ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಒತ್ತಡ: ಎಫ್‌ಡಿಐಗೆ ಮಣೆ

Last Updated 19 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ತುಮಕೂರು: ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆ ಬಯಸಿರುವ ಬರಾಕ್ ಒಬಾಮ, ತನ್ನ ದೇಶದ ಉದ್ಯಮಪತಿಗಳನ್ನು ಓಲೈಸುವ ಉದ್ದೇಶದಿಂದ ಭಾರತದ ಮೇಲೆ ಒತ್ತಡ ಹೇರಿದ ಪರಿಣಾಮವಾಗಿ ಕೇಂದ್ರ ಸರ್ಕಾರ ತರಾತುರಿಯಲ್ಲಿ `ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ವಿದೇಶಿ ನೇರ ಹೂಡಿಕೆ~ಗೆ ಅವಕಾಶ ಮಾಡಿಕೊಟ್ಟಿದೆ ಎಂದು ಎಫ್‌ಕೆಸಿಸಿಐ ಉಪಾಧ್ಯಕ್ಷ ಎಸ್.ಸಂಪತ್ ಕುಮಾರನ್ ಆರೋಪಿಸಿದರು.

ನಗರದ ಎಸ್‌ಐಟಿ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ `ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ, ಸಾಧಕ- ಬಾಧಕ~ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಭಾರತದಲ್ಲಿ ವ್ಯವಹಾರ ನಡೆಸಲು ಉದ್ದೇಶಿಸಿರುವ ಪ್ರವರ್ತಕ ಕಂಪೆನಿಗಳಿಗೆ ಕನಿಷ್ಠ ನಿಬಂಧನೆಗಳನ್ನೂ ಹೇರದೆ ಈ ದೇಶದ 100 ಕೋಟಿ ಗ್ರಾಹಕರನ್ನು ದೈತ್ಯ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸಿರುವ ಸರ್ಕಾರದ ಕ್ರಮದಿಂದ ಈ ದೇಶದ ಎಲ್ಲ ವರ್ಗದ ಜನರಿಗೂ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದರು.

ವಿದೇಶಿ ಉದ್ಯಮಿಗಳು ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿ ಗಳಿಸಿದ ಲಾಭವನ್ನು ತಮ್ಮ ದೇಶಕ್ಕೆ ಕೊಂಡೊಯ್ಯುತ್ತಾರೆ. ಲಾಭದ ಹಣವನ್ನು ಹೂಡಿಕೆ ಮಾಡಿದ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುತ್ತಾರೆ ಎಂಬ ಕೇಂದ್ರ ಸರ್ಕಾರದ ಊಹೆ ತಪ್ಪು ಎಂದು ವಿಶ್ಲೇಷಿಸಿದರು.

`ಕೃಷಿ ಕ್ಷೇತ್ರದ ಮೇಲೆ ಎಫ್‌ಡಿಐ ಪರಿಣಾಮ~ ಕುರಿತು ವಿಚಾರ ಮಂಡಿಸಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಫಿಲಿಪೈನ್ಸ್‌ನಂಥ ದೇಶದಿಂದ ತೆಂಗು ಆಮದು ಮಾಡಿಕೊಂಡು ರೂಪಾಯಿಗೆ ಒಂದರಂತೆ ಕಾಯಿ ಮಾರಿದರೆ ತಿಪಟೂರಿನ ರೈತರು ಸ್ಪರ್ಧಿಸಲು ಸಾಧ್ಯವೇ? ಎಫ್‌ಡಿಐ ಹೂಡಿಕೆ ವ್ಯಾಪ್ತಿಗೆ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಸೇರಿಸಿರುವ ಸರ್ಕಾರ ಮಳೆಯಾಧಾರಿತ ಬೆಳೆಗಳನ್ನು ಹೊರಗಿಟ್ಟಿರುವುದು ಏಕೆ? ಯಾರ ಒತ್ತಡ ಈ ನಿರ್ಧಾರದ ಹಿಂದೆ ಕೆಲಸ ಮಾಡಿದೆ ಎಂದು ಪ್ರಶ್ನಿಸಿದರು.

ಎಫ್‌ಡಿಐ ನೆಪದಲ್ಲಿ ರಾಷ್ಟ್ರದ ಸುಸ್ಥಿತ ಕೃಷಿ ಪದ್ಧತಿಯನ್ನೇ ಬದಲಿಸಲು ಸರ್ಕಾರ ಮುಂದಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿದ್ದ ಸಾರಜನಕ ಸ್ಥಿರೀಕರಣ ವ್ಯವಸ್ಥೆ ಹಾಳಾದ ತಕ್ಷಣ ದೇಶದ ಕೃಷಿ ವಿಫಲವಾಗುತ್ತದೆ. ಆಹಾರದ ಸ್ವಾವಲಂಬನೆ ಕಳೆದುಕೊಂಡ ಭಾರತೀಯರು ಒಪ್ಪೊತ್ತಿನ ಊಟಕ್ಕೆ ವಿದೇಶದ ಹಡಗುಗಳನ್ನು ನಿರೀಕ್ಷಿಸಬೇಕಾದ ದುಃಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

`ಕಿರಾಣಿ ಅಂಗಡಿಗಳ ಮೇಲೆ ಎಫ್‌ಡಿಐ ಪರಿಣಾಮ~ ಕುರಿತು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿದರು. ಎಫ್‌ಐಸಿಸಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜೆ.ಕ್ರಾಸ್ಟಾ, ಎಸ್‌ಐಟಿ ಡೀನ್ ಪ್ರೊ.ಬಸವರಾಜಯ್ಯ, ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಡಾ.ಎಂ.ಆರ್.ಶೊಲ್ಲಾಪುರ್, ಟಿಡಿಸಿಸಿಐ ಅಧ್ಯಕ್ಷ ಟಿ.ಆರ್‌ಲೋಕೇಶ್, ಉಪಾಧ್ಯಕ್ಷ ಸಾಗರನಹಳ್ಳಿ ಪ್ರಭು, ಟಿಯುಎಂಎ ಅಧ್ಯಕ್ಷ ಸುರೇಂಧ್ರ ಎ.ಶಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT