ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ನೀಡದಿದ್ದರೆ ತಕ್ಕ ಪಾಠ

Last Updated 5 ಜುಲೈ 2013, 4:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಜಾರಿಗೊಳಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಹನುಮಂತಪ್ಪ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ರಾಜ್ಯದಲ್ಲಿ ಆಳ್ವಿಕೆಯಲ್ಲಿದ್ದ ಬಿಜೆಪಿ ಸರ್ಕಾರ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತು ಭರವಸೆ ನೀಡಿತ್ತು. ಆ ಬಗ್ಗೆ ನಮಗೂ ವಿಶ್ವಾಸವಿತ್ತು. ಆದರೆ ಕೊಟ್ಟ ಮಾತನ್ನು ಸರ್ಕಾರ ಮರೆಯಿತು.

ಇದನ್ನು ವಿರೋಧಿಸಿ ಕಳೆದ ನವೆಂಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಸಮುದಾಯದವರೆಲ್ಲ ಸೇರಿ ಮುತ್ತಿಗೆ ಹಾಕಿದೆವು. ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪರಿಣಾಮವಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಾದಿಗ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಿತು. ಬೇಡಿಕೆ ಈಡೇರದಿದ್ದರೆ ಕಾಂಗ್ರೆಸ್‌ಗೂ ಇಂಥ ಸ್ಥಿತಿ ಬರಬಹುದು' ಎಂದು ಎಚ್ಚರಿಸಿದರು.

ಮಾದಿಗರಿಗೆ ಒಳಮೀಸಲಾತಿ ಕಲ್ಪಿಸುವಂತೆ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಫಲ ನೀಡುವಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಅಧ್ಯಯನ ನಡೆಸಿ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಯಲ್ಲಿ ಶೋಷಿತ, ತುಳಿತಕ್ಕೆ ಒಳಗಾದ ಮಾದಿಗ ಜನಾಂಗಕ್ಕೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಆ ವರದಿಯನ್ನು ಸರ್ಕಾರ ಒಪ್ಪಿಕೊಳ್ಳ ಬೇಕು' ಎಂದು  ಒತ್ತಾಯಿಸಿದರು.

ನ್ಯಾ.ಸದಾಶಿವ ಆಯೋಗವನ್ನು ಜಾರಿಗೊಳಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಇದೇ 10 ರಂದು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವುದಾಗಿ ಹನುಮಂತಪ್ಪ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ವಕೀಲರಾದ ಜಿ.ಶರಣಪ್ಪ, ಕುಮಾರಪ್ಪ, ಎಸ್.ಭೀಮರಾಜ್, ಯೋಗರಾಜ್, ಹುಲ್ಲೂರು ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಂಗಡಗಿ ಕೈಬಿಡಲು ಒತ್ತಾಯ
ಸಚಿವರಾಗಿದ್ದುಕೊಂಡು ಜಾತಿಯೊಂದರ ಪರವಾಗಿ ವಕಾಲತ್ತುವಹಿಸುತ್ತಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಹನುಮಂತಪ್ಪ   ಒತ್ತಾಯಿಸಿದರು.

ಜು.2 ರಂದು ಬೆಂಗಳೂರಿನಲ್ಲಿ ನಡೆದ `ಸ್ಪರ್ಶ ಪರಿಶಿಷ್ಟ ಜಾತಿಗಳ ಸಭೆ'ಯಲ್ಲಿ ಭೋಮಿ ಸಮುದಾಯದ ಪರವಾಗಿ ವಕಾಲತ್ತುವಹಿಸಿ ಆಯೋಗದ ಮುಂದೆ ನಿಂತು ಮನವಿ ಸಲ್ಲಿಸಿದ್ದು ಅತ್ಯಂತ ದುರಂತದ ವಿಚಾರವಾಗಿದೆ. ಇಂಥ ಸಚಿವರಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವುದು ಹೇಗೆ ? ಇಂಥವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT