ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಇನ್ನು 43 ದಿನ

Last Updated 13 ಜೂನ್ 2012, 19:30 IST
ಅಕ್ಷರ ಗಾತ್ರ

ಭಾರತ ........ಏನು ಎತ್ತ

ಅಜಿತ್‌ಪಾಲ್ ಸಿಂಗ್
ಅಜಿತ್‌ಪಾಲ್ ಸಿಂಗ್ ಭಾರತ ಕಂಡ ಶ್ರೇಷ್ಠ ಹಾಕಿ ಆಟಗಾರ. ಇವರು ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದೀಗ ಲಂಡನ್ ಒಲಿಂಪಿಕ್ಸ್‌ಗೆ ಭಾರತ ತಂಡದ ಜತೆಗೆ ಚೆಫ್ ಡಿ ಮಿಷನ್ ಆಗಿ ತೆರಳಲಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ ಪಂಜಾಬ್‌ನ ಸಂಸಾರ್‌ಪುರ್‌ನಲ್ಲಿ ಜನಿಸಿದ ಅಜಿತ್‌ಪಾಲ್ ಸಿಂಗ್ ಈ ದೇಶದ ಹಾಕಿ ರಂಗದಲ್ಲಿ ಬಲು ಎತ್ತರಕ್ಕೇರಿದರು. ಶಾಲಾ ಕಾಲೇಜು ದಿನಗಳಲ್ಲಿ ಹಾಕಿ ಆಟದಲ್ಲಿ ಸಾಕಷ್ಟು ಪರಿಣತಿ ಗಳಿಸಿದ ಇವರು 1966ರಲ್ಲಿ ಮೊದಲ ಬಾರಿಗೆ ಅಂತರ ರಾಷ್ಟ್ರಿಯ ಪಂದ್ಯದಲ್ಲಿ ಆಡಿದರು. ಜಪಾನ್ ವಿರುದ್ಧ ನಡೆದ ಪಂದ್ಯಗಳಲ್ಲಿ ಇವರು ಉತ್ತಮ ಸಾಮರ್ಥ್ಯ ತೋರಿದ್ದರು.

ಸೆಂಟರ್ ಹಾಫ್ ಸ್ಥಾನದಲ್ಲಿ ಇವರ ಚಾಕಚಕ್ಯತೆ ಎಷ್ಟಿತ್ತೆಂದರೆ ನಂತರದ ಒಂದು ದಶಕದ ಕಾಲ ಇವರು ಭಾರತ ತಂಡಕ್ಕೆ ಅನಿವಾರ್ಯ ಎನಿಸಿದ್ದರು. 1968ರಲ್ಲಿ ನಡೆದ ಮೆಕ್ಸಿಕೊ ಒಲಿಂಪಿಕ್ಸ್ ಮತ್ತು 1972ರ ಮ್ಯೂನಿಕ್ ಒಲಿಂಪಿಕ್ಸ್‌ಗಳಲ್ಲಿ ಭಾರತ ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಎರಡೂ ಸಲ ಭಾರತದ ಪರ ಅಜಿತ್‌ಪಾಲ್ ಅತ್ಯುತ್ತಮವಾಗಿ ಆಡಿದ್ದರು. 1975ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಅಜಿತ್‌ಪಾಲ್ ಸಿಂಗ್ ನಾಯಕತ್ವ ವಹಿಸಿದ್ದರು.

ಜಾಕಿ ಜಾಯ್ನರ್ ಕೆರ್ಸಿ
ಇಪ್ಪತ್ತನೇ ಶತಮಾನದ ಸರ್ವಕಾಲ ಶ್ರೇಷ್ಠ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಾಕಿ ಜಾಯ್ನರ್ ಕೆರ್ಸಿ ಅವರು ಒಲಿಂಪಿಕ್ಸ್‌ನಲ್ಲಿ ತೋರಿರುವ ಸಾಧನೆ ಅಚ್ಚರಿ ಮೂಡಿಸುವಂತಹದ್ದು.ಲಾಸ್‌ಏಂಜಲೀಸ್‌ನ ಇವರು ಶಾಲಾ ದಿನಗಳಲ್ಲೇ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಾ ಬಂದಿದ್ದರು.

ಆಗ ಇವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ  ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯೂ ಆಗಿದ್ದರು. ಅದೇ ವೇಳೆ ಇವರು ಹೆಪ್ಟಥ್ಲಾನ್‌ನಲ್ಲಿಯೂ ಕಠಿಣ ತರಬೇತಿ ಪಡೆದು ರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಗಮನ ಸೆಳೆದರು. ಹೀಗಾಗಿ 1984ರಲ್ಲಿ ಲಾಸ್‌ಏಂಜಲೀಸನಲ್ಲೇ ನಡೆದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅಮೆರಿಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದರು.

ಅಲ್ಲಿ ಹೆಪ್ಟಥ್ಲಾನ್‌ನಲ್ಲಿ ರಜತ ಪದಕ ಗಳಿಸಿದರು. ಆ ನಂತರ ಸತತ ತರಬೇತಿ ಪಡೆದ ಇವರು 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಹೆಪ್ಟಥ್ಲಾನ್ ಮತ್ತು ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಬಾರ್ಸಿಲೋನಾದಲ್ಲಿ 1992ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಹೆಪ್ಟಥ್ಲಾನ್ ಸ್ವರ್ಣ ಗಳಿಸಿದ ಇವರು ಲಾಂಗ್‌ಜಂಪ್‌ನಲ್ಲಿ ರಜತ ಪದಕ ಪಡೆದರು. 1996ರಲ್ಲಿ ಅಟ್ಲಾಂಟಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕವನ್ನಷ್ಟೇ ಗೆಲ್ಲಲು ಶಕ್ತರಾದರು.

ಈ ನಡುವೆ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಹೆಪ್ಟಥ್ಲಾನ್ ಮತ್ತು ಲಾಂಗ್‌ಜಂಪ್‌ಗಳಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದ ಹಿರಿಮೆಗೂ ಪಾತ್ರರಾದರು. ಇವರು ಹಿಂದೆ ಲಾಂಗ್‌ಜಂಪ್‌ನಲ್ಲಿ 7.49ಮೀಟರ್ಸ್ ದೂರ ಜಿಗಿದು ವಿಶ್ವ ದಾಖಲೆ ನಿರ್ಮಿಸಿದ್ದರು.

ಅಥ್ಲೆಟಿಕ್ಸ್‌ನಲ್ಲಿ ಇವರು ಎತ್ತರದ ಸಾಧನೆ ತೋರಿದ್ದರೂ, ಬ್ಯಾಸ್ಕೆಟ್‌ಬಾಲ್ ಇವರ ಅತಿ ಪ್ರೀತಿಯ ಕ್ರೀಡೆಯಾಗಿತ್ತು. ಹೀಗಾಗಿ ಇವರು 1996ರ ನಂತರ ವೃತ್ತಿಪರ ಆಟಗಾರ್ತಿಯಾಗಿ ಬ್ಯಾಸ್ಕೆಟ್‌ಬಾಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಜನಪ್ರಿಯತೆ ಗಳಿಸಿದ್ದರು.

ಇತಿಹಾಸದ ಪುಟಗಳಿಂದ

ಮೊದಲ ಎರಡು ಒಲಿಂಪಿಕ್ಸ್‌ಗಳಿಗೆ ಅಮೆರಿಕ ನೀಡಿದ ನೆರವನ್ನು ಪರಿಗಣಿಸಿದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮೂರನೇ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಅವಕಾಶವನ್ನು ಅಮೆರಿಕ ದೇಶಕ್ಕೇ ನೀಡಿತು. ಇಲಿನಾಯ್ ಪ್ರಾಂತ್ಯದ ಷಿಕಾಗೊ ನಗರದಲ್ಲಿ 1904ರ ಒಲಿಂಪಿಕ್ಸ್ ನಡೆಯಬೇಕೆಂದು ಒಲಿಂಪಿಕ್ ಸಮಿತಿಯು ಸೂಚನೆ ನೀಡಿತು.

ಆದರೆ ಅದೇ ವೇಳೆ ಮಿಸ್ಸೋರಿ ಪ್ರಾಂತ್ಯದ ಸೇಂಟ್ ಲೂಯಿ ನಗರದಲ್ಲಿ ವಿಶ್ವ ವಾಣಿಜ್ಯ ಮೇಳ ನಡೆಯುವುದಿತ್ತು. ಆ ಮೇಳದ ಸಂಘಟಕರು ಷಿಕಾಗೊ ನಗರದಲ್ಲಿ ಒಲಿಂಪಿಕ್ಸ್ ನಡೆಯುವುದನ್ನು ತೀವ್ರವಾಗಿ ವಿರೋಧಿಸಿದರು. ಅದಕ್ಕೆ ಅಮೆರಿಕಾದ ಆಗಿನ ಅಧ್ಯಕ್ಷ ರೂಸ್‌ವೆಲ್ಟ್ ಮಣಿದರು. ಒಲಿಂಪಿಕ್ಸನ್ನು ಸೇಂಟ್ ಲೂಯಿ ನಗರದಲ್ಲೇ ನಡೆಸಬೇಕೆಂದು ಅವರೇ ಸೂಚನೆ ನೀಡಿದರು. ಹೀಗಾಗಿ ಸೇಂಟ್ ಲೂಯಿಯಲ್ಲಿ ಜುಲೈ 1ರಂದು  ಒಲಿಂಪಿಕ್ಸ್‌ಗೆ ಚಾಲನೆ ನೀಡಲಾಯಿತು.

ಎರಡನೇ ಒಲಿಂಪಿಕ್ಸ್‌ನಲ್ಲಿ ಉಂಟಾಗಿದ್ದಕ್ಕಿಂತ ಹೆಚ್ಚು ಲೋಪಗಳು ಇಲ್ಲಿಯೂ ಆದವು. ಯಾವುದೂ ವ್ಯವಸ್ಥಿತವಾಗಿರಲಿಲ್ಲ. ಕೆಲವು ಕ್ರೀಡೆಗಳನ್ನು ವಾಣಿಜ್ಯ ಮೇಳಕ್ಕೆ ಬಂದವರ ಮನರಂಜನೆಗಾಗಿ ನಡೆಸಿದಂತಿತ್ತು. ಸ್ಪರ್ಧೆಗಳು ಪೈಪೋಟಿಗಿಂತ ಹೆಚ್ಚು ಸಾಂಸ್ಕೃತಿಕ ಹಾಗೂ ಮನರಂಜನೆಯ ಸ್ವರೂಪ ಪಡೆದು ಕೊಂಡಂತಿತ್ತು. ಹೀಗಾಗಿ ಒಲಿಂಪಿಕ್ ಕೂಟ ಸುಮಾರು ನಾಲ್ಕೂವರೆ ತಿಂಗಳ ಕಾಲ ನಡೆದಿತ್ತು!

ಸೇಂಟ್ ಲೂಯಿಯಲ್ಲಿ ಈ ಕೂಟ ಹಿಡಿದ ದಾರಿಯನ್ನು ಕಂಡ ಹಲವರು ಒಲಿಂಪಿಕ್ ಆಂದೋಲನ ಇಲ್ಲಿಗೇ ಮುಗಿಯಿತು ಎಂದು ನೊಂದು ಕೊಂಡಿದ್ದರು.ಆ ಒಲಿಂಪಿಕ್ಸ್‌ನಲ್ಲಿ 12 ದೇಶಗಳ 651 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಚಿಲಿ
ಒಲಿಂಪಿಕ್ಸ್‌ನ ಆರಂಭದ ದಿನಗಳಿಂದಲೂ ಚಿಲಿ ದೇಶವು ಈ ಮಹಾ ಕ್ರೀಡಾಕೂಟದೊಂದಿಗೆ ಗುರುತಿಸಿಕೊಂಡಿದೆ. ಆದರೆ ಈ ಕೂಟದ ಜತೆಗಿನ ಒಂದು ಶತಮಾನದ ಒಡನಾಟದ ಕೊನೆಗೂ ಈ ದೇಶ ಕ್ರೀಡಾ ಸಾಧನೆಗೆ ಸಂಬಂಧಿಸಿದಂತೆ ತೀರಾ ಗಮನಾರ್ಹ ಸಾಧನೆಯನ್ನೇನೂ ತೋರಲಾಗಿಲ್ಲ.

ಆದರೆ ಟೆನಿಸ್‌ನಲ್ಲಿ ಈ ದೇಶದ ನಿಕೊಲಸ್ ಮಾಸು ಮಾಡಿದ ಸಾಧನೆ ಅನನ್ಯ. ಮಾಸು ಅವರು 8 ವರ್ಷಗಳ ಹಿಂದೆ ವಿಶ್ವದ 9ನೇ ಕ್ರಮಾಂಕದ ಟೆನಿಸ್ ಆಟಗಾರರಾಗಿದ್ದರು. 2004ರಲ್ಲಿ    ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಸ್ವರ್ಣ ಪದಕಗಳನ್ನು ಗೆದ್ದುಕೊಂಡ ಹೆಗ್ಗಳಿಕೆ ಇವರದು. ಆ ಕೂಟದಲ್ಲಿ ಚಿಲಿ ಎರಡು ಚಿನ್ನ ಮತ್ತೊಂದು ಕಂಚಿನ ಪದಕ ಗೆದ್ದುಕೊಂಡಿತ್ತು.
 
ಒಲಿಂಪಿಕ್ಸ್ ಚರಿತ್ರೆಯಲ್ಲಿ ಚಿಲಿಯ ಅತ್ಯುತ್ತಮ ಸಾಧನೆ ಇದೇ ಆಗಿದೆ. 1896ರಲ್ಲಿ ಚಿಲಿ ಪಾಲ್ಗೊಂಡಿತ್ತಾದರೂ ಯಾವುದೇ ಪದಕ ಗೆದ್ದಿರಲಿಲ್ಲ. ಆದರೆ 1900, 1904, 1908ರ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಳ್ಳಲಿಲ್ಲ. ಸ್ಟಾಕ್‌ಹೋಮ್, ಅಂಟ್‌ವರ್ಪ್, ಪ್ಯಾರಿಸ್, ಬರ್ಲಿನ್, ಟೋಕಿಯೊ, ಮೆಕ್ಸಿಕೊ, ಮ್ಯೂನಿಕ್, ಮಾಂಟ್ರಿಯಲ್, ಲಾಸ್‌ಏಂಜಲೀಸ್, ಬಾರ್ಸಿಲೋನ, ಅಟ್ಲಾಂಟಾ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡರೂ ಪದಕ ಗೆಲ್ಲಲಾಗಿರಲಿಲ್ಲ. ಆದರೆ 1928ರ ಅಮ್‌ಸ್ಟರ್‌ಡಮ್‌ನಲ್ಲಿ ಪುರುಷರ ಮ್ಯಾರಥಾನ್‌ನಲ್ಲಿ ರಜತ ಪದಕ ಗೆದ್ದರೆ, 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಈಕ್ವೆಸ್ಟ್ರೀಯನ್‌ನಲ್ಲಿ ಎರಡು ರಜತ ಪದಕ ಗೆದ್ದಿತ್ತು. ಹೀಗೆ ಚಿಲಿ ದೇಶವು ಒಲಿಂಪಿಕ್ಸ್‌ನಲ್ಲಿ ಈವರೆಗೆ 2ಚಿನ್ನ, 7ಬೆಳ್ಳಿ ಸೇರಿದಂತೆ 13 ಪದಕಗಳನ್ನು ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT