ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಅರ್ಹತಾ ಸುತ್ತಿನ ಹಾಕಿ ಟೂರ್ನಿ: ಸಂದೀಪ್ ಪ್ರತಾಪಕ್ಕೆ ಇಟಲಿ ಶರಣು

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಪಂಜಾಬಿ ಪುತ್ಥರ್~ ಸಂದೀಪ್ ಸಿಂಗ್  ಡ್ರ್ಯಾಗ್ ಫ್ಲಿಕ್‌ಗಳ ಭರಾಟೆಗೆ ಭಾನುವಾರ ರಾತ್ರಿ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಇಟಲಿಯ ಆಟಗಾರರ ಗೆಲುವಿನ ಆಸೆ ನುಚ್ಚುನೂರಾಯಿತು.

ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಪುರುಷರ ವಿಭಾಗದ ಎರಡನೇ ಪಂದ್ಯದಲ್ಲಿ ಭಾರತ ತಂಡವು 8-1ರಿಂದ ಇಟಲಿಯನ್ನು ಸೋಲಿಸಿತು.  ಶನಿವಾರ 15-1ರಿಂದ ಸಿಂಗಪುರದ ವಿರುದ್ಧ ಜಯ ಗಳಿಸಿದ್ದ ಆತಿಥೇಯ ತಂಡವು ಸದ್ಯ ಒಟ್ಟು 6 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ.

ಮೊದಲ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದ ಭಾರತ ಭಾನುವಾರ ಮಾತ್ರ ಆ ತಪ್ಪನ್ನು ಪುನರಾವರ್ತಿಸಲಿಲ್ಲ. ಪ್ರಥಮಾರ್ಧದಲ್ಲಿ ಸಿಕ್ಕ ನಾಲ್ಕು ಪೆನಾಲ್ಟಿ ಕಾರ್ನರ್‌ಗಳಲ್ಲಿ ಎಲ್ಲವೂ ಗೋಲುಪೆಟ್ಟಿಗೆ ಸೇರಿದವು.

ಅದರಲ್ಲಿ ಮೂರು ಸಂದೀಪ್ ಸಿಂಗ್ ಡ್ರ್ಯಾಗ್ ಫ್ಲಿಕ್‌ನ ಫಲಶ್ರುತಿಯಾಗಿದ್ದವು. ಒಂದು ಕನ್ನಡದ ಹುಡುಗ ವಿ.ಆರ್‌ರಘುನಾಥ್ ಡ್ರ್ಯಾಗ್ ಫ್ಲಿಕ್ ಪ್ರತಾಪದ ಫಲವಾಗಿ ಸಿಕ್ಕ ಗೋಲು. ಇಟಲಿಯ ಗೋಲ್‌ಕೀಪರ್ ಫೆಡ್ರೆಸಿ ಫೆಬ್ರಿಜಿಯ ತಮ್ಮ ಬಲಬದಿಗೆ ಚಿಮ್ಮಿ ಬರುತ್ತಿದ್ದ ಚೆಂಡಿನ ವೇಗ ಮತ್ತು ದಿಕ್ಕನ್ನು ಗುರುತಿಸುವಲ್ಲಿ ವಿಫಲವಾಗಿದ್ದು, ಭಾರತದ ಆಟಗಾರರಿಗೆ ವರದಾನವಾಯಿತು. ಇದರ ಸಂಪೂರ್ಣ ಲಾಭವನ್ನು ಪಂದ್ಯದುದ್ದಕ್ಕೂ ಭಾರತದ ಆಟಗಾರರು ಪಡೆದರು.

ಹಾರಾಡಿದ ತ್ರಿವರ್ಣ ಧ್ವಜಗಳು:  ಅಂತರರಾಷ್ಟ್ರೀಯ ರ‌್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿರುವ ಇಟಲಿಯನ್ನು 10ನೇ ಸ್ಥಾನದ ಭಾರತವು ಸುಲಭವಾಗಿಯೇ ಸೋಲಿಸುವ ನಿರೀಕ್ಷೆಯಿತ್ತು. ಇದರಿಂದಾಗಿಯೇ ತ್ರಿವರ್ಣ ಧ್ವಜ ಹಿಡಿದ ಪ್ರೇಕ್ಷಕರು ಆಗಮಿಸಿದರು. ಅವರನ್ನು ಚೆಟ್ರಿ ಬಳಗ ನಿರಾಸೆಗೊಳಿಸಲಿಲ್ಲ.

ನಾಲ್ಕನೇ ನಿಮಿಷದಲ್ಲಿ ಇಟಲಿಯ ಆಟಗಾರ ಡಿ ವಲಯದಲ್ಲಿ ಮಾಡಿದ ತಪ್ಪಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಸಂದೀಪ್ ಸಿಂಗ್ ಕೆಳಮಟ್ಟದಲ್ಲಿ ಮಾಡಿದ ಫ್ಲಿಕ್ ಗೋಲ್‌ಕೀಪರ್ ಬಲಬದಿಯಿಂದ ಗುರಿ ಸೇರಿತು. 12ನೇ ನಿಮಿಷದಲ್ಲಿಯೂ ಇಂತಹದ್ದೇ ತಪ್ಪಿಗೆ ಇಟಲಿಗರು ಬೆಲೆ ತೆತ್ತರು. ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಮಿಂಚಿದ ಕನ್ನಡದ ಹುಡುಗ ರಘುನಾಥ್ ಡ್ರ್ಯಾಗ್ ಫ್ಲಿಕ್ ಮೂಲಕ ಗೋಲಿನ ಕಾಣಿಕೆ ನೀಡಿದರು.  

17ನೇ ನಿಮಿಷದಲ್ಲಿ ಇಟಲಿ ತಿರುಗಿ ಬಿದ್ದಿತ್ತು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನ್ಯಾನಿ ಅಲ್ಸಾಂಡ್ರೋ ಗೋಲ್ ಕೀಪರ್ ಶ್ರೀಜೇಶ್ ಅವರನ್ನು ವಂಚಿಸಿ ಗೋಲು ಗಳಿಸಿದರು. (ಭರತ್ ಚೆಟ್ರಿ ಈ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು).
ಆದರೆ ಇದರಿಂದ ಭಾರತದ ವೇಗದ ಆಟಕ್ಕೆ ಕುತ್ತು ಬರಲಿಲ್ಲ. 22 ಮತ್ತು 23ನೇ ನಿಮಿಷಗಳಲ್ಲಿ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್‌ಗಳು ಸಂದೀಪ್ ಸಿಂಗ್ ಡ್ರ್ಯಾಗ್ ಫ್ಲಿಕ್ ಮೋಡಿಗೆ ಗೋಲಾಗಿ ಪರಿವರ್ತನೆಯಾದವು. 153ನೇ ಪಂದ್ಯ ಆಡುತ್ತಿರುವ ಸಂದೀಪ್ ಸಿಂಗ್ ತಮ್ಮ ವಿಶಿಷ್ಟ ಶೈಲಿಯ ಫ್ಲಿಕ್‌ನಿಂದ  ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಮಿಂಚಿದ ಸುನಿಲ್: ಸುನಿಲ್ ಸೋಮವಾರಪೇಟೆ ವಿಠ್ಠಲಾಚಾರ್ಯ  ಕೂಡ ತಮ್ಮ ಮಣಿಕಟ್ಟಿನ ಮೋಡಿಯಿಂದ ವಿಜೃಂಭಿಸಿದರು. ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಅವರು, 30ನೇ ನಿಮಿಷ ದಲ್ಲಿ ನೇರ ಹಿಟ್‌ನಲ್ಲಿ ಗಳಿಸಿದ ಗೋಲು ಆಕರ್ಷಕ ವಾಗಿತ್ತು. ಸೆಂಟರ್ ಫಾರ್ವಡ್ ಗುರುವಿಂದರ್ ಸಿಂಗ್ ಚಂಡಿ ಗೋಲು ಗಳಿಸುವುದರೊಂದಿಗೆ ಪ್ರಥಮಾರ್ಧದಲ್ಲಿ ಭಾರತ 6-1ರ ಮುನ್ನಡೆ ಸಾಧಿಸಿತ್ತು.

ದ್ವಿತಿಯಾರ್ಧದಲ್ಲಿ ಮತ್ತೆ ಮಿಂಚಿದ ಸುನಿಲ್ 38ನೇ ನಿಮಿಷದಲ್ಲಿ ಹೊಡೆದ ಆಕರ್ಷಕ ಗೋಲು ಟೂರ್ನಿಯ 50ನೇ ಗೋಲಾಗಿತ್ತು. 22ರ ಹರೆಯದ ಸುನಿಲ್ ರೈಟ್ ವಿಂಗ್‌ನಲ್ಲಿ  ಚುರುಕಿನ ಪಾಸ್ ಮತ್ತು ಬ್ಲಾಕ್‌ಗಳಿಂದ ಗಮನ ಸೆಳೆದರು.

ಈ ಅವಧಿಯಲ್ಲಿ ಇಟಲಿಯ ಆಟಗಾರರು ಆಕ್ರಮಣಕಾರಿ ಆಟವಾಡುವ ಪ್ರಯತ್ನದಲ್ಲಿ ಅಂಪೈರ್ ಕೆಂಗಣ್ಣಿಗೆ ಗುರಿಯಾದರು. ದನೀಶ್ ಮುಜ್ತಾಬಾ ಅವರಿಂದ ಚೆಂಡನ್ನು ಕಿತ್ತುಕೊಳ್ಳಲು ಅಪಾಯಕಾರಿಯಾಗಿ ಪ್ರಯತ್ನಿಸಿದ ನಿಕೋಲಾಸ್ ಹಸಿರು ಕಾರ್ಡ್ ದರ್ಶನ ಪಡೆದರು.

ಸೋಮವಾರ ವಿಶ್ರಾಂತಿಯ ದಿನವಾಗಿದ್ದು ಮಂಗಳವಾರ ಭಾರತವು ಫ್ರಾನ್ಸ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT