ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಇನ್ನು 57ದಿನ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಇದೀಗ ಲಂಡನ್ ಒಲಿಂಪಿಕ್ಸ್‌ಗೆ ಕ್ಷಣಗಣನೆ ನಡೆಯುತ್ತಿರುವಾಗಲೇ, ಮುಂದಿನ ಒಲಿಂಪಿಕ್ಸ್ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿವೆ.

ಮುಂದಿನ ಒಲಿಂಪಿಕ್ಸ್ (2016) ಬ್ಯೂನಸ್ ಐರಿಸ್‌ನಲ್ಲಿ ನಡೆಯಲಿದ್ದು, ಅದಕ್ಕಾಗಿ ಬ್ರೆಜಿಲ್‌ನಲ್ಲಿ ತ್ವರಿತಗತಿಯಿಂದ ತಯಾರಿ ನಡೆಯುತ್ತಿದೆ. ಆದರೆ 2020ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಜಪಾನಿನ ಟೋಕಿಯೊ, ಟರ್ಕಿಯ ಇಸ್ತಾಂಬುಲ್ ಮತ್ತು ಸ್ಪೇನ್ ದೇಶದ ಮ್ಯಾಡ್ರಿಡ್ ನಗರಗಳು ತೀವ್ರ ಪೈಪೋಟಿ ನಡೆಸಿವೆ.

ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು 2013ರ ಸೆಪ್ಟೆಂಬರ್‌ನಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.

ಷಿಜೊ ಕನಾಕುರಿ
ಒಲಿಂಪಿಕ್ಸ್‌ನಲ್ಲಿ ಮೆರಥಾನ್ ಓಟದ ಪ್ರಸ್ತಾಪ ಬಂದಾಗಲೆಲ್ಲಾ ಜಪಾನಿನ ಷಿಜೊ ಕನಾಕುರಿ ಹೆಸರು ನೆನಪಾಗುತ್ತಲೇ ಇರುತ್ತದೆ. ಈಚೆಗಿನ ದಿನಗಳಲ್ಲಿ ಜಪಾನ್ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಬಂಗಾರದ ಸಾಧನೆ ತೋರಿದೆ.  ದೂರ ಓಟಕ್ಕೆ ಸಂಬಂಧಿಸಿದಂತೆ ಜಪಾನ್‌ನಲ್ಲಿ ಎಲ್ಲವೂ ಶುರುವಾಗಿದ್ದು ಸರಿಯಾಗಿ ನೂರು ವರ್ಷಗಳ ಹಿಂದೆ.

ನೂರು ವರ್ಷಗಳ ಹಿಂದೆ   ಸ್ಟಾಕ್‌ಹೋಂ ನಗರದಲ್ಲಿ ನಡೆದಿದ್ದ   ಒಲಿಂಪಿಕ್ಸ್‌ನಲ್ಲಿ ಜಪಾನ್‌ನ ಕನಾಕುರಿ ಷಿಜೊ ಪಾಲ್ಗೊಂಡಿದ್ದರು. ಆಗ ಮೆರಥಾನ್ ಓಟದ ದೂರ 40 ಕಿ.ಮೀ. ಸ್ಟಾಕ್‌ಹೋಂ ಒಲಿಂಪಿಕ್ಸ್‌ಗೆ ರಹದಾರಿ ಪಡೆಯಲಿಕ್ಕಾಗಿ ಜಪಾನ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಅವರು ನಿಗದಿತ ದೂರವನ್ನು 2ಗಂಟೆ 32ನಿಮಿಷ 45ಸೆಕೆಂಡುಗಳಲ್ಲಿ ಕ್ರಮಿಸಿದ್ದರು. ಅದು ಆ ಸಂದರ್ಭದ ವಿಶ್ವದಾಖಲೆ.

ಆದರೆ ಷಿಜೊ ಒಲಿಂಪಿಕ್ಸ್ ಚರಿತ್ರೆಯ ಪುಟಗಳಲ್ಲಿ ಉಳಿದಿರುವುದು ಅವರ ವಿಶ್ವದಾಖಲೆ ಸಾಧನೆಯಿಂದಲ್ಲ. ಅವರ `ನಾಪತ್ತೆ~ ಪ್ರಕರಣದಿಂದ!!

ಷಿಜೊ ಸ್ಟಾಕ್‌ಹೋಂನಲ್ಲಿ ಓಡುತ್ತಿದ್ದಾಗ ಅಸ್ವಸ್ಥರಾಗಿ ಹಾದಿಯಲ್ಲಿಯೇ ಕುಸಿದರು. ಅವರನ್ನು ಸ್ಥಳೀಯ ರೈತ ಕುಟುಂಬವೊಂದು ತಮ್ಮ ಮನೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿತು. ಒಂದು ದಿನದ ನಂತರ ಷಿಜೊ ಚೇತರಿಸಿಕೊಂಡರು. ಆದರೆ ಅವರು ಮತ್ತೆ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಸದ್ದಿಲ್ಲದೆ ಜಪಾನ್‌ಗೆ ಹಿಂತೆರಳಿದರು. ಸ್ವೀಡನ್‌ನ ಕ್ರೀಡಾ ಆಡಳಿತಗಾರರು ಷಿಜೊ ನಾಪತ್ತೆಯಾಗಿದ್ದಾರೆಂದೇ ಲಿಖಿತವಾಗಿ ದಾಖಲಿಸಿದರು.

ಆದರೆ ಷಿಜೊ ಸ್ಟಾಕ್‌ಹೋಂ ಒಲಿಂಪಿಕ್ಸ್ ನಡೆದ 8ವರ್ಷಗಳ ನಂತರ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಮೆರಥಾನ್‌ನಲ್ಲಿಯೂ ಪಾಲ್ಗೊಂಡು 16ನೇ ಸ್ಥಾನ ಪಡೆದಿದ್ದರು. 1924ರ ಒಲಿಂಪಿಕ್ಸ್‌ನಲ್ಲಿ ಅವರು ಮೆರಥಾನ್ ಓಟದಲ್ಲಿ ಗುರಿ ತಲುಪಲು ವಿಫಲರಾಗಿದ್ದರು.

1966ರಲ್ಲಿ ಷಿಜೊ ಅವರನ್ನು ಸ್ವಿಡನ್‌ನ ಸುದ್ದಿವಾಹಿನಿಯೊಂದು ಪತ್ತೆ ಮಾಡಿತು. ಸ್ಟಾಕ್‌ಹೋಂನಲ್ಲಿ ಅರ್ಧದಲ್ಲೇ ನಿಲ್ಲಿಸಿದ್ದ ಓಟವನ್ನು ಪೂರ್ಣಗೊಳಿಸುವಂತೆ ಆ ವಾಹಿನಿ ಷಿಜೊ ಅವರಲ್ಲಿ ಮನವಿ ಮಾಡಿತು. ಷಿಜೊ ಒಪ್ಪಿದರು. 54ವರ್ಷಗಳ ನಂತರ ಮತ್ತೆ ಸ್ಟಾಕ್‌ಹೋಂ ಗೆ ತೆರಳಿದ ಅವರು ಆ ಓಟವನ್ನು ಪೂರ್ಣಗೊಳಿಸಿದರು.

ಆ ಓಟ ವಿಭಿನ್ನ ಕಾರಣಕ್ಕಾಗಿ ದಾಖಲೆ ಎನಿಸಿದೆ. ಅವರು ಓಟ ಪೂರ್ಣಗೊಳಿಸಲು ತೆಗೆದುಕೊಂಡ ಕಾಲ 54 ವರ್ಷ, 8ತಿಂಗಳು, 6ದಿನ, 8ಗಂಟೆ, 32ನಿಮಿಷ, 20ಸೆಕೆಂಡುಗಳು ಎಂದು ದಾಖಲಾಯಿತು !!
ಅದೇನೇ ಇದ್ದರೂ ಜಪಾನ್‌ನಲ್ಲಿ ಮೆರಥಾನ್ ಓಟಕ್ಕೆ ಸಂಬಂಧಿಸಿದಂತೆ ಪರಂಪರೆಯೊಂದನ್ನು ಹುಟ್ಟು ಹಾಕಿರುವುದರಿಂದ ಷಿಜೊ ಅವರನ್ನು ಜಪಾನ್‌ನಲ್ಲಿ ಮೆರಥಾನ್ ಓಟ ಕ್ರೀಡೆಯ ಪಿತಾಮಹ ಎಂದೇ ನೆನಪಿಸಿಕೊಳ್ಳಲಾಗುತ್ತಿದೆ.

 ಸ್ವೀಡನ್

ಸರಿಯಾಗಿ ನೂರು ವರ್ಷಗಳ ಹಿಂದೆ ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಒಲಿಂಪಿಕ್ಸ್ ನಡೆದಿತ್ತು. ಆಗ 28 ದೇಶಗಳ ಸುಮಾರು 2,408 ಸ್ಪರ್ಧಿಗಳು ಅದರಲ್ಲಿ ಪಾಲ್ಗೊಂಡಿದ್ದರು. ಆತಿಥೇಯ ದೇಶ ಅಂದು 24 ಚಿನ್ನವೂ ಸೇರಿದಂತೆ 65 ಪದಕಗಳನ್ನು ಗೆದ್ದಿತ್ತು.

ಯೂರೊಪ್‌ನಲ್ಲಿ ದೊಡ್ಡ ದೇಶವಾಗಿರುವ ಸ್ವೀಡನ್‌ನಲ್ಲಿ ಕ್ರೀಡಾ ಚಟುವಟಿಕೆ ವಿಪರೀತ ನಡೆಯುತ್ತವೆ. ಐಸ್ ಹಾಕಿ ಮತ್ತು ಫುಟ್‌ಬಾಲ್ ಅಲ್ಲಿ ಜನಪ್ರಿಯ ಕ್ರೀಡೆ. ಐಸ್‌ಹಾಕಿಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಧರಿಸಿದ ಹೆಗ್ಗಳಿಕೆಯ ಸ್ವೀಡನ್ ಇದೇ ಕ್ರೀಡೆಯಲ್ಲಿ 1994 ಮತ್ತು 2006ರಲ್ಲಿ ಒಲಿಂಪಿಕ್ಸ್ ಬಂಗಾರದ ಪದಕವನ್ನೂ ಗೆದ್ದುಕೊಂಡಿದೆ.

1912ರಲ್ಲಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ನಂತರ ಈವರೆಗೆ ಸ್ವೀಡನ್ ಮತ್ತೆ ಆ ಸಾಹಸಕ್ಕೆ ಕೈಹಾಕಿಲ್ಲ. ಆಗ ನಡೆದ ಒಲಿಂಪಿಕ್ಸ್‌ನಲ್ಲಿ ಜಪಾನ್‌ದೇಶವು ಪಾಲ್ಗೊಂಡಿದ್ದು, ಏಷ್ಯಾ ಖಂಡದಿಂದ ಒಲಿಂಪಿಕ್ಸ್‌ನಲ್ಲಿ ಅಧಿಕೃತವಾಗಿ ಭಾಗವಹಿಸಿದ ಮೊದಲ ದೇಶ ಎಂಬ ಹಿರಿಮೆಗೆ ಪಾತ್ರವಾಯಿತು. ಆ ಒಲಿಂಪಿಕ್ಸ್‌ನಲ್ಲಿಯೇ ಮಹಿಳೆಯರ ಈಜು ಮತ್ತು ಡೈವಿಂಗ್ ಸ್ಪರ್ಧೆಗಳನ್ನು ಮೊಟ್ಟ ಮೊದಲ ಬಾರಿಗೆ ಸೇರಿಸಲಾಗಿತ್ತು.

ಚುಟುಕು

1896ರಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭವಾದಲ್ಲಿಂದ ಈವರೆಗೆ ಬ್ರಿಟನ್, ಆಸ್ಟ್ರೇಲಿಯ ಮತ್ತು ಸ್ವಿಟ್ಜರ್‌ಲೆಂಡ್ ದೇಶಗಳು ಮಾತ್ರ ನಿರಂತರವಾಗಿ ಪಾಲ್ಗೊಳ್ಳುತ್ತಾ ಬಂದಿವೆ.

***
ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ದೇಶ ಮತ್ತು ನಗರವನ್ನು ಆ ಕೂಟ ನಡೆಯುವ ಏಳು ವರ್ಷಗಳಿಗೆ ಮೊದಲು ಆಯ್ಕೆ ಮಾಡಲಾಗುತ್ತದೆ.
***

ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ಮೆರಥಾನ್ ಓಟದಲ್ಲಿ ಸ್ಪರ್ಧಿಸಿದ್ದ ಪೋರ್ಚುಗಲ್‌ನ ಫ್ರಾನ್ಸಿಸ್ಕೊ ಲಜಾರೊ ಓಡುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ಸತ್ತರು.

ಭಾರತ... ಏನು ಎತ್ತ
ಭಾರತದಲ್ಲಿ 1927ರ ನಂತರ ಒಲಿಂಪಿಕ್ ಆಂದೋಲನಕ್ಕೆ ಹೊಸ ರಂಗು ಮೂಡಿತು. ಆ ವರ್ಷ ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿ ಸರ್ ದೊರಾಬ್ಜಿ ಟಾಟಾ ಭಾರತ ಒಲಿಂಪಿಕ್ ಸಂಸ್ಥೆಯನ್ನು ಹುಟ್ಟು ಹಾಕಲು ಶ್ರಮಿಸಿದರು. ಅವರೇ ಅದರ ಮೊದಲ ಅಧ್ಯಕ್ಷರಾಗಿದ್ದರು.
 
ಅದರ ಮರುವರ್ಷವೇ ಮಹಾರಾಜ ಭೂಪಿಂದರ್ ಸಿಂಗ್ ಅಧ್ಯಕ್ಷರಾದರೆ, ಹತ್ತು ವರ್ಷಗಳ ನಂತರ ಅವರ ಪುತ್ರ ಯದವೀಂದ್ರ ಸಿಂಗ್ ಅಧ್ಯಕ್ಷರಾಗಿ 1960ರವರೆಗೆ ಅದೇ ಸ್ಥಾನದಲ್ಲಿ ಮುಂದುವರಿದರು. ಆ ನಂತರ ಬಲೀಂದ್ರ ಸಿಂಗ್, ಓಂ ಪ್ರಕಾಶ್ ಮೆಹ್ರಾ, ವಿ.ಸಿ.ಶುಕ್ಲ, ಶಿವಂತಿ ಆದಿತ್ಯನ್, ಸುರೇಶ್ ಕಲ್ಮಾಡಿ ಅಧ್ಯಕ್ಷ ಪಟ್ಟಕ್ಕೇರಿದರು.

ಭಾರತದಲ್ಲಿ ಒಲಿಂಪಿಕ್ ಕ್ರೀಡಾ ಚಟುವಟಿಕೆಗಳು ವ್ಯಾಪಕಗೊಳ್ಳಲು ಈ ಸಂಸ್ಥೆ ಉತ್ತಮ ಕೆಲಸವನ್ನೇ ಮಾಡಿದೆ. ಅಗತ್ಯ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದೆ. ದೇಶದಾದ್ಯಂತ ವಿವಿಧ ಕ್ರೀಡಾ ಸಂಸ್ಥೆ, ಫೆಡರೇಷನ್‌ಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಅರ್ಥಪೂರ್ಣ ಕೆಲಸ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT