ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಂದಕ್ಕೆ ಹಲವು ಕಂಪೆನಿಗಳ ಪೈಪೋಟಿ

Last Updated 31 ಡಿಸೆಂಬರ್ 2010, 11:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸುಮಾರು ಒಂದು ವರ್ಷದ ವ್ಯಾಪಾರ ವಹಿವಾಟು ಸ್ಥಗಿತದ ನಂತರ 22 ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಯಸಿರುವ ಭಾರತದೊಂದಿಗೆ 1.4 ಶತಕೋಟಿ ಡಾಲರ್‌ಗಳ ವೆಚ್ಚದ ಭಾರಿ ಮಾರಾಟ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಮತ್ತು ಇತರ ದೇಶಗಳ ಸೇನಾ ವಿಮಾನಯಾನ ಕಂಪೆನಿಗಳು ತೀವ್ರ ಪೈಪೋಟಿ ನಡೆಸಿವೆ.

ಭಾರತಕ್ಕೆ ಶಸ್ತ್ರಾಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡುವ ಸಾಧ್ಯತೆ ಬಗ್ಗೆ ಕಾಂಗ್ರೆಸ್‌ಗೆ ಪೆಂಟಗಾನ್ ತಿಳಿಸುವುದರೊಂದಿಗೆ ಅಮೆರಿಕದ ಉದ್ದೇಶ ಈಗಾಗಲೇ ಸ್ಪಷ್ಟವಾಗಿದೆ. ಇದರೊಂದಿಗೆ ಭಾರತೀಯ ನೌಕಾದಳದ ಪಿ-81 ನೆಪ್ಟೂನ್ ಸಾಗರ ಗಸ್ತು ಯುದ್ಧ ವಿಮಾನವನ್ನು ಇನ್ನಷ್ಟು ಸಶಸ್ತ್ರಗೊಳಿಸುವ ನಿಟ್ಟಿನಲ್ಲಿ ಎಜಿಎಂ-84ಎಲ್ ಹಾರ್ಪೂನ್ ಬ್ಲಾಕ್ -2 ಕ್ಷಿಪಣಿಗಳನ್ನು ಸಹ ಮಾರುವ ಪ್ರಕ್ರಿಯೆಗಗೂ ಅದು ಒಪ್ಪಿಗೆ ಸೂಚಿಸಿದೆ.

ಇರಾಕ್ ಮತ್ತು ಆಫ್ಘನ್ ಯುದ್ಧದಲ್ಲಿ ಯಶಸ್ವಿಯಾಗಿರುವ ಅಪಾಚೆ ಎಎಚ್-64ಡಿ ಯುದ್ಧ ಹೆಲಿಕಾಪ್ಟರ್‌ಗಳ ಮಾರಾಟದೊಂದಿಗೆ ಭಾರತದ ಜೊತೆ ಹೊಸ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ವೈಮಾನಿಕ ದೈತ್ಯ ಸಂಸ್ಥೆಯಾದ ಬೋಯಿಂಗ್ ಪುನಃ ಸ್ಪರ್ಧೆಗೆ ಇಳಿದಿರುವುದಾಗಿ ಪೆಂಟಗಾನ್ ಪ್ರಕಟಣೆ ತಿಳಿಸಿದೆ.

ಆದರೆ ಅಮೆರಿಕದ ಇನ್ನೊಂದು ಯುದ್ಧ ವಿಮಾನ ದೈತ್ಯ ಸಂಸ್ಥೆ ಬೆಲ್ ಹೆಲಿಕಾಪ್ಟರ್ಸ್‌ ತನ್ನ ಸೂಪರ್ ಎಎಚ್-12 ಕೋಬ್ರಾ ಯುದ್ಧ ಹೆಲಿಕಾಪ್ಟರ್‌ಗಳ ಮಾರಾಟಕ್ಕೆ ಮುಂದಾಗುವುದೇ ಎಂಬುದು ಇನ್ನೂ ಗೊತ್ತಾಗಿಲ್ಲ.

ಭಾರತ ಸರ್ಕಾರವು ರಷ್ಯ ನಿರ್ಮಿತ 32 ಎಂಐ-24/35 ಯುದ್ಧ ಹೆಲಿಕಾಪ್ಟರ್‌ಗಳಿಗೆ ಪರ್ಯಾಯವಾಗಿ ಶಸ್ತ್ರಾಸ್ತ್ರ ಕಂಪೆನಿಗಳಿಂದಲೇ ನೇರವಾಗಿ ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಯಸಿದ್ದರಿಂದ ಅಮೆರಿಕದ ಕಂಪೆನಿಗಳು 2009ರಲ್ಲಿ ತಮ್ಮ ಟೆಂಡರ್‌ನ್ನು ಹಿಂತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಅಮೆರಿಕ ಶಸ್ತ್ರಾಸ್ತ್ರ ಕಂಪೆನಿಗಳೊಂದಿಗಿನ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿ, ಐರೋಪ್ಯ ಸ್ಪರ್ಧಿಯಾದ ಯೂರೋಕಾಪ್ಟರ್‌ಗಾಗಿ ಹುಡುಕಾಟ ನಡೆಸಿತ್ತು.

ಆದರೆ ಈ ವರ್ಷದ ಆರಂಭದಲ್ಲಿ ಭಾರತ ಸರ್ಕಾರವು ಹೊಸ ಯುದ್ಧ ಹೆಲಿಕಾಪ್ಟರ್‌ಗಳಿಗಾಗಿ ಅಮೆರಿಕ ಕಂಪೆನಿಗಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಭಾರತೀಯ ವಾಯುಪಡೆಗೆ ಲಘು, ಮಧ್ಯಮ ಹಾಗೂ ಭಾರಿ ಶಸ್ತ್ರಾಸ್ತ್ರ ಸಾಗಾಟದ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆಗೊಳಿಸುವ ಉದ್ದೇಶದಿಂದ 22 ಯುದ್ಧ ಹೆಲಿಕಾಪ್ಟರ್‌ಗಳಿಗಾಗಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

ಭಾರತದೊಂದಿಗೆ ಯುದ್ಧ ಹೆಲಿಕಾಪ್ಟರ್‌ಗಳ ಮಾರಾಟ ಒಪ್ಪಂದಕ್ಕೆ ಬೋಯಿಂಗ್ ಮತ್ತು ಇತರ ಅಮೆರಿಕ ಕಂಪೆನಿಗಳು ಮಾತ್ರವಲ್ಲದೆ, ಯೂರೋಕಾಪ್ಟರ್ ತಯಾರಕರಾದ ಇಎಡಿಎಸ್, ಆಗಸ್ಟಾ ವೆಸ್ಟ್‌ಲೆಂಡ್ ಹಾಗೂ ರಷ್ಯ ಕಂಪೆನಿಗಳು ಕೂಡಾ ಪೈಪೋಟಿ ನಡೆಸುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT