ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಉಡುಪು ಖರೀದಿಗೆ ಹೊಸದಾರಿ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೆ  ಣ್ಣಿನ ಸೌಂದರ್ಯ ವೃದ್ಧಿಗೆ ಉಡುಪಿನ ಆಯ್ಕೆ ಸಹ ಮುಖ್ಯ. ದೇಹದ ಅಳತೆಗೆ ತಕ್ಕುದಾದ ಉಡುಪು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇದು ಒಳ ಉಡುಪಿನ ವಿಷಯಕ್ಕೂ ಅನ್ವಯಿಸುತ್ತದೆ. ನೋಡಿದೊಡನೆಯೇ ಆ ಹೆಣ್ಣಿನ ಮನಃಸ್ಥಿತಿಯೂ ತಿಳಿದುಬಿಡುತ್ತದೆ. ದುಬಾರಿ ಬೆಲೆ ಉಡುಪು ತೊಟ್ಟು ಒಳ ಉಡುಪಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಸಹಜವಾಗಿ ಕಾಣುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಒಳ ಉಡುಪಿನ ಆಯ್ಕೆ ಇಂದಿಗೂ ಮಡಿವಂತಿಕೆಗೆ ಒಳಗಾಗಿದೆ.

ಇದು ಹೆಣ್ಣು ಮಕ್ಕಳ ವಿಚಾರ. ಮನೆಯ ಯಜಮಾನನೇ ಹೆಂಡತಿ ಮತ್ತು ಮಕ್ಕಳ ಎಲ್ಲ ಬಟ್ಟೆಗಳನ್ನೂ ಆಯ್ದು ತರುತ್ತಿದ್ದ ಕಾಲವಿತ್ತು. ಆಗ ಹೆಣ್ಣು ಮಕ್ಕಳು ತಮ್ಮ ಒಳ ಉಡುಪುಗಳನ್ನೂ ಅಪ್ಪನಿಂದಲೇ ತರಿಸುತ್ತಿದ್ದರು. ಬೇಕಿರುವ ಅಳತೆ ಮಕ್ಕಳಿಗೂ ಗೊತ್ತಿಲ್ಲ. ಅಪ್ಪನಿಗಂತೂ ಮೊದಲೇ ಗೊತ್ತಿರುತ್ತಿರಲಿಲ್ಲ. ಅಂಗಡಿಯವ ಕೊಟ್ಟಿದ್ದೇ ಅಳತೆ. ಆಗ ಎಲ್ಲ ಅಂಗಡಿಗಳಲ್ಲೂ ಹೆಚ್ಚಾಗಿ ಪುರುಷ ಸೇಲ್ಸ್‌ಮನ್‌ಗಳೇ ಇರುತ್ತಿದ್ದರು. ಗಾಮೀಣ ಪ್ರದೇಶದಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲೂ ಇದೇ ಸ್ಥಿತಿ ಇತ್ತು.  ಕ್ರಮೇಣ ಹೆಣ್ಣು ಮಕ್ಕಳು ಬಟ್ಟೆ ಅಂಗಡಿಗಳ ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಲಾರಂಭಿಸಿದರಾದರೂ ಕೊಳ್ಳುವ ಹುಡುಗಿಯರಿಗೆ ನಾಚಿಕೆ ಇದ್ದೇ ಇತ್ತು. 

ಒಳ ಉಡುಪುಗಳನ್ನು ಮಾಮೂಲಿ ಬಟ್ಟೆ ಅಂಗಡಿಗೆ ಹೋಗಿ ಸೇಲ್ಸ್ ಹುಡುಗರ ಜೊತೆ ಮುಕ್ತವಾಗಿ ಕೇಳುವುದಕ್ಕೆ ಏನೋ ಮುಜುಗರ. ಜೀವನ ಶೈಲಿ ಎಷ್ಟೇ ಬದಲಾದರೂ, ಹೆಣ್ಣು ಮಕ್ಕಳು ಮುಕ್ತವಾಗಿ ಬದುಕುವ ವಾತಾವರಣ ಇದ್ದರೂ ಕೆಲ ವಿಚಾರದಲ್ಲಿ ಇನ್ನೂ ಸಂಕೋಚದ ಪರದೆ ಸರಿದಿಲ್ಲ.

ಹದಿವಯಸ್ಸಿಗೆ ಬರುತ್ತಿದ್ದಂತೆ ಒಳ ಉಡುಪಿನ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಇಲ್ಲ. ಅಧ್ಯಯನದ ಪ್ರಕಾರ, ನಗರಗಳಲ್ಲೂ ಒಳ ಉಡುಪು ಕೊಳ್ಳುವುದು ಗಡಿಬಿಡಿಯ ಕೆಲಸದಂತೆ ಮುಗಿದು­ಬಿಡುತ್ತಿದೆ. ಅಂದರೆ ಕೇವಲ 5– 10 ನಿಮಿಷಗಳಲ್ಲಿ ಯಾವುದೋ ಒಂದು ಬ್ರಾ ಅಥವಾ ಪ್ಯಾಂಟೀಸ್‌ ಕೊಂಡು ಹೋಗುವ ಹೆಣ್ಣು ಮಕ್ಕಳೇ ಹೆಚ್ಚು. ಸರಿಯಾದ ಅಳತೆ, ವಿನ್ಯಾಸದ ಒಳ ಉಡುಪು ಕೊಳ್ಳುವ ಬಗ್ಗೆ ಅರಿವು ಇರುವುದಿಲ್ಲ. ಪುರುಷರಿರುವ ಅಂಗಡಿಗಳಲ್ಲಿ ಮುಕ್ತ ವಾತಾವರಣದ ಕೊರತೆಯೂ ಇದೆ. ಇದು ಭಾರತದ ಮನಃಸ್ಥಿತಿಯ ಮಾದರಿಯಷ್ಟೇ.

ಅತಿಯಾಗಿ ಬಿಗಿಯಾದ ಅಥವಾ ಸಡಿಲ ಇರುವ ಒಳ ಉಡುಪುಗಳು ಆರಾಮದಾಯಕವಲ್ಲ. ಆದರೆ ಇದರ ಬಗ್ಗೆ ಚರ್ಚಿಸಲು ಹೆಚ್ಚಿನ ಹೆಣ್ಣು ಮಕ್ಕಳು ಬಯಸುವುದಿಲ್ಲ ಎನ್ನುತ್ತದೆ ಅಧ್ಯಯನ. ಅದಕ್ಕಾಗಿಯೇ ಆನ್‌ಲೈನ್‌ ಮಾರುಕಟ್ಟೆ/ ಕೆಟಲಾಗ್ ಮಾರುಕಟ್ಟೆಯಲ್ಲಿ ಒಳ ಉಡುಪುಗಳನ್ನು ಕೊಳ್ಳಲು ಇಂದಿನ ಹೆಣ್ಣು ಮಕ್ಕಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲಿ ತಮ್ಮ ಆಯ್ಕೆಯ ಒಳ ಉಡುಪು ಕೊಳ್ಳುವುದು ಬಹಳ ಸುಲಭ. ಮುಜುಗರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲ ಅಳತೆಯ, ಸುಂದರ ವಿನ್ಯಾಸದ, ಬಣ್ಣಗಳ ಉಡುಪುಗಳು ಲಭ್ಯವಿವೆ.

ಎಲ್ಲ ಬ್ರಾಂಡ್‌, ವಿನ್ಯಾಸ, ಬಣ್ಣ ನೋಡಲು ಸಿಗುತ್ತದೆ. ಚಿತ್ರ ನೋಡಿಯೇ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಣ್ಣು ಮಕ್ಕಳ ಪಾಲಿಗೆ ಇದು ನಿಜಕ್ಕೂ ವರದಾನ. ಇನ್ನು ಆನ್‌ಲೈನ್‌ ಸ್ಟೋರ್‌ನಲ್ಲಿ ಒಳ ಉಡುಪು ವ್ಯವಹಾರವು 15 ಸಾವಿರ ಕೋಟಿ ರೂಪಾಯಿ ವಹಿವಾಟು, ಒಟ್ಟು ಮಾರುಕಟ್ಟೆಯಲ್ಲಿ ಶೇ 50ರಷ್ಟು ಷೇರು ಹೊಂದಿದೆ.

ಆನ್‌ಲೈನ್‌ ಮಾರುಕಟ್ಟೆ ಭಾರತದಲ್ಲಿ ಈಗ ಬೆಳವಣಿಗೆಯ ಹಂತದಲ್ಲಿದೆ. ದೇಶದಲ್ಲಿ 10 ದಶಲಕ್ಷ ಆನ್‌ಲೈನ್‌ ಬಳಕೆದಾರರಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಕೇವಲ ಶೇ 10. ಆದರೆ ಆನ್‌ಲೈನ್‌ನಲ್ಲಿ ಉಡುಪು, ಎಲೆಕ್ಟ್ರಾನಿಕ್‌ ವಸ್ತುಗಳು, ಪ್ರಸಾಧನ ಪರಿಕರಗಳು, ಬ್ಯಾಗು, ಶೂ, ಸೀರೆ, ಮನೆಗೆ ಬೇಕಾಗುವ ವಸ್ತುಗಳನ್ನು ಕೊಳ್ಳುವವರು ಹೆಚ್ಚುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಕೊಳ್ಳುವುದು ಸುಲಭ. ಬುಕ್ ಮಾಡಿದ ಒಂದೆರಡು ದಿನದಲ್ಲಿ ಮನೆ ಬಾಗಿಲಿಗೆ ಬರುತ್ತದೆ. ವಸ್ತುವನ್ನು ಪರಿಶೀಲಿಸಿ ನಂತರ ಹಣ ಪಾವತಿ ಮಾಡುವ ಅವಕಾಶವಿದೆ. ನಗರದ ಜಂಜಾಟದ ಬದುಕಿನ ನಡುವೆ ಶಾಪಿಂಗ್‌ನ ಆಯಾಸಕ್ಕೆ ಎಡೆಯಿಲ್ಲದಂತಾಗಿದೆ.

ಆನ್‌ಲೈನ್‌ ಸ್ಟೋರ್: ಒಳ ಉಡುಪು ಮಾರಾಟಕ್ಕೆಂದೇ ಅನೇಕ ಆನ್‌ಲೈನ್‌ ಸ್ಟೋರ್‌­ಗಳು ತಲೆ ಎತ್ತಿವೆ.   ‘ಇದು ಹೆಚ್ಚು ತ್ರಾಸದಾಯಕವಲ್ಲದ ವ್ಯವಹಾರ. ಆದರೆ, ಇದರಲ್ಲಿ ನಂಬಿಕೆ ಮುಖ್ಯ’ ಎನ್ನುತ್ತಾರೆ ಇಂತಹ  ಸ್ಟೋರ್‌ಗಳಲ್ಲಿ ಒಂದಾದ ಜಿವಾಮೆ ಡಾಟ್‌ಕಾಂ (www.zivame.com) ಸ್ಥಾಪಕಿಯಾಗಿರುವ ಜೆಮ್‌ಶೆಡ್‌ಪುರ ಮೂಲದ ಯುವ ಉದ್ಯಮಿ ರಿಚಾಕರ್. ಇವರು ವೃತ್ತಿ ನಿಮಿತ್ತ ಬೆಂಗಳೂರಿಗೆ ಬಂದವರು. ಉದ್ಯಮ ಆರಂಭಿಸುವ ಕನಸೊಡೆದದ್ದೇ ಧುಮುಕಿದ್ದು ಆನ್‌ಲೈನ್‌ ಸ್ಟೋರ್ ಉದ್ಯಮಕ್ಕೆ.

ಎಂಜಿನಿಯರಿಂಗ್‌ ಪದವೀಧರೆ ರಿಚಾಕರ್‌ ಕೋಲ್ಕತ್ತಾದ ಸ್ಪೆನ್ಸರ್ಸ್‌ ರೀಟೇಲ್‌ನಲ್ಲಿ ಕಾರ್ಯ ನಿರ್ವಹಿಸಿದವರು. ನಂತರ ಬೆಂಗಳೂರಿನಲ್ಲಿ ಅದೇ ಬ್ರಾಂಡ್‌ನ 15 ಮಳಿಗೆಗಳ ಜವಾಬ್ದಾರಿ ವಹಿಸಿಕೊಂಡು ಸಮರ್ಪಕವಾಗಿ ನಿಭಾಯಿಸಿದ ಚತುರೆ. ನಂತರ ಎಸ್‌ಎಪಿ ರೀಟೇಲ್‌ ಕನ್ಸಲ್ಟಿಂಗ್‌ನ ಗ್ಲೋಬಲ್‌ ಕನ್ಸಲ್ಟೆಂಟ್ ಆಗಿ ಕೆಲಸಕ್ಕೆ ಸೇರಿದವರು. ಅದೊಂದು ಒಳ ಉಡುಪುಗಳ ಕಂಪೆನಿ. ಅಲ್ಲಿ ರಿಚಾಕರ್ ಕಂಡುಕೊಂಡ ಸತ್ಯವೆಂದರೆ, ಭಾರತದಲ್ಲಿ ಒಳ ಉಡುಪುಗಳ ವ್ಯಾಪಾರ ಕಡೆಗಣನೆಗೆ ಒಳಗಾಗಿದೆ ಎಂಬುದು. ದೇಶದ ಎಲ್ಲ ಮಹಿಳೆಯರೂ ಮುಕ್ತ ವಾತಾವರಣದಲ್ಲಿ ಒಳ ಉಡುಪುಗಳನ್ನು ಕೊಳ್ಳುವಂತೆ ಆಗಬೇಕು ಎಂಬ ಉದ್ದೇಶದಿಂದ 2008ರಲ್ಲಿ ಜಿವಾಮೆ ಡಾಟ್‌ಕಾಂ ಆರಂಭಿಸಿದ ರಿಚಾಕರ್‌ಗೆ ನಿರಾಸೆಯಾಗಿಲ್ಲ. ದಿನದಲ್ಲಿ 1 ಸಾವಿರ ಒಳ ಉಡುಪುಗಳಿಗೆ ಬೇಡಿಕೆ ಬರುತ್ತಿದೆಯಂತೆ. ಅವರ ಸ್ಟೋರ್‌ಗೆ ಭೇಟಿ ನೀಡಿ ವ್ಯವಹಾರ ಮಾಡುತ್ತಿರುವವರಲ್ಲಿ ಶೇ 20 ಮಂದಿ ಬೆಂಗಳೂರಿನವರಂತೆ.

ಕೆಟಲಾಗ್ ಮಾರುಕಟ್ಟೆ

ಆನ್‌ಲೈನ್ ಸ್ಟೋರ್ ಎಷ್ಟೇ ಸದ್ದು ಮಾಡಿದರೂ ಅದು ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗವನ್ನು ಮಾತ್ರ ತಲುಪಿದೆ ಎಂಬುದು ಗಮನಾರ್ಹ. ಯಾಕೆಂದರೆ ಈ ದೇಶದ ಜನಸಂಖ್ಯೆಯಲ್ಲಿ ಶೇ 10ರಷ್ಟು ಮಂದಿ ಮಾತ್ರ ಕಂಪ್ಯೂಟರ್ ಬಳಕೆದಾರರು. ಇವರಲ್ಲಿ ಎಲ್ಲರೂ ಇಂಟರ್‌ನೆಟ್ ಬಳಸುತ್ತಾರೆ ಎನ್ನುವಂತಿಲ್ಲ. ಆದರೆ ಕಂಪ್ಯೂಟರ್‌ ಜ್ಞಾನ ಇಲ್ಲದ ಗೃಹಿಣಿಯರನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಮಹಿಳೆಯರ ಒಳ ಉಡುಪುಗಳ ಮಾರಾಟ ಸರಪಳಿಯನ್ನು ಆರಂಭಿಸಿದ್ದಾರೆ ಬೆಂಗಳೂರಿನ ಪೂರ್ಣಿಮಾ ವಿನಯ್‌ಕುಮಾರ್. ‘ಸೀಕ್ರೆಟ್ ಏಂಜಲ್ಸ್’ ಇದರ ಹೆಸರು. ಇಲ್ಲಿ ಮಹಿಳೆಯರು ಸದಸ್ಯರಾಗಬೇಕು. ಸದಸ್ಯರನ್ನು ‘ಸೀಕ್ರೆಟ್ ಏಂಜಲ್ಸ್’ ಎಂದೇ ಕರೆಯಲಾಗುತ್ತದೆ. ಸದಸ್ಯರಾಗಿ ನೋಂದಣಿ ಮಾಡಿಕೊಂಡ ಕೂಡಲೇ ವಿವಿಧ ಬ್ರಾಂಡ್‌ನ ಒಳ ಉಡುಪುಗಳ ಕೆಟಲಾಗ್ ಕೊಡುತ್ತಾರೆ. ಅಲ್ಲಿ ತಮಗೆ ಬೇಕಾದ ಉಡುಪುಗಳನ್ನು ಆಯ್ಕೆ ಮಾಡಿ ದೂರವಾಣಿ ಕರೆ ಮೂಲಕ ಖರೀದಿಸಬಹುದು. ಅಲ್ಲದೆ ನಿಮ್ಮ ಆಯ್ಕೆ ಸರಿಯಾಗಿದೆಯೇ ಇಲ್ಲವೇ, ನಿಮ್ಮ ಅಳತೆಯ ಆಯ್ಕೆ ಯಾವುದು ಎಂಬ ಸಲಹೆಯನ್ನೂ ನೀಡುತ್ತಾರೆ.

ಇದರ ಮತ್ತೊಂದು ಉಪಯೋಗವೆಂದರೆ, ಇಲ್ಲಿ ಗೃಹಿಣಿಯರಿಗೆ ಸ್ವಉದ್ಯೋಗಕ್ಕೂ ಅವಕಾಶವಿದೆ. ಹೆಚ್ಚು ಹೆಚ್ಚು ಸದಸ್ಯರನ್ನು ಪರಿಚಯಿಸುತ್ತಾ ಹೋದಂತೆ ಹಣವೂ ಬರುತ್ತದೆ. ಈ ಕಲ್ಪನೆ ಎಲ್ಲ ವರ್ಗವನ್ನೂ ತಲುಪಲು ಯಶಸ್ವಿಯಾಗಿದೆ ಎನ್ನುತ್ತಾರೆ ಪೂರ್ಣಿಮಾ.

ಬಳಕೆ ಭಿನ್ನವಾಗಿರಲಿ

‘ಬ್ರಾ ಬಳಕೆ ಪ್ರತಿ ವಯ­ಸ್ಸಿಗೆ ಮತ್ತು ಸಂದರ್ಭಕ್ಕೆ ಭಿನ್ನವಾ­ಗಿರಬೇಕು. ಮೊದಲ ಬಾರಿಗೆ, ಅಂದರೆ ಹದಿಹರೆ­ಯದ ಹುಡು­ಗಿಯರು, ಕಾಲೇಜು ಕನ್ಯೆಯರು, ನೈಟ್ ಕ್ಲಬ್‌ಗಳಲ್ಲಿ, ಮದುವೆ, ಮಧುಚಂದ್ರದ ಸಮಯ, ಹೆರಿಗೆಯ ನಂತರ, ನಲವತ್ತು ದಾಟಿದ ನಂತರ... ಹೀಗೆ ವಯಸಿಗೆ ತಕ್ಕಂತೆ ಬ್ರಾ ತೊಡಬೇಕಾಗುತ್ತದೆ. ಅಲ್ಲದೆ ಚೂಡಿದಾರ್‌ ಧರಿಸುವಾಗ, ಸೀರೆ ಉಡು­ವಾಗ, ಟೀಶರ್ಟ್ ತೊಡುವವರಿಗೆ ಆಯಾ ಸಂದ­ರ್ಭಕ್ಕೆ ತಕ್ಕಂತೆ ಬೇರೆ ಬೇರೆ ಬಗೆಯ ಬ್ರಾಗಳು ಲಭ್ಯ­ವಿವೆ. ಆಯಾ ಕಾಲದಲ್ಲಿ ಸರಿಯಾದ ಉಡುಪು ಧರಿಸುವುದು ಮುಖ್ಯ. ಇದು ಹೆಣ್ಣಿನ ಅಂದವನ್ನು ಹೆಚ್ಚಿ­ಸುತ್ತದೆ. ಈಗಿನ ಹುಡುಗಿಯರಿಗೆ ಇದರ ಬಗ್ಗೆ ಜ್ಞಾನವಿದೆ.

– ರಿಚಾಕರ್, ಜಿವಾಮೆ ಡಾಟ್‌ಕಾಂ ಸಿ.ಇ.ಒ.

ಕೆಟಲಾಗ್ ಮಾರುಕಟ್ಟೆಗೆ ಬೇಡಿಕೆ

‘ನನಗಿದ್ದ ಸವಾಲು ಆನ್‌ಲೈನ್ ಮಾರುಕಟ್ಟೆಯನ್ನು ಮೀರಿ ಗ್ರಾಹಕರನ್ನು ತಲುಪುವುದು. ಅದರಲ್ಲೂ ನೆಟ್‌ ಸಂಪರ್ಕದಲ್ಲಿರದ ಮಹಿಳೆಯರೇ ನನ್ನ ಗುರಿ. ಇದರ ಜೊತೆಗೆ ಅವರು ಹಣ ಗಳಿಸುವ ಮಾರ್ಗ ತೋರುವುದೂ ಆಗಿತ್ತು.

ನಮ್ಮ ವಿಶೇಷವೆಂದರೆ, ಪ್ರತಿ ತಿಂಗಳೂ ಕೆಟಲಾಗ್‌ ಬದಲಾಗುತ್ತಿರುತ್ತದೆ. ಕಿಟ್ಟಿ ಪಾರ್ಟಿಗಳಲ್ಲಿ ಸೇರುವ ಮಹಿಳೆಯರು ತಮ್ಮ ಗೆಳತಿಯರಿಗೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಧಾರವಾಡ, ಗುಲ್ಬರ್ಗ, ಬೆಳಗಾವಿ ಮುಂತಾದ ಕಡೆ ಹೆಚ್ಚಿನ ಗ್ರಾಹಕರಿದ್ದಾರೆ. ಅಲ್ಲೆಲ್ಲ ಅಂಗಡಿಗಳಲ್ಲಿ ಸೀಮಿತ ಮಾದರಿ ಮತ್ತು ಅಳತೆಯ ಒಳ ಉಡುಪುಗಳು ಮಾತ್ರ ಸಿಗುತ್ತಿವೆ. ಅವನ್ನೇ ಕೊಂಡುಕೊಳ್ಳುವ ಅನಿವಾರ್ಯತೆ ಇದೆ. ನಮ್ಮಲ್ಲಿ ಅಂತರ ರಾಷ್ಟ್ರೀಯ ಬ್ರಾಂಡ್‌ಗಳೂ ಇವೆ. ಬ್ರಾ, ಪ್ಯಾಂಟೀಸ್, ನೈಟ್‌ ಡ್ರೆಸ್, ಟೀ ಶರ್ಟ್‌ಗಳೂ ಲಭ್ಯವಿವೆ.

ಈಗಲೂ ಗ್ರಾಮೀಣ ಪ್ರದೇಶ ಮಾತ್ರವಲ್ಲ, ನಗರದ ಮಧ್ಯಮ ವರ್ಗದ ಹೆಣ್ಣು ಮಕ್ಕಳು ಅಮ್ಮನ ಮೂಲಕವೇ ಒಳ ಉಡುಪುಗಳನ್ನು ಖರೀದಿಸುತ್ತಿದ್ದಾರೆ. ಇದೇ ಕಾರಣದಿಂದ ಅವರು ಕೆಟಲಾಗ್ ಮಾರ್ಕೆಟ್‌ ಮೊರೆ ಹೋಗಿದ್ದಾರೆ. ಆನ್‌ಲೈನ್‌ನಲ್ಲಿ ಮಹಿಳೆಯರ ಉಡುಪುಗಳನ್ನು ಪುರುಷರು ಹೆಚ್ಚಾಗಿ ಖರೀದಿಸುತ್ತಾರೆ ಎಂಬುದು ಅಧ್ಯಯನದಿಂದ ತಿಳಿಯುತ್ತದೆ. ಅವರು ಗೆಳತಿಯರಿಗೆ ಉಡುಗೊರೆ ನೀಡುವ ಸಲುವಾಗಿ ಖರೀದಿಸುವುದೇ ಹೆಚ್ಚು. ಆದರೆ ನಮ್ಮ ಗ್ರಾಹಕರು ಶೇ 100ರಷ್ಟು ಮಹಿಳೆಯರೇ ಆಗಿದ್ದಾರೆ. ಕೇವಲ ಆರು ತಿಂಗಳಲ್ಲಿ, ಅಭಿವೃದ್ಧಿ ಹೊಂದದ ಪ್ರದೇಶಗಳನ್ನೂ ನಾವು ತಲುಪಿದ್ದೇವೆ. ಮುಂದೆ ಆನ್‌ಲೈನ್‌ ಸ್ಟೋರ್‌ ಕೂಡಾ ಆರಂಭಿಸಲಿದ್ದೇವೆ. –ಪೂರ್ಣಿಮಾ ವಿನಯ್‌ಕುಮಾರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT