ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಜಗಳ: ಕಾಂಗ್ರೆಸ್‌ಗೆ ತಪ್ಪಿದ ಅಧಿಕಾರ

Last Updated 7 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಚಿಂತಾಮಣಿ: ಕ್ಷೇತ್ರದಲ್ಲಿ ಈಚೆಗೆ ಸ್ತಬ್ಧವಾಗಿದ್ದ ಕಾಂಗ್ರೆಸ್ ಮುಖಂಡರ ಒಳ ಜಗಳ ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಭುಗಿಲೆದ್ದಿದೆ.

`ಸೆಂಟ್ರಲ್ ಕಾಂಗ್ರೆಸ್~ ಮತ್ತು `ಸ್ಟೇಟ್ ಕಾಂಗ್ರೆಸ್~ ಒಳ ಜಗಳದಿಂದ ಮತ್ತೊಮ್ಮೆ ತಾಲ್ಲೂಕಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ತಪ್ಪಿದೆ. ಅನಾಯಾಸವಾಗಿ ಒಲಿದು ಬಂದಿದ್ದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಾಗಿದೆ.

ಸದಾ ಹಾವು- ಮುಂಗುಸಿಯಂತೆ ಕಿತ್ತಾಡುತ್ತಿದ್ದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ನಗರದಲ್ಲಿ ನಡೆದ ಅಹಿತಕರ ಘಟನೆಗಳ ನಂತರ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಮುಖ್ಯಮಂತ್ರಿ ಭೇಟಿ ಮಾಡಿದ್ದ ಘಟನೆಗಳಿಂದ ಒಳಜಗಳ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನತೆ ಭಾವಿಸಿದ್ದರು.

ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದಲ್ಲಿ ಬಹುಮತವಿದ್ದರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಏಕೈಕ ಸದಸ್ಯರನ್ನು ಹೊಂದಿದ್ದ ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್ ನಾಯಕರಿಗೆ ತೀವ್ರ ಹಿನ್ನಡೆಯಾಗಿದೆ. ಕೆಪಿಸಿಸಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದ್ದು ಜನತೆ ಎದುರು ನಾಯಕರು ಮತ್ತೊಮ್ಮೆ ತಮ್ಮ ಒಳ ಜಗಳ ಪ್ರದರ್ಶಿಸಿದ್ದಾರೆ.
ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಕಷ್ಟು ಹಿನ್ನಡೆ ಕಂಡಿದೆ. ಪ್ರಬಲವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಪಕ್ಷವನ್ನು ಹಾಳು ಮಾಡಲಾಗುತ್ತಿದೆ ಎಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಉದಯವಾದಾಗಿನಿಂದಲೂ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. 2007ರಲ್ಲೂ ಇದೇ ರೀತಿಯಾಗಿತ್ತು. ತಾಲ್ಲೂಕಿನ ಜಿ.ಪಂ. ಸದಸ್ಯ ಗುಡೇ ಶ್ರೀನಿವಾಸರೆಡ್ಡಿ ಅವರಿಗೆ 10 ತಿಂಗಳ ಅವಧಿಗೆ ಅಧಿಕಾರ ನೀಡುವುದಾಗಿ ಕೆಪಿಸಿಸಿ ಮುಖಂಡರು ಭರವಸೆ ನೀಡಿದ್ದರು. ಚಿಂತಾಮಣಿಗೆ ಅದರಲ್ಲೂ ವಿಶೇಷವಾಗಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸಚಿವರು ಅಧಿಕಾರ ತಪ್ಪಿಸಿದರು ಎಂದು ಸುಧಾಕರ್ ಬೆಂಬಲಿಗರು ಆರೋಪಿಸುತ್ತಾರೆ.

ಈಗಲೂ ಅದೇ ಪುನರಾವರ್ತನೆಯಾಗಿದೆ. ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿತ್ತು. ಚಿಂತಾಮಣಿಯಿಂದ ಆಯ್ಕೆಯಾಗಿದ್ದ ಎಸ್.ಎನ್.ಚಿನ್ನಪ್ಪ, ಶೇಖ್‌ಮೌಲಾ ಹಾಗೂ ಬಿಜೆಪಿ ಏಕೈಕ ಸದಸ್ಯ ಗೌರಿಬಿದನೂರಿನ ನರಸಿಂಹಮೂರ್ತಿ ಅರ್ಹ ಅಭ್ಯರ್ಥಿಗಳಾಗಿದ್ದರು.

ಬಿಜೆಪಿಗೆ ಸಂಖ್ಯಾಬಲ ಇಲ್ಲದಿರುವುದರಿಂದ ತಾಲ್ಲೂಕಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬು ಭಾವಿಸಲಾಗಿತ್ತು. ಮೀಸಲಾತಿಯಂತೆ ಅರ್ಹತೆಯುಳ್ಳ ಇಬ್ಬರು ಸದಸ್ಯರು ಡಾ.ಎಂ.ಸಿ.ಸುಧಾಕರ್ ಬೆಂಬಲಿಗರಾಗಿರುವುದು ಹಾಗೂ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಮೂವರು ಒಗ್ಗಟ್ಟಾಗಿ ಚಿಂತಾಮಣಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದರು. ಇನ್ನೇನು ಅಧ್ಯಕ್ಷ ಸ್ಥಾನ ಸಿಕ್ಕೇಬಿಟ್ಟಿತು ಎನ್ನುತ್ತಿದ್ದಾಗಲೇ ಕಳೆದುಕೊಳ್ಳುವಂತಾಯಿತು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ.

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆ ಸಾಕ್ಷಿಯಾಗಿದೆ. ಜಿಲ್ಲಾ ಪಂಚಾಯಿತಿ ಒಟ್ಟು 27 ಸದಸ್ಯರಲ್ಲಿ ಕಾಂಗ್ರೆಸ್-21, ಜೆಡಿಎಸ್-3, ಸಿಪಿಐಎಂ-2, ಬಿಜೆಪಿ-1 ಸ್ಥಾನ ಹೊಂದಿದೆ. ಒಂದು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರದ ಗದ್ದುಗೆ ಏರಿರುವುದು ಕಾಂಗ್ರೆಸ್ ಮುಖಂಡರಿಗೆ ಬಿಸಿ ಮುಟ್ಟಿಸಿದೆ.

ಎಸ್.ಎನ್.ಚಿನ್ನಪ್ಪ ಮತ್ತು ಶೇಖ್‌ಮೌಲಾ ಇಬ್ಬರಿಗೂ ತಲಾ 10 ತಿಂಗಳು ಅಧಿಕಾರ ಹಂಚಿಕೆ ಮಾಡುವುದು. ಮೊದಲ ಅವಧಿಗೆ ಚಿನ್ನಪ್ಪ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಕೆಪಿಸಿಸಿ ಮುಖಂಡರು ತೀರ್ಮಾನಿಸಿದ್ದರು. ಕೆ.ಎಚ್.ಮುನಿಯಪ್ಪ ಬೆಂಬಲಿಗರು ಬಂಡಾಯ ನಡೆಸಿದ್ದರಿಂದ ಒಂದು ಮತದಿಂದ ಚಿನ್ನಪ್ಪ ಸೋತರು. ಕಾಂಗ್ರೆಸ್‌ನ 9 ಸದಸ್ಯರು ಅಡ್ಡ ಮತದಾನ ಮಾಡಿದರು. ಪೂರ್ವಯೋಜಿತವಾಗಿ ನಡೆದ ಒಳಸಂಚು ಅರಿಯುವಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರಿಗೆ ಸಾಧ್ಯವಾಗಿಲ್ಲ.

ಈ ಎಲ್ಲ ರಾಜಕೀಯ ವಿದ್ಯಮಾನಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೇಲೆ ತೀವ್ರವಾಗಿ ಕಾಡಲಿದೆ. ಮುಂಬರುವ ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಮೇಲೂ ಈಗಿನ ಬೆಳವಣಿಗೆಗಳು ಪರಿಣಾಮ ಬೀರಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT