ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರು, ಇಬ್ಬರು ಬೇಡ ಮೂವರು...!

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲೊಂದು ಕುಗ್ರಾಮ. ಹೆಸರು ಜಂಗಮಸೋವೆನಹಳ್ಳಿ. ಬಹುತೇಕ ಮಂದಿ ಅನಕ್ಷರಸ್ಥರು. ಆದರೆ ಇಲ್ಲಿಯ ಜನರ ಮಂತ್ರ `ನಾವಿಬ್ಬರು, ನಮಗಿಬ್ಬರು'. ಇಲ್ಲಿರುವ ಎಲ್ಲ ಮನೆಗಳಲ್ಲೂ ಒಬ್ಬರು, ಬಿಟ್ಟರೆ ಇಬ್ಬರು ಮಕ್ಕಳು!

ಪ್ರತಿವರ್ಷ ಜುಲೈ 11 ವಿಶ್ವ ಜನಸಂಖ್ಯಾ ದಿನ. ಜನಸಂಖ್ಯೆಯ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹತ್ತಾರು ಬಗೆಯ ಜಾಹೀರಾತುಗಳು ಜನಪ್ರಿಯಗೊಂಡಿದ್ದರೂ ಗ್ರಾಮೀಣ ಮಟ್ಟದಲ್ಲಿ ಇದರ ಪ್ರಭಾವ ಮಾತ್ರ ಶೂನ್ಯ ಆಗಿರುವ ಈ ದಿನಗಳಲ್ಲಿ ಜಂಗಮಸೋವೆನಹಳ್ಳಿಯ ಜನರು ಎಲ್ಲರಿಗೂ ಮಾದರಿ.

ಅಂದಹಾಗೆ ಇದು ಸರ್ಕಾರದ ಕಾನೂನು ಜಾರಿಗೆ ಬಂದ ನಂತರದ ಮಾತಲ್ಲ, ಬದಲಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಬಂದದ್ದು. ಇಲ್ಲಿನ 143 ಮನೆಗಳ ಪೈಕಿ ಒಂದೇ ಒಂದು ಮನೆ ಮಾತ್ರ ಅಪವಾದ. ಅಲ್ಲಿದ್ದಾರೆ ಮೂವರು ಮಕ್ಕಳು. ಅಂದಹಾಗೆ ಇಲ್ಲಿಯ ಗ್ರಾಮಸ್ಥರ ಸಂಖ್ಯೆ 750. ಇವರಲ್ಲಿ 382 ಪುರುಷ, 368 ಮಹಿಳೆ.

ಆರೋಗ್ಯ ಇಲಾಖೆಯ ಸಮೀಕ್ಷೆ ಪ್ರಕಾರ ಈ ಗ್ರಾಮದಲ್ಲಿ 18 ರಿಂದ 45 ವರ್ಷದ ನಡುವಿನ ವಯಸ್ಸಿನ ಒಟ್ಟು ಮಹಿಳೆಯರ ಸಂಖ್ಯೆ 160. ಇದರಲ್ಲಿ ಈಗಾಗಲೇ 155 ಮಹಿಳೆಯರು ಸಂತಾನಹರಣ ಚಿಕಿತ್ಸೆ ಮಾಡಿಸಿದ್ದಾರೆ! ಈ ಚಿಕಿತ್ಸೆ ಮಾಡಿಸುವಂತೆ ಸರ್ಕಾರ ಅಥವಾ ಸಂಘ ಸಂಸ್ಥೆ ಇವರನ್ನು ಒತ್ತಾಯಿಸಿಲ್ಲ. ಸರ್ಕಾರದ ಯೋಜನೆಗಳು ಇವರ ಮನ ಪರಿವರ್ತಿಸಿಲ್ಲ. ಇವೆಲ್ಲವೂ ಸ್ವಯಂ ಪ್ರೇರಣೆಯಿಂದ ಬಂದುದು.

ಜಮೀನಿನ ಕೊರತೆ
ಭವಿಷ್ಯದ ಚಿಂತೆ ಇಲ್ಲಿಯ ಜನರಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾರಣ. ಈ ಗ್ರಾಮಸ್ಥರ ಒಡೆತನದಲ್ಲಿ ಅಂದಾಜು 600 ಎಕರೆ ಭೂಮಿ ಇದೆ. ಪ್ರತಿ ಕುಟುಂಬಕ್ಕೆ ಸರಾಸರಿ ಎರಡು ಅಥವಾ ಮೂರು ಎಕರೆ ಬರಬಹುದು. ಈ ಆಸ್ತಿ ಪೀಳಿಗೆಯಿಂದ ಪೀಳಿಗೆಗೆ ಪಾಲು ವಿಭಾಗವಾಗುತ್ತಾ ಸಾಗಿದರೆ ಕೊನೆಗೆ ಗೇಣು ಭೂಮಿ ಸಿಗುವುದು ಕಷ್ಟ. ಆಗ ಹೊಟ್ಟೆಗೆ ಹಿಟ್ಟಿನ ಬದಲು ತಣ್ಣಿರ ಬಟ್ಟೆ ಗತಿ ಎಂಬ ಅರಿವು ಮೂಡಿದ್ದು ಇಂತಹ ಬದಲಾವಣೆಗೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು.

`ಮಕ್ಕಳು ಹೆಚ್ಚಿದರೆ ನಮಗೇ ಆಪತ್ತು. ಉತ್ತಮ ಭವಿಷ್ಯ ಕೂಡುವಲ್ಲಿ ಸೋಲುವುದು ದಿಟ. ಇಬ್ಬರು ಮಕ್ಕಳ ಹೊಟ್ಟೆ ಬಟ್ಟೆ, ಶಿಕ್ಷಣ ಯಾವುದಕ್ಕೂ ತ್ರಾಸ್ ಅನಿಸಲ್ಲ' ಎನ್ನುತ್ತಾರೆ ಪದ್ಮ ಬಸವರಾಜ್.

ಅಂಬಮ್ಮ ಎಂಬ ಮಹಿಳೆ ಮೊಟ್ಟ ಮೊದಲು ಸಂತಾನ ಹರಣ ಚಿಕಿತ್ಸೆಗೆ ಒಳಪಟ್ಟವರು. ಇವರಿಗೀಗ 80 ವರ್ಷ. ಇವರ ಮಗಳು ಹಾಗೂ ಮೊಮ್ಮಗಳೂ ಅಂಬಮ್ಮನ ಹಾದಿ ಹಿಡಿದಿದ್ದಾರೆ. ಗ್ರಾಮಸ್ಥರು ಸ್ಥಿತಿವಂತರಲ್ಲದಿದ್ದರೂ ಊಟ ಬಟ್ಟೆಗೆ ಕೊರತೆಯಿಲ್ಲ. ಇವರ ಮಕ್ಕಳು ವಿದ್ಯಾವಂತರಾಗುತ್ತಿದ್ದು, ಕೆಲವರು ಸರ್ಕಾರಿ ನೌಕರಿಯನ್ನೂ ಗಿಟ್ಟಿಸಿಕೊಂಡಿದ್ದಾರೆ.

`ಹೆಣ್ಣು ಮಗುವಾಗಿತೆಂಬ ಚಿಂತೆ ಇವರನ್ನು ಕಾಡಿಲ್ಲ. ಹೆಣ್ಣು ಶಿಶು ಹತ್ಯೆ, ಬಾಲ್ಯ ವಿವಾಹ ಎನ್ನುವ ಅನಿಷ್ಠ ಪದ್ಧತಿಗಳು ಇಲ್ಲಿ ಕಾಣಲ್ಲ. ನಿರಕ್ಷರಿಗಳಾದರೂ ಒಳ್ಳೆಯ ತಿಳಿವಳಿಕೆ ಇದೆ. ನಾವು ಕಾಲ ಕಾಲಕ್ಕೆ ಮಕ್ಕಳಿಗೆ ಚುಚ್ಚುಮದ್ದು, ಲಸಿಕೆಗಳನ್ನು ಹಾಕುತ್ತಿರುವುದು ಹಾಗೂ ಸುದೈವದಿಂದ ಮಕ್ಕಳ ಮರಣ ವಿರಳಾತಿವಿರಳ. ಈ ಗ್ರಾಮದ ಜನರ ಕುಟುಂಬ ಯೋಜನೆ ಅಕ್ಕಪಕ್ಕದ ಗ್ರಾಮಸ್ಥರಿಗೂ ಮಾದರಿಯಾಗಿದ್ದು, ಅವರೂ ಇದನ್ನೇ ಅನುಸರಿಸುತ್ತಿದ್ದಾರೆ' ಎನ್ನುತ್ತಾರೆ ತಿಮ್ಮಲಾಪುರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾಗಿದ್ದ ಸುರೇಶ್.

ಆದರೆ ಈ ಗ್ರಾಮಕ್ಕೆ ಸರ್ಕಾರದಿಂದ ಮೂಲಸೌಕರ್ಯ ಇದುವರೆಗೆ ದೊರೆತಿಲ್ಲ. ರಸ್ತೆ ಸರಿಯಿಲ್ಲ. ಜನರು ಕಲುಷಿತ ನೀರು ಕುಡಿದು ಬದುಕುತ್ತಿದ್ದಾರೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾದ ಅಗತ್ಯ ಇದೆ ಎನ್ನುವುದು ಗ್ರಾಮಸ್ಥರ ಕೂಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT