ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರೀಡಾಂಗಣ: ನೋಟಿಸ್

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೈಯಾಲಿಕಾವಲ್ ಬಳಿ ಉದ್ಯಾನಕ್ಕಾಗಿ ಮೀಸಲು ಇರಿಸಿರುವ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಜಾಗವನ್ನು ಪರಭಾರೆ ಮಾಡದಂತೆ ಆದೇಶಿಸಲು ಜ್ಯೋತಿ ಭಟ್ ಎನ್ನುವವರು ಕೋರಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ ಹಾಗೂ ತೋಟಗಾರಿಕಾ ಇಲಾಖೆಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

`ಇಲ್ಲಿ ಈಗಾಗಲೇ ಫುಟ್‌ಬಾಲ್ ಮೈದಾನ ಇದೆ. ಈ ಮೈದಾನವನ್ನು ವಿಸ್ತರಣೆ ಮಾಡಲು ಹೈಕೋರ್ಟ್ ಕಳೆದ ವರ್ಷ ಅನುಮತಿ ನೀಡಿದೆ. ಆದರೆ ಈ ಮೈದಾನ ವಿಸ್ತರಣೆ ಮಾಡುವ ಬದಲು ಅನಗತ್ಯವಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ~ ಎನ್ನುವುದು ಅವರ ವಾದ. ವಿಚಾರಣೆಯನ್ನು ಮುಂದೂಡಲಾಗಿದೆ.

`ಉದ್ಯಾನದ ಜಾಗ ಪರಭಾರೆ~

ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ, ಕುಂದನಹಳ್ಳಿ ಹಾಗೂ ಚಿನ್ನಪ್ಪನಹಳ್ಳಿ ಬಳಿ ಇರುವ 132 ಎಕರೆ ಜಮೀನಿನ ಪೈಕಿ ಸಾರ್ವಜನಿಕ ಉಪಯೋಗಕ್ಕೆ ಮೀಸಲು ಇರಿಸಿರುವ ಜಾಗವನ್ನು `ಏರ್‌ಕ್ರಾಫ್ಟ್ ನೌಕರರ ಸಹಕಾರ ಸಂಘ~ವು ಪರಭಾರೆ ಮಾಡುತ್ತಿರುವುದಾಗಿ ದೂರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ, ಬಿಡಿಎ, ಸೊಸೈಟಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಸರ್ವೆ ನಂ.353ರಲ್ಲಿನ ಬಿಡಿಎ ಜಾಗವನ್ನು ಬಡಾವಣೆ ನಿರ್ಮಾಣಕ್ಕೆ ಈ ಸೊಸೈಟಿಗೆ ನೀಡಲಾಗಿತ್ತು. ಆ ಪೈಕಿ ಸ್ವಲ್ಪ ಜಮೀನನ್ನು ಉದ್ಯಾನ, ಆಟದ ಮೈದಾನಕ್ಕೆ ಮೀಸಲು ಇರಿಸುವಂತೆ ಬಿಡಿಎ ತಿಳಿಸಿತ್ತು. ಆದರೂ ಈಗ ಸೊಸೈಟಿ ಅದನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಧನಂಜಯ ಹಾಗೂ ಇತರರು ದೂರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ

ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಒಳಗಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅವರ ಪತ್ನಿ ವಾಣಿಶ್ರೀ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಲೋಕಾಯುಕ್ತ ಕೋರ್ಟ್ ಮೊರೆ ಹೋಗಿದ್ದಾರೆ.

ಇವರ ವಿರುದ್ಧ ಶಶಿಧರ್ ಎನ್ನುವವರು ದಾಖಲು ಮಾಡಿದ್ದ ದೂರಿನ ಆಧಾರದ ಮೇಲೆ ಕೋರ್ಟ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.

`ರಾಜಕೀಯಕ್ಕೆ ಬಂದ ಮೇಲೆ ವಿಶ್ವನಾಥ್ ಸುಮಾರು 70 ಕೋಟಿ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿರುವ ಸುಮಾರು ಮೂರುವರೆ ಎಕರೆ ಜಮೀನನ್ನು ಹೆಸರಘಟ್ಟ ಹಾಗೂ ಶ್ರೀರಾಮನಹಳ್ಳಿಯಲ್ಲಿ ಹೊಂದಿದ್ದಾರೆ~ ಎನ್ನುವುದು ಶಶಿಧರ್ ಅವರ ದೂರು. ಈ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಕಾರಣದಿಂದ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT