ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಅರ್ಹತೆಗೆ ಎರಡು ಹೆಜ್ಜೆ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: `ಆದದ್ದೆಲ್ಲ ಒಳ್ಳೆಯದಕ್ಕೆ~ ಎನ್ನುವ ಸಕಾರಾತ್ಮಕ ಮನೋಭಾವ ಈಗ ಭಾರತೀಯ ಪುರುಷರ ಹಾಕಿ ತಂಡದ ಆಟಗಾರರದ್ದು!

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಬುಧವಾರ ರಾತ್ರಿ ಕೆನಡಾ ವಿರುದ್ಧ ಕಠಿಣ ಜಯ ಸಿಕ್ಕಿದ್ದು ಒಳ್ಳೆಯದೇ ಆಯಿತು. ಮೊದಲ ಮೂರು ಪಂದ್ಯಗಳಲ್ಲಿ ಏಕಪಕ್ಷೀಯವಾದ ಜಯ ಗಳಿಸಿದ್ದ ತಂಡಕ್ಕೆ ಕೆನಡಾದ ಆಟಗಾರರು ತೀವ್ರ ಪ್ರತಿರೋಧ ಒಡ್ಡಿದ್ದರು.
 
ಇದರಿಂದ ತಮ್ಮ ದೌರ್ಬಲ್ಯಗಳ ಬಗ್ಗೆ ಎಚ್ಚೆತ್ತಿರುವ ಭರತ್ ಚೆಟ್ರಿ ಬಳಗವು ವಿಶ್ರಾಂತಿಯ ದಿನವಾದ ಶುಕ್ರವಾರ ಸಂಜೆ ಕಠಿಣ ಅಭ್ಯಾಸ ನಡೆಸಿತು. ಏಕೆಂದರೆ ಮುಂಬರುವ ಎರಡು ಪಂದ್ಯಗಳಲ್ಲಿ ಸಣ್ಣ ತಪ್ಪು ಮಾಡಿದರೆ ತೆರಬೇಕಾದ ಬೆಲೆ ದೊಡ್ಡದು.

ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಭಾರತ ವೇಗ ಮತ್ತು ಆಕ್ರಮಣಕಾರಿ ಆಟವನ್ನೇ ನೆಚ್ಚಿಕೊಂಡಿದೆ. ಇದರಿಂದ ತಂಡದ ಗೋಲ್‌ಕೀಪರ್‌ಗಳು ಹೆಚ್ಚು ದಾಳಿಯನ್ನು ಎದುರಿಸಲಿಲ್ಲ. ಇದೂ ಕೂಡ ಅಪಾಯಕಾರಿ ಎನ್ನುವುದು ಕೆನಡಾ ವಿರುದ್ಧದ ಪಂದ್ಯದಲ್ಲಿ ಕಂಡುಬಂತು. ಎರಡು ಗೋಲುಗಳನ್ನು ಬಿಟ್ಟುಕೊಟ್ಟಿದ್ದ ಶ್ರೀಜೇಶ್ ದೇಹಚಲನೆಯಲ್ಲಿ ನಿರೀಕ್ಷಿತ ಮಟ್ಟದ ಚುರುಕುತನ ಇಲ್ಲದಿರುವುದು ಸ್ಪಷ್ಟವಾಗಿತ್ತು. ಅಂತಹ ಸಣ್ಣ ತಪ್ಪುಗಳು ಮುಂದಿನ ಪಂದ್ಯಗಳಲ್ಲಿ ತುಟ್ಟಿಯಾಗಬಹುದು.

ಶುಕ್ರವಾರ ಎದುರಿಸಲಿರುವ ಪೊಲೆಂಡ್ ತಂಡದಲ್ಲಿ ಮಿರೋಸ್ಲೋವ್ ಜೆಸ್ಜೋಕ್, ಡೆರಿಸ್ ರಚಾವಸ್ಕಿ ಮತ್ತು ಡಟ್‌ಕ್ವಿಜ್ ಅವರಂತಹ ಅನುಭವಿ ಆಟಗಾರರ ದಾಳಿಯನ್ನು ಎದುರಿಸುವುದು ಸುಲಭವಲ್ಲ. ಮೊದಲ ಪಂದ್ಯದಲ್ಲಿ ಫಾನ್ಸ್ ವಿರುದ್ಧ ಸೋತಿದ್ದ ಪೊಲೆಂಡ್ ನಂತರದ ಮೂರು ಪಂದ್ಯಗಳಲ್ಲಿ ಗೆದ್ದು ದ್ವೀತೀಯ ಸ್ಥಾನದಲ್ಲಿದೆ.

ಆದ್ದರಿಂದಲೇ ವಿಶ್ರಾಂತಿ ದಿನವಾದ ಗುರುವಾರ ಗೋಲ್‌ಕೀಪರ್ ಭರತ್‌ಚೆಟ್ರಿ ಮತ್ತು ಶ್ರೀಜೇಶ್‌ಗೆ ವಿಶೇಷ ಮತ್ತು ಕಠಿಣ ತರಬೇತಿ ನೀಡಲಾಯಿತು. ದೈಹಿಕ ಪ್ರತಿಸ್ಪಂದನದ ವ್ಯಾಯಾಮಗಳನ್ನು ಮಾಡಿಸಲಾಯಿತು.

2008ರ `ಚಿಲಿ ಅನಾಹುತ~ದಲ್ಲಿ (ಒಲಿಂಪಿಕ್ ಅರ್ಹತೆ ಸುತ್ತು ನಡೆದದ್ದು ಚಿಲಿಯಲ್ಲಿ) ಆದ ಗಾಯ ಶಮನವಾಗಬೇಕಾದರೆ ಈ ಬಾರಿ ಲಂಡನ್ ವಿಮಾನ ಹತ್ತಲು ಟಿಕೆಟ್ ಪಡೆಯಲೇಬೇಕು. ಅದಕ್ಕಾಗಿ  ಶುಕ್ರವಾರದ ಲೀಗ್ ಪಂದ್ಯ ಮತ್ತು ಫೆಬ್ರುವರಿ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಗೆಲ್ಲಲೇಬೇಕು.

ಪಾಯಿಂಟ್ ಪಟ್ಟಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು 12 ಅಂಕ ಗಳಿಸಿರುವ ಭಾರತ ಅಗ್ರಸ್ಥಾನದಲ್ಲಿದೆ. ಫೈನಲ್ ಆಡುವುದೂ ಬಹುತೇಕ ಖಚಿತ. ಆದರೆ ಉಳಿದ ತಂಡಗಳನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಅವುಗಳು ಕೂಡ ಒಂದೊಂದು ಪಂದ್ಯವನ್ನು ಆಡಬೇಕು. ಗೋಲು ಗಳಿಕೆಯ ಲೆಕ್ಕಾಚಾರದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿಬಿಡುವ ಸಂಭವವನ್ನೂ ತಳ್ಳಿಹಾಕುವಂತಿಲ್ಲ. ಗೋಲು ಅಂತರದಲ್ಲಿ ಭಾರತವೇ ಮುಂದಿದೆ.

`ಶುಕ್ರವಾರದ ಪಂದ್ಯದಲ್ಲಿ ಸೋತರೂ ಫೈನಲ್‌ನಿಂದ ವಂಚಿತರಾಗುವ ಅವಕಾಶ ಕಡಿಮೆ. ಆದರೂ ಪೊಲೆಂಡ್ ಎದುರಿನ ಪಂದ್ಯವನ್ನೂ ಗೆಲ್ಲುತ್ತೇವೆ. ಇದರಿಂದ ತಂಡದ ಸ್ಥಾನ ಫೈನಲ್‌ನಲ್ಲಿ ಗಟ್ಟಿಯಾಗುತ್ತದೆ ಮತ್ತು ಆಟಗಾರರ ಮನೋಬಲವೂ ಹೆಚ್ಚುತ್ತದೆ~ ಎಂದು ತಂಡದ ಕೋಚ್ ಮೈಕೆಲ್ ನಾಬ್ಸ್ ಹೇಳುತ್ತಾರೆ.

ವೇಗವೇ ತಂಡದ ಶಕ್ತಿ: ಕಳೆದ ನಾಲ್ಕು ಪಂದ್ಯಗಳಲ್ಲಿ ಭಾರತದ ಆಟಗಾರರ ವೇಗವೇ ಗೆಲುವಿಗೆ ಪ್ರಮುಖ ಕಾರಣವಾಗಿದೆ. ತಂಡವು ಸಂಪೂರ್ಣ `ಫಿಟ್~ ಎಂಬ ಹೆಗ್ಗಳಿಕೆಯೊಂದಿಗೆ ಮೈದಾನಕ್ಕಿಳಿದಿತ್ತು.

ವೇಗದ ತಂತ್ರವು ಎದುರಾಳಿಗಳನ್ನು ದಿಕ್ಕೆಡಿಸಿದೆ. ಎಲ್ಲ ಪಂದ್ಯಗಳ ಪ್ರಥಮಾರ್ಧದಲ್ಲಿ 22 ಬಾರಿ ಆಟಗಾರರ ಬದಲಾವಣೆಗಳನ್ನು ಮಾಡಿರುವುದು ದಾಖಲೆಯಾಗಿದೆ. ಇದರಿಂದಾಗಿ ಮೊದಲ 35 ನಿಮಿಷಗಳಲ್ಲಿ ಭಾರತವೇ ನಿರಂತರವಾಗಿ ಮೇಲುಗೈ ಸಾಧಿಸಿದೆ.

ಸಿಂಗಪುರ ಎದುರಿನ ಪಂದ್ಯವನ್ನು ಹೊರತುಪಡಿಸಿದರೆ ಉಳಿದ ಪಂದ್ಯಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ಶೇ 80ರಷ್ಟು ಯಶಸ್ವಿಯಾಗಿದೆ. ಒಟ್ಟು ಒಂಬತ್ತು ಗೋಲುಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡಿರುವ `ಡ್ರ್ಯಾಗ್ ಫ್ಲಿಕ್~ ಪರಿಣಿತ ಸಂದೀಪ್ ಸಿಂಗ್ ಕಳೆದ ಮೂರು ಪಂದ್ಯಗಳ ಗೆಲುವಿನ ರೂವಾರಿ.

ಆದರೆ ಪೊಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ವಾಲ್ಮೀಕಿ ಆಡುತ್ತಿಲ್ಲ. ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ವಾಲ್ಮೀಕಿಗೆ ವೈದ್ಯರು ವಿಶ್ರಾಂತಿಯ ಸಲಹೆ ನೀಡಿದ್ದಾರೆ. ಆದ್ದರಿಂದ ಅರ್ಹತಾ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ರೂಪಿಂದರ್ ಸಿಂಗ್ ಅಂಗಳಕ್ಕಿಳಿಯಬಹುದು.

ರೈಟ್‌ವಿಂಗ್‌ನಲ್ಲಿ ಕನ್ನಡದ ಹುಡುಗ ಎಸ್.ವಿ. ಸುನಿಲ್ ಮತ್ತು ಲೆಫ್ಟ್‌ನಲ್ಲಿ ಶಿವೇಂದ್ರಸಿಂಗ್, ತುಷಾರ್ ಖಾಂಡ್ಕರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮಿಡ್‌ಫಿಲ್ಡ್‌ನಲ್ಲಿ ಸರವಣಜೀತ್‌ಸಿಂಗ್, ಸರದಾರ್ ಸಿಂಗ್, ದನೀಶ್ ುಜ್ತಾಬಾ ಚುರುಕು ಪ್ರದರ್ಶನ ನೀಡುತ್ತಿದ್ದು, ಪೆನಾಲ್ಟಿ ಕಾರ್ನರ್ ತಜ್ಞ ಕೊಡಗಿನ ರಘುನಾಥ್ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ್ದಾರೆ.

ಆದರೆ ಕೆನಡಾದ ವಿರುದ್ಧ ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಪೊಲೆಂಡ್ ವಿರುದ್ಧ ಗೆಲುವು ಸಾಧ್ಯ. ನಂತರ ಭಾನುವಾರದ ಫೈನಲ್ ಎಂಬ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಒಲಿಂಪಿಕ್ಸ್ ನಡೆಯುವ ಲಂಡನ್ ಅಂಗಳದಲ್ಲಿ ಆಡುವ ಅವಕಾಶ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT