ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಈಜು: ಗಗನ್‌ಗೆ ವರವಾದ ನಿಯಮ!

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಒಲಿಂಪಿಕ್ಸ್ ಇನ್ನು 19 ದಿನ

ಒಲಿಂಪಿಕ್ಸ್ ಈಜು: ಅಚ್ಚರಿಗೆ ಕಾರಣವಾದ ವಿವಾದಾತ್ಮಕ ಸಾರ್ವತ್ರಿಕ ಕೋಟಾ

ನವದೆಹಲಿ (ಪಿಟಿಐ):  ವಿವಾದಾತ್ಮಕ `ಸಾರ್ವತ್ರಿಕ~ (ಯೂನಿವರ್ಸ್ಯಾಲಿಟಿ) ಕೋಟಾ ನಿಯಮವು ವರವಾಗಿ ಪರಿಣಮಿಸಿದ್ದು ಕರ್ನಾಟಕದ ಈಜು ಸ್ಪರ್ಧಿ ಗಗನ್ ಎ.ಪಿ. ಉಲಾಳಮಠ ಅವರಿಗೆ. ಆದರೆ ದೇಶದ ನಾಲ್ವರು ಖ್ಯಾತ ಈಜು ಸ್ಪರ್ಧಿಗಳಿಗೆ ಇದೊಂದು ಆಘಾತ ಎನಿಸಿದೆ!

ಗಗನ್‌ಗೆ ಮಾತ್ರ ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಭಾರತ ಈಜು ಫೆಡರೇಷನ್ (ಎಸ್‌ಎಫ್‌ಐ) ಕೂಡ ಚಡಪಡಿಸುವಂತೆ ಮಾಡಿದೆ. ಏಕೆಂದರೆ ಒಲಿಂಪಿಕ್ ಅರ್ಹತಾ ಮುಟ್ಟಿದ್ದ ವೀರ್‌ಧವಳ್ ಖಾಡೆ (100 ಮೀ. ಫ್ರೀಸ್ಟೈಲ್), ಸಂದೀಪ್ ಸೆಜ್ವಾಲ್ (100 ಮೀ. ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್), ಆ್ಯರನ್ ಡಿಸೋಜಾ (200 ಮೀ. ಫ್ರೀಸ್ಟೈಲ್) ಹಾಗೂ ಸೌರಭ್ ಸಾಂಗ್ವೇಕರ್ (1500 ಮೀ. ಫ್ರೀಸ್ಟೈಲ್) ಅವರನ್ನು `ಫಿನಾ~ ತನ್ನ ಅಂತಿಮ ಆಯ್ಕೆಯಲ್ಲಿ ಪರಿಗಣಿಸಲಿಲ್ಲ.

ಇದೇ ಕಾರಣಕ್ಕಾಗಿ ಅನಿವಾರ್ಯವಾಗಿ ಕೊನೆಗೆ ಸಾರ್ವತ್ರಿಕತ್ವ ಕೋಟಾ ಅಡಿಯಲ್ಲಿ ಒಬ್ಬ ಸ್ಪರ್ಧಿಗಾದರೂ ಅವಕಾಶ ನೀಡುವಂತೆ ಫೆಡರೇಷನ್ ಕೇಳಿಕೊಂಡಿತು. ಆಗ `ಫಿನಾ~ ಒಪ್ಪಿಗೆ ಕೊಟ್ಟಿದ್ದು ಗಗನ್‌ಗೆ ಪುರುಷರ 1500 ಮಿ. ಫ್ರಿಸ್ಟೈಲ್‌ನಲ್ಲಿ ಪಾಲ್ಗೊಳ್ಳಲು.

ಈ ವಿಷಯವನ್ನು ಭಾರತ ಈಜು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವೀರೆಂದ್ರ ನಾನಾವತಿ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. `ನಿರ್ಣಯ ಕೈಗೊಂಡಿದ್ದು ಫಿನಾ. ಒಲಿಂಪಿಕ್ ಅರ್ಹತಾ ಮಟ್ಟವನ್ನು ಮುಟ್ಟದೇ ಇರುವ      ಗಗನ್‌ಗೆ ಅವಕಾಶ ನೀಡುವಂತೆ ನಾವು ಕೇಳಿರಲಿಲ್ಲ~ ಎಂದು ಸ್ಪಷ್ಟಪಡಿಸಿದರು.

`ನಮ್ಮ ನಾಲ್ವರು ಈಜು ಸ್ಪರ್ಧಿಗಳು ಒಲಿಂಪಿಕ್ ಅರ್ಹತಾ ಮಟ್ಟವನ್ನು ಮುಟ್ಟಿದ್ದರು. ಅವರಿಗೆ ಖಚಿತವಾಗಿ ಒಲಿಂಪಿಕ್ ಸ್ಥಾನ ಸಿಗುತ್ತದೆಂದು ನಿರೀಕ್ಷೆ ಮಾಡಿದ್ದೆವು. ಆದರೆ ಎಲ್ಲ ಅರ್ಹತಾ ಕೂಟಗಳು ಮುಗಿದ ನಂತರ ಪರಿಷ್ಕರಣೆ ಮಾಡಿದ ಫಿನಾ ತಾಂತ್ರಿಕ ಅಧಿಕಾರಿಗಳು ಈ ನಾಲ್ವರ ಹೆಸರನ್ನು ಕೈಬಿಟ್ಟರು~ ಎಂದು ವಿವರಿಸಿದರು ನಾನಾವತಿ.

`ವೀರ್‌ಧವಳ್, ಸಂದೀಪ್, ಆ್ಯರನ್ ಹಾಗೂ ಸೌರಭ್ ಅವರ ಹೆಸರನ್ನು ಒಲಿಂಪಿಕ್ ಆಯ್ಕೆ ಸಮಯ ಮುಟ್ಟಿ ಅರ್ಹತೆ ಪಡೆದವರ ಅಂತಿಮ ಪಟ್ಟಿಯಿಂದ ಕೈಬಿಡಲಾಯಿತು. ಇದು ನಮಗೂ ಆಘಾತಕಾರಿ ಎನಿಸಿತು. ವಿಷಯ ತಿಳಿದ ತಕ್ಷಣವೇ ದೇಶದಿಂದ ಯಾರೊಬ್ಬ ಸ್ಪರ್ಧಿಗೆ ಅವಕಾಶ ಇಲ್ಲದಂತಾಗುತ್ತದೆ ಎಂದು ಫಿನಾಗೆ ಮನವಿ ಮಾಡಿಕೊಂಡೆವು. ನಮ್ಮ ಈ ಮನವಿಗೆ ಪ್ರತಿಯಾಗಿ ಸಾರ್ವತ್ರಿಕ ಕೋಟಾ ನಿಯಮದ ಅಡಿಯಲ್ಲಿ ಒಬ್ಬ ಸ್ಪರ್ಧಿಗೆ ಮಾತ್ರ ಅವಕಾಶ ನೀಡಿದೆ~ ಎಂದು ಹೇಳಿದರು.

`ಸಾರ್ವತ್ರಿಕ ಕೋಟಾದ ಅಡಿಯಲ್ಲಿ ಸ್ಥಾನ ಪಡೆಯುವ ಈಜು ಸ್ಪರ್ಧಿಯು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವುದು ಅಗತ್ಯ. ಶಾಂಘೈನಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಗನ್ ಅವರು ಪುರುಷರ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಅಲ್ಲಿ ಅವರು 8:21.23 ಸೆ.ಗಳಲ್ಲಿ ಗುರಿ ಮುಟ್ಟಿದ್ದರು. ಈ ಅಂಶವನ್ನು ಮಾತ್ರ ಪರಿಗಣಿಸಿದ ಫಿನಾ ಗಗನ್‌ಗೆ ಅವಕಾಶ ನೀಡಿದೆ~ ಎಂದ ನಾನಾವತಿ `ಇಲ್ಲಿಗೆ ಮುಗಿಯಿತು. ಬಾಕಿ ನಾಲ್ಕು ಈಜು ಸ್ಪರ್ಧಿಗಳ ಲಂಡನ್ ಒಲಿಂಪಿಕ್ಸ್ ಕನಸು ನುಚ್ಚುನೂರಾಗಿದೆ~ ಎಂದು ಬೇಸರದಿಂದ ನುಡಿದರು.

`ನಮಗೂ ನಿರಾಸೆಯಾಗಿದೆ. ಮುಖ್ಯವಾಗಿ ಫಿನಾ ಸಾರ್ವತ್ರಿಕ ಕೋಟಾದ ಅಡಿಯಲ್ಲಿ ನೀಡಿದ್ದು ಕೇವಲ ಒಂದು ಸ್ಥಾನ. ಯಾವ ದೇಶದ ಸ್ಪರ್ಧಿಗಳು ಒಲಿಂಪಿಕ್ ಅರ್ಹತಾ ಸಮಯ (ಒ.ಕ್ಯೂ.ಟಿ.) ಹಾಗೂ ಒಲಿಂಪಿಕ್ ಆಯ್ಕೆ ಸಮಯ (ಒಎಸ್‌ಟಿ) ಮಟ್ಟವನ್ನು ಮುಟ್ಟುವುದಿಲ್ಲವೋ ಅಂಥ ದೇಶದ ಇಬ್ಬರು (ಮಹಿಳೆಯರ-ಪುರುಷರ ವಿಭಾಗದಲ್ಲಿ ತಲಾ ಒಬ್ಬರು) ಅವಕಾಶ ಪಡೆಯುತ್ತಾರೆ. ಆದರೆ ಭಾರತಕ್ಕೆ ಎರಡು ಸ್ಥಾನ ಸಿಗಲಿಲ್ಲ. ಅದಕ್ಕೆ ಕಾರಣ ಭಾರತದ ಯಾವುದೇ ಮಹಿಳಾ ಈಜು ಸ್ಪರ್ಧಿಯು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರಲಿಲ್ಲ~ ಎಂದು ಸ್ಪಷ್ಟಪಡಿಸಿದರು.

`ವಿಶ್ವ ಈಜು ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದ ಆ್ಯರನ್ ಇಲ್ಲವೆ ಸೌರಭ್‌ಗೆ ಅವಕಾಶ ಕೊಡಬೇಕೆಂದು ಕೋರಿದ್ದ ನಮ್ಮ ಮನವಿಯನ್ನು ಫಿನಾ ತಿರಸ್ಕರಿಸಿದೆ~ ಎಂದು ನುಡಿದರು.

`ಸಾರ್ವತ್ರಿಕ ಕೋಟಾ ನಿಯಮವು ವಿವಾದಾತ್ಮಕವಾದದ್ದು. ಐದು ವರ್ಷಗಳ ಹಿಂದಷ್ಟೇ ಇದನ್ನು ಜಾರಿಗೆ ತರಲಾಗಿದೆ. ನಾವು ಈ ಬಗ್ಗೆ ಮುಂದಾಲೋಚನೆ ಮಾಡಬೇಕಾಗಿತ್ತು~ ಎಂದ ಅವರು `ಈಗ ಏನೂ ಮಾಡಲು ಆಗುವುದಿಲ್ಲ. ಭಾರತದ ಮತ್ತೊಬ್ಬ ಈಜು ಸ್ಪರ್ಧಿಯು ಲಂಡನ್‌ನಲ್ಲಿ ಸ್ಪರ್ಧಿಸಲು ಆಗದು~ ಎಂದು ಕಡ್ಡಿ ಮುರಿದ ಹಾಗೆ ಹೇಳಿದರು.

ಏನಿದು ಸಾರ್ವತ್ರಿಕ ಕೋಟಾ?

`ಸಾರ್ವತ್ರಿಕ ಕೋಟಾ~ ಇದು ವಿಶ್ವಮಟ್ಟದಲ್ಲಿ ಈಜು ಸ್ಪರ್ಧೆಯ ಉಸ್ತುವಾರಿ ನೋಡಿಕೊಳ್ಳುವ `ಫಿನಾ~ ಅಳವಡಿಸಿಕೊಂಡಿರುವ ವಿವಾದಾತ್ಮಕ ನಿಯಮ. ಇದನ್ನು `ವೈಲ್ಡ್ ಕಾರ್ಡ್~ ಪ್ರವೇಶಕ್ಕೆ ಸ್ವಲ್ಪ ಮಟ್ಟಿಗೆ ಹೋಲಿಕೆ ಮಾಡಬಹುದು. ಆದರೆ ವೈಲ್ಡ್ ಕಾರ್ಡ್‌ನಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರ ಆಗದು.

ದೇಶವೊಂದರ ಈಜು ಸ್ಪರ್ಧಿಗಳು ಒಲಿಂಪಿಕ್ ಅರ್ಹತಾ ಸಮಯ (ಒಎಸ್‌ಟಿ) ಮುಟ್ಟಿದ್ದರೆ ಅವರೆಲ್ಲ ಸಹಜವಾಗಿಯೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡು ದೇಶದ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ಫಿನಾ ಬಾಕಿ ಕ್ರೀಡೆಯಂತೆ ಈಜಿನಲ್ಲಿ ನಿಯಮ ಸುಲಭವಾಗಿಸಿಲ್ಲ. ಅರ್ಹತಾ ಮಟ್ಟ ಮುಟ್ಟಿದವರನ್ನು ಫಿನಾ ಅಂತಿಮವಾಗಿ ಆಯ್ಕೆಮಾಡಿ ಸಂಬಂಧಿಸಿದ ದೇಶದ ಈಜು ಫೆಡರೇಷನ್‌ಗಳಿಗೆ ತಿಳಿಸುತ್ತದೆ.

ನಾಲ್ವರು ಈಜು ಸ್ಪರ್ಧಿಗಳು ವಿವಿಧ ಕೂಟಗಳಲ್ಲಿ ಅರ್ಹತಾ ಮಟ್ಟ ಮುಟ್ಟಿದ್ದರು ಎಂದುಕೊಳ್ಳಿ. ಅದೇ ಅಂತಿಮ ಮಾನದಂಡವಲ್ಲ. `ಫಿನಾ~ ಆ ನಾಲ್ವರನ್ನೂ ಅಂತಿಮವಾಗಿ ಪರಿಗಣಿಸದೆಯೂ ಇರಬಹುದು. ಭಾರತದ ನಾಲ್ವರು ಪ್ರಮುಖ ಈಜು ಸ್ಪರ್ಧಿಗಳ ವಿಷಯದಲ್ಲಿ ಆಗಿದ್ದೂ ಅದೇ.

ಇಂಥ ಪರಿಸ್ಥಿತಿಯಲ್ಲಿ ದೇಶವೊಂದರ ಈಜು ಫೆಡರೇಷನ್ ಯಾವುದೇ ಸ್ಪರ್ಧಿಗಳು ಇಲ್ಲದಂತಾಗದಿರಲಿ ಎಂದು ಮನವಿ ಮಾಡಿದಾಗ ಸಿಗುತ್ತದೆ `ಸಾರ್ವತ್ರಿಕ ಕೋಟಾ~. ಅದಕ್ಕೆ ಮಾನದಂಡವೇನು ಇರುವುದಿಲ್ಲ. ಸ್ಥಾನವೊಂದನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಸಿಕ್ಕ ಅವಕಾಶ ಮಾತ್ರ ಅದಾಗಿರುತ್ತದೆ. `ಸಾರ್ವತ್ರಿಕ ಕೋಟಾ~ ಕೊಟ್ಟರೆ ಅದೇ ದೇಶದ ಬಾಕಿ ಸ್ಪರ್ಧಿಗಳ ಒಲಿಂಪಿಕ್ ಕನಸು ನುಚ್ಚುನೂರು ಎಂದೇ ಅರ್ಥ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT