ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಪಂಗಡಗಳನ್ನು ಬಿಟ್ಟು ಒಂದಾಗಿ

Last Updated 22 ಅಕ್ಟೋಬರ್ 2012, 4:40 IST
ಅಕ್ಷರ ಗಾತ್ರ

ಶಿವಮೊಗ್ಗ: `ಒಳಪಂಗಡಗಳನ್ನು ಬಿಟ್ಟು ಒಂದಾಗಿ, ಎಲ್ಲ ಲಿಂಗಾಯತರಿಗೆ ವೀರಶೈವವೇ ಧರ್ಮ~
- ಇದು ವೀರಶೈವ ಸಮಾಜದ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರ ಒಕ್ಕೊರಲ ದನಿ.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದವರೆಲ್ಲರೂ `ಒಳ ಪಂಗಡಗಳನ್ನು ಬಿಟ್ಟು ಒಂದಾಗಬೇಕು. ಸಮಾಜ ಇನ್ನಷ್ಟು ಸಂಘಟಿತಗೊಳ್ಳಬೇಕು~ ಎಂಬ ಆತ್ಮಾವಲೋಕನ ಕೂಡ ನಡೆಸಿದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಒಳಪಂಗಡ ವ್ಯವಸ್ಥೆ ಯಾವುದೇ ಸಮುದಾಯವನ್ನು ಒಡೆಯುವ ಕಂಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯಕ ಪ್ರವೃತ್ತಿಯಿಂದ ಒಳಪಂಗಡ ವ್ಯವಸ್ಥೆ ವೀರಶೈವರಲ್ಲಿ ಸೃಷ್ಟಿಯಾಗಿರುವುದು ವಿಪರ‌್ಯಾಸ. ಈ ವಿಪರ‌್ಯಾಸವನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು ಎಂದರು.   

ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾವುದೇ ಸಂಘಟನೆ ಪ್ರಜಾತತ್ವದ ಧೋರಣೆಯಲ್ಲಿ ಬೆಳವಣಿಗೆ ಆಗಬೇಕು. ವೀರಶೈವ ಸಮಾಜ ಭಾರತೀಯತೆ ಕುರಿತು ತಾತ್ವಿಕ ಸಂದೇಶ ನೀಡಬೇಕು ಎಂದರು.

ಮಠ- ಮಾನ್ಯಗಳ ಸಂಪ್ರದಾಯದಿಂದ ಬಂದ ವೀರಶೈವ ಸಮಾಜ ಪಂಗಡಗಳ ಹೆಸರಿನಲ್ಲಿ ವಿಭಜನೆಯಾಗಬಾರದು ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಇಂದು ಬೇರೆ-ಬೇರೆ ಜಾತಿ- ಜನಾಂಗಗಳು ಲಿಂಗಾಯಿತರನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಏಕೆ ಬಂದಿದೆ ಎಂಬುದಕ್ಕೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಹುಟ್ಟಿನಿಂದ ವೀರಶೈವರಾದರೆ ಸಾಲದು, ಆಚರಣೆಯಲ್ಲಿ ನಿಜ ವೀರಶೈವನಾಗಬೇಕು. ಜಾತಿಯಲ್ಲಿನ ಉಪಪಂಗಡಗಳನ್ನು ಮರೆತು ಒಟ್ಟಾದರೆ ಅದು ನಿಜವಾದ ವೀರಶೈವತನ ಎಂದರು.

ಸಂಘಟನೆ ಶಕ್ತಿ ಪ್ರದರ್ಶನಕ್ಕಲ್ಲ; ಉದ್ದೇಶಿತ ಸಾಧನೆಯಾಗಿ ಎಂದ ಅವರು, ಸಂಘಟಿತನಾದ ವ್ಯಕ್ತಿಯನ್ನು ಎಲ್ಲರೂ ಗೌರವಿಸುತ್ತಾರೆ. ದುರ್ಬಲನನ್ನು ಯಾರೂ ಅಪ್ಪಿ-ಒಪ್ಪಿ ಕೊಳ್ಳುವುದಿಲ್ಲ. ಬಲಿಷ್ಠರನ್ನು ಯಾರೂ ಬಲಿ ತೆಗೆದುಕೊಳ್ಳುವುದಿಲ್ಲ ಎಂದರು.

ಒಳಪಂಗಡಗಳು ಒಂದಾಗಬೇಕು. ಹಿರಿಯಣ್ಣನಂತಿದ್ದು ಇತರ ಜಾತಿ-ಜನಾಂಗಗಳನ್ನು ಮೇಲಕ್ಕೆ ತರಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಪಕ್ಷ ಭೇದ ಮರೆತು ಒಂದಾದರೆ ವೀರಶೈವರನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಮಹಾಸಭಾದ ಜಿಲ್ಲಾ ಘಟಕವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ, ಮಹಾಸಭಾದ ರಾಜ್ಯ ಸಮಿತಿ ಸದಸ್ಯ ಡಾ.ಬಿ.ಶಿವಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಎನ್. ಜ್ಯೋತಿಪ್ರಕಾಶ್, ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್, ಜಿಲ್ಲಾ ಸಹಕಾರ ಯೂನಿಯೂನ್ ಅಧ್ಯಕ್ಷ ಬಿ.ಡಿ. ಭೂಕಾಂತ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಸ್. ಶಂಕರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಎಲ್. ಷಡಕ್ಷರಿ, ಗುರುಕುಮಾರ್, ಗಾಯತ್ರಿ ಷಣ್ಮುಖಪ್ಪ, ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಎಂ.ಬಿ. ಚನ್ನವೀರಪ್ಪ, ನಗರಸಭಾ ಸದಸ್ಯೆರಾದ ವಿಜಯಲಕ್ಷ್ಮೀ ಪಾಟೀಲ್, ರೇಣುಕಾ ನಾಗರಾಜ್, ಎಸ್. ಆಶಾ ಚನ್ನಬಸಪ್ಪ ಉಪಸ್ಥಿತರಿದ್ದರು. ನಗರಸಭಾಧ್ಯಕ್ಷಎಸ್.ಎನ್. ಚನ್ನಬಸಪ್ಪ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT