ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಓಡಿದ ಸಿನಿಮಾ

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

ಎರಡು    ದಶಕದ ಹಿಂದೆ `ಫೂಲ್ ಔರ್ ಕಾಂಟೆ~, `ಜಿಗರ್~, `ದಿಲ್‌ವಾಲೆ~, `ವಿಜಯ್‌ಪತ್~ ಸಿನಿಮಾಗಳು ಬಂದಾಗ ಉತ್ತರ ಭಾರತದ ಶಾಲಾ ವಿದ್ಯಾರ್ಥಿಯ ನೋಟ್‌ಬುಕ್‌ಗೆ ಹಾಕಿದ ಬೈಂಡ್‌ನಲ್ಲಿ ಅಜಯ್ ದೇವಗನ್ ಚಿತ್ರಗಳಿರುತ್ತಿದ್ದವು. ನೆಚ್ಚಿನ ನಟನ ಆ್ಯಕ್ಷನ್ ಭಂಗಿ ಎಂದರೆ ಮಕ್ಕಳಿಗೆ ಆಗ ಮೆಚ್ಚು. ಈಗ ಅದೇ ನಟನ `ಸಿಂಗಂ~ ಚಿತ್ರದ ಭಂಗಿ ಉತ್ತರ ಭಾರತದ ಹಳ್ಳಿಮಕ್ಕಳ ನೋಟ್ ಪುಸ್ತಕವನ್ನಲಂಕರಿಸಿವೆ.

ಮೊನ್ನೆ ಮೊನ್ನೆ ಉತ್ತರ ಭಾರತದ ಕೆಲವು ಪಟ್ಟಣಗಳಿಗೆ ಅಜಯ್ ಪ್ರವಾಸ ಹೋಗಿಬಂದಿದ್ದಾರೆ. `ಬೋಲ್ ಬಚ್ಚನ್ ಬೋಲ್~ ಚಿತ್ರದ ಪ್ರಚಾರ ಅವರ ಉದ್ದೇಶ. ಉತ್ತರ ಭಾರತದ ಹಳ್ಳಿ, ಪಟ್ಟಣಗಳಲ್ಲಿ ತಮ್ಮ ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂಬುದನ್ನು ಎಂದೋ ಕಂಡುಕೊಂಡಿರುವ ಅವರಿಗೆ ಈ `ನೋಟ್‌ಬುಕ್ ಅಭಿಮಾನ~ ಅಚ್ಚರಿ ತಂದಿದೆ.

ಕೆಲವು ಮಕ್ಕಳ ಪುಸ್ತಕಗಳನ್ನು ಖುದ್ದು ಅವರೇ ನೋಡಿ ದಂಗಾಗಿದ್ದಾರೆ. ಗ್ಯಾಜೆಟ್ ಲೋಕದಲ್ಲಿ ಆಧುನಿಕ ಜಮಾನದ ಮಕ್ಕಳು ಆಟ ಆಡುತ್ತಿರುವುದನ್ನು ಕಂಡಿರುವ ಅವರಿಗೆ ಹಳೆಯ ಸ್ವರೂಪದ ಅಭಿಮಾನಿಗಳನ್ನು ಕಂಡರೆ ಥ್ರಿಲ್ ಆಗುತ್ತದಂತೆ.

`ವಿಮರ್ಶಕರು ಹಳೆಯ ಕಾಲದ ಸಿನಿಮಾಗಳೆಂದು ಯಾವ್ಯಾವಾಗ ಟೀಕಿಸುತ್ತಾರೋ ಅಂಥ ಚಿತ್ರಗಳು ಓಡಿರುವ ಉದಾಹರಣೆಗಳೇ ಹೆಚ್ಚು. ದಬಂಗ್, ಸಿಂಗಂ, ರೌಡಿ ರಾಥೋಡ್ ತರಹದ ಸಿನಿಮಾಗಳ ಏಕಮೇವ ಉದ್ದೇಶ ಮನರಂಜನೆ. ಬೋಧನೆ ಅವುಗಳಲ್ಲಿ ಇಲ್ಲ.
 

ಜನ ತಮ್ಮೆಲ್ಲಾ ನೋವು, ತಲ್ಲಣಗಳನ್ನು ಎರಡೂವರೆ ತಾಸು ಮರೆತು ನೋಡುವಂಥ ಸಿನಿಮಾಗಳೇ ಈಗಲೂ ಬೇಕಿರುವುದು. ನಾನು ಸಿನಿಮಾ ನೋಡುತ್ತಿದ್ದ ಕಾಲದಲ್ಲಿ ಕೂಡ ಇದೇ ಭಾವನೆ ಅನೇಕರಲ್ಲಿ ಇತ್ತು. ಸಿಂಗಂ ತರಹದ ಚಿತ್ರಗಳು ಅವರ ಅವಶ್ಯಕತೆಯನ್ನು ಪೂರೈಸುತ್ತದೆ. ಜನ ದಡ್ಡರಲ್ಲ. ವಿಮರ್ಶಕರು ಕೂಡ ದಡ್ಡರಲ್ಲ. ಆದರೆ, ಬಹುತೇಕ ವಿಮರ್ಶಕರು ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತಾ ಸಿನಿಮಾ ನೋಡುವುದಿಲ್ಲ. ನಾನು ನಟನಾಗಿ ತಿದ್ದಿಕೊಳ್ಳಲು ಮಾತ್ರ ವಿಮರ್ಶಕರ ಟೀಕೆಗಳೇ ಕಾರಣ. ಹಾಗಾಗಿ ನಾನು ಸಾಮಾನ್ಯ ಜನರ ಮೆಚ್ಚುಗೆ, ವಿಮರ್ಶಕರ ಟೀಕೆ ಎರಡನ್ನೂ ಗೌರವಿಸುತ್ತೇನೆ~- ಇದು ಅಜಯ್ ವಿಮರ್ಶೆಗಳನ್ನು ಬಿಡಿಸಿ ನೋಡುವ ಬಗೆ.

ಸಿಂಗಂ ಕಲೆಕ್ಷನ್ ನೂರು ಕೋಟಿ ದಾಟಿ, ದಾಖಲೆ ಸೃಷ್ಟಿಸಿತು. ಒಂದು ಕಡೆ ಮಲ್ಟಿಪ್ಲೆಕ್ಸ್‌ಗಳನ್ನು ನೆಚ್ಚಿಕೊಂಡ ವ್ಯಾಪಾರ. ಇನ್ನೊಂದು ಕಡೆ ಉತ್ತರ ಭಾರತದ ಅಭಿಮಾನಿ ದೇವರ ಮೇಲೆ ಕಣ್ಣು. ನೂರು ಕೋಟಿ ಗಳಿಕೆಗೆ ವಿದೇಶಿ ಮಾರುಕಟ್ಟೆಯಷ್ಟೇ ಮುಖ್ಯವಲ್ಲ ಎಂದಾಯಿತಲ್ಲವೇ ಎಂಬ ಪ್ರಶ್ನೆಗೆ ಅಜಯ್ ಕೊಡುವ ಉತ್ತರ ಆಸಕ್ತಿಕರವಾಗಿದೆ- `ನಿಜ, ವಿದೇಶಿ ಮಾರುಕಟ್ಟೆಯಿಂದ ಹೆಚ್ಚು ಲಾಭ ಬರಬಹುದು. ಆದರೆ, ನೂರು ಕೋಟಿ ಗಳಿಕೆಯ ಸಿಂಹಪಾಲು ಅಲ್ಲಿನದಲ್ಲ. ಪಟ್ಟಣವೊಂದರಲ್ಲಿ ಇಪ್ಪತ್ತು ರೂಪಾಯಿ ಟಿಕೆಟ್ ಬೆಲೆ ಏರಿದ ಮೇಲೂ ಹೌಸ್‌ಫುಲ್ ಆಗುತ್ತದೆ ಎಂದಾದರೆ ಜನರಿಗೆ ಸಿನಿಮಾ ಈಗಲೂ ಬೇಕೆಂದೇ ಅರ್ಥ. ಸಿಂಗಂ ತರಹದ ಚಿತ್ರ ಕೇವಲ ಹಳ್ಳಿಗಾಡಿನ ಜನರಿಗಷ್ಟೇ ರುಚಿಸಿಲ್ಲ. ಅದನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಕುಳಿತು ಸಂತೋಷದಿಂದ ನೋಡಿದವರನ್ನು ನಾನೇ ಕಂಡಿದ್ದೇನೆ. ಸ್ವಲ್ಪ ಅದೃಷ್ಟ, ಪುಷ್ಕಳ ಮನರಂಜನೆ, ನಿರ್ದೇಶಕನ ಜಾಣ್ಮೆ, ನಟ-ನಟಿಯರ ಶ್ರದ್ಧೆ ಇವಿಷ್ಟೂ ಇದ್ದರಷ್ಟೆ ಒಳ್ಳೆ ಸಿನಿಮಾ ಆಗಲು ಸಾಧ್ಯ. ನನ್ನ ಪ್ರಕಾರ ಈ ಕಾಲದಲ್ಲಿ ಹಿಟ್ ಚಿತ್ರಗಳೆಲ್ಲಾ ಒಳ್ಳೆಯ ಚಿತ್ರಗಳೇ. ಯಾಕೆಂದರೆ, ಶಿಕ್ಷಣ ಸುಧಾರಣೆ, ತಂತ್ರಜ್ಞಾನ ಪ್ರಗತಿ, ಮಾಧ್ಯಮ ಕ್ರಾಂತಿ ಎಲ್ಲವೂ ಆಗಿರುವ ಕಾಲಮಾನದಲ್ಲಿ ಜನ ಸುಮ್ಮನೆ ಒಂದು ಚಿತ್ರವನ್ನು ಗೆಲ್ಲಿಸಲಾರರು. ಬಹುಪಾಲು ಮಂದಿ ಮೆಚ್ಚುವ ಚಿತ್ರವೇ ಹಿಟ್. ಮೆಚ್ಚಲು ಕಾರಣ ಇರಲೇಬೇಕು. ಆ ಕಾರಣಕ್ಕೇ ಅದು ಒಳ್ಳೆಯ ಚಿತ್ರ. ಭಾರತದ ಪ್ರೇಕ್ಷಕ ಈಗಲೂ ಕೆಟ್ಟವರನ್ನು ಸದೆಬಡಿಯುವ ಅದೇ ನಾಯಕನನ್ನು ಬಯಸುತ್ತಿದ್ದಾರೆ. ಕೆಡುಕನ್ನು ತೊಳೆಯುವ ಸೂಪರ್‌ಹೀರೋ ಅವರಿಗೆ ಈಗಲೂ ಬೇಕು. ರೋಹಿತ್ ಶೆಟ್ಟಿ ತರಹದ ನಿರ್ದೇಶಕರಿಗೆ ಅದು ಚೆನ್ನಾಗಿ ಗೊತ್ತಿದೆ. ಅದಕ್ಕೇ ಅವರ ಚಿತ್ರಗಳು ಹಿಟ್ ಆಗುತ್ತಿವೆ~.

ತಮ್ಮನ್ನು ಈಗಲೂ ಕಲಿಯುತ್ತಿರುವ ನಟ ಎಂದೇ ಕರೆದುಕೊಳ್ಳುವ ಅಜಯ್ ಈ ವರ್ಷ ತಮ್ಮ ಮಕ್ಕಳ (ನ್ಯಾಸಾ, ಯುಗ್) ಜೊತೆ ಹೆಚ್ಚು ಕಾಲ ಕಳೆದಿದ್ದಾರೆ. ಅಡುಗೆ ಮಾಡುವುದರಲ್ಲಿ ನಿಸ್ಸೀಮರಾದ ಅವರ ನಳಪಾಕವನ್ನು ಮಡದಿ ಕಾಜೋಲ್ ಅವರಿಗೆ ಉಣಬಡಿಸಿದ್ದಾರೆ. ಗುಜರಾತ್‌ನಲ್ಲಿ ಒಂದು ಸೋಲಾರ್ ಪ್ಲಾಂಟ್, ಜೈಪುರದಲ್ಲಿ ಪ್ರವಾಸೋದ್ಯಮದ ಮೇಲೆ ಬಂಡವಾಳ ಹೂಡಿರುವ ಅಜಯ್ ಬದುಕಿನಲ್ಲಿ ದೊಡ್ಡ ಪಲ್ಲಟವಂತೂ ಆಗಿದೆ.

`ಸಿನಿಮಾ, ಬದುಕು ಎರಡನ್ನೂ ನಾನು ಸಮಾನವಾಗಿ ಪ್ರೀತಿಸುತ್ತೇನೆ~ ಎನ್ನುವ ಅವರಿಗೆ ದೇಹ ದಂಡಿಸುವುದೆಂದರೆ ಈಗಲೂ ಬಲು ಇಷ್ಟವಂತೆ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT