ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಆಟಗಾರ ನಿಜ; ಆದರೆ ಕೆಟ್ಟ ನಾಯಕ: ಸ್ವಾನ್ ಟೀಕಾಸ್ತ್ರ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕೆವಿನ್ ಪೀಟರ್ಸನ್ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಅವಧಿಯನ್ನು ಕರಾಳ ದಿನಗಳು ಎನ್ನುವಂತೆ ಚಿತ್ರಿಸುವ ಮೂಲಕ ಆಫ್ ಸ್ಪಿನ್ ಬೌಲರ್ ಗ್ರೇಮ್ ಸ್ವಾನ್ ಅವರು ಸುದ್ದಿ ಮಾಡಿದ್ದಾರೆ.

ತಮ್ಮ ಆತ್ಮಚರಿತ್ರೆ `ದಿ ಬ್ರೇಕ್ಸ್ ಆರ್ ಆಫ್~ ಪುಸ್ತಕದಲ್ಲಿ ಕೆವಿನ್ ನಾಯಕತ್ವವನ್ನು ಕಟುವಾಟಿ ಟೀಕಿಸಿರುವ ಸ್ವಾನ್ `ಈತ ಒಳ್ಳೆಯ ಆಟಗಾರ ಎನ್ನುವುದು ನಿಜ; ಆದರೆ ಕೆಟ್ಟ ನಾಯಕ~ ಎಂದು ಬರೆದಿದ್ದಾರೆ.

`ಒಬ್ಬ ಬ್ಯಾಟ್ಸ್‌ಮನ್ ಆಗಿ ಅವರನ್ನು ನಾನು ಕೂಡ ಮೆಚ್ಚಿಕೊಂಡಿದ್ದೇನೆ. ಹಾಗೆಂದ ಮಾತ್ರಕ್ಕೆ ಅವರ ನೇತೃತ್ವವನ್ನು ಕೂಡ ಇಷ್ಟಪಡಬೇಕೆಂದೇನಲ್ಲ~ ಎಂದಿರುವ ಗ್ರೇಮ್ `ಇಂಗ್ಲೆಂಡ್ ತಂಡಕ್ಕೆ ಅವರು ಸೂಕ್ತ ನಾಯಕ ಆಗಿರಲೇ ಇಲ್ಲ. ಕೆಲವರಿಗೆ ನಾಯಕತ್ವದ ಗುಣ ಸಹಜವಾಗಿಯೇ ಬರುತ್ತದೆ. ಕೆವಿನ್ ಅಂಥ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ವ್ಯಕ್ತಿಯಲ್ಲ~ ಎಂದು ಟೀಕಿಸಿದ್ದಾರೆ.

ಸ್ವಾನ್ ಪುಸ್ತಕ ಬಿಡುಗಡೆಗೆ ಮೊದಲೇ ಅದರಲ್ಲಿನ ಕೆಲವು ಅಂಶಗಳನ್ನು ಹೊರಹಾಕಿರುವ ಇಲ್ಲಿನ ಆಂಗ್ಲ ಪತ್ರಿಕೆಯೊಂದು ಪೀಟರ್ಸನ್ ಅಂಗಳದಲ್ಲಿ ಸಹ ಆಟಗಾರರ ಜೊತೆಗೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ಸ್ವಾನ್ ಬರೆದ ರೀತಿಯಲ್ಲಿಯೇ ಬಹಿರಂಗಗೊಳಿಸಿದೆ.

`2008ರಲ್ಲಿ ಚೆನ್ನೈನಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಸಂದರ್ಭದಲ್ಲಿ ಪೀಟರ್ಸನ್ ತಂಡದ ಎಲ್ಲ ಆಟಗಾರರ ಕಡೆಗೆ `ಫ... ಬೌಲ್... ಫ...~ ಎಂದು ಕೆಟ್ಟ ಪದಗಳನ್ನು ಪ್ರಯೋಗಿಸಿ ಬೈಯ್ದಿದ್ದ~ ಎಂದು ಕೂಡ ಆಫ್ ಸ್ಪಿನ್ ಬೌಲರ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

`ಪ್ರಯೋಜನಕ್ಕಿಲ್ಲದ ನಾಯಕ ಎಂದು ಕೆಟ್ಟದಾಗಿ ಹೇಳಲು ಇಷ್ಟಪಡುವುದಿಲ್ಲ. ಆದರೆ ನನಗೆ ಇಷ್ಟವಾಗದ ಮುಂದಾಳು ಎಂದು ಮಾತ್ರ ಸ್ಪಷ್ಟವಾಗಿ ತಿಳಿಸುತ್ತೇನೆ. ನನಗೆ ಇಷ್ಟವಾಗಿದ್ದು ಆ್ಯಂಡ್ರ್ಯೂ ಸ್ಟ್ರಾಸ್ ತಂಡವನ್ನು ಮುನ್ನಡೆಸಿದ ರೀತಿ. ಅವರಿಗೆ ತಮ್ಮ ಬೌಲರ್‌ಗಳ ಯೋಚನೆ ಏನೆಂದು ಗುರುತಿಸುವ ಶಕ್ತಿಯಿದೆ. ಅಂಗಳದ ಪರಿಸ್ಥಿತಿ ಅರಿತು ಯಾವ ಬೌಲರ್‌ಗೆ ಕಷ್ಟವಾಗುತ್ತಿದೆ ಯಾರಿಂದ ಪ್ರಯೋಜನವಿದೆ ಎಂದು ನಿರ್ಧಾರ ಮಾಡುವುದೂ ಗೊತ್ತು. ಆದರೆ ಕೆವಿನ್ ಹಾಗಲ್ಲ. ಅವರಿಗೆ ಬಯಸಿದ ಪರಿಣಾಮವನ್ನು ಬೌಲರ್‌ಗಳು ನೀಡಲೇಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕೆಟ್ಟ ಪದಗಳನ್ನು ಪ್ರಯೋಗಿಸುತ್ತಿದ್ದರು~ ಎಂದಿದ್ದಾರೆ.

`ಸ್ಟ್ರಾಸ್ ಅದು ಹೇಗೆ ಬೌಲರ್‌ಗಳ ಮನಸು ಅರಿಯುತ್ತಿದ್ದರೋ ಗೊತ್ತಿಲ್ಲ. ಅದೊಂದು ಅಚ್ಚರಿ. ನಾನು ದಾಳಿ ಮಾಡಲು ಮನದಲ್ಲಿಯೇ  ಬಯಸಿದಾಗಲೆಲ್ಲ ಸರಿಯಾಗಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡುತ್ತಿದ್ದರು. ನಿಜವಾದ ನಾಯಕನೊಬ್ಬ ಸ್ಪಂದಿಸುವ ರೀತಿಯದು~ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT