ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲುಮೆ ಮತ್ತು ಕುಲುಮೆ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

`ನಮ್ಮ ಧಾರಾವಾಹಿಯ ಕಥೆ ಶೀರ್ಷಿಕೆಗೆ ತದ್ವಿರುದ್ಧವಾದುದು. `ನಿನ್ನೊಲುಮೆಯಿಂದಲೇ...~ ಎಂಬ ಹೆಸರನ್ನು ಬೇಕೆಂತಲೇ ಇಟ್ಟಿದ್ದೇವೆ. ದಬ್ಬಾಳಿಕೆ ಮಾಡುವ ಗಂಡಸರನ್ನು ಸರಿದಾರಿಗೆ ತರುವ ಉದ್ದೇಶ ನಮ್ಮದು.

ಕನಸು ಕಂಡು ನಿರಾಶರಾದ ಹೆಣ್ಣುಮಗಳ ಕತೆ ಇದು. 40ರ ನಂತರ ಬರುವ ಮತ್ತೊಂದು ಹದಿ ಹರೆಯದಂಥ ಸೂಕ್ಷ್ಮ ವಿಚಾರ ಇಟ್ಟುಕೊಂಡು ಈ ಧಾರಾವಾಹಿಯ ಕಥೆ ಹೆಣೆದಿದ್ದೇನೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಸತ್ಯಕಥೆ~- `ನಿನ್ನೊಲುಮೆಯಿಂದಲೇ..~ ಧಾರಾವಾಹಿಯ ನಿರ್ದೇಶಕ ವಿನು ಬಳಂಜ ತಮ್ಮ ಹೊಸ ಧಾರಾವಾಹಿ ಬಗ್ಗೆ ಹೇಳಿಕೊಂಡಿದ್ದು ಹೀಗೆ.

ಇಂಥ ಕತೆಗಳು ಸಮಾಜದ ಮೇಲೆ  ದುಷ್ಪರಿಣಾಮ ಬೀರುವುದಿಲ್ಲವೇ ಎನ್ನುವ ಪ್ರಶ್ನೆ ಪತ್ರಕರ್ತರದು. ಈ ತಕರಾರಿಗೆ ಬಳಂಜ, `ಬಾಡಿಗೆ ತಾಯಿ ವಿಚಾರ ಇದ್ದ `ಜೋಗುಳ~ ಮತ್ತು ದೇವದಾಸಿಯ ಬದುಕನ್ನು ಹೇಳಿದ್ದ `ಗೆಜ್ಜೆಪೂಜೆ~ ಧಾರಾವಾಹಿ ಮಾಡುವಾಗಲು ಕೆಲವರು ವಿರೋಧಿಸಿದರು. ಆದರೆ ಆ ವಿಚಾರಗಳ ಬಗ್ಗೆ ನಾವು ಎಚ್ಚರ ಮೂಡಿಸಿದ್ದೆವು~ ಎಂದು ಸಮರ್ಥನೆ ನೀಡಿದರು.

ಧಾರಾವಾಹಿಗೆ ಚಿತ್ರಕತೆ - ಸಂಭಾಷಣೆ ಬರೆದಿರುವ ಸತ್ಯಮೂರ್ತಿ ಆನಂದೂರು, `ನಮ್ಮ ಧಾರಾವಾಹಿ ಸಂಬಂಧಗಳ ನೆಲೆಗಟ್ಟಿನ ಮೇಲೆ ನಿಂತಿದೆ. ಇದು ಒಬ್ಬ ಹೆಂಗಸಿನ ನಿಜವಾದ ಕಥೆ. ಗಂಡ-ಹೆಂಡತಿ ಬೇರೆಯಾಗಲು ಕಾರಣಗಳನ್ನು ಇದರಲ್ಲಿ ತಿಳಿಸಲಾಗಿದೆ.

ಗಂಡಸಿನ ಪಾಳೇಗಾರಿಕೆಯಿಂದ ನಲುಗಿದ ಪತ್ನಿ ಮಕ್ಕಳೊಂದಿಗೆ ಸೇರಿ ಸ್ವತಂತ್ರವಾಗಲು ಧೈರ್ಯ ಮಾಡುವ ದಿಟ್ಟತನ ಧಾರಾವಾಹಿಯಲ್ಲಿದೆ. ಗಂಡಸರು ಈ ಧಾರಾವಾಹಿ ನೋಡಿ ಬದಲಾಗಲಿ ಎಂಬುದೇ ನಮ್ಮ ಆಶಯ~ ಎಂದರು.

ಧಾರಾವಾಹಿ ನೋಡುವವರು ಹೆಂಗಸರಲ್ಲವೇ? ಗಂಡಸರು ಬದಲಾಗುವ ಮಾತೆಲ್ಲಿ? ಎನ್ನುವ ಪ್ರಶ್ನೆಯನ್ನು ಸತ್ಯಮೂರ್ತಿ ನಗುವಿನಿಂದಲೇ ತಣ್ಣಗಾಗಿಸಿದರು.

ಕಿರುತೆರೆಯಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಅಶ್ವಿನಿ- `ಸಿನಿಮಾಗೆ ಬಂದು ನಾಲ್ಕು ವರ್ಷವಾಯಿತು. ಧಾರಾವಾಹಿಗಳಲ್ಲಿ ನಟಿಸುವ ಆಸೆಯಿತ್ತು. ಆದರೂ, ವಿನು ಕತೆ ಹೇಳಿದಾಗ ಆರಂಭದಲ್ಲಿ ಹಿಂಜರಿದಿದ್ದೆ. ಇದೀಗ ಇಂಥ ಪಾತ್ರ ಮಾಡುತ್ತಿರುವ ಬಗ್ಗೆ ಹೆಮ್ಮೆ ಎನಿಸುತ್ತಿದೆ~ ಎಂದರು.

 ಜ.2ರಿಂದ ಪ್ರತೀ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರ ಆರಂಭಿಸಿದೆ. ಪ್ರಮುಖ ಪಾತ್ರಗಳಲ್ಲಿ ಮಂಜುನಾಥ ಹೆಗ್ಡೆ, ಅಶ್ವಿನಿ, ಅಶೋಕ್ ಹೆಗ್ಡೆ, ಅರವಿಂದ್, ಜ್ಯೋತಿ ರೈ, ಉಷಾ ಭಂಡಾರಿ, ಸೀತಾ ಕೋಟೆ, ಹರ್ಷ, ಸಹನಾ, ಶಾಂತಲಾ ಕಾಮತ್ ಮುಂತಾದವರಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT