.ಲೋಕೇಶ್ ಒತ್ತಾಯಿಸಿದರು.

ಸಮಸ್ಯೆಯನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡುವ ಬದಲು ಶಾಶ್ವತ ಪರಿಹಾರ ಸೂಚಿಸಲು ಜಂಟಿ ಸದನ ಸಮಿತಿ ರಚಿಸಿ, ಬಡವರ ಕೃಷಿ ಒತ್ತುವರಿ ಸಕ್ರಮಗೊಳಿಸಲು ಕಾನೂನಿಗೆ ತಿದ್ದುಪಡಿ ತರಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಂಜುನಾಥ, ವಿಜಯಕುಮಾರ್, ರೇಣುಕಾರಾಧ್ಯ, ಜಾರ್ಜ್ ಆಸ್ಟಿನ್, ಜಿ.ರಘು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT