ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರಿಡೆಗಳ ಹೊಸ ಹೆಜ್ಜೆ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಂಗ್ಲರ ನೆಲದಲ್ಲಿ ಜನ್ಮ ತಾಳಿ ಜಗತ್ತಿನ ಪ್ರಖ್ಯಾತ ಕ್ರೀಡೆಗಳಲ್ಲಿ ಒಂದಾಗಿ ಬೆಳೆದು ನಿಂತ ಕ್ರಿಕೆಟ್ ಈಗ ಮೆಲ್ಲಗೆ ಮಗ್ಗಲು ಬದಲಿಸುತ್ತಿದೆ. ಹೊಸ ಆಯಾಮಗಳನ್ನು ಹುಟ್ಟು ಹಾಕುತ್ತಿದೆ. ಕ್ರಿಕೆಟ್ ಎಂದರೆ ಟೆಸ್ಟ್ ಮತ್ತು ಏಕದಿನ ಮಾತ್ರ ಎಂದುಕೊಂಡಿದ್ದ ಕ್ರೀಡಾಪ್ರೇಮಿಗಳಿಗೆ `ಮಿಲಿಯನ್ ಡಾಲರ್ ಬೇಬಿ' ಐಪಿಎಲ್ ಹೊಸ ಅನುಭವ ನೀಡಿತು. ಅದರಂತೆಯೇ ವರ್ಷಗಳು ಉರುಳಿದಂತೆ ಕ್ರಿಕೆಟ್‌ನ ವಿಭಿನ್ನ ಮಾದರಿಗಳು ಬೆಳಕಿಗೆ ಬರುತ್ತಿವೆ.

ಐದು ದಿನದ ಟೆಸ್ಟ್ ಕಡಿಮೆಯಾಗಿ, ಏಕದಿನದ ಪಂದ್ಯಗಳ ಸಂಖ್ಯೆ ಹೆಚ್ಚಾದವು. ಕಾಲ ಕಳೆದಂತೆ ಈಡೀ ದಿನ ಕುಳಿತು ಪಂದ್ಯ ನೋಡುವ ಉತ್ಸಾಹ ಕರಗಿ ಹೋಗುತ್ತಿರುವಾಗ ಮೂರು ಗಂಟೆಯಲ್ಲಿಯೇ ಮುಗಿಯುವ ಚುಟುಕು ಆಟ (ಟ್ವೆಂಟಿ-20) ಖ್ಯಾತಿ ಪಡೆಯಿತು. ಅದರ ಹಿಂದೆಯೇ ಹಣ ನೀರಿನಂತೆ ಹರಿದು ಬಂತು.

ಕ್ರಿಕೆಟ್ ವಿವಿಧ ವೇಷಗಳನ್ನು ಧರಿಸುತ್ತಿರುವ ಈ ವೇಳೆ ಒಳಾಂಗಣ ಅಂಗಣದ ಆಟ ವಿದೇಶದಲ್ಲಿ ಖ್ಯಾತಿಯ ಅಲೆಯಲ್ಲಿ ಹೆಜ್ಜೆ ಹಾಕುತ್ತಿದೆ. ಇದಕ್ಕೆ ಮೂರು ವರ್ಷಗಳ ಹಿಂದೆ ಭಾರತದಲ್ಲಿ ಮುನ್ನುಡಿ ಬರೆಯಲಾಗಿದೆ. ಚುಟುಕು ಆಟದ ಗಮ್ಮತ್ತನ್ನು ನೆನಪಿಸುವ ಜೊತೆಗೆ, ಹೆಚ್ಚು ದೈಹಿಕ ಶ್ರಮವಿಲ್ಲದೆ, ಬಿಸಿಲಿನ ಆತಂಕವಿಲ್ಲದೆ, ಮನರಂಜನೆ ಪ್ರಧಾನ ಉದ್ದೇಶವಾಗಿರಿಸಿಕೊಂಡ ಒಳಾಂಗಣ ಕ್ರಿಕೆಟ್ ಭಾರತದಲ್ಲಿ ಅಂಬೆಗಾಲಿಡುತ್ತಿದೆ. ಈ ಪ್ರಯತ್ನಕ್ಕೆ ಮೊದಲ  ಹೆಜ್ಜೆ ಊರಿದ್ದು ಬೆಂಗಳೂರಿನ ಆ್ಯಕ್ಷನ್ ಸ್ಪೋರ್ಟ್ಸ್.

ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್, ಕೆನಡಾ ಸಿಂಗಪುರ, ಅಮೆರಿಕ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಒಳಾಂಗಣ ಕ್ರಿಕೆಟ್ ಈಗಾಗಲೇ ಖ್ಯಾತಿಯ ಉತ್ತುಂಗದಲ್ಲಿದೆ. ಇದುವರೆಗು ಒಂಬತ್ತು ಸಲ ಒಳಾಂಗಣ ಏಕದಿನ ವಿಶ್ವಕಪ್ ಕ್ರಿಕೆಟ್ ನಡೆದಿದೆ. ವಿಶ್ವ ಒಳಾಂಗಣ ಕ್ರೀಡೆಗಳ ಫೆಡರೇಷನ್ ಸಹ ಇದೆ. ಒಳಾಂಗಣದ ಕ್ರಿಕೆಟ್‌ನಲ್ಲಿ ಆಸೀಸ್ ತಂಡದವರೇ ಪಾರಮ್ಯ ಮರೆಯುತ್ತಿದ್ದಾರೆ. 

ಕಳೆದ ಸಲ 2011ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಒಳಾಂಗಣ ವಿಶ್ವಕಪ್ ನಡೆದಿತ್ತು. ಮೂರು ವರ್ಷಗಳಿಗೊಮ್ಮ ಈ ವಿಶ್ವಕಪ್ ನಡೆಯುತ್ತದೆ. ಮುಂದಿನ ವಿಶ್ವಕಪ್ 2014ರಲ್ಲಿ ಆಕ್ಲೆಂಡ್‌ನಲ್ಲಿ ಆಯೋಜನೆಯಾಗಿದೆ. ಆಸ್ಟ್ರೇಲಿಯಾದವರು ಇದರಲ್ಲಿ ಸಾಮ್ರಾಟರಾಗಿ ಮೆರೆದಾಡುತ್ತಿದ್ದಾರೆ. ಇದುವರೆಗೂ ಒಟ್ಟು ಒಂಬತ್ತು ಸಲ ನಡೆದ ವಿಶ್ವಕಪ್‌ನಲ್ಲಿ ಎಲ್ಲಾ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದು ಆಸೀಸ್ ತಂಡದವರು ಎನ್ನುವುದು ಗಮನಾರ್ಹ.

ಕ್ರೀಡಾ ಜಗತ್ತಿನ ದೈತ್ಯ ಶಕ್ತಿಯಾಗಿರುವ ಚೀನಾದಲ್ಲಿ ಇತ್ತೀಚಿಗೆ ಕ್ರಿಕೆಟ್ ಕೂಡ ಆರಂಭವಾಗಿವೆ. ಪುರುಷರ ಹಾಗೂ ಮಹಿಳಾ ತಂಡಗಳು ಈಗಾಗಲೇ ದೇಶಿಯ ಟೂರ್ನಿಗಳಲ್ಲಿ ಆಡತೊಡಗಿವೆ. ಇದರ ಬೆನ್ನ ಹಿಂದೆಯೇ ಒಳಾಂಗಣ ಕ್ರಿಕೆಟ್ ಆರಂಭಿಸಲು ಚೀನಾ, ವಿಶ್ವ ಒಳಾಂಗಣ ಕ್ರೀಡೆಗಳ ಫೆಡರೇಷನ್ ಪರವಾನಗಿ ಪಡೆದುಕೊಂಡಿದೆ.

ಭಾರತದಲ್ಲಿ ಒಳಾಂಗಣ ಕ್ರೀಡೆ...
ಬೇರೇ ಬೇರೆ ರಾಷ್ಟ್ರಗಳಲ್ಲಿ ಒಳಾಂಗಣ ಕ್ರೀಡೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗ ಭಾರತವೂ ಈ ಕ್ರೀಡೆಯನ್ನು ಬೆಳೆಸಲು ಯತ್ನಿಸುತ್ತಿದೆ. 2009ರ ಡಿಸೆಂಬರ್‌ನಿಂದ ಈಚೆಗೆ ಈ ಕ್ರೀಡೆ ಭಾರತದಲ್ಲಿ ಅಧಿಕೃತವಾಗಿ ಕಾಣಿಸಿಕೊಂಡಿದೆ. ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಭಾರತ ಪಾಲ್ಗೊಂಡಿತ್ತು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ `ಆ್ಯಕ್ಷನ್ ಸ್ಪೋರ್ಟ್ಸ್', ಒಳಾಂಗಣ ಆಟವನ್ನು ಪ್ರಚುರ ಪಡಿಸಲು ಪ್ರಯತ್ನ ನಡೆಸುತ್ತಿದೆ. ಎಡವಿ ಬೀಳುವ ಭಯದಲ್ಲಿಯೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಊರುವ ಮಗುವಿನಂತೆ ಭಾರತ ಒಳಾಂಗಣ ಕ್ರಿಕೆಟ್ ತಂಡದ ಆಟಗಾರರು ಹೆಜ್ಜೆ ಹಾಕುತ್ತಿದ್ದಾರೆ.

ಬೆಳವಣಿಗೆಗೆ ಪೂರಕ
ಮುಂದಿನ ವರ್ಷದಲ್ಲಿ (2013) ಮೂರು ಪ್ರಮುಖ ಏಕದಿನ ಸರಣಿಗಳು ನಡೆಯಲಿವೆ. ಈ ಸರಣಿಗಳು ಭಾರತದಲ್ಲಿ ಒಳಾಂಗಣ ಕ್ರೀಡೆಯ ಬೆಳವಣಿಗೆಗೆ ವೇದಿಕೆಯಾಗಲಿವೆ.ಫೆಬ್ರುವರಿಯಲ್ಲಿ ಶ್ರೀಲಂಕಾ ತಂಡ ಐದು ಏಕದಿನ ಪಂದ್ಯಗಳ ಸರಣಿಯನ್ನಾಡಲು ಬೆಂಗಳೂರಿಗೆ ಬರಲಿದೆ.

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾರತಕ್ಕೆ ಬರಲು ನಿರ್ಧರಿಸಿವೆ. ಈ ವೇಳೆ ಐದು ಏಕದಿನ ಪಂದ್ಯಗಳ ಸರಣಿ ಆಯೋಜನೆಯಾಗಿದೆ. ಒಟ್ಟು 32 ಓವರ್‌ಗಳ ಪಂದ್ಯ (ತಲಾ ಇನಿಂಗ್ಸ್ 16 ಓವರ್) ಇದಾಗಿದೆ. ಈ ಪಂದ್ಯಗಳು ಉದ್ಯಾನನಗರಿಯಲ್ಲಿ ನಡೆಯಲಿವೆ.

ಕ್ರಿಕೆಟ್ ಮಾತ್ರವಲ್ಲ
ಒಳಾಂಗಣ ಅಂಗಣದಲ್ಲಿ ಕ್ರಿಕೆಟ್ ಮಾತ್ರವಲ್ಲ. ಫುಟ್‌ಬಾಲ್, ಹಾಕಿ ಹಾಗೂ ನೆಟ್‌ಬಾಲ್ ಸಹ ಆಡಬಹುದು. ಆದರೆ, ಕ್ರಿಕೆಟ್ ಅನ್ನು ಧರ್ಮ ಎಂದು ಪೂಜಿಸುವ ಭಾರತದಲ್ಲಿ ಬೇರೆ ಕ್ರೀಡೆಗಳಿಗೆ ಪ್ರಾಧಾನ್ಯತೆ ಸಿಗುವುದು ಕಷ್ಟ. ಬೆಳಗ್ಗಿನ ಜಾವ ಇಲ್ಲವೇ ಸಂಜೆ ಸಮಯದಲ್ಲಿ ಪಂದ್ಯಗಳು ನಡೆಯುವುದು ಇಲ್ಲಿ ವಾಡಿಕೆ. ಆ್ಯಕ್ಷನ್ ಸ್ಪೋರ್ಟ್ಸ್ ಭಾರತ ಒಳಾಂಗಣ  ಕ್ರೀಡಾ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡಿದೆ.

`ಈ ಒಳಾಂಗಣ ಕ್ರೀಡೆಗೆ ಉತ್ತಮ ಭವಿಷ್ಯವಿದೆ. ಆದರೆ ಹೆಚ್ಚು ಜನರಿಗೆ ಇದು ಗೊತ್ತಾಗಬೇಕು. ಮುಖ್ಯವಾಗಿ ಮಕ್ಕಳು ಈ ಕ್ರೀಡೆಯತ್ತ ಮುಖ ಮಾಡಬೇಕು. ಹೆಚ್ಚು ದೈಹಿಕ ಶ್ರಮವೂ ಇರುವುದಿಲ್ಲ. ವಿದೇಶಗಳಲ್ಲಿ ಒಳಾಂಗಣ ಕ್ರೀಡೆಯನ್ನು ವೃತ್ತಿಯಂತೆ ಪರಿಗಣಿಸುತ್ತಾರೆ. ಭಾರತದಲ್ಲಿ ಈ ರೀತಿಯ ವಾತಾವರಣ ಮೂಡುವುದು ಅಗತ್ಯವಿದೆ' ಎನ್ನುತ್ತಾರೆ `ಆ್ಯಕ್ಷನ್ ಸ್ಪೋರ್ಟ್ಸ್'ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಪೂಂಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT