ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಿತು – ಕೆಡಕುಗಳ ಸಮ್ಮಿಶ್ರಣದ ವರದಿ

ಕಸ್ತೂರಿ ರಂಗನ್‌ ಸಮಿತಿ ಶಿಫಾರಸು ಕುರಿತು ಎಂ.ಎಂ. ತಿಮ್ಮಯ್ಯ ಅಭಿಮತ
Last Updated 3 ಡಿಸೆಂಬರ್ 2013, 7:32 IST
ಅಕ್ಷರ ಗಾತ್ರ

ಮಡಿಕೇರಿ: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಡಾ.ಕಸ್ತೂರಿ ರಂಗನ್‌ ಸಮಿತಿ ನೀಡಿರುವ ವರದಿಯು ಒಳಿತು– ಕೆಡಕುಗಳ ಸಮ್ಮಿಶ್ರಣದ ವರದಿಯಾಗಿದೆ. ಒಳ್ಳೆಯ ಶಿಫಾರಸ್ಸುಗಳನ್ನು ಮುಂದುವರಿಸಿಕೊಂಡು, ಕೆಡಕು ಉಂಟು ಮಾಡುವ ಅಂಶಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ವರದಿ ಕುರಿತು ಅಧ್ಯಯನ ಮಾಡಿರುವ ಎಂ.ಎಂ. ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕೊಡಗು ಪತ್ರಿಕಾ ಭವನ ಟ್ರಸ್ಟ್‌ ಆಯೋಜಿಸಿದ್ದ ‘ಕಸ್ತೂರಿ ರಂಗನ್‌ ಸಮಿತಿ ವರದಿ– ಸಾಧಕ ಬಾಧಕಗಳ ಬಗ್ಗೆ ಸಂವಾದ’ದಲ್ಲಿ  ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಒಳಿತು ಉಂಟು ಮಾಡುವ ವರದಿಯ ಪ್ರಮುಖ ಶಿಫಾರಸ್ಸುಗಳು;
* ಮಾಧವ್‌ ಗಾಡ್ಗೀಲ್‌ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ 1,60,000 ಚ.ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿತ್ತು. ಕಸ್ತೂರಿ ರಂಗನ್‌ ವರದಿಯಲ್ಲಿ ಈ ಪ್ರದೇಶವನ್ನು 60,000 ಚ.ಕಿ.ಮೀ ಪ್ರದೇಶಕ್ಕೆ ಇಳಿಸಲಾಗಿದೆ.

* ಕಸ್ತೂರಿ ರಂಗನ್‌ ವರದಿಯಲ್ಲಿ ಪ್ರಸ್ತಾಪಿಸಿರುವ 60,000 ಚ.ಕಿ.ಮೀ ಸೂಕ್ಷ್ಮ ವಲಯದಲ್ಲಿ ಅರಣ್ಯ, ವನ್ಯಧಾಮಗಳು, ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ ಪ್ರದೇಶವು 40,000 ಚ.ಕಿ.ಮೀ ಪ್ರದೇಶದಷ್ಟು ವಿಸ್ತರಿಸಿದೆ. ಬಾಕಿ ಉಳಿಯುವ 20,000 ಚ.ಕಿ.ಮೀ ಪ್ರದೇಶದಲ್ಲಿ ಮನುಷ್ಯರು ವಾಸವಿರುವ ಪ್ರದೇಶವಾಗಿದೆ.

* ಸಾವಯವ ಕೃಷಿಯನ್ನು ನಿಗದಿತ ಸಮಯದೊಳಗೆ ಅನುಷ್ಠಾನ ತರಬೇಕೆಂದು ಹೇಳಿಲ್ಲ. ಆದರೆ, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಯತ್ತ ವಾಲುವಂತೆ ಮಾಡಬೇಕೆಂದು ಸಲಹೆ ನೀಡಲಾಗಿದೆ. ಹೀಗಾಗಿ ಜಿಲ್ಲೆಯ ಕಾಫಿ, ಏಲಕ್ಕಿ ಕೃಷಿಗೆ ಯಾವುದೇ ರೀತಿಯ ತೊಂದರೆಯಾಗದು. (ಕೃಷಿಯಲ್ಲಿ ರಾಸಾಯನಿಕ ಬಳಸದಂತೆ ಹಾಗೂ 5 ವರ್ಷದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅನುಷ್ಠಾನಗೊಳಿಸುವಂತೆ ಗಾಡ್ಗೀಲ್‌ ವರದಿ ಹೇಳಿತ್ತು).

* ಪಶ್ಚಿಮ ಘಟ್ಟ ರಕ್ಷಣೆಗಾಗಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಪಂಚವಾರ್ಷಿಕ ಯೋಜನೆಯಡಿ ಪ್ರತಿ ರಾಜ್ಯಕ್ಕೆ ರೂ 1000 ಕೋಟಿ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿದೆ. (ರಾಜ್ಯ ಸರ್ಕಾರ ಶೇ 10ರಷ್ಟು ಭರಿಸಬೇಕಾಗುತ್ತದೆ).

* ಕೇಂದ್ರ ಸರ್ಕಾರಕ್ಕಿಂತ ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸುವುದರ ಬಗ್ಗೆ ಗಾಡ್ಗೀಲ್‌ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಪ್ರಾಧಿಕಾರ ರಚನೆ ಸಲಹೆಯನ್ನು ಕಸ್ತೂರಿ ರಂಗನ್‌ ಕೈಬಿಟ್ಟಿರುವುದು ಸ್ವಾಗತಾರ್ಹ.

* ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳಿಂದ ಒಂದು ಬೊಗಸೆ ನೀರನ್ನು ಸಹ ಪಡೆಯಬಾರದೆನ್ನುವ ರೀತಿಯಲ್ಲಿ ಗಾಡ್ಗೀಲ್‌ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ನದಿಗಳ ನೀರಿನ ಮೇಲೆ ಅವಲಂಬಿತರಾಗಿರುವ ಮಹಾನಗರವಾಸಿಗಳ ಹಿತವನ್ನು ಕಾಪಾಡುವ ಉದ್ದೇಶದಿಂದ ಈ ಅಂಶವನ್ನು ಸೇರಿಸಲಾಗಿತ್ತು. ಕಸ್ತೂರಿ ರಂಗನ್‌ ವರದಿಯಲ್ಲಿ ಜಲ ಆಧಾರಿತ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲಿಸಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.

ಆತಂಕದ ವಿಷಯಗಳು:
* ಪಶ್ಚಿಮಘಟ್ಟವನ್ನು ರಕ್ಷಿಸಲು ಮುಖ್ಯವಾಗಿ ನಾಲ್ಕು ಅಂಶಗಳನ್ನು ವರದಿಯಲ್ಲಿ ಶಿಪಾರಸ್ಸು ಮಾಡಲಾಗಿದೆ. ರೆಡ್‌ ಕ್ಯಾಟಗರಿ ಇಂಡಸ್ಟ್ರೀಸ್‌ (ಆಸ್ಪತ್ರೆಗಳೂ ಸೇರಿದಂತೆ ಪರಿಸರ ಮಾಲಿನ್ಯ ಮಾಡುವ ಕೈಗಾರಿಕೆಗಳು), ಉಷ್ಣ ವಿದ್ಯುತ್‌ ಸ್ಥಾವರಗಳು, ಗಣಿಗಾರಿಕೆ (ಮರಳು ತೆಗೆಯುವುದು ಹಾಗೂ ಕ್ವಾರಿ ಕೆಲಸವನ್ನು ಇದರಲ್ಲಿ ಸೇರಿಸಲಾಗಿದೆ) ಹಾಗೂ 20,000 ಚದರ ಮೀಟರ್‌ಗಿಂತ ಹೆಚ್ಚಿನ ಪ್ರದೇಶದ ನಗರೀಕರಣ ಯೋಜನೆಗಳನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆಸ್ಪತ್ರೆಗಳನ್ನೂ ರೆಡ್‌ ಕ್ಯಾಟಗರಿ ಇಂಡಸ್ಟ್ರೀಸ್‌ನಲ್ಲಿ ವಿಂಗಡಿಸಿರುವುದು ಹಾಗೂ ಮರಳು– ಕ್ವಾರಿ ಕೆಲಸವನ್ನು ಗಣಿಗಾರಿಕೆಯಲ್ಲಿ ಸೇರಿಸಿರುವುದು ಆತಂಕ ಸೃಷ್ಟಿಸಿದೆ. ಇವೆರಡು ಅಂಶಗಳನ್ನು ಪರಿಷ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

* ಕೊಡಗಿನಲ್ಲಿ ಈಗಾಗಲೇ ಶೇ 33ರಷ್ಟು ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ಮಾತ್ರ ಸೂಕ್ಷ್ಮ ಪರಿಸರ ವಲಯವನ್ನು ಜಾರಿಗೊಳಿಸಿದರೆ ಸಾಕು, ಜನವಸತಿ ಇರುವ 55 ಗ್ರಾಮಗಳನ್ನು ಈ ವಲಯಕ್ಕೆ ಸೇರಿಸುವುದು ಬೇಡವೆಂದು ಮನವಿ ಮಾಡಬೇಕಾಗಿದೆ.  ವರದಿ ಜಾರಿಯಿಂದ ಜನಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹೊಸ ಹೊಸ ನಿರ್ಬಂಧಗಳನ್ನು ಜಾರಿಗೆ ತರಲ್ಲ ಎಂದು ಕೇಂದ್ರ ಸರ್ಕಾರ ಆಶ್ವಾಸನೆ ಕೊಡಬೇಕಾಗಿದೆ ಎಂದರು.

ವರದಿಯಲ್ಲಿರುವ ಹಾನಿಕಾರಕ ಅಂಶಗಳನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಆರು ರಾಜ್ಯಗಳ ಸರ್ಕಾರಗಳು ಒತ್ತಡ ಹೇರಬೇಕು. ಇದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಹೋರಾಡಬೇಕಾಗಿದೆ ಎಂದು ಅವರು ಹೇಳಿದರು.

ಕಸ್ತೂರಿ ರಂಗನ್‌ ಅವರ ವರದಿಯೂ ಫ್ಲೆಕ್ಸಿಬಲ್‌ (ಸಡಿಲಿಕೆ) ಆಗಿದೆ. ಜನರಿಗೆ ತೊಂದರೆಯಾಗದಂತೆ ಪಶ್ಚಿಮ ಘಟ್ಟ ರಕ್ಷಿಸಲು ಎಷ್ಟು ಅವಕಾಶ ನೀಡಲಾಗಿದೆಯೋ ಅಷ್ಟೇ ಅವಕಾಶವನ್ನು ಪರಿಸರ ಸಂರಕ್ಷಿಸುವುದಕ್ಕಾಗಿ ಕಠಿಣ ಕ್ರಮಕೈಗೊಳ್ಳಲು ಬಯಸುವ ಪರಿಸರವಾದಿಗಳಿಗೂ ನೀಡಲಾಗಿದೆ. ಜನರ ಹಿತಾಸಕ್ತಿ ಕಾಪಾಡಬೇಕಾದರೆ, ಇದಕ್ಕಾಗಿ ಈಗಿನಿಂದಲೇ ಜನಾಂದೋಲನ ರೂಪಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೋರ್ವ ಭಾಷಣಕಾರರಾದ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ’ಕಸ್ತೂರಿ ರಂಗನ್‌ ವರದಿಯಲ್ಲಿ ಹಲವು ಕಡೆ ಮಾಧವ್‌ ಗಾಡ್ಗೀಲ್‌ ವರದಿಯನ್ನು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಹೀಗಾಗಿ ಕಸ್ತೂರಿ ರಂಗನ್‌ ವರದಿ ಜಾರಿಯ ನೆಪದಲ್ಲಿ ಗಾಡ್ಗೀಲ್‌ ವರದಿಯನ್ನು ಅನುಷ್ಠಾನಗೊಳಿಸುವ ಅಪಾಯವಿದೆ’ ಎಂದು ಹೇಳಿದರು.

ಕೇಂದ್ರ ಸರ್ಕಾರವು ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಅನುಷ್ಠಾನಗೊಳಿಸಲು ಕರ್ನಾಟಕ ಸೇರಿದಂತೆ 6 ರಾಜ್ಯಗಳ ಸರ್ಕಾರಗಳಿಗೆ ಸೂಚಿಸಿದೆ. ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳುವ ಮೊದಲು ಸ್ಥಳೀಯರೆಲ್ಲರೂ ಆಕ್ಷೇಪಣೆಗಳನ್ನು ಸಲ್ಲಿಸಬೇಕಾಗಿದೆ. ಇದಕ್ಕೆ ಎಲ್ಲ ಪಕ್ಷಗಳ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಮನು ಶೆಣೈ ವಹಿಸಿದ್ದರು. ಪ್ರೆಸ್‌ಕ್ಲಬ್‌ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್‌, ಸಿಪಿಎಂ ರಾಜ್ಯ ಸಮಿತಿ ಸದಸ್ಯ ಗುರುಶಾಂತ್‌, ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಐ.ಆರ್‌. ದುರ್ಗಾಪ್ರಸಾದ್‌, ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್‌ ಜೋಯಪ್ಪ, ಕುಡಿಯರ್‌ ಮುತ್ತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT