ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಸಂಭ್ರಮದ ನೆನಪು

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಜಗತ್ತಿನ ಅತಿದೊಡ್ಡ ಕ್ರೀಡಾಮೇಳ ಒಲಿಂಪಿಕ್ಸ್‌ಗೆ ಸಾಕ್ಷಿಯಾಗುವ ಅದೃಷ್ಟ 2012ರ ಇಸವಿಗೆ ಲಭಿಸಿತು. ಒಲಿಂಪಿಕ್ಸ್ ಇತಿಹಾಸದ ಪುಟಗಳನ್ನು ತೆರೆಯುವ ಸಂದರ್ಭ ಅಲ್ಲಿ 2012 ಕ್ಕೂ ಶಾಶ್ವತವಾಗಿ ಸ್ಥಾನ ಲಭಿಸಲಿದೆ. ಕೂಟವನ್ನು ಯಶಸ್ವಿಯಾಗಿ ನಡೆಸಿದ ಲಂಡನ್ ನಗರ ಎಲ್ಲರಿಗೂ ಮಾದರಿಯಗಿ ನಿಂತಿತು.

ಜಮೈಕದ ವೇಗದ ಓಟಗಾರ ಉಸೇನ್ ಬೋಲ್ಟ್ ಮತ್ತು ಅಮೆರಿಕದ ಈಜು ಸ್ಪರ್ಧಿ ಮೈಕಲ್ ಫೆಲ್ಪ್ಸ್ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಇದರ ಜೊತೆಗೆ ಲಂಡನ್ ಕೂಟ ಕ್ರೀಡಾಪ್ರೇಮಿಗಳಿಗೆ ಹಲವಾರು ಸ್ಮರಣೀಯ ಕ್ಷಣಗಳನ್ನು ನೀಡಿತು. ಅಮೆರಿಕ ಪದಕಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಲು ಯಶಸ್ವಿಯಾಯಿತು.

17ರ ಹರೆಯದ ಮಿಸ್ಸಿ ಫ್ರಾಂಕ್ಲಿನ್ (ಈಜಿನಲ್ಲಿ 4 ಚಿನ್ನ) ಮತ್ತು ಆ್ಯಲಿಸನ್ ಫೆಲಿಕ್ಸ್ (ಅಥ್ಲೆಟಿಕ್ಸ್‌ನಲ್ಲಿ 3 ಚಿನ್ನ) ಅಮೆರಿಕದ ಪರ ಗಮನಾರ್ಹ ಪ್ರದರ್ಶನ ನೀಡಿದರು. ಅದೇ ರೀತಿ ಇಥಿಯೋಪಿಯದ ತಿರುನೇಶ್ ದಿಬಾಬ, ಜಮೈಕದ ಶೆಲ್ಲಿ ಆ್ಯನ್ ಫ್ರೇಸರ್, ಚೀನಾದ ಯೆ ಶಿವೆನ್, ಗ್ರೆನಾಡದ ಕಿರನಿ ಜೇಮ್ಸ, ಬ್ರಿಟನ್‌ನ ಮೊಹಮ್ಮದ್ ಫರಾ ಅದ್ವಿತೀಯ ಸಾಧನೆಯ ಮೂಲಕ   ಒಲಿಂಪಿಕ್ಸ್‌ನ `ತಾರೆ'ಗಳಾಗಿ ಮೆರೆದರು.

ಭಾರತದ ಐತಿಹಾಸಿಕ ಸಾಧನೆ: ಆರು ಪದಕಗಳನ್ನು ಗೆದ್ದುಕೊಂಡ ಭಾರತ ತನ್ನ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿತು. ವಿಜಯ್ ಕುಮಾರ್, ಸುಶೀಲ್ ಕುಮಾರ್, ಗಗನ್ ನಾರಂಗ್, ಸೈನಾ ನೆಹ್ವಾಲ್, ಮೇರಿ ಕೋಮ್ ಮತ್ತು ಯೋಗೇಶ್ವರ್ ದತ್ ಪದಕದೊಂದಿಗೆ ತವರಿಗೆ ಮರಳಿದರು. ಈ ಮೂಲಕ ಭಾರತ ಮುಂದಿನ ವರ್ಷಗಳಲ್ಲಿ ಕ್ರೀಡಾ ಶಕ್ತಿಯಾಗಿ ಮೆರೆಯುವ ಎಲ್ಲ ಸೂಚನೆಗಳನ್ನು ನೀಡಿದೆ.

ಅಥ್ಲೆಟಿಕ್ಸ್ ಹೆಜ್ಜೆಗುರುತು...
ಭಾರತದ ಅಥ್ಲೀಟ್‌ಗಳಿಗೆ ಈ ವರ್ಷ ನಿರಾಶಾದಾಯಕ ಎನಿಸಿಕೊಂಡಿತು. ಲಂಡನ್ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪದಕದ ಭರವಸೆ ಇಡಲಾಗಿತ್ತು. ಆದರೆ ನಮ್ಮ ಅಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ವಿಫಲವಾದರು. ಒಲಿಂಪಿಕ್ಸ್‌ನಲ್ಲಿ ಭಾರತದ 14 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ವಿಕಾಸ್ ಗೌಡ ಮತ್ತು ಕೃಷ್ಣ ಪೂನಿಯಾ ಮೇಲೆ ಪದಕದ ಭರವಸೆ ಇಡಲಾಗಿತ್ತು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಉದ್ದೀಪನ ಮದ್ದು ವಿವಾದ ಕೂಡಾ ಅಥ್ಲೆಟಿಕ್ಸ್ ಮೇಲೆ ಕರಿನೆರಳು ಬೀರಿದೆ. 2011 ರಲ್ಲಿ ಭಾರತದ ಆರು ಪ್ರಮುಖ ಅಥ್ಲೀಟ್‌ಗಳು ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. 2012 ರಲ್ಲೂ ಇಂತಹ ಹಲವು ಪ್ರಕರಣಗಳು ನಡೆದವು. ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ವಿಫಲವಾದರೂ, ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು!

ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಪ್ರಕಟಿಸಿದ ಪಟ್ಟಿಯಲ್ಲಿ ಭಾರತದ 40 ಸ್ಪರ್ಧಿಗಳು ನಿಷೇಧಿತ ಮದ್ದು ಸೇವಿಸಿರುವುದು ಸಾಬೀತಾಗಿದೆ. ವಿಶ್ವದಲ್ಲಿ ಒಟ್ಟು 204 ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಕಂಡುಬಂದಿದ್ದವು. ಅದರಲ್ಲಿ ಭಾರತ ಇತರ ಎಲ್ಲ ದೇಶಗಳನ್ನು ಹಿಂದಿಕ್ಕಿತು.

ಟೆನಿಸ್: ಟೆನಿಸ್‌ನಲ್ಲಿ ಕೆಲವು ಆಟಗಾರರು ವೈಯಕ್ತಿಕ ಸಾಧನೆಯ ಮೂಲಕ ಮಿಂಚಿದರೂ, ಲಂಡನ್ ಒಲಿಂಪಿಕ್ಸ್‌ಗೆ ತಂಡದ ಆಯ್ಕೆಯ ವೇಳೆ ಉಂಟಾದ ವಿವಾದ ಮಾತ್ರ ಎಲ್ಲ ಸಾಧನೆಗಳನ್ನೂ ಮರೆಸಿತು.

ಲಿಯಾಂಡರ್ ಪೇಸ್ 2012ರ ಋತುವನ್ನು ಯಶಸ್ಸಿನೊಂದಿಗೆ ಆರಂಭಿಸಿದರು. ರಾಡೆಕ್ ಸ್ಟೆಪನೆಕ್ ಜೊತೆ ಸೇರಿಕೊಂಡು ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಡಬಲ್ಸ್ ವಿಭಾಗದ ಕಿರೀಟ ಗೆದ್ದುಕೊಂಡರು. ಈ ಮೂಲಕ ಎಲ್ಲ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ ಪ್ರಶಸ್ತಿ ಗೆದ್ದ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT