ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ಜಾರಿಗೆ ಬರುವುದೇ?

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣಕ್ಕಾಗಿ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದ ಆಯೋಗವು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿ ಆರು ತಿಂಗಳಾಯಿತು. ಈ ವರದಿಯನ್ನು ಜಾರಿಗೆ ತರಬೇಕೆಂದು ಮೀಸಲಾತಿಯ ವರ್ಗೀಕರಣಕ್ಕೆ ಹಲವು ವರ್ಷ ಹೋರಾಟ ಮಾಡಿದ ಮಾದಿಗ ದಂಡೋರ ಸಮಿತಿ ತನ್ನ ಎರಡನೇ ಹಂತದ ಹೋರಾಟ ಆರಂಭಿಸಿದೆ. ಆದರೆ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಿಲ್ಲ.

ದನಿ ಇಲ್ಲದವರು ಮತ್ತು ಅವಕಾಶ ವಂಚಿತರು ನ್ಯಾಯಬದ್ಧ ಮೀಸಲಾತಿಗಾಗಿ ಹೋರಾಡುವುದು ಅವರ ಸಂವಿಧಾನಬದ್ಧ ಹಕ್ಕು. ಆದರೆ 1990ರ ದಶಕದ ಆರಂಭದಲ್ಲಿ ಬಂದ ಮುಕ್ತ ಆರ್ಥಿಕ ನೀತಿ, ಸರ್ಕಾರಿ ಉದ್ಯಮಗಳ ಷೇರು ವಿಕ್ರಯದಿಂದ ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಹೊರಗುತ್ತಿಗೆಯಂತಹ ನೀತಿಯಿಂದ ಸರ್ಕಾರಿ ಹುದ್ದೆಗಳು ಬರಿದಾಗುತ್ತಾ ಬಂದವು. ಮುಕ್ತ ಆರ್ಥಿಕ ನೀತಿಯಿಂದ ಪ್ರತಿಭೆ ಮತ್ತು ಸ್ಪರ್ಧೆಯೇ ಮಾನದಂಡವಾಯಿತು.  ಶಕ್ತಿ ಇದ್ದವನು  ಬದುಕುತ್ತಾನೆ ಎನ್ನುವ ಸಿದ್ಧಾಂತದ ದಿನಗಳು ಎದುರಾದವು. ಇದರ ಪರಿಣಾಮ ಸರ್ಕಾರದ ಹುದ್ದೆಗಳನ್ನೇ ನಂಬಿದ ಪರಿಶಿಷ್ಟ ಜಾತಿಗಳಲ್ಲಿ ಉಂಟಾದ ಆತಂಕ ಇನ್ನೂ ಕಡಿಮೆ ಆಗಿಲ್ಲ.

ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ನಮಗೆ ನ್ಯಾಯವಾಗಿ ಸಿಗಬೇಕಾದ ಉದ್ಯೋಗಾವಕಾಶಗಳು ಸಿಕ್ಕಿಲ್ಲ. ಸಂವಿಧಾನ ಬದ್ಧವಾಗಿ ಜಾರಿಗೆ ತಂದಿರುವ ಶೇ 15ರಷ್ಟು ಮೀಸಲಾತಿ ಮತ್ತು ಸರ್ಕಾರ ಒದಗಿಸಿರುವ ಸವಲತ್ತುಗಳು ಪರಿಶಿಷ್ಟ ಜಾತಿಯಲ್ಲಿನ ಕೆಲವೇ ಮಂದಿಯ ಪಾಲಾಗಿದೆ  ಎನ್ನುವ ಆರೋಪಗಳಿಂದ ಮಾದಿಗ ದಂಡೋರ ಸಮಿತಿ ಆರಂಭಿಸಿದ ಒಳಮೀಸಲಾತಿ ಹೋರಾಟಕ್ಕೆ ಮೊದ ಮೊದಲು ದಲಿತ ಸಂಘರ್ಷ ಸಮಿತಿಯ ಯಾವುದೇ ಘಟಕವೂ ಸೇರಿದಂತೆ ಪರಿಶಿಷ್ಟರ ಇತರೆ ಜಾತಿಗಳಿಂದ  ಬೆಂಬಲ ದೊರೆಯಲಿಲ್ಲ.

ಆದರೆ ನ್ಯಾ. ಸದಾಶಿವ ಆಯೋಗದ ವರದಿಗೆ ಬೋವಿ, ಲಂಬಾಣಿ ಮತ್ತು ಇತರೆ ಕೆಲವು ಸಣ್ಣಪುಟ್ಟ ಜಾತಿಗಳ ಜನರಿಂದ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಮಾದಿಗ ಮೀಸಲಾತಿ ಹೋರಾಟಗಾರರು ಈಗ ಬಲಗೈ ಗುಂಪಿನ ಜನರ ಮತ್ತು ದಲಿತ ಸಂಘರ್ಷ ಸಮಿತಿಯ ಕೆಲವು ಘಟಕಗಳ ಬೆಂಬಲ ಪಡೆದು ವರದಿಯ ಜಾರಿಗಾಗಿ ಹೋರಾಡುತ್ತಿರುವುದು ಇತ್ತೀಚಿನ ಬೆಳವಣಿಗೆ.
ಒಳ ಮೀಸಲಾತಿ ವ್ಯವಸ್ಥೆಯ ಜಾರಿಯ ಸಂಗತಿ ಹೊಸದೇನೂ ಅಲ್ಲ. ಈ ವ್ಯವಸ್ಥೆಯನ್ನು ಈ ಹಿಂದೆಯೇ ಪಂಜಾಬ್, ಹರಿಯಾಣ ಮತ್ತು ಹನ್ನೆರಡು ವರ್ಷಗಳ ಹಿಂದೆ ಆಂಧ್ರ ಪ್ರದೇಶವೂ ಜಾರಿಗೆ ತಂದವು. ಆದರೆ ಅದೆಲ್ಲ ಕಾನೂನಿನ ಕಣ್ಣಿನಲ್ಲಿ ಅಸಿಂಧು ಎನ್ನುವಂತಾಯಿತು. ಈ ರಾಜ್ಯಗಳು ಮಾಡಿದ ಆದೇಶಗಳೆಲ್ಲ ನ್ಯಾಯಾಲಯಗಳಲ್ಲಿ ಅನೂರ್ಜಿತಗೊಂಡವು. ಈ ಹಿನ್ನೆಲೆಯನ್ನು ಗಮನಿಸಿದರೆ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ   ಜಾರಿಯಾಗುವ ಸಾಧ್ಯತೆಯ ಬಗೆಗೆ ಅನುಮಾನಗಳಿವೆ.

ಕರ್ನಾಟಕದಲ್ಲಿ  ಒಳಮೀಸಲಾತಿ ಬೇಡಿಕೆಗೆ ಓಗೊಟ್ಟ ಧರ್ಮಸಿಂಗ್ ನೇತೃತ್ವದ ಸರ್ಕಾರ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಿತು. ಆರು ವರ್ಷ ಎಂಟು ತಿಂಗಳ ಬಳಿಕ ಆಯೋಗ ತನ್ನ ವರದಿ ನೀಡಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ 101 ಜಾತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಜೊತೆಗೆ ಮೀಸಲಾತಿಯ ಸೌಲಭ್ಯ ಯಾರಿಗೆ ಎಷ್ಟು ಲಭ್ಯವಾಗಿದೆ ಎನ್ನುವ ಬಗೆಗೆ ಸಮೀಕ್ಷೆ ನಡೆಸಿರುವುದಾಗಿ ಆಯೋಗ ಹೇಳಿಕೊಂಡಿದೆ. ಆದರೆ ಈ ಸಮೀಕ್ಷೆಯ ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಯ ಬಗೆಗೆ ಪರಿಶಿಷ್ಟ ಜಾತಿಯ ಜನರಲ್ಲಿಯೇ  ಶಂಕೆ ಮತ್ತು ಅಸಮಾಧಾನವಿದೆ. ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿವೆ. ನಗರದಲ್ಲಿರುವ ಮತ್ತು ಖಾಸಗಿ ಉದ್ಯಮಗಳಲ್ಲಿರುವ ಪರಿಶಿಷ್ಟರ ಗಣತಿಯೇ ನಡೆದಿಲ್ಲ ಎನ್ನುವ ದೂರುಗಳಿವೆ. ಈ ಬಗೆಗೆ ನ್ಯಾ. ಸದಾಶಿವ ಆಯೋಗದ ವರದಿ ಏನು ಹೇಳಿದೆ ಎನ್ನುವುದು ವರದಿಯನ್ನು ಸರ್ಕಾರ ಬಹಿರಂಗಗೊಳಿಸಿದಾಗಲೇ ತಿಳಿಯಲಿದೆ.

ಪರಿಶಿಷ್ಟ ಜಾತಿಯ ಒಟ್ಟು 96.60ಲಕ್ಷ ಜನರ ಸಮೀಕ್ಷೆ ನಡೆಸಿರುವುದಾಗಿ ನ್ಯಾ. ಸದಾಶಿವ ಆಯೋಗ ಹೇಳಿದೆ. ಈ ಸಮೀಕ್ಷೆಯಲ್ಲಿ 6 ಲಕ್ಷ ಮಂದಿ ತಾವು ಯಾವ ಜಾತಿಗೆ ಸೇರಿದವರು ಎನ್ನುವ ವಿವರ ನೀಡಲು ನಿರಾಕರಿಸಿದ್ದಾರೆ ಎಂದೂ ಆಯೋಗ ಹೇಳಿದೆ. ಮೀಸಲಾತಿಯಲ್ಲಿ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ ಮಾದರಿಯಲ್ಲೇ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಆದರೆ ಈ ನಾಲ್ಕು ಗುಂಪುಗಳಲ್ಲಿ ಜಾತಿ ವಿವರ ನೀಡಲು ನಿರಾಕರಿಸಿರುವ ಆರು ಲಕ್ಷ ಜನರನ್ನು ಕೈಬಿಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನರನ್ನು ವರ್ಗೀಕರಣದ ಪಟ್ಟಿಯಿಂದ ಹೊರಗಿಟ್ಟಿರುವುದು ವಿವಾದವಾಗಿಯೇ ಉಳಿದಿದೆ. 

ನ್ಯಾಯಮೂರ್ತಿ ಎ.ಜೆ ಸದಾಶಿವ ಅವರು ತಮಗೆ ಲಭ್ಯವಾಗಿರುವ ಮಾಹಿತಿಯನ್ನಾಧರಿಸಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಒಳಮೀಸಲಾತಿಗೆ ಹೋರಾಟ ಮಾಡಿಕೊಂಡೇ ಬರುತ್ತಿರುವ ಎಡಗೈ ಗುಂಪಿನ ಜನಸಂಖ್ಯೆ ಶೇ 33.47ಇದ್ದು ಅವರಿಗೆ ಎಲ್ಲರಿಗಿಂತ ಹೆಚ್ಚಾಗಿ ಶೇ 6ರಷ್ಟನ್ನು, ಮೀಸಲಾತಿಯನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆನ್ನಲಾದ ಬಲಗೈ ಜನರ ಸಂಖ್ಯೆ ಶೇ 32 ಇದ್ದು ಅವರಿಗೆ ಶೇ 5 ರಷ್ಟು, ಶೇ 3ರಷ್ಟಿರುವ ಸ್ಪೃಶ್ಯ ಜಾತಿಗಳಿಗೆ ಅಂದರೆ ಬೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ ಅವರಿಗೆ ಶೇ 3 ಮತ್ತು  ಇತರರಿಗೆ ಶೇ1ರಷ್ಟು ಮೀಸಲಾತಿಯನ್ನು ಹಂಚಲಾಗಿದೆ.

ನ್ಯಾ. ಸದಾಶಿವ ಅವರು, ವರ್ಗೀಕರಣ ಕಾರ್ಯಕ್ಕಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅನುಮತಿಯನ್ನು ಪಡೆದಿರುವ ಬಗೆಗೆ ಯಾವುದೇ ಸುಳಿವು ನೀಡಿಲ್ಲ. ಆದರೆ ಈ ವರದಿಯನ್ನು ಅಂಗೀಕರಿಸುವ ಜೊತೆಗೆ ಇದು ಅಕ್ಷರಶಃ ಕಾನೂನುಬದ್ಧವಾಗಿ ಜಾರಿಗೆ ಬರಬೇಕಾದರೆ ಸಂವಿಧಾನದ ಕಲಂ 341ಕ್ಕೆ ತಿದ್ದುಪಡಿ ತರುವಂತೆ ಕೇಂದ್ರವನ್ನು ಒತ್ತಾಯಿಸಬೇಕು ಎನ್ನುವ ಸಲಹೆಯನ್ನು ಆಯೋಗವು ರಾಜ್ಯ ಸರ್ಕಾರಕ್ಕೆ ನೀಡಿರುವುದು ಸೂಕ್ತವು ಮತ್ತು ಸಕಾಲಿಕವೂ ಆಗಿದೆ.
ನ್ಯಾ. ಸದಾಶಿವ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದರಿಂದ ತಮ್ಮ ಹದಿನೈದು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿತೆಂದು ಮಾದಿಗ ದಂಡೋರ ಸಮಿತಿಯ ಕಾರ್ಯಕರ್ತರು ಸಹಜವಾಗಿಯೇ ಹರ್ಷದಿಂದಿದ್ದಾರೆ.

ಆದರೆ ವರದಿಯ ಬಗೆಗೆ ರಾಜ್ಯ ಸರ್ಕಾರ ತನ್ನ ನಿಲುವೇನು ಎನ್ನುವ ವಿಷಯದಲ್ಲಿ ಇನ್ನೂ ಬಾಯಿ ಬಿಡದ ಕಾರಣ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ತನ್ನ ಎರಡನೇ ಹಂತದ ಚಳವಳಿಯನ್ನು ಆರಂಭಿಸಿದೆ. ಚಳವಳಿಯ ಆರಂಭದ ದಿನಗಳಿಂದ ತಾವು ಮಾದಿಗರು ಎಂದೇ ಗುರುತಿಸಿಕೊಂಡು ಪರಿಶಿಷ್ಟರು ಅಥವಾ ದಲಿತರು ಎಂದು ಹೇಳಿಕೊಳ್ಳಲಿಚ್ಛಿಸದೆ ಇದುವರೆಗೆ ಮಾಡಿಕೊಂಡು ಬಂದ ಪ್ರತ್ಯೇಕತಾ ಚಳವಳಿಗೆ ಈಗ ಬಲಗೈ ಗುಂಪಿನ ಜನರ ಬೆಂಬಲ ಪಡೆಯುವ ಯತ್ನ ಮುಂದುವರಿದಿದೆ.

ಪರಿಶಿಷ್ಟರಲ್ಲಿ ಮಾದಿಗ ಜನರೇ ಹೆಚ್ಚಿರುವ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ವರದಿಯ ಜಾರಿಗಾಗಿ ನಿತ್ಯವೂ ಒಂದಲ್ಲ ಒಂದು ರೀತಿಯ ಹೋರಾಟ ನಡೆದಿದೆ. ಹಾಗೆಯೇ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳಾದ ಬೋವಿ ಮತ್ತು ಲಂಬಾಣಿ ಜನರು ಬೀದಿಗಿಳಿದು ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯೇ ಇಲ್ಲವೇ ಎನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಹೋರಾಟ ಪ್ರತಿಭಟನೆ ಅವರಿಗೆ ಸಂವಿಧಾನಬದ್ಧವಾಗಿ ದೊರೆತಿರುವ ಹಕ್ಕು.ಹಾಗೆಯೇ ಈ ವರದಿಯನ್ನು ಬೆಂಬಲಿಸುವ ಅಥವಾ ವಿರೋಧಿಸುವುದು ಸಂವಿಧಾನಬದ್ಧವಾಗಿ ಪ್ರತಿಯೊಬ್ಬರಿಗೂ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT