ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಅರ್ಹತೆಗೆ ವಿಶ್ವ ಹಾಕಿ ಲೀಗ್

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್ ಮತ್ತು ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿಗಳ ಮಾದರಿಯನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಬದಲಾವಣೆ ಮಾಡಿದೆ. 2014ರ ವಿಶ್ವಕಪ್ ಹಾಕಿ ಟೂರ್ನಿ ಮತ್ತು 2016ರ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ವಿಶ್ವ ಹಾಕಿ ಲೀಗ್ ಪದ್ಧತಿಯನ್ನು ಆರಂಭಿಸಲಿದೆ.

ಒಲಿಂಪಿಕ್ಸ್‌ನ ಅರ್ಹತೆಗಾಗಿ ನಡೆಯುತ್ತಿರುವ ಅರ್ಹತಾ ಟೂರ್ನಿಯನ್ನು ವೀಕ್ಷಿಸಲು ಆಗಮಿಸಿರುವ ಎಫ್‌ಐಎಚ್ ಕಾರ್ಯನಿರ್ವಾಹಕ ಅಧಿಕಾರಿ ಕೆರ‌್ರಿ ಫೇರ್‌ವೆದರ್ ಮತ್ತು ಅಧ್ಯಕ್ಷ ಲಿಯಾಂಡ್ರೋ ನೆಗ್ರೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

`ಸದ್ಯ ಇರುವ ಅರ್ಹತಾ ಟೂರ್ನಿಗಳ ಪದ್ಧತಿಯಲ್ಲಿ ಬಹಳಷ್ಟು ದೇಶಗಳಿಗೆ ಆಡುವ ಅವಕಾಶವಿಲ್ಲ. ಹಾಕಿ ಆಟದ ಅಭಿವೃದ್ಧಿಗೆ  ಹೆಚ್ಚು ದೇಶಗಳು ಆಡುವುದು ಅವಶ್ಯಕವಾಗಿದೆ. ಆದ್ದರಿಂದ ಈ ವಿಶ್ವ ಲೀಗ್ ಪದ್ಧತಿಯನ್ನು ಅಳವಡಿಸಲಾಗುತ್ತಿದೆ. ಈ ಲೀಗ್ ಎರಡು ವರ್ಷದ ಅವಧಿಯಲ್ಲಿ ನಡೆಯುತ್ತದೆ.  ಮೊದಲ ಸುತ್ತಿನಲ್ಲಿ ವಲಯ ಅರ್ಹತಾ ಸುತ್ತು ನಡೆಯುತ್ತದೆ. ಅದರಲ್ಲಿ ಪುರುಷರ 82 ಮತ್ತು ಮಹಿಳೆಯರ 58 ತಂಡ ಭಾಗವಹಿಸುತ್ತವೆ~ ಎಂದು ವಿವರಿಸಿದರು.

`ಮೊದಲ ಸುತ್ತಿನಲ್ಲಿ ಮೊದಲ ಎಂಟು ಸ್ಥಾನ ಪಡೆಯುವ ತಂಡಗಳು ಮತ್ತು ಎಫ್‌ಐಎಚ್ ರ‌್ಯಾಂಕಿಂಗ್‌ನಲ್ಲಿರುವ ಮೊದಲ ಎಂಟನೇ ಸ್ಥಾನದಲ್ಲಿರುವ ದೇಶಗಳು ಸೆಮಿಫೈನಲ್ ಆಡುತ್ತವೆ. ಈ 16 ತಂಡಗಳನ್ನು ಎರಡು ವಿಭಾಗಗಳಲ್ಲಿ (ಒಂದು ವಿಭಾಗದಲ್ಲಿ 8) ವಿಂಗಡಿಸಲಾಗುವುದು. ಸೆಮಿಫೈನಲ್‌ನಲ್ಲಿ ಗೆಲ್ಲುವ ಎಂಟು ತಂಡಗಳು 2014ರ ಫೆಬ್ರುವರಿಯಲ್ಲಿ ಭಾರತದಲ್ಲಿಯೇ ನಡೆಯಲಿರುವ ಫೈನಲ್ ಸುತ್ತಿನಲ್ಲಿ ಭಾಗವಹಿಸುತ್ತವೆ. ಮಹಿಳೆಯರ ಫೈನಲ್ ಪಂದ್ಯವು 2013ರ ಡಿಸೆಂಬರ್‌ನಲ್ಲಿ ನಡೆಯಲಿದೆ~ ಎಂದರು.

ಭಾರತೀಯ ಹಾಕಿ ಸಂಸ್ಥೆ ಮತ್ತು ಹಾಕಿ ಇಂಡಿಯಾ ನಡುವಿನ ವಿವಾದ ಮತ್ತು ಇದೇ ತಿಂಗಳಲ್ಲಿ ಆರಂಭವಾಗಲಿರುವ ವಿಶ್ವ ಸರಣಿ ಹಾಕಿ ಕುರಿತ ಪ್ರಶ್ನೆಗಳಿಗೆ ಅವರು, `ಎಫ್‌ಐಎಚ್ ನಿಯಮಗಳನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ಆಟಗಾರರು, ತರಬೇತುದಾರರು ಮತ್ತು ಅಧಿಕಾರಿಗಳು ಆಯ್ಕೆಯನ್ನು ಮಾಡಿಕೊಳ್ಳಲು ಸ್ವತಂತ್ರರು~ ಎಂದರು.

`ಭಾರತದಲ್ಲಿ ಹಾಕಿ ಕ್ರೀಡೆಗೆ ಉತ್ತಮ ಭವಿಷ್ಯವಿದೆ. ಕ್ರಿಕೆಟ್ ಮಾದರಿಯಲ್ಲಿ ತ್ರಿಕೋನ ಮತ್ತು ಎರಡು ದೇಶಗಳ ನಡುವಿನ ಸರಣಿಗಳನ್ನು ಆಡಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಸದ್ಯ ಏಷ್ಯಾ ಕಪ್, ಚಾಲೆಂಜರ್ ಸೀರಿಸ್, ಅಜ್ಲನ್ ಶಾ ಟೂರ್ನಿಗಳ ವೇಳಾಪಟ್ಟಿಯನ್ನು ನೋಡಿ ಮುಂದಿನ ಯೋಜನೆ ರೂಪಿಸಲಾಗುವುದು~ ಎಂದರು.

ಸದ್ಯ ನಡೆಯುತ್ತಿರುವ ಅರ್ಹತಾ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಹೆಚ್ಚು ಶುಲ್ಕವನ್ನು ವಿಧಿಸುತ್ತಿರುವುದರ ಕುರಿತು ಸಂಸ್ಥೆಯ ಅಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT